Site icon Vistara News

IT Raid : ಅವರು ಸತ್ಯ ಹೇಳಿದ ಬಿಬಿಸಿಯವರನ್ನೇ ಬಿಟ್ಟಿಲ್ಲ, ನಮ್ಮನ್ನು ಬಿಡ್ತಾರಾ?; ಪ್ರಭಾಕರ ರೆಡ್ಡಿ ಐಟಿ ದಾಳಿಗೆ ಎಚ್‌ಡಿಕೆ ಪ್ರತಿಕ್ರಿಯೆ

h d kumaraswamy warns govt that he may call citizens for not to pay electricity bill

ಹುಬ್ಬಳ್ಳಿ/ಹಾವೇರಿ: ಹುಬ್ಬಳ್ಳಿ: ಪ್ರಭಾಕರ ರೆಡ್ಡಿ ಅವರು ಒಬ್ಬರು ಉದ್ಯಮಿ. ಅವರು ಜೆಡಿಎಸ್‌ ಅಭ್ಯರ್ಥಿಯಾಗಲಿದ್ದಾರೆ ಅಂತ ಎಲ್ಲರಿಗೂ ಗೊತ್ತು. ಹೀಗಾಗಿ ಐಟಿ ದಾಳಿ ನಡೆಸೋದು ಸಾಮಾನ್ಯ. ಇನ್ನು ಚುನಾವಣೆ ಮುಗಿಯುವವರೆಗೆ ವಿರೋಧ ಪಕ್ಷದ ಮೇಲೆ ಇಂಥ ದಾಳಿಗಳು ನಡೆಯುತ್ತಲೇ ಇರುತ್ತವೆ- ಹೀಗೆಂದು ಹೇಳಿದ್ದಾರೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ.

ಅವರು ಹುಬ್ಬಳ್ಳಿಯ ಹೆಬಸೂರಿನಲ್ಲಿ ಮತ್ತು ಹಾವೇರಿಯಲ್ಲಿ ಮಾತನಾಡಿದರು. ಬೆಂಗಳೂರಿನ ದಕ್ಷಿಣ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿರುವ ಪ್ರಭಾಕರ ರೆಡ್ಡಿ ಅವರ ಮನೆ ಮೇಲೆ ಬುಧವಾರ ಬೆಳಗ್ಗೆ ಐಟಿ ದಾಳಿ ನಡೆದಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದರು. ಇನ್ನು ಮುಂದೆ ಐಟಿ ದಾಳಿಗಳು ನಡೆಯುತ್ತಲೇ ಇರುತ್ತವೆ. ಯಾಕೆ ಅಂತ ಎಲ್ಲರಿಗೂ ಗೊತ್ತು. ಈ ಬಗ್ಗೆ ಜಾಸ್ತಿ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.

ʻʻಯಾವ ರಾಜ್ಯದಲ್ಲಿ ಚುನಾವಣೆ ನಡೆಯುತ್ತದೋ ಆ ರಾಜ್ಯದಲ್ಲಿ ವಿರೋಧ ಪಕ್ಷಗಳ ಮುಖಂಡರ ಮೇಲೆ ದಾಳಿ ನಡೆಯುತ್ತದೆ. ಬಿಜೆಪಿ ಸರ್ಕಾರ ಬಂದ ಮೇಲೆ ಇದು ನಡೆದುಕೊಂಡು ಬಂದಿದೆ. ಬಿಜೆಪಿಯವರ ಚುನಾವಣೆ ಸಿಸ್ಟಮ್ಮೇ ಅದು. ಅವರು ಗುಜರಾತ್‌ ಘಟನೆಯ ನೈಜ ಚಿತ್ರಣ ಮಾಡಿದ ಬಿಬಿಸಿಯವರನ್ನೇ ಬಿಟ್ಟಿಲ್ಲ, ಇನ್ನು ನಮ್ಮನ್ನು ಬಿಡ್ತಾರಾ?ʼʼ ಎಂದು ಪ್ರಶ್ನಿಸಿದರು.

