ಹಾವೇರಿ: ಹಿಂದು ಪರಂಪರೆಯನ್ನು ಧಿಕ್ಕರಿಸಿ ಶಿವಶರಣರು ಹೊಚ್ಚ ಹೊಸ ಧರ್ಮವನ್ನೇ ಹುಟ್ಟುಹಾಕಿದರು ಎನ್ನುವುದು ತಕೆಬುಡವಿಲ್ಲದ ವಾದ ಎಂದು ಹಿರಿಯ ಸಂಶೋಧಕ ಡಾ. ಸಂಗಮೇಶ ಸವದತ್ತಿಮಠ ತಿಳಿಸಿದರು.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ʼಪಾಪು-ಚಂಪಾ ವೇದಿಕೆʼಯಲ್ಲಿ ಆಯೋಜಿಸಿದ್ದ ʼವಚನ ಪರಂಪರೆʼ ಕುರಿತ ಗೋಷ್ಠಿಯ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು.
ಪರಂಪರೆ ಎಂದರೆ ಎರಡು ಪರಂಪರೆ ಕಂಡುಬರುತ್ತದೆ. 11 ನೇ ಶತಮಾನದಿಂದ ಆರಂಭವಾದ ವಚನ ಪರಂಪರೆ ಒಂದಾದರೆ, ಹಿಂದು ಪರಂಪರೆ ಮತ್ತೊಂದು. ಹಿಂದು ಪರಂಪರೆಯನ್ನು ಹೀಗಳೆಯುವುದೇ ಕೆಲವರಿಗೆ ಅಭ್ಯಾಸ ಆಗಿದೆ. ವಚನಕಾರರು ಪ್ರಗತಿಪರರು ನಿಜ, ಆದರೆ ಅವರು ಪರಂಪರೆಯನ್ನು ವಿರೋಧಿಸಲಿಲ್ಲ.
ವೇದಗಳಲ್ಲಿನ ವಿಷಯಕ್ಕೆ ಶರಣರು ಸಾಂದರ್ಭಿಕವಾಗಿ ವಿರೋಧ ಮಾಡಿದ್ದಾರೆಯೇ ವಿನಃ ಸಾರ್ವಕಾಲಿಕವಾಗಲ್ಲ. ಶರಣರು ವೇದಾಗಮಗಳ ವಿರೋಧಿ ಎಂದು ಒಂದು ಗುಂಪು ಹೇಳುತ್ತಿದೆ. ಇದು ತಮಗೆ ಆಗದವರನ್ನು ದೂರ ಸರಿಸುವ ಒಂದು ತಂತ್ರ. ಇದನ್ನು ತಪ್ಪು ಎಂದು ಹೇಳುವವರನ್ನು ಕೋಮುವಾದಿ, ಬಲಪಂಥೀಯ ಎನ್ನುವ ಕೆಲಸ ಆಗುತ್ತಿದೆ. ವಿತಂಡವಾದಿಗಳು ಹಿಂದೆಯೂ ಇದ್ದರು. ಪಂಡಿತ ಮುಖಿಯಾಗಿದ್ದ ವಿಚಾರಗಳನ್ನು ಸಮಾಜಮುಖಿಯಾಗಿಸಿದ್ದು ಶಿವಶರಣರು. ಅನ್ಯರನ್ನು ತೆಗಳಲು, ಅನ್ಯರಿಗೆ ಅಸಹ್ಯಪಡಲು ವಚನಗಳನ್ನು ಎಂದಿಗೂ ಬಳಸಿಕೊಳ್ಳಬಾರದು ಎಂದರು.
ಇದಕ್ಕೂ ಮೊದಲು ಆಶಯ ನುಡಿಯಾಡಿದ ಮುಂಡರಗಿಯ ಶ್ರೀ ಅನ್ನದಾನೇಶ್ವರ ಸಂಸ್ಥಾನದ ಶ್ರೀ ಅನ್ನದಾನೇಶ್ವರ ಮಹಾಸ್ವಾಮೀಜಿ, ಶಿವಭಕ್ತರೆಲ್ಲರೂ ಒಂದೇ ಎಂಬ ಸಮಭಾವವನ್ನು ಸಾರಿದ ವಚನ ಪರಂಪರೆ, ಇವನಾರರವ ಇವನಾರವ ಎಂದೆಣಿಸದಿರಯ್ಯ ಎಂದು ತಿಳಿಸಿತು. ಅನುಭವ ಮಂಟಪವು ಅಧಯಾತ್ಮದ ವಿಶ್ವವಿದ್ಯಾಲಯವೆನಿಸಿತು. ಶಿವಯೋಗದ ಅನುಭವವನ್ನು ಪರಸ್ಪರ ಹಂಚಿಕೊಂಡು ಮುನ್ನಡೆಯಲು ದಾರಿ ತೋರಿದ ಕೈದೀವಿಗೆ ಎನ್ನಿಸಿತು. ಅಧ್ಯಾತ್ಮದಲ್ಲಿ ಔನ್ನತ್ಯವನ್ನು ಸಾಧಿಸಲು ಮಾರ್ಗ ತೋರಿತು. ತಾತ್ವಿಕ ಸಿದ್ದಾಂತಗಳು, ಆದರ್ಶಗಳು ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಹಾಗೂ ಮಾನಸಿಕ ಸಂಕಷ್ಟಗಳನ್ನು ಪರಿಹರಿಸಲು ವಚನ ಸಾಹಿತ್ಯ ಸಹಕಾರಿಯಾಗಿದೆ ಎಂದು ಹೇಳಿದರು.
