ಹಾವೇರಿ: ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಕುರಿತು ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಅವರು ಮುಂದಿಟ್ಟ ಹೊಸ ಸೂತ್ರಕ್ಕೆ ಪರ ವಿರೋಧ ಚರ್ಚೆ ನಡೆದಿದೆ.
ಸಾಮಾನ್ಯವಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಎರಡನೇ ದಿನ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ಸೇರಿ ಮುಂದಿನ ಸಮ್ಮೇಳನದ ಸ್ಥಳವನ್ನು ನಿರ್ಧಾರ ಮಾಡುತ್ತದೆ. ಅದೇ ರೀತಿ 87ನೇ ಸಮ್ಮೇಳನದ ಸ್ಥಳವನ್ನು ಆಯ್ಕೆ ಮಾಡುವ ಸಲುವಾಗಿ ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಸಮ್ಮೇಳನದ ನಡುವೆ ಶನಿವಾರ ರಾತ್ರಿ ಸಭೆ ನಡೆಸಲಾಯಿತು.
ಪ್ರಾರಂಭದಲ್ಲಿ ಮಾತನಾಡಿದ ಡಾ. ಮಹೇಶ್ ಜೋಶಿ, ಮುಂದಿನ ಸಮ್ಮೇಳನ ಆಯೋಜಿಸಲು ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಬಳ್ಳಾರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಮನವಿ ಮಾಡಿವೆ. ಇತ್ತೀಚಿನ ದಶಕಗಳಲ್ಲಿ ಸೃಜನೆಯಾಗಿರುವ ಚಾಮರಾಜನಗರ, ಯಾದಗಿರಿ, ರಾಮನಗರ ಜಿಲ್ಲೆಗಳಲ್ಲಿ ಇಲ್ಲಿವರೆಗೆ ಸಮ್ಮೇಳನವೇ ನಡೆದಿಲ್ಲ ಎಂಬುದನ್ನು ಸಭೆಯ ಮುಂದಿಟ್ಟರು.
ಹಾವೇರಿಯಲ್ಲಿ ಸಿಎಂ ತವರು ಜಿಲ್ಲೆಯಾದರೂ ಕೆಲವು ಸಮಸ್ಯೆಗಳು ಎದುರಾಗಿವೆ. ಅನೇಕ ರಸ್ತೆಗಳಿಗೆ ಡಾಂಬರ್ ಸಹಿತ ಆಗಿಲ್ಲ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯ ಸಂಪೂರ್ಣ ಸಹಕಾರದ ನಂತರವೂ ಕೆಲವು ಸಮಸ್ಯೆಗಳಾಗಿವೆ. ಸಾಹಿತ್ಯ ಸಮ್ಮೇಳನ ಚೆನ್ನಾಗಿ ನಡೆಯಬೇಕಾದರೆ ಮುಖ್ಯವಾಗಿ ಜಿಲ್ಲಾ ಕಸಾಪ ಘಟಕ ಸದೃಢವಾಗಿರಬೇಕು. ಸರ್ಕಾರದ ಸಹಕಾರವೂ ಬೇಕು. ಒಂದಷ್ಟು ಮೂಲಸೌಕರ್ಯಗಳು ಇರುವಲ್ಲಿ ಮಾತ್ರ ಸಮ್ಮೇಳನ ಮಾಡಬಹುದೇ ಹೊರತು ಎಲ್ಲವನ್ನೂ ಹೊಸದಾಗಿ ಸೃಷ್ಟಿಸಿ ಆಯೋಜಿಸುವುದು ಆಗುವುದಿಲ್ಲ.
ಇದಕ್ಕಾಗಿ ಮೇಲೆ ತಿಳಿಸಿದ ಜಿಲ್ಲೆಗಳಲ್ಲಿನ ಕಸಾಪ ಘಟಕದ ಶಕ್ತಿ, ಅಲ್ಲಿರುವ ಕ್ರಿಯಾಶೀಲ ತಂಡ, ಪ್ರಮುಖ ಮಠಾಧೀಶರ ಸಲಹೆ, ರಾಜಕೀಯ ಮುಖಂಡರೊಂದಿಗೆ ಚರ್ಚೆ ನಡೆಸಿದ ನಂತರ ಇನ್ನೊಂದು ತಿಂಗಳಲ್ಲಿ ಯಾವ ಜಿಲ್ಲೆ ಎಂದು ನಿರ್ಧಾರ ಮಾಡೋಣ ಎಂದರು.
ಇದಕ್ಕೆ ಸಭೆಯಲ್ಲಿ ಕೆಲವರು ಎದ್ದುನಿಂತು, ಇಲ್ಲಿವರೆಗೆ ನಡೆದುಕೊಂಡು ಬಂದಂತೆ ನಡೆಯಲಿ. ನೀವೇ ಯಾವುದಾದರೂ ಒಂದು ಜಿಲ್ಲೆ ನಿರ್ಧಾರ ಮಾಡಿ ಅಥವಾ ಎಲ್ಲರೂ ಸೇರಿ ನಿರ್ಧಾರ ಮಾಡೋಣ ಎಂದರು. ಕೆಲವರು ಜೋಶಿ ಅಭಿಪ್ರಾಯಕ್ಕೆ ಬೆಂಬಲವನ್ನೂ ಸೂಚಿಸಿದರು.
ಈ ಸಮಯದಲ್ಲಿ ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಪ್ರಕಾಶ ಮೂರ್ತಿ, ಹಾವೇರಿ ಸಮ್ಮೇಳನದಲ್ಲಾದ ಅನೇಕ ಸಮಸ್ಯೆಗಳನ್ನು ಹೇಳಿದರು. ಸರ್ಕಾರಿ ನೌಕರರಿಗೆ ಒಒಡಿ ನೀಡುವ ಕುರಿತೂ ಸಮಸ್ಯೆಯಾಗಿದೆ ಎನ್ನುವುದೂ ಸೇರಿ ಅನೇಕ ವಿಚಾರಗಳನ್ನು ಮುಂದಿಟ್ಟರು. ಈ ಮಾತಿಗೆ ಕೆಲವು ಜಿಲ್ಲಾ ಅಧ್ಯಕ್ಷರು ದನಿಗೂಡಿಸಿದರು. ಸರ್ಕಾರದ ಮರ್ಜಿಗೆ ಕಾಯುವುದು ಬೇಡ, ನಾವೇ ಸಮ್ಮೇಳನ ಆಯೋಜಿಸೋಣ, ನಾವೇ ನಿರ್ಧಾರ ಮಾಡೋಣ ಎಂದರು.
ಇಷ್ಟು ದೊಡ್ಡ ಮಟ್ಟದ ಮೂಲಸೌಕರ್ಯ, ವಾಹನ ನಿರ್ವಹಣೆ ಸೇರಿ ಸರ್ಕಾರಿ ನೌಕರರೂ ಬೃಹತ್ ಸಂಖ್ಯೆಯಲ್ಲಿ ಕಸಾಪ ಬೆಂಬಲಕ್ಕಿದ್ದಾರೆ. ಇದರಿಂದಾಗಿ ಸರ್ಕಾರದ ಸಹಯೋಗ ಅಗತ್ಯವಾಗುತ್ತದೆ ಎಂದರು. ಇದಕ್ಕೆ ಅನೇಕ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಿದ್ದಾಗ, ಭಾನುವಾರ ಬೆಳಗ್ಗೆ 8ಗಂಟೆಗೆ ಕಾರ್ಯಕಾರಿ ಸಮಿತಿ ಸಭೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿ ಸಭೆಯನ್ನು ಮುಕ್ತಾಯ ಮಾಡಲಾಯಿತು.
ಸಭೆಯ ನಂತರ ಪ್ರತಿಕ್ರಿಯಿಸಿದ ಶಿವಮೊಗ್ಗ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಕಸಾಪ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ವಿವಿಧ ಜಿಲ್ಲಾಧ್ಯಕ್ಷರಿಂದ ರಾಜ್ಯಾಧ್ಯಕ್ಷ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಸರಿಯಾದ ರೀತಿಯ ಚರ್ಚೆಗೆ ಅವಕಾಶ ಮಾಡಿಲ್ಲ. ಬೇರೆ ಬೇರೆ ಕಾರಣ ಹೇಳಿ ಸಭೆ ಮುಂದೆ ಹಾಕಿದರು. ಹಾವೇರಿಯಲ್ಲಿ ನಡೆದ ಸಮ್ಮೇಳನದಲ್ಲಿ ಕೆಲ ಸಾಹಿತಿಗಳನ್ನು ಪೊಲೀಸರು ಒಳಗಡೆ ಬಿಡಲಿಲ್ಲ. ಸಾಹಿತಿಗಳಿಗೆ ಅವಮಾನ ಆಗಿದೆ. ಮುಂದೆ ಯಾವ ಜಿಲ್ಲೆಯಲ್ಲಿ ಸಮ್ಮೇಳನ ಆಗಬೇಕು ಎನ್ನುವ ಚರ್ಚೆ ನಡೆಯಿತು. ಮಂಡ್ಯ, ಚಿಕ್ಕಮಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗೆ ಸದಸ್ಯರು ಕೇಳಿದ್ದಾರೆ. ಏನು ತೀರ್ಮಾನ ಎನ್ನುವುದು ಭಾನುವಾರದ ಸಭೆಯಲ್ಲಿ ತಿಳಿಯಲಿದೆ ಎಂದರು.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಹೇಶ್ ಜೋಶಿ, ಸಮ್ಮೇಳನ ಆಗಬೇಕಾದರೆ ಜಿಲ್ಲಾಡಳಿತ, ಸರ್ಕಾರದ ಸಹಕಾರ ಬೇಕೇ ಬೇಕು. ಕೆಲವರು ತಮ್ಮ ಜಿಲ್ಲೆಯಲ್ಲೆ ಸಮ್ಮೇಳನ ಮಾಡಿ ಎಂದು ಒತ್ತಾಯಿಸಿದ್ದಾರೆ. ಸಾಧಕ ಬಾಧಕಗಳನ್ನು ನೋಡಿಕೊಂಡು ಭಾನುವಾರ ಬೆಳಗ್ಗೆ 8ಕ್ಕೆ ಸಭೆ ನಡೆಸಿ ನಿರ್ಧಾರ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸಾಹಿತ್ಯದಲ್ಲಿ ಸಮಕಾಲೀನ ಸ್ಪಂದನ ಹೆಚ್ಚಳ: ಸುನಂದಾ ಪ್ರಕಾಶ ಕಡಮೆ