ಹಾವೇರಿ: ಬಿಜೆಪಿಯ ಬಿ ಟೀಂ ಜೆಡಿಎಸ್ ಎಂದು ಕಾಂಗ್ರೆಸ್ ಹೇಳಿದರೆ, ಬಿಜೆಪಿಯ ಬಿ ಟೀಂ ಕಾಂಗ್ರೆಸ್ ಎಂದು ಜೆಡಿಎಸ್ ನಾಯಕರು ಹೇಳುತ್ತಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಯಾವುದೇ ಪಕ್ಷದ ಬಿ ಟೀಂ ಅಲ್ಲ, ನಮ್ಮದು ಜನತಾ ಟೀಂ (ಜೆ ಟೀಂ) ಎಂದಿದ್ದಾರೆ. ಕಾಂಗ್ರೆಸ್ ಎಂದರೆ ಪ್ರೆಷರ್ ಕುಕ್ಕರ್ ಪಕ್ಷ ಎಂದು ವ್ಯಾಖ್ಯಾನಿಸಿದ್ದಾರೆ.
ಹಿರೇಕೆರೂರು ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪರಸ್ಪರರನ್ನು ಬಿ ಟೀಂ ಎಂದು ಒಪ್ಪಿಕೊಂಡಿವೆ. ಆ ಮೂಲಕ, ಬಿಜೆಪಿ ಎಂದರೆ ಎ ಟೀಂ ಎಂದು ತಿಳಿಸುತ್ತಿವೆ. ನಾವು ಯಾವುದೇ ಪಕ್ಷ ಬಿ ಟೀಂ ಅಲ್ಲ. ಅದಕ್ಕಿಂತಲೂ ಹೆಚ್ಚಾಗಿ ನಮ್ಮದು ಎ ಟೀಂ ಹಾಗೂ ಜನತಾ ಟೀಂ (ಜೆ ಟೀಂ) ಎಂದರು.
ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ದೂರು ದಾಖಲಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಇದು ಅತ್ಯಂತ ಕೀಳು ಮಟ್ಟದ್ದು. ಹೇಳಿಕೆ ಕೊಟ್ಟವರು ಅದಕ್ಕೆ ಸ್ಪಷ್ಟೀಕರಣ ಕೊಡುತ್ತಾರೆ. ಮೊನ್ನೆ ದಿಗ್ವಿಜಯ ಸಿಂಗ್ ಅವರು ಒಂದು ಹೇಳಿಕೆ ಕೊಟ್ಟಿದ್ದಾರೆ (ಭಾರತೀಯ ಸೇನೆಯ ಬಗ್ಗೆ). ನಿನ್ನೆ ರಾಹುಲ್ ಗಾಂಧಿ ಅವರು ಹೇಳಿಕೆ ನೀಡಿದ್ದು, ಯಾರಾದರೂ ಹೇಳಿಕೆ ನೀಡಿದರೆ ಅದಕ್ಕೆ ಸರ್ಕಾರ ಜವಾಬ್ದಾರಿಯಲ್ಲ, ವೈಯಕ್ತಿಕವಾಗಿ ಅವರೇ ಜವಾಬ್ದಾರರು ಎಂದು ಸುಪ್ರೀಂಕೋರ್ಟ್ ತೀರ್ಪು ಕೂಡ ಬಂದಿದೆ.
ಇದೆಲ್ಲ ಗೊತ್ತಿದ್ದೂ, ಕೇವಲ ರಾಜಕೀಯ ಕಾರಣಕ್ಕೆ, ಸೋಲು ಗ್ಯಾರಂಟಿಯಾಗಿರವ ಕಾರಣ ಸುಳ್ಳು ಹಾಗೂ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡಿ ಜನರ ದಾರಿ ತಪ್ಪಿಸುವ ಸಣ್ಣ ಪ್ರಯತ್ನ ಇದು. ಆದರೆ ಜನಕ್ಕೆ ಇದೆಲ್ಲಾ ಗೊತ್ತಿದೆ. ಮುಂದೆ ಇನ್ನೂ ಪ್ರಯತ್ನ ಮಾಡುತ್ತಾರೆ. ದೇಶದಲ್ಲಿ ಕಾನೂನಿದೆ. ಆ ಕಾನೂನಿನ ಪ್ರಕಾರ ಎಲ್ಲವೂ ನಡೆಯಲಿದೆ ಎಂದರು.
