ಹಾವೇರಿ: ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಇತ್ತೀಚೆಗೆ ಲಾಡ್ಜ್‌ನಲ್ಲಿದ್ದ (Attack in Lodge) ಮುಸ್ಲಿಂ ಯುವತಿ ಮತ್ತು ಹಿಂದು ಯುವಕನಿಗೆ ತಂಡವೊಂದು ಹಲ್ಲೆ ನಡೆಸಿತ್ತು. ಈ ಸಂಬಂಧ ಹಲವು ವಿಡಿಯೊಗಳು ವೈರಲ್ ಆಗಿದ್ದು, ಈ ರಿವರ್ಸ್ ನೈತಿಕ ಪೊಲೀಸ್‌ಗಿರಿ (Moral Policing) ಭಾರಿ ಆತಂಕವನ್ನು ಸೃಷ್ಟಿಸಿದೆ. ಸಾಮಾನ್ಯವಾಗಿ ಮುಸ್ಲಿಂ ಹುಡುಗರು ಹಿಂದು ಹೆಣ್ಮಕ್ಕಳನ್ನು ಮರುಳು ಮಾಡಿ ಬಳಸಿಕೊಂಡು ಮೋಸ ಮಾಡುತ್ತಾರೆ ಎಂಬ ಆಪಾದನೆ ಇತ್ತು. ಲವ್ ಜಿಹಾದ್ (Love Jihad) ಹೆಸರಿನಲ್ಲಿ ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟವೇ ನಡೆದಿದೆ. ಆದರೆ, ಇದೀಗ ಮುಸ್ಲಿಂ ಯುವತಿಯರ (Muslim Women) ಜತೆ ಸುತ್ತಾಡುವ ಹಿಂದು ಹುಡುಗರು ಕೂಡಾ ಟಾರ್ಗೆಟ್ ಆಗುತ್ತಿದ್ದಾರೆ.
ಶಿರಸಿ ಮೂಲಕ ಮುಸ್ಲಿಂ ಯುವತಿ ಮತ್ತು ಬಸ್ ಡ್ರೈವರ್ ಆಗಿದ್ದ ಯುವಕ ಹಾನಗಲ್‌ಗೆ ಬಂದಿದ್ದರು. ಅವರು ಲಾಡ್ಜ್‌ನಲ್ಲಿದ್ದ ವೇಳೆ ಸಂಶಯಗೊಂಡ ಮುಸ್ಲಿಂ ಯುವಕರು ಕೋಣೆಯೊಳಗಿನ ಟ್ಯಾಪ್ ಸರಿ ಮಾಡುವ ನೆಪದಲ್ಲಿ ಒಳಗೆ ನುಗ್ಗಿದ ನಾಲ್ಕೈದು ಯುವಕರು ಹಲ್ಲೆ ಮಾಡಿದ್ದರು. ಜತೆಗೆ ಯುವಕನನ್ನು ಬೈಕ್‌ನಲ್ಲಿ ಕೂರಿಸಿ ಕರೆದೊಯ್ದು ಹಲ್ಲೆ ಮಾಡಿದ್ದರು. ಅದರ ಜತೆಗೆ ಯುವತಿಯನ್ನು ಕಾರಿನಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದರು.
ಬುರ್ಕಾ ಹಾಕಿದ ಯುವತಿಯೊಬ್ಬಳು ಪುರುಷನ ಜತೆ ಲಾಡ್ಜ್‌ಗೆ ಹೋಗಿದ್ದಾಳೆ ಎಂಬ ಮಾಹಿತಿಯನ್ನು ಒಬ್ಬ ರಿಕ್ಷಾ ಚಾಲಕ ಅಲ್ಲಿನ ಮುಸ್ಲಿಂ ಯುವಕರಿಗೆ ನೀಡಿದ್ದ. ಆಗ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನ ಅಕ್ಕಿ ಆಲೂರು ಗ್ರಾಮದ ಅಲ್ತಾಪ್ , ಮರ್ದಾನ್ ಸಾಬ್ ಮೊದಲಾದವರು ಲಾಡ್ಜ್‌ಗೆ ನುಗ್ಗಿದ್ದರು. ಬಳಿಕ ದಾಳಿಕೋರರಲ್ಲಿ ಕೆಲವರನ್ನು ಬಂಧಿಸಲಾಗಿತ್ತು.
ಈ ನಡುವೆ, ನೈತಿಕ ಪೊಲೀಸ್ ಗಿರಿ ಪ್ರಕರಣದ ಆರೋಪಿಗಳ ಮತ್ತೊಂದು ವಿಡಿಯೊ ವೈರಲ್ ಆಗಿದೆ. ಇದರಲ್ಲಿ ಮುಸ್ಲಿಂ ಯುವತಿಯನ್ನು ಕಾರಿನಲ್ಲಿ ಎಳೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿರುವ ವಿಡಿಯೋ ಇದಾಗಿದೆ.
ಈ ದುರುಳರ ಗ್ಯಾಂಗ್ ಮುಸ್ಲಿಂ ಮಹಿಳೆಯರು, ಹುಡುಗಿಯರನ್ನು ಟಾರ್ಗೆಟ್ ಮಾಡಿಕೊಂಡಿದೆ. ಹಿಂದು ಹುಡಗರ ಜೊತೆ ಕಾಣಿಸಿಕೊಂಡ ಮುಸ್ಲಿಂ ಹುಡುಗಿಯರು, ಮಹಿಳೆಯರನ್ನು ಎಳೆದೊಯ್ದು ಹಲ್ಲೆ ಮಾಡುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: Moral Policing: ಹಿಂದು ಯುವತಿಗೆ ಲವ್ ಪ್ರಪೋಸ್ ಮಾಡ್ತಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ
ಈ ಯುವಕರು ಯುವತಿಯ ಪರಿಚಯದವರು ಎಂದು ಮೊದಲು ಹೇಳಲಾಗಿತ್ತು. ಆದರೆ, ಬುರ್ಕಾ ಹಾಕಿಕೊಂಡು ಯಾವುದೇ ಮುಸ್ಲಿಂ ಯುವತಿ ಬಂದರೂ ಇದೇ ರೀತಿ ದಾಳಿ ಮಾಡಲಾಗುತ್ತಿದೆ ಎನ್ನಳಾಗಿದೆ.
ಬುರ್ಖಾ ಹಾಕಿಕೊಂಡು ಬಂದು ಮಲಗಿದಿಯಾ? ಎಂದು ಮಹಿಳೆಯನ್ನು ಥಳಿಸುವ ಯುವಕರು, ನಿನಗೆ ನಮ್ ಹುಡುಗಿನೇ ಬೇಕಾ ಎಂದು ಹುಡುಗಿ ಜತೆಗಿರುವ ಯುವಕನಿಗೆ ಹಲ್ಲೆ ಮಾಡುತ್ತಾರೆ ಎನ್ನಲಾಗಿದೆ.
ಹಾವೇರಿ ಪರಿಸರದಲ್ಲಿ ಮುಸ್ಲಿಂ ಮಹಿಳೆಯರನ್ನು ಈ ರೀತಿಯಾಗಿ ಟಾರ್ಗೆಟ್ ಮಾಡುವ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡು ಕೆಲವರನ್ನು ಬಂಧಿಸಿದ್ದಾರೆ. ಆದರೆ, ಇದೊಂದು ವ್ಯವಸ್ಥಿತ ಗ್ಯಾಂಗ್ ಎಂದು ಹೇಳಲಾಗಿದ್ದು, ಅದನ್ನು ಪತ್ತೆ ಹಚ್ಚಲು ಪ್ರಯತ್ನ ಸಾಗಿದೆ.