Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಆನ್‌ಲೈನ್‌ ಪೇಮೆಂಟ್‌ ಸ್ಥಗಿತವಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿರುವ ಪುಸ್ತಕ ಮಳಿಗೆಗಳು

online paymeny declining in kannada sahitya sammelana

ರಮೇಶ ದೊಡ್ಡಪುರ, ಹಾವೇರಿ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯದ ಕಂಪನಿನೊಂದಿಗೆ ಪುಸ್ತಕ ಮಾರಾಟದ ಭರಾಟೆಯೂ ಬಲು ಜೋರು. ಆದರೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಾರಾಟಗಾರರಿಗೆ ಮೊದಲ ದಿನವೇ ಲಕ್ಷಾಂತರ ರೂ. ನಷ್ಟವಾಗಿದೆ. ಇದಕ್ಕೆ ಕಾರಣ ಮೊಬೈಲ್‌ ನೆಟ್‌ವರ್ಕ್‌.

ಹಾವೇರಿಯಲ್ಲಿ ಸುಮಾರು ಮುನ್ನೂರು ಪುಸ್ತಕ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಕೋವಿಡ್‌ ನಂತರ ನಡೆಯುತ್ತಿರುವ ಮೊದಲ ಸಮ್ಮೇಳನವಾದ್ಧರಿಂದ ಅನೇಕ ಪುಸ್ತಕ ಮಾರಾಟಗಾರರು ಅತ್ಯುತ್ಸಾಹದಿಂದ ಮಳಿಗೆ ಸ್ಥಾಪಿಸಿದ್ದಾರೆ. ಓದುಗರೂ ತಮ್ಮ ನೆಚ್ಚಿನ ಪುಸ್ತಕ ಕೊಳ್ಳಲು ಆಸಕ್ತಿಯಿಂದ ಆಗಮಿಸುತ್ತಿದ್ದಾರೆ. ಪುಸ್ತಕ ಮಳಿಗೆಗಳ ಜಾಗದಲ್ಲಿ ಜನಜಂಗುಳಿ ಹೆಚ್ಚಾಗಿಯೇ ಇದೆ.

ಆದರೆ ಇದೆಲ್ಲ ಉತ್ಸಾಹಕ್ಕೆ ಮೊಬೈಲ್‌ ನೆಟ್‌ವರ್ಕ್‌ ತಣ್ಣೀರೆರೆಚಿದೆ. ಹಾವೇರಿ ನಗರದಿಂದ ಸುಮಾರು ಮೂರು ಕಿಲೋಮೀಟರ್‌ ದೂರದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಇಲ್ಲಿ ಮೊಬೈಲ್‌ ನೆಟ್‌ವರ್ಕ್‌ ಇದೆಯಾದರೂ ಸಾವಿರಾರು ಜನರು ಒಂದೇ ಕಡೆ ಕೂಡಿದ್ದರಿಂದ ದಿನಪೂರ್ತಿ ಮೊಬೈಲ್‌ ನೆಟ್‌ವರ್ಕ್‌ ಜಾಮ್‌ ಆಗಿದೆ. ಸಾಮಾನ್ಯ ಕರೆಗೂ ಪರದಾಡುವ ಸ್ಥಿತಿ ಇದೆ.

ಇದೆಲ್ಲದರ ನಡುವೆ ಬಹಳಷ್ಟು ಪುಸ್ತಕ ಮಳಿಗೆಯವರು ಹಣ ಪಾವತಿಗೆ ಗೂಗಲ್‌ ಪೇ, ಭೂಮ್‌, ಫೋನ್‌ ಪೇ, ಪೇಟಿಎಂ ಕ್ಯುಆರ್‌ ಕೋಡ್‌ಗಳನ್ನು ತಂದಿದ್ದಾರೆ. ಬೆಳಗ್ಗೆ ತಮ್ಮ ಮಳಿಗೆಯಲ್ಲಿ ಈ ಕೋಡ್‌ಗಳನ್ನು ಪ್ರದರ್ಶಿಸಿದ್ದರು. ಆದರೆ ಶೇ. 99ರಷ್ಟು ಆನ್‌ಲೈನ್‌ ಪೇಮೆಂಟ್‌ ವಿಫಲವಾಗುತ್ತಿದೆ. ಇಡೀ ದಿನ ಬೆರಳೆಣಿಕೆಯ ಮಂದಿ ಮಾತ್ರ ಆನ್‌ಲೈನ್‌ ಪಾವತಿ ಮಾಡಲು ಸಫಲರಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮನೋಹರ ಗ್ರಂಥಮಾಲೆಯ ಸಮೀರ್‌ ಜೋಶಿ, ನೆಟ್‌ವರ್ಕ್‌ ಸಮಸ್ಯೆಯಿಂದ ಭಾರಿ ಸಮಸ್ಯೆಯಾಗಿದೆ. ಪುಸ್ತಕ ಖರೀದಿಸಲು ಆಗಮಿಸುವ ಅನೇಕರು ಆನ್‌ಲೈನ್‌ ಪೇಮೆಂಟ್‌ ಇದೆಯೇ ಎಂದು ಮೊದಲು ಕೇಳುತ್ತಾರೆ. ಅದರಲ್ಲೂ ಈಗಿನ ಯುವಜನರು ಯಾರೂ ಹೆಚ್ಚು ಹಣವನ್ನು ಜತೆಯಲ್ಲಿ ಒಯ್ಯುವುದಿಲ್ಲ. ಪುಸ್ತಕ ಖರೀದಿಸಿದ ಅನೇಕರು, ಕ್ಯಾಷ್‌ ತಂದಿಲ್ಲ, ನಾಳೆ ಬರುತ್ತೇನೆ ಎಂದು ಹಾಗೆಯೇ ಇಟ್ಟು ಹೋಗಿದ್ದಾರೆ ನೋಡಿ ಎಂದು ಗ್ರಾಹಕರು ಕೊಂಡೊಯ್ಯಲು ಕವರ್‌ನಲ್ಲಿ ಹಾಕಲಾಗಿದ್ದ ಪುಸ್ತಕಗಳನ್ನು ತೋರಿಸಿ ಬೇಸರ ವ್ಯಕ್ತಪಡಿಸಿದರು.

ರಾಣೆಬೆನ್ನೂರಿನ ಶಿಕ್ಷಕ ರಾಘವೇಂದ್ರ ಅವರು ಪ್ರತಿಕ್ರಿಯೆ ನೀಡಿ, ಪುಸ್ತಕದ ಅಂಗಡಿಯೊಂದರಲ್ಲಿ ಎರಡೂವರೆ ಸಾವಿರ ರೂ. ಮೊತ್ತದ ಪುಸ್ತಕವನ್ನು ಖರೀದಿ ಮಾಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗುತ್ತದೆ ಎಂದು ಖರೀದಿಸಿದ್ದೆ. ಆನ್‌ಲೈನ್‌ ಪೇಮೆಂಟ್‌ ಸಾಧ್ಯವಾಗಲೇ ಇಲ್ಲ. ಕೊನೆಗೆ ನನ್ನಲ್ಲಿದ್ದ ಅಷ್ಟೂ ಹಣ, ಸ್ನೇಹಿತನಲ್ಲಿದ್ದ ಹಣವನ್ನು ಸೇರಿಸಿದರೂ 1,500 ರೂ. ದಾಟಲಿಲ್ಲ. ಕೊನೆಗೆ, ನಾಳೆ ಬರುತ್ತೇನೆ ಎಂದು ಹಾಗೆಯೇ ಇಟ್ಟು ಬಂದಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

ಅನೇಕ ಪುಸ್ತಕ ಮಳಿಗೆಗಳು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಷ್ಟೂ ಮಳಿಗೆಗಳನ್ನು ಸೇರಿಸಿ ದಿನಪೂರ್ತಿ ಲಕ್ಷಾಮತರ ರೂ. ನಷ್ಟವಾಗಿದೆ ಎಂದು ಹೇಳಿದ್ದಾರೆ. ಇಷ್ಟು ಹಣ ವೆಚ್ಚ ಮಾಡಿ ಸಮ್ಮೇಳನ ಮಾಡುವಾಗ, ಆಧುನಿಕತೆಗೆ ತಕ್ಕಂತೆ ಸಂಚಾರಿ ನೆಟ್‌ವರ್ಕ್‌ಗಳು ಅಥವಾ ಇನ್ನಾವುದೇ ವ್ಯವಸ್ಥೆ ಮೂಲಕ ಆನ್‌ಲೈನ್‌ ಪಾವತಿಗೆ ವ್ಯವಸ್ಥೆ ಕಲ್ಪಿಸಬೇಕಾಗಿತ್ತು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಭಾರತದಲ್ಲಿ ರಾಷ್ಟ್ರೀಯತೆಯ ಬೀಜ ಬಿತ್ತಿದ್ದೇ ಇಂಗ್ಲಿಷ್ ಶಿಕ್ಷಣ ವ್ಯವಸ್ಥೆ: ವೂಡೇ ಪಿ.‌ ಕೃಷ್ಣ ಅಭಿಮತ

Exit mobile version