ಹಾವೇರಿ: ಶಿಗ್ಗಾಂವಿ ರಾಜಶ್ರೀ ಥಿಯೇಟರ್‌ನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣದ ಆರೋಪಿ ಮಂಜುನಾಥ್ ಅಲಿಯಾಸ್ ಮಲೀಕ್ ಪಾಟೀಲ್‌ನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.
ಏ.19ರಂದು ರಾಜಶ್ರೀ ಥಿಯೇಟರ್‌ನಲ್ಲಿ ಕೆ.ಜಿ.ಎಫ್ ಚಿತ್ರ ವೀಕ್ಷಣೆ ವೇಳೆ ನಡೆದ ಗಲಾಟೆಯಲ್ಲಿ ಶಿಗ್ಗಾಂವಿ ತಾಲೂಕು ಮುಗಳಿ ಗ್ರಾಮದ ಯುವಕ ವಸಂತ್ ಕುಮಾರ್ ಎಂಬುವವರ ಮೇಲೆ ಆರೋಪಿ ಮಂಜುನಾಥ್ ನಾಡ ಬಂದೂಕಿನಿಂದ ಫೈರ್ ಮಾಡಿದ್ದ. ದಾಳಿಯಲ್ಲಿ ವಸಂತ್ ಕುಮಾರ್ ತೀವ್ರ ಗಾಯಗೊಂಡಿದ್ದರಿಂದ
ಅವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಸದ್ಯ ವಸಂತ್ ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇದನ್ನೂ ಓದಿ | ಬಜರಂಗದಳ ಶಸ್ತ್ರಾಸ್ತ್ರ ತರಬೇತಿ ಖಂಡಿಸಿದ ಎಸ್‌ಡಿಪಿಐ
ಈ ಕುರಿತು ಮಾಹಿತಿ ನೀಡಿರುವ ಹನುಮಂತರಾಯ, ವಸಂತ್ ಕುಮಾರ್ ಸ್ನೇಹಿತ ನೀಡಿದ ದೂರಿನ ಮೇರೆಗೆ ಆರೋಪಿಯ ಬಂಧನಕ್ಕೆ ತನಿಖೆ ಶುರು ಮಾಡಿದೆವು. ನಂತರ ಮೂರು ತಂಡಗಳನ್ನ ರಚಿಸಿ, ಶಿಗ್ಗಾಂವಿ ಪೊಲೀಸರ ತಂಡ, ವಿಶೇಷ ಅಪರಾಧ ತಂಡ ರಚಿಸಿ ಚುರುಕಿನ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಗೋವಾ, ಬೆಂಗಳೂರು, ವಿಜಯಪುರ, ದಾಂಡೇಲಿ, ಮುಂಡಗೋಡ ಸುತ್ತಮುತ್ತ ಆರೋಪಿಗಾಗಿ ಹುಡಕಿದ ನಂತರ ಮುಂಡಗೋಡ ಬಸ್ ನಿಲ್ದಾಣದಲ್ಲಿ ಮಂಜುನಾಥ್ ಇರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಆತನನ್ನು ಬಂಧಿಸಿ, 15 ಬುಲೆಟ್, ನಾಡ ಬಂದೂಕು ವಶಕ್ಕೆ ಪಡೆದಿದ್ದೇವೆ. ಆತನ ಹತ್ತಿರ ಪಿಸ್ತೂಲ್ ಬಳಸುವುದಕ್ಕೆ ಯಾವುದೇ ರೀತಿಯ ಲೈಸೆನ್ಸ್ ಇಲ್ಲ, ಆತನಿಗೆ ಆಶ್ರಯ ನೀಡಿದ ಇಸ್ಮಾಯಿಲ್ ಬಂಕಾಪುರ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Cyber Crime | ಲಕ್ಷ ಹಣ ಕಳೆದುಕೊಂಡ ಬಿಎಸ್‌ಎಫ್ ಯೋಧ