ಹಾವೇರಿ: ಬೆಳಗಾವಿ ತಾಲೂಕಿನ ವಂಟಮೂರಿಯಲ್ಲಿ ಯುವಕ-ಯುವತಿ ಪ್ರೇಮಿಸಿ ನಾಪತ್ತೆಯಾದ (Lovers absconding) ಪ್ರಕರಣ ತಾರಕಕ್ಕೇರಿ ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ (Naked Parade) ಮಾಡಿದ ಘಟನೆ ಘಟನೆ ಹಸಿರಾಗಿರುವಂತೆಯೇ ಹಾವೇರಿ ಜಿಲ್ಲೆ (Haveri News ರಾಣೆಬೆನ್ನೂರಿನಲ್ಲೂ ಇದೇ ಮಾದರಿಯ ಘಟನೆ ನಡೆದಿದೆ. ಇಲ್ಲಿ ಯುವಕ-ಯುವತಿ ಪ್ರೇಮಿತಿ ಓಡಿಹೋಗಿದ್ದು (Love case), ಯುವತಿ ಕಡೆಯವರು ಬಂದು ಯುವಕನ ಮನೆಯಲ್ಲಿ ದಾಂಧಲೆ ನಡೆಸಿ (attack on youngsters house), ಹಲ್ಲೆ ಮಾಡಿದ್ದಲ್ಲದೆ ಮಾವನ ಮೇಲೆ ಅಟ್ಯಾಕ್ ಮಾಡಿದ್ದಾರೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಮುದೇನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಪ್ರಮುಖವಾಗಿ ಯುವಕನ ಮಾವ ಪ್ರಶಾಂತ್ ಮೇಲೆ ಹಲ್ಲೆ ನಡೆದಿದೆ. ಅವರನ್ನು ವಾಹನದಲ್ಲಿ ಕರೆದೊಯ್ದು ಹಲವು ಕಡೆ ನಿಲ್ಲಿಸಿ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.
ಚಳಗೇರಿ ಗ್ರಾಮದ ಯುವತಿ ಸಂಗೀತಾ, ಮುದೇನೂರು ಗ್ರಾಮದ ಪ್ರಕಾಶ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ, ಇದಕ್ಕೆ ಎರಡೂ ಕಡೆ ಒಪ್ಪಿಗೆ ಇರಲಿಲ್ಲ. ಹೀಗಾಗಿ ಇವರಿಬ್ಬರೂ ಶನಿವಾರ ಯಾರಿಗೂ ಹೇಳದೆ ಊರು ಬಿಟ್ಟು ಓಡಿ ಹೋಗಿದ್ದಾರೆ. ಆದರೆ, ಇದರಲ್ಲಿ ಹುಡುಗನ ಮನೆಯವರ ಕೈವಾಡವೂ ಇದೆ ಎಂದು ಶಂಕಿಸಿದ ಹುಡುಗಿ ಮನೆಯವರು ಸಿಟ್ಟಿಗೆದ್ದಿದ್ದಾರೆ. ಯುವತಿಯನ್ನು ಹುಡುಕಿ ಕೊಡಿ ಎಂದು ಗಲಾಟೆ ಮಾಡಿದ ಯುವತಿ ಕಡೆಯವರು ದಾಂಧಲೆ ಎಬ್ಬಿಸಿದ್ದಾರೆ.
ಯುವಕನ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಹುಡುಗಿ ಕಡೆಯವರು ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಯುವಕನ ಕುಟುಂಬವನ್ನ ಗಾಡಿಯಲ್ಲಿ ತಂದು ರಾಣೇಬೆನ್ನೂರಿನಲ್ಲಿ ಬಿಟ್ಟು ಹೋದ ಹುಡುಗಿ ಕಡೆಯವರು ಯುವಕನ ಮಾವ ಪ್ರಶಾಂತ್ ಎನ್ನುವವರನ್ನ ಅರೆ ಬೆತ್ತಲೆ ಮಾಡಿ ಥಳಿಸಿದ್ದಾರೆಂದು ಆರೋಪ ಮಾಡಲಾಗಿದೆ.
ಇದೀಗ ಹುಡುಗನ ಕಡೆಯವರು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಈ ನಡುವೆ, ಪ್ರಶಾಂತ್ ಮತ್ತು ಹುಡುಗಿ ಕಡೆಯವರಿಗೆ ಯಾವುದೋ ಸಾಲದ ವಿಚಾರದಲ್ಲೂ ಜಗಳ ಆಗಿದ್ದು, ಅದಕ್ಕೆ ಸಂಬಂಧಿಸಿಯೂ ಈ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.
ಪ್ರೀತಿ ಮತ್ತು ಪ್ರೇಮದ ವಿಚಾರದಲ್ಲಿ ಈಗ ತುಂಬ ದೊಡ್ಡ ಮಟ್ಟದ ಗಲಾಟೆಗಳಾಗುತ್ತಿವೆ. ವಂಟಮೂರಿಯಲ್ಲಿ ನಡೆದ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಹಲವರನ್ನು ಬಂಧಿಸಿದ್ದರೂ ಜನರು ತಮ್ಮ ವೈಯಕ್ತಿಕ ವಿಚಾರ ಬಂದಾಗ ಅತ್ಯಂತ ಅಮಾನವೀಯ ದಾರಿಗಳ ಮೂಲಕವೇ ಸೇಡು ತೀರಿಸಿಕೊಳ್ಳಲು ಕಾಯುತ್ತಾರೆ.
ಇದನ್ನೂ ಓದಿ: Naked parade : ಮಹಿಳೆ ವಿವಸ್ತ್ರ ಪ್ರಕರಣದ ಹಿಂದೆ ಜಾರಕಿಹೊಳಿ; ಬಿಜೆಪಿ ಸಮಿತಿ ಸಂಶಯ
ಹಾಲಿ ಪ್ರಕರಣದಲ್ಲಿ ಹುಡುಗ-ಹುಡುಗಿ ಎಲ್ಲಿ ಹೋಗಿದ್ದಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಹುಡುಗಿಯ ಕಡೆಯವರು ಅವರಿಗಾಗಿ ಎಲ್ಲ ಕಡೆ ಹುಡುಕಾಟ ನಡೆಸುತ್ತಿದ್ದಾರೆ. ಇದೀಗ ಒಂದು ವೇಳೆ ಸಿಕ್ಕಿಬಿದ್ದರೆ ಹುಡುಗನ ಮೇಲೆ ಹಲ್ಲೆ ನಡೆಸುವ ಸಾಧ್ಯತೆಗಳೂ ಇವೆ. ವಂಟಮೂರಿ ಪ್ರಕರಣದಲ್ಲಿ ನಾಪತ್ತೆಯಾದ ಹುಡುಗ ಹುಡುಗಿ ಮೂರು ದಿನಗಳ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ಬಂದು ರಕ್ಷಣೆ ಕೇಳಿದ್ದರು.