ಸುರೇಶ ನಾಯ್ಕ, ಹಾವೇರಿ
ಏಲಕ್ಕಿ ಕಂಪಿನ ನಾಡಿನಲ್ಲಿ ಜನವರಿ 6ರಿಂದ 8ರವರೆಗೆ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸಮ್ಮೇಳನಾಧ್ಯಕ್ಷ, ಮುಖ್ಯಮಂತ್ರಿ ಹಾಗೂ ಗಣ್ಯರ ಕೊರಳೇರಲು ಒಂದು ಸಾವಿರ ಏಲಕ್ಕಿ ಮಾಲೆಗಳನ್ನು ಸಿದ್ಧಪಡಿಸಲಾಗುತ್ತಿದೆ. ದೇಶ ವಿದೇಶಗಳಲ್ಲಿ ಹೆಸರಾಗಿರುವ ಏಲಕ್ಕಿ ಮಾಲೆ ಸಮ್ಮೇಳನದಲ್ಲು ಕಂಪು ಸೂಸಲು ಸಿದ್ದವಾಗಿದೆ.
ಹಾವೇರಿಯಲ್ಲಿ ನಡೆಯುವ ನುಡಿಜಾತ್ರೆ ಹತ್ತಾರು ಹೊಸತನಗಳಿಗೆ ಸಾಕ್ಷಿಯಾಗುತ್ತಿದೆ. ತನ್ನ ಸೊಬಗು ಮತ್ತು ಪರಿಮಳದಿಂದ ಹಾವೇರಿಗೆ ‘ಏಲಕ್ಕಿ ಕಂಪಿನ ನಗರ’ ಎಂದು ಹೆಸರು ತಂದುಕೊಟ್ಟಿರುವ ಏಲಕ್ಕಿ ಮಾಲೆಗಳು ಈಗ ಸಮ್ಮೇಳನದಲ್ಲಿ ಗಣ್ಯರ ಕೊರಳೇರಲು ಸಿದ್ದವಾಗುತ್ತಿವೆ. ದೇಶ ವಿದೇಶಗಳಲ್ಲಿ ಅನೇಕ ಗಣ್ಯರ ಕೊರಳನ್ನು ಈ ಮಾಲೆ ಅಲಂಕರಿಸಿವೆ. ವಿದೇಶಗಳಲ್ಲೂ ಕಂಪನ್ನು ಬೀರಿವೆ. ಹಾವೇರಿಯ ಚಂದ್ರಪಟ್ಟಣ ರಸ್ತೆಯ ಉಸ್ಮಾನ್ ಸಾಹೇಬ್ ಪಟವೇಗಾರ್ ಕುಟುಂಬ ಎಂಟು ದಶಕಗಳಿಂದ ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಾ ಬಂದಿದ್ದು, 1996ರಲ್ಲಿ ಈ ಕುಟುಂಬಕ್ಕೆ ರಾಜ್ಯ ಪ್ರಶಸ್ತಿಯ ಗೌರವವೂ ಸಂದಿದೆ. ಹೀಗಾಗಿ, ಈ ಕುಟುಂಬಕ್ಕೆ ನುಡಿಜಾತ್ರೆಗೆ ಸಾವಿರ ಏಲಕ್ಕಿ ಮಾಲೆಗಳನ್ನು ತಯಾರಿಸುವ ಹೊಣೆಯನ್ನು ಜಿಲ್ಲಾಡಳಿತ ನೀಡಿದೆ.
ಈ ಕುರಿತು ಮಾತನಾಡಿರುವ ಉಸ್ಮಾನ್ ಸಾಬ್ ಪಟವೇಗಾರ, ಒಂದು ಸಾವಿರಕ್ಕೂ ಹಾರ ತಯಾರಿಸುತ್ತಿದ್ದೇವೆ. ಹಾವೇರಿ ಸಮ್ಮೇಳನಕ್ಕೆ ಹಾರ ಸಿದ್ಧಪಡಿಸುತ್ತಿರುವುದು ನಮಗೆ ಬಹಳ ಸಂತೋಷವಾಗಿದೆ. ಹಾವೇರಿಯಲ್ಲಿ ಬರುವ ಲಕ್ಷಾಂತರ ಜನರನ್ನು ಸಂತಸಪಡಿಸುವುದು ನಮಗೂ ಸಂತಸ ತಂದಿದೆ ಎಂದಿದ್ದಾರೆ.
ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇ ಗೌಡ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 4 ಅಡಿ ಎತ್ತರದ 10 ಎಳೆಗಳುಳ್ಳ ಬೃಹತ್ ಏಲಕ್ಕಿ ಮಾಲೆಯನ್ನು ತಯಾರಿಸಲಾಗುತ್ತಿದೆ. ಎರಡೂವರೆ ಅಡಿ ಎತ್ತರದ 5 ಎಳೆಯ 400 ಹಾರಗಳು ಮತ್ತು 2 ಅಡಿ ಎತ್ತರದ 600 ಹಾರಗಳನ್ನು ಸಿದ್ಧಪಡಿಸಲಾಗುತ್ತಿದೆ. ಕೈಯಿಂದಲೇ ಮಾಲೆ ಕಟ್ಟಬೇಕಿರುವುದರಿಂದ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದು, ಸುಮಾರು 40 ಕಾರ್ಮಿಕರೊಂದಿಗೆ ಹಗಲು–ರಾತ್ರಿ ಬಿಡುವಿಲ್ಲದೆ ಮಾಲೆ ಕಟ್ಟಲಾಗುತ್ತಿದೆ.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಜನವರಿ 6ರ ಮೊದಲ ದಿನದ ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