ಚಿಂತಕಿ ವೀಣಾ ಬನ್ನಂಜೆ ಮಾತನಾಡಿ, ಪ್ರತಿಯೊಬ್ಬರಲ್ಲೂ ಶಕ್ತಿ ಇರುತ್ತದೆ. ಆ ಸುಪ್ತ ಶಕ್ತಿ ಎದ್ದೇಳಿದರೆ ಮತ್ತೆ ಮಲಗುವುದಿಲ್ಲ. ಅದಕ್ಕೆ ಒಂದು ಘಟನೆ ನಡೆಯಬೇಕು. ನಾನು ಅಲ್ಲ, ನೀನೂ ಅಲ್ಲ ಅನ್ನು ಬಯಲಿನ ಸ್ಥಿತಿಯನ್ನು ವಚನಕಾರರು ಕಟ್ಟಿಕೊಟ್ಟಿದ್ದಾರೆ. ಅನುಭವ ಹಾಗೂ ಅನುಭಾವ ಎರೆಡೂ ಬೇರೆ ಬೇರೆ. ಜೀವನದ ಪ್ರತಿನಿತ್ಯದ ಜಂಜಾಟಗಳಲ್ಲಿ ನಮಗೆ ಲಭಿಸುವುದು ಅನುಭವ. ಅನುಭಾವ ಆಧ್ಯಾತ್ಮ ಚಿಂತನೆ. ದೇವರ ಸಾಕಾರ ಆಗೂವವರೆಗೂ ನಮ್ಮನ್ನು ನಾವು ಅನ್ವೇಷಿಸಿಕೊಳ್ಳಬೇಕು ಎಂದರು.
ನ್ಯಾಯನಿಷ್ಠುರಿ, ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಹಾಮನೆ ಕುರಿತು ಮಾತನಾಡಿದ ಡಾ.ಕಾಂತೇಶ ಅಂಬಿಗೇರ, ಇತರ ಶಿವಶರಣರಿಗಿಂತ ಭಿನ್ನವಾಗಿದ್ದ ಅಂಬಿಗರ ಚೌಡಯ್ಯ, ಸ್ವತಂತ್ರ ವ್ಯಕ್ತಿತ್ವನ್ನು ಹೊಂದಿದ್ದ. ತನ್ನ ಹೆಸರನ್ನೇ ಅಂಕಿತ ನಾಮವಾಗಿ ಬಳಿಸಿ ವಚನಗಳನ್ನು ರಚಿಸಿದ. ಇದುವರೆಗೂ ಅಂಬಿಗ ಚೌಡಯ್ಯ 330 ವಚನಗಳು ಸಂಪಾದನೆಯಾಗಿವೆ. ಶಿವಶರಣ ತತ್ವಗಳು ಹಿಡಿಸದಿದ್ದರೆ, ಅದನ್ನು ತಿರಸ್ಕರಿಸಿದ ಉದಾಹಾರಣೆಗಳು ಇವೆ. ಎಲ್ಲ ಶಿವಶರಣರು ಒಪ್ಪಿದ್ದ ಶರಣಸತಿ-ಲಿಂಗಪತಿ ತತ್ವವನ್ನು ಚೌಡಯ್ಯ ತಿರಸ್ಕರಿಸಿದ. ಶಿವಶರಣ ಹಾಗೂ ಲಿಂಗ ಎರಡೂ ನೀರು ಇದ್ದಹಾಗೆ, ನೀರಿನಲ್ಲಿ ನೀರು ಬೆರೆತರೆ ಬೇದ ಎಣಿಸಲಾಗಾವುದೇ ಎಂದು ಪ್ರಶ್ನಿಸಿದರು ಎಂದು ಹೇಳಿದರು.
ವಚನಗಳಲ್ಲಿ ಕಾಯಕ ಮತ್ತು ದಾಸೋಹ ಪ್ರಜ್ಞೆ ಕುರಿತು ಮಾತನಾಡಿದ ಸಂಗಮೇಶ ಪೂಜಾರ, 67 ವಚನಕಾರರು 417 ಕಡೆ ಉಲ್ಲೇಖವಾಗಿದೆ. ಇದೇ ರೀತಿ 113 ಕಡೆ ಕೈಲಾಸ ಎಂದು ಉಲ್ಲೇಖಿಸಿದ್ದಾರೆ. ಸಾಮಾನ್ಯ ಜನರು ಜೀವನ ನಡೆಸುವ ವಿಧಾನವನ್ನು ವಚನಗಳ ಮೂಲಕ ವಚನಕಾರರು ತಿಳಿಸಿದರು. ನಮ್ಮ ಸಂಸ್ಕೃತಿಯಲ್ಲಿ ಎಷ್ಟು ಉದಾತ್ತ ಚಿಂತನೆಗಳಿದ್ದವೋ ಅಷ್ಟೇ ಸಂಕುಚಿತ ಆಲೋಚನೆಗಳೂ ಇದ್ದವು ಎನ್ನುವುದನ್ನು ವಚನಗಳು ತಿಳಿಸಿಕೊಟ್ಟವು. ಕೆಲಸ ಮಾಡುವುದಷ್ಟೇ ಕಾಯಕವಲ್ಲ, ಸತ್ಯವಾಗಿರಬೇಕು, ಶುದ್ಧವಾಗಿರಬೇಕು ಹಾಗೂ ಮತ್ತೊಬ್ಬರಿಗೆ ನೋವುಂಟುಮಾಡದಂತೆ ಇರಬೇಕು ಎಂದು ತಿಳಿಸಿಕೊಟ್ಟರು ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಮೀಸಲಾತಿ ವರ್ಗೀಕರಣ ವರದಿ ಪುನರ್‌ಪರಿಶೀಲನೆಗೆ ಸರ್ಕಾರಕ್ಕೆ ಮನವಿ: ಕೆ. ಜಯಪ್ರಕಾಶ ಹೆಗ್ಡೆ