ಕಾಂಗ್ರೆಸ್ ಶಾಸಕರು ಮತದಾರರಿಗೆ ಆಮಿಷ ಒಡ್ಡುವಾಗ ಸಿಕ್ಕಿಹಾಕಿಕೊಂಡಿದ್ದಾರೆ. ಅವರ ಬಗ್ಗೆ ಇವರು ಏನೂ ಮಾತನಾಡುವುದಿಲ್ಲ. ಕಾಂಗ್ರೆಸ್ ಎಂದರೆ ಪ್ರೆಶರ್ ಕುಕ್ಕರ್ ಪಕ್ಷ. ಅಲ್ಲಿ ಬಾಂಬ್ ಕುಕ್ಕರ್ ಇಲ್ಲಿ ಪ್ರೆಶರ್ ಕುಕ್ಕರ್. ಚುನಾವಣೆ ಸಮಯದಲ್ಲಿ ಪ್ರೆಶರ್ ಕುಕ್ಕರ್ ಕೊಟ್ಟು ಗೆಲ್ಲುವುದು. ಹೀಗಾಗಿ ಅವರಿಗೆ ಕುಕ್ಕರ್ ಮೇಲೆ ಬಹಳ ಪ್ರೀತಿ. ಅದರಲ್ಲಿ ಬಾಂಬ್ ಇಟ್ಟರೂ, ಅಲ್ಲ ಅದು ಪ್ರೆಶರ್ ಕುಕ್ಕರ್ ಎನ್ನುತ್ತಾರೆ. ಈ ರೀತಿಯ ದೊಂಬರಾಟದಿಂದ ಯಾವುದೇ ಸಹಾಯವಾಗುವುದಿಲ್ಲ. ಕಾಂಗ್ರೆಸ್ ರಾಜಕೀಯವಾಗಿ ದಿವಾಳಿಯಾಗಿದೆ ಎಂದರು.
ಇದನ್ನೂ ಓದಿ : ವಿಸ್ತಾರ Explainer | ಪ್ರೆಷರ್ ಕುಕ್ಕರ್ ಬಾಂಬ್: ತಯಾರಿ ಸುಲಭ, ಪರಿಣಾಮ ಭೀಕರ
ಭ್ರಷ್ಟಾಚಾರದ ಪಿತಾಮಹ ಬೊಮ್ಮಾಯಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಉತ್ತರಿಸಿದ ಸಿಎಂ, ಈ ದೇಶದ ಮೊದಲ ಭ್ರಷ್ಟಾಚಾರದ ಜೀಪ್ ಹಗರಣ ಪ್ರಾರಂಭವಾಗಿದ್ದು ಕಾಂಗ್ರೆಸ್ ಪಕ್ಷದಿಂದ. ಅಂದಿನ ರಕ್ಷಣಾ ಸಚಿವರು ರಾಜೀನಾಮೆ ನೀಡಬೇಕಾಗಿ ಬಂತು. ಸ್ವಾತಂತ್ರ್ಯ ಬಂದ ನಂತರದಲ್ಲಿ ಭ್ರಷ್ಟಾಚಾರ ಅಲ್ಲಿಂದ ಪ್ರಾರಂಭವಾಯಿತು. ಭ್ರಷ್ಟಾಚಾರ ಕಾಂಗ್ರೆಸ್ ನ ಅವಿಭಾಜ್ಯ ಅಂಗ. ಡಿ.ಕೆ.ಶಿವಕುಮಾರ್ ಬಹಳ ಸ್ವಚ್ಛ ಮನುಷ್ಯ. ಅವರಷ್ಟು ಸ್ವಚ್ಛ ಮನುಷ್ಯ ರಾಜಕಾರಣದಲ್ಲಿ ಯಾರು ಇಲ್ಲ ಎಂದು ವ್ಯಂಗ್ಯವಾಡಿದರು.