ಹಾವೇರಿ: ಸ್ಥಳೀಯ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಕುರಿತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಆಸ್ಥೆ ವ್ಯಕ್ತಪಡಿಸಿದ್ದರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಉತ್ತರ ಕರ್ನಾಟಕದ ಹೆಬ್ಬಾಗಿಲು ಉದಯವಾಗಿ 25 ವರ್ಷವಾದ ಸಂದರ್ಭದಲ್ಲಿ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಸಂತಸದ ಸಂಗತಿ. ಹಾವೇರಿಗೆ ಭವ್ಯವಾದ ಇತಿಹಾಸವಿದೆ. ಕುಲದ ಮೂಲವನ್ನೇನಾದರೂ ಬಲ್ಲಿರಾ ಎಂದ ಕನಕರು, ಜೀವನದ ತತ್ವದ ಮೂಲಕ ಸಮಾಜದ ಸುಧಾರಣೆಗೆ ಪ್ರಯತ್ನಿಸಿದ ಶರೀಫರು, ಅಂಬಿಗರ ಚೌಡಯ್ಯ, ಹೆಳವನಕಟ್ಟೆ ಗಿರಿಯಮ್ಮನಂತಹವರ ಪುಣ್ಯಭೂಮಿ.
ಈ ನೆಲದಲ್ಲಿ ಕನ್ನಡದ ಜಾತ್ರೆ ನಡೆಯುತ್ತಿದೆ. ಮೂರೂ ದಿನ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ನೆರೆದಿರುವುದು, ಕನ್ನಡದ ಅಭಿಮಾನ ನಿಜವಾಗಿ ಇರುವುದು ಹಳ್ಳಿಗಳಲ್ಲಿ ಎನ್ನುವುದು ಅರ್ಥವಾಗುತ್ತದೆ. ಎರಡು ಸಾವಿರ ವರ್ಷದ ಇತಿಹಾಸ ಹೊಂದಿರುವ ಕನ್ನಡವನ್ನು ಮರೆತು ವಿದೇಶಿ ವ್ಯಾಮೋಹದಲ್ಲಿ ದೇಶ ನಡೆದಿದೆ. ನೌಕಾದಳದ ಲಾಂಛನ ಮೊನ್ನೆಮೊನ್ನೆವರೆಗೆ ವಸಾಹತುಶಾಹಿ ಮಾನಸಿಕತೆಯಲ್ಲೇ ಇದೆ. ಮೆಕಾಲೆ ಶಿಕ್ಷಣ ಪದ್ಧತಿಯಲ್ಲಿ ನಮ್ಮ ನಡೆ, ನುಡಿಯನ್ನು ಹತ್ತಿಕ್ಕುವ ಪ್ರಯತ್ನ ಈಗಲೂ ಮುಂದುವರಿದಿರುವುದು ಸರಿಯಲ್ಲ.
ಸ್ಥಳೀಯ ಭಾಷೆಯಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಕುರಿತು ಕೇಂದ್ರ ಸರ್ಕಾರದಲ್ಲಿ ನಡೆದ ಚರ್ಚೆಯನ್ನು ಪ್ರಲ್ಹಾದ ಜೋಶಿ ಉಲ್ಲೇಖಿಸಿದರು. ಸ್ಥಳೀಯ ಭಾಷೆಯಲ್ಲಿ ತಾಂತ್ರಿಕ ಶಿಕ್ಷಣದ ಕುರಿತು ಚರ್ಚೆ ನಡೆಯುತ್ತಿತ್ತು. ಅಲ್ಲಿರುವ ಕೆಲ ಅಧಿಕಾರಿಗಳು, ಸಂಶೋಧನೆ ಮತ್ತು ಅಭಿವೃದ್ಧಿ ಗತಿ ಏನಾಗಬಹುದು? ಎಂದು ಕೆಲ ಅಧಿಕಾರಿಗಳು ಹೇಳಿದರು. ಗೃಹಸಚಿವರು ಹೇಳಿದರು, ದಕ್ಷಿಣ ಕೊರಿಯಾದಿಂದ ನಮ್ಮ ದೇಶಕ್ಕೆ ಟಿವಿ, ಎಲ್‌ಇಡಿ ಪರದೆಗಳು ಬರುತ್ತವೆ. ಅಲ್ಲಿ ಇಂಗ್ಲಿಷ್ ಇಲ್ಲ, ಅಲ್ಲಿ ಹೇಗೆ ಸಂಶೋಧನೆ ಆಗುತ್ತದೆ? ಎಂದು ಮರುಪ್ರಶ್ನಿಸಿದರು. ರಷ್ಯಾದಲ್ಲಿ ಇಂಗ್ಲಿಷ್ ಇಲ್ಲ. ಆದರೆ ಕರ್ನಾಟಕದಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಪಾಲಕರು ಕನ್ನಡ ಶಾಲೆಗೆ ಕಳಿಸಲು ಸಿದ್ಧರಾಗಿಲ್ಲ.
ಅಮ್ಮನಿಗೆ ಮಮ್ಮಿ ಎನ್ನುತ್ತೇವೆ, ತಾಯಿಯ ಅಕ್ಕನಿಗೆ ಆಂಟಿ ಎನ್ನುತ್ತಾರೆ. ಇಂತಹ ವಿಚಿತ್ರವಾದ ಸನ್ನಿವೇಶದಲ್ಲಿದ್ದೇವೆ. ಕನ್ನಡದ ಬಗ್ಗೆ ಅಭಿಮಾನ ಇಟ್ಟುಕೊಳ್ಳಬೇಕು. ಬೇರೆ ಭಾಷೆ ಕಲಿಯುವುದರ ಬಗ್ಗೆ ವಿರೋಧ ಇಲ್ಲ. ಕನ್ನಡದ ಶಾಲೆಯಿಂದ ಬಂದವರು ಎಂಬ ಅಭಿಮಾನ ನನಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ಸ್ಥಳೀಯ ಭಾಷೆಗೆ ಪ್ರಾಮುಖ್ಯತೆ ನೀಡಿದ್ದೇವೆ ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸಾಹಿತಿಗಳು ರಾಜಕೀಯ ಮಾಡಬೇಡಿ: ಮುಸ್ಲಿಂ ಪ್ರಾತಿನಿಧ್ಯದ ಕುರಿತು ಕಸಾಪಕ್ಕೆ ಬಿ.ಕೆ. ಹರಿಪ್ರಸಾದ್ ಬುದ್ಧಿಮಾತು