ಹಾವೇರಿ: ಇತ್ತೀಚಿನ ವರ್ಷಗಳಲ್ಲಿ ಮಾತನಾಡುತ್ತಿರುವ ಸ್ತ್ರೀವಾದವು ಸಮಾಜವನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತಿದೆ ಹಾಗೂ ಇದು ಸುಸ್ಥಿರವಾದ ಮಾದರಿ ಅಲ್ಲ ಎಂದು ವಕೀಲೆ ಕ್ಷಮಾ ನರಗುಂದ್ ಅಭಿಪ್ರಾಯಪಟ್ಟರು.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ʼಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆʼಯಲ್ಲಿ ಭಾನುವಾರ ಆಯೋಜಿಸಿದ್ದ ʼವರ್ತಮಾನದಲ್ಲಿ ಮಹಿಳೆʼ ಗೋಷ್ಠಿಯ ಆಶಯ ನುಡಿಗಳನ್ನಾಡಿದರು.
ವರ್ತಮಾನ ಹಾಗೂ ಮಹಿಳೆ ಎಂಬ ಕುರಿತು ಯೋಚಿಸಿದಾಗ ಅನೇಕ ವಿಚಾರಗಳು ಹಾಗೂ ಕಾಲಘಟ್ಟಗಳು ಕಣ್ಣಮುಂದೆ ಬರುತ್ತವೆ. ದೇಶವನ್ನು ಮುನ್ನಡೆಸುವವಳು ಮಹಿಳೆಯೋ ಅಥವಾ ಮನೆಯನ್ನು ನಡೆಸುವವಳು ಮಹಿಳೆಯೋ? ಕಾಲೇಜಿಗೆ ಹೋಗುವವಳು ಮಹಿಳೆಯೋ ಅಥವಾ ಉದ್ಯಮ ಮಾಡುವವಳು ಮಹಿಳೆಯೋ ಎಂಬಂತಹ ಅನೇಕ ಪ್ರಶ್ನೆಗಳು ಬರುತ್ತವೆ.
ಒಂದು ಕಡೆ ಮಹಿಳೆ ಉತ್ತುಂಗಕ್ಕೆ ಏರುತ್ತಿರುವಾಗಲೇ ಅವಳಿಗೆ ಅನೇಕ ಸಮಸ್ಯೆಗಳೂ ಇವೆ. ಮಹಿಳೆಯರ ಏಳಿಗೆಗೆ ಸಮಾಜ ಅನೇಕ ಕಾರ್ಯ ಮಾಡಿದೆ. ಮಹಿಳಾ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ. ಆದರೆ ಒಟ್ಟಾರೆ ಸಾಕ್ಷರತೆ ಪ್ರಮಾಣ ಕಡಿಮೆ ಇದೆ. ಚುನಾಯಿತ ಸಂಸ್ಥೆಗಳಲ್ಲಿ ಮೀಸಲಾತಿ ನಂತರ ