Site icon Vistara News

Murder Case : ತನ್ನನ್ನು ಮದುವೆಯಾಗಲು ನಿರಾಕರಿಸಿದ ಸೊಸೆಯನ್ನೇ ಕೊಂದ ಮಾವ!

Murder Case Haveri newsMurder Case Haveri news

ಹಾವೇರಿ: ವ್ಯಕ್ತಿಯೊಬ್ಬ ತನ್ನೊಂದಿಗೆ ಮದುವೆಯಾಗಲು ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಕೊಲೆ (Murder Case) ಮಾಡಿದ ಭೀಕರ ಘಟನೆ ನಡೆದಿದೆ. ಹಾವೇರಿ ಜಿಲ್ಲೆ (Haveri News) ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮದ ಬಳಿ ಕೊಲೆಯಾದ ಯುವತಿಯನ್ನು 21 ವರ್ಷದ ದೀಪಾ ಗೊಂದಿ (Man kills engaged girl) ಎಂದು ಗುರುತಿಸಲಾಗಿದೆ. ಮಾಲತೇಶ ಬಾರ್ಕಿ ಎಂಬ 35 ವರ್ಷದ ಯುವಕನೇ ಕೊಲೆ ಮಾಡಿದ ಪಾಪಿ ಮಾವ.

ಇಲ್ಲಿ ಮಾವ ಎಂದರೆ ದೀಪಾಳ ಅಕ್ಕನ ತಮ್ಮ ಈ ಧೂರ್ತ. ವಯಸ್ಸು 35 ಆದರೂ ಮದುವೆಯಾಗದೆ ಓಡಾಡಿಕೊಂಡಿದ್ದ ಈ ಧೂರ್ತ ತನ್ನ ಅಕ್ಕನ ಮಗಳ ಮೇಲೆಯೇ ಕಣ್ಣಿಟ್ಟಿದ್ದ. ಮನೆಯವರ ಮನವೊಲಿಸಿ, ಅಕ್ಕನನ್ನು ಭಾವನಾತ್ಮಕವಾಗಿ ಸೆಳೆದು ಆಕೆಯ ಮಗಳಾದ ದೀಪಾಳೊಂದಿಗೆ ಹೇಗೋ ಮದುವೆ ಫಿಕ್ಸ್‌ ಮಾಡಿಕೊಂಡಿದ್ದ.

ಆದರೆ, ಈ ಮದುವೆ ದೀಪಾಳಿಗೆ ಯಾವ ಕಾರಣಕ್ಕೂ ಇಷ್ಟವಾಗಿರಲಿಲ್ಲ. ಆದರೆ ಮನೆಯವರ ಒತ್ತಾಯಕ್ಕೆ ಮಣಿದು ಎಂಗೇಜ್‌ಮೆಂಟ್‌ ನಡೆದಿತ್ತು. ಏಪ್ರಿಲ್‌ 22ರಂದು ಫಿಕ್ಸ್ ಆಗಿದ್ದ ದೀಪಾ ಮತ್ತು ಮಾಲತೇಶ ಮದುವೆ ನಿಗದಿಯಾಗಿತ್ತು.

ಆದರೆ, ಮುಂದಿನ ಹಂತದಲ್ಲಿ ದೀಪಾ ಆತನನ್ನು ಮದುವೆಯಾಗಲೇಬಾರದು ಎಂಬ ತೀರ್ಮಾನಕ್ಕೆ ಬಂದಿದ್ದಳು. ಮಾವನ ಯಾವ ವರ್ತನೆಗಳೂ ಆಕೆಗೆ ಇಷ್ಟವಾಗುತ್ತಿರಲಿಲ್ಲ. ತುಂಬ ಕಿರಿಕಿರಿ, ಕುಡಿತ ಮೊದಲಾದ ಚಟಗಳಿಗೆ ಬಲಿಯಾಗಿದ್ದ ಆತನನ್ನು ಮದುವೆ ಆಗುವುದಿಲ್ಲ ಎಂದು ನಿರಾಕರಿಸಿದ್ದಳು.

ಅಕ್ಕನ ಮಗಳೇ ಆಗಿರುವ ದೀಪಾ ನಿಶ್ಚಿತಾರ್ಥದ ಬಳಿಕವೂ ತನ್ನನ್ನು ನಿರಾಕರಿಸುತ್ತಿದ್ದಾಳೆ, ಮದುವೆ ಒಪ್ಪುತ್ತಿಲ್ಲ ಎನ್ನುವ ಆಕ್ರೋಶ ಮಾವ ಮಾಲತೇಶನಲ್ಲಿ ಹೆಡೆ ಎತ್ತಿತ್ತು. ಆತ ದೀಪಾಳನ್ನು ಕರೆದುಕೊಂಡು ಹೋಗಿ ವಿಷ ಕುಡಿಸಿ ಕೊಂದು ನೇಣು ಹಾಕಿದ್ದಾನೆ. ಮನೆಯವರು ದೀಪಾ ಎಲ್ಲಿ ಎಂದು ಹುಡುಕಿದಾಗ ಮಾಲತೇಶನ ಮೇಲೆ ಸಂಶಯ ಬಂದಿತ್ತು. ಕೊನೆಗೆ ಆತನನ್ನು ವಿಚಾರಿಸಿದಾಗ ಕೊಲೆ ಮಾಡಿದ್ದು ಗೊತ್ತಾಯಿತು. ಅಂದರೆ ಕೊಲೆಯಾಗಿ ಐದು ದಿನಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಾಲತೇಶನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : Family Problem : ಹೆಂಡತಿಗೆ ಮಂಡೆ ಸರಿ ಇಲ್ಲ ಎಂದ ಗಂಡನಿಗೆ ಹೈಕೋರ್ಟ್‌ ದಂಡ!

ವಿಜಯಪುರದಲ್ಲಿ ಜೋಡಿ ಕೊಲೆ: ಅಕ್ರಮ ಸಂಬಂಧಕ್ಕಾಗಿ ನಡೆಯಿತಾ ಹತ್ಯೆ?

ವಿಜಯಪುರ: ವಿಜಯಪುರ ಜಿಲ್ಲೆಯ (Vijayapura News) ನಿಡಗುಂದಿ ತಾಲೂಕಿನ ಗಣಿ ಗ್ರಾಮದಲ್ಲಿ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯನ್ನು ಕೊಲೆ (Murder Case) ಮಾಡಲಾಗಿದೆ. ಅವರಿಬ್ಬರೂ ಬೇರೆ ಬೇರೆಯವರಾಗಿದ್ದು, ಜತೆಯಾಗಿದ್ದಾಗ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಹಾಗಾಗಿ ಇದು ಅಕ್ರಮ‌ ಸಂಬಂಧದ (Illicit Relationship) ಸಂಶಯದ ಹಿನ್ನೆಲೆಯಲ್ಲಿ ನಡೆದಿರುವ ಜೋಡಿ ಕೊಲೆ (Couple murder) ಆಗಿರಬಹುದು ಎಂದು ಸಂಶಯಿಸಲಾಗಿದೆ.

ಕೊಲೆಯಾದವರನ್ನು ಗಣಿ ಗ್ರಾಮದ ಸೋಮನಿಂಗಪ್ಪ ಕಲ್ಲಪ್ಪ ಕುಂಬಾರ (35 ಮತ್ತು ಪಾರ್ವತಿ ತಳವಾರ (38) ಎಂದು ಗುರುತಿಸಲಾಗಿದೆ. ಅವರಿಬ್ಬರೂ ಜತೆಯಾಗಿ ಗಣಿ ಗ್ರಾಮಕ್ಕೆ ಬರುವ ದಾರಿಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಇದೆ.

ನಿಡಗುಂದಿ ತಾಲೂಕಿನ‌ ಮಾರಡಗಿ ತಾಂಡಾದ ಸಮೀಪ ಸೋಮವಾರ ರಾತ್ರಿ ನಡೆದಿದೆ ಎನ್ನಲಾದ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಕೊಲೆ ಯಾರು ಮಾಡಿದರು? ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಇಬ್ಬರೂ ಬೇರೆ ಬೇರೆ ಕುಟುಂಬಕ್ಕೆ ಸೇರಿದವರಾಗಿದ್ದು, ಪ್ರತ್ಯೇಕ ಸಂಸಾರಗಳು ಇರುವುದರಿಂದ ಅವರಿಬ್ಬರ ನಡುವೆ ಅಕ್ರಮ ಸಂಬಂಧ ಇದ್ದಿರಬಹುದು, ಅದಕ್ಕಾಗಿ ಜತೆಯಾಗಿದ್ದಾಗಲೇ ಕೊಲೆ ಮಾಡಲಾಗಿದೆ ಎಂಬ ಸಂಶಯ ಪರಿಸರದಲ್ಲಿದೆ.

ಸ್ಥಳಕ್ಕೆ ನಿಡಗುಂದಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version