ಸುರೇಶ ನಾಯ್ಕ, ಹಾವೇರಿ
ಹಾವೇರಿಯಲ್ಲಿ ಜನವರಿ 6,7 ಮತ್ತು 8ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೂರು ದಿನಗಳು ಬಾಕಿಯಿದ್ದು, ಅಂತಿಮ ಹಂತದ ಸಿದ್ದತೆಗಳು ನಡೆಯುತ್ತಿವೆ. ಬಾಡದ ಕನಕದಾಸರ ಅರಮನೆ ಮಾದರಿಯ ಕೋಟೆ ಬಾಗಿಲು ಶೈಲಿಯಲ್ಲಿ ಸಮ್ಮೇಳನದ ವೇದಿಕೆಯ ಮುಖ್ಯದ್ವಾರ ನಿರ್ಮಾಣವಾಗುತ್ತಿದೆ.
ಹಾವೇರಿ ಸಾಹಿತ್ಯ ಸಮ್ಮೇಳನ ಲಕ್ಷಾಂತರ ಸಾಹಿತ್ಯಾಸಕ್ತರಿಗೆ ಸಾಕ್ಷಿಯಾಗಲಿದ್ದು, ಕನಕ ಶರೀಫ–ಸರ್ವಜ್ಞ ಹೆಸರಿನಲ್ಲಿ ಪ್ರಧಾನ ವೇದಿಕೆ ಹಾಗೂ ಪಾಪು–ಚಂಪಾ ವೇದಿಕೆ ಮತ್ತು ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆ ಎಂದು ಎರಡು ಸಮನಾಂತರ ವೇದಿಕೆ ಸಿದ್ದವಾಗುತ್ತಿದೆ.
100×80 ಚದರ ಅಡಿಯ ಪ್ರಧಾನ ವೇದಿಕೆಯಲ್ಲಿ ಆಕರ್ಷಕ ‘ಬ್ಯಾಕ್ ಡ್ರಾಪ್’ ಹಾಕಿ ಅಲಂಕಾರ ಮಾಡಲಾಗುತ್ತಿದೆ. ಮಧ್ಯಭಾಗದಲ್ಲಿ ಸಾಹಿತ್ಯ ಸಮ್ಮೇಳನದ ವಿವರ, ಎಡ ಮತ್ತು ಬಲ ಬದಿಯಲ್ಲಿ ಎರಡು ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ. ಜೊತೆಗೆ ಕನ್ನಡಾಂಬೆ, ಸಮ್ಮೇಳನಾಧ್ಯಕ್ಷ, ಕಸಾಪ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಯ ಭಾವಚಿತ್ರ ಹಾಕಲಾಗುತ್ತಿದೆ. ಸಮ್ಮೇಳನದ ಲಾಂಛನ ವೇದಿಕೆಗೆ ವಿಶೇಷ ಮೆರುಗು ನೀಡಲಿದ್ದು, ಪ್ರಧಾನ ವೇದಿಕೆಯಲ್ಲಿ ಕನಕದಾಸ, ಶಿಶುನಾಳ ಶರೀಫ ಹಾಗೂ ಕವಿ ಸರ್ವಜ್ಞರ ಭಾವಚಿತ್ರವನ್ನು ಹಾಕಲಾಗುತ್ತಿದೆ. ವಿಶೇಷವಾಗಿ ಛತ್ರಿ, ಚಾಮರಗಳೂ ಪ್ರಧಾನ ವೇದಿಕೆಗೆ ಮೆರುಗು ನೀಡಲಿವೆ ಎಂದು ಕಲಾವಿದ ಷಹಜಾನ್ ಮುದಕವಿ ಹೇಳುತ್ತಾರೆ.
ವೇದಿಕೆಗೆ 3 ಕಡೆ ಬಾಗಿಲುಗಳನ್ನು ನಿರ್ಮಿಸಲಾಗುತ್ತಿದೆ. 20 ಅಡಿ ಅಗಲ ಮತ್ತು 15 ಅಡಿ ಎತ್ತರದ ದ್ವಾರಗಳನ್ನು ಒಳಗೊಂಡ ಕೋಟೆ ಬಾಗಿಲನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್, ಥರ್ಮಾಕೋಲ್, ಕಬ್ಬಿಣದ ಪೈಪು ಹಾಗೂ ಪ್ಲೈವುಡ್‌ನಿಂದ ನಿರ್ಮಿಸಲಾಗುತ್ತಿದೆ. ಕನಕನ ಬಾಡ ಗ್ರಾಮದಲ್ಲಿರುವ ಕನಕದಾಸರ ಅರಮನೆಯ ಕೋಟೆ ಮಾದರಿಯಲ್ಲಿ ಈ ಪ್ರವೇಶದ್ವಾರ ನಿರ್ಮಾಣವಾಗುತ್ತಿದೆ.
ಕಲಾವಿದರಾದ ಷಹಜಹಾನ್ ಮುದಕವಿ ಮತ್ತು ಫಕ್ಕಿರೇಶ ಕುಳಗೇರಿ ನೇತೃತ್ವದ 50 ಕಲಾವಿದರ ತಂಡ ಕಳೆದ ಒಂದು ತಿಂಗಳಿಂದ ಹಗಲು–ರಾತ್ರಿ ಸಮ್ಮೇಳನದ ಕಾರ್ಯಕ್ಕಾಗಿ ಶ್ರಮಿಸುತ್ತಿದೆ. ಪರಿಕರಗಳ ಸಂಗ್ರಹ, ವಿನ್ಯಾಸ ಮತ್ತು ನಿರ್ಮಾಣದ ಕೆಲಸವನ್ನು ಮಾಡುತ್ತಿದೆ. ವೆಲ್ಡರ್ಸ್, ಕಾರ್ಪರೆಂಟರ್ಸ್, ಡಿಸೈನರ್ಸ್, ಪೇಂಟರ್ ಹಾಗೂ ಚಿತ್ರಕಲಾವಿದರು ಅಂತಿಮ ಹಂತದ ಸಿದ್ದತೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಅತೃಪ್ತ ಆತ್ಮಗಳಿಂದ ಪರ್ಯಾಯ: ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