ʻʻಲೋಕಸಭೆ ಚುನಾವಣೆಯಲ್ಲಿಯೂ ಹಲವರ ಮೇಲೆ ದಾಳಿ ನಡೆಯಿತು. ಈಗಲೂ ಅದನ್ನೇ ಮಾಡುತ್ತಾ ಇದ್ದಾರೆ. ರೈಡ್ ಗೀಡು ಏನ್ ಮಾಡ್ತಾರೋ ಮಾಡಿಕೊಂಡು ಹೋಗಲಿ. ಬಿಜೆಪಿಯವರು ಮಹಾನ್ ಹರಿಶ್ಚಂದ್ರರು, ಅವರು ಚುನಾವಣೆಗೆ ದುಡ್ಡೇ ಖರ್ಚು ಮಾಡಲ್ಲ, ಬಡತನದಲ್ಲಿ ಚುನಾವಣೆ ಮಾಡ್ತಾರೆ. ಬಿಜೆಪಿಯವರು ಕೈ ಮುಗಿದುಕೊಂಡು ಹೋಗಿ ಚುನಾವಣೆ ನಡೆಸುತ್ತಾರೆʼʼ ಎಂದು ಗೇಲಿ ಮಾಡಿದರು.

ʻʻಕಾಂಗ್ರೆಸ್ ಮತ್ತು ಬಿಜೆಪಿ ಭ್ರಷ್ಟಾಚಾರದ ಬಗ್ಗೆ ವಿಧಾನ ಸಭಾ ಕಲಾಪದಲ್ಲಿ ನಡೆಸುತ್ತಿರುವ ಚರ್ಚೆ ಕೇವಲ ತೌಡು ಕುಟ್ಟುವ ಕೆಲಸ. ಕೇವಲ ಚರ್ಚೆಯಿಂದ ಏನೂ ಲಾಭವಿಲ್ಲ. ಎಲ್ಲಾ ಭ್ರಷ್ಟಾಚಾರ ಆರೋಪಗಳಿಗೆ ದಾಖಲೆ ಒದಗಿಸಲು ಸಾಧ್ಯವಿಲ್ಲʼʼ ಎಂದರು.

ಬಿಜೆಪಿ ತನ್ನ ನಾಯಕರಿಗೆ ಟೆಂಡರ್‌ ನೀಡುವ ಮೂಲಕ ಭ್ರಷ್ಟಾಚಾರ ಮಾಡುತ್ತಿದೆ. ಟೆಂಡರ್‌ ಹೆಸರಿನಲ್ಲಿ ಲೂಟಿ ಮಾಡುತ್ತಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನ ಈ ಆರೋಪ ಭೂತದ ಬಾಯಿಯಲ್ಲಿ ಭಗವದ್ಗೀತೆಯಂತೆ ಎಂದರು.

ʻʻನಾನು ಈ ಹಿಂದೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಆರೋಪಗಳಿಗೆ ದಾಖಲೆ ನೀಡಿದ್ದೆ. ಆದರೆ ಆ ದಾಖಲೆಗಳಿಂದ
ಕಾಂಗ್ರೆಸ್ ಅನುಕೂಲ ಮಾಡಿಕೊಂಡಿತುʼʼ ಎಂದು ಹೇಳಿದ ಅವರು, ʻಜನಾರ್ದನ ರೆಡ್ಡಿಯವರ ಪ್ರಾದೇಶಿಕ ಪಕ್ಷದಿಂದ ಕಾಂಗ್ರೆಸ್ ಮತ್ತು ಬಿಜೆಪಿಗೆ ಹೊಡೆತ ನೀಡಬಹುದು. ಅದರಿಂದ ಜೆಡಿಎಸ್‌ಗೆ ಏನೂ ಆಗಲ್ಲʼʼ ಎಂದರು

ಇದನ್ನೂ ಓದಿ : IT Raid in Bangalore : ಜೆಡಿಎಸ್‌ ಘೋಷಿತ ಅಭ್ಯರ್ಥಿಗೆ ಐಟಿ ಶಾಕ್‌; ರೆಡ್ಡಿ ಗ್ರೂಪ್‌ನ ಪ್ರಭಾಕರ ರೆಡ್ಡಿ ಅವರ ಸಂಸ್ಥೆಗಳ ಮೇಲೆ ದಾಳಿ

Exit mobile version