ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಸ್ವಿಪ್ಟ್ ಕಾರೊಂದು ಬೇವಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ (Road Accident) ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಬಳಿ ಅಪಘಾತ ನಡೆದಿದೆ. ನೀಲಪ್ಪ ಮೂಲಿಮನಿ( 23), ಸುದೀಪ್ ಕೋಟಿ( 18) ಮೃತ ದುರ್ದೈವಿಗಳು.
ಮೃತರಿಬ್ಬರು ಸವಣೂರು ತಾಲೂಕಿನ ಬೇವಿನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ. 7 ಯುವಕರ ತಂಡವು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡಕ್ಕೆ ಹೊರಟಿದ್ದರು. ಈ ವೇಳೆ ಎದುರಿಗಿದ್ದ ವಾಹನವನ್ನು ಓವರ್ ಟೇಕ್ ಮಾಡಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಬೇವಿನ ಮರಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಮುಂದೆ ಕುಳಿತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶಿವನಗೌಡ ಯಲ್ಲನಗೌಡ್ರ (20), ಕಲ್ಮೇಶ ಮಾನೋಜಿ (26) ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 4ಕ್ಕೆ ಏರಿಕೆ ಆಗಿದ್ದು, ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ. ಶಿಗ್ಗಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇದನ್ನೂ ಓದಿ: Road Accident: ಹಿಟ್ ಆ್ಯಂಡ್ ರನ್‌ಗೆ ಇಬ್ಬರು ಸ್ಪಾಟ್ ಡೆತ್; ಕಿತ್ತು ಬಂತು ಸವಾರನ ಕಣ್ಣು ಗುಡ್ಡೆ
ಆಟೋ ಚಾಲಕನ ರ‍್ಯಾಶ್ ಡ್ರೈವಿಂಗ್; ಬೈಕ್, ಪಾದಚಾರಿಗಳಿಗೆ ಗುದ್ದಿ ಎಸ್ಕೇಪ್
ವೇಗವಾಗಿ ಬಂದ ಆಟೋವೊಂದು ಚಲಿಸುತ್ತಿದ್ದ ಬೈಕ್ ಸೇರಿ ಪಾದಚಾರಿಗಳಿಗೆ ಗುದ್ದಿದೆ. ಅಪಘಾತದ ಬಳಿಕ ಆಟೋ ನಿಲ್ಲಸದೇ ಚಾಲಕ ಸ್ಥಳದಲ್ಲಿ ಕಾಲ್ಕಿತ್ತಿದ್ದಾನೆ. ಹಿಟ್ ಆ್ಯಂಡ್ ರನ್ ದೃಶ್ಯವು ಕಾರೊಂದರ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಂಗಳೂರಿನ ಡೈರಿ ಸರ್ಕಲ್ ಬಳಿಯ ಕ್ರೈಸ್ಟ್ ಯೂನಿವರ್ಸಿಟಿ ಕಳೆದ ಜುಲೈ 11ರ ರಾತ್ರಿ 9.07ರ ಸುಮಾರಿಗೆ ಅಪಘಾತ ನಡೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ. ಆಟೋ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಟ್ಯಾಗ್ ಮಾಡಿ ಆಗ್ರಹಿಸಿದ್ದಾರೆ. ಮೊದಲು ವೇಗವಾಗಿ ಬಂದು ಕಾರನ್ನು ಓವರ್ ಟೇಕ್ ಮಾಡುವ ಆಟೋ ನಂತರ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಪಾದಚಾರಿಗಳು ಹಾಗೂ ಬೈಕ್ ಗುದ್ದಿ ಪರಾರಿ ಆಗಿದ್ದಾನೆ.
ತಕ್ಷಣ ಬಿದ್ದವರ ಸಹಾಯಕ್ಕೆ ಸಹ ಸವಾರರು ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ. ವಿಡಿಯೋದಲ್ಲಿ ಆಟೋದ ನಂಬರ್ ಪ್ಲೇಟ್ ಸರಿಯಾಗಿ ಸೆರೆಯಾಗಿಲ್ಲ. ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ಬೆಂಗಳೂರ ಸಿಟಿ ಪೊಲೀಸರು ನೀಡಿದ್ದಾರೆ.
ಹಾವೇರಿ ಆ್ಯಕ್ಸಿಡೆಂಟ್; ಮೃತರ ಕುಟುಂಬಸ್ಥರಿಗೆ ಬಿ.ವೈ. ರಾಘವೇಂದ್ರ ಸಾಂತ್ವನ
ಹಾವೇರಿ ಬಳಿ ಭೀಕರ ರಸ್ತೆ ಅಪಘಾತದಲ್ಲಿ 13 ಜನ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮಕ್ಕೆ ಸಂಸದ ಬಿ.ವೈ. ರಾಘವೇಂದ್ರ ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿದರು.
ಬಿಜೆಪಿ ಪಕ್ಷದಿಂದ ಮೃತರಿಗೆ ತಲಾ ಒಂದು ಲಕ್ಷ ರೂ. ಹಣ ನೀಡಲಾಯಿತು. 13 ಲಕ್ಷ ರೂ. ಜತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ 2 ಲಕ್ಷ ರೂ. ಪರಿಹಾರದೊಂದಿಗೆ ಒಟ್ಟು 15 ಲಕ್ಷ ರೂ. ನೀಡಲಾಯಿತು. ಇದೇ ವೇಳೆ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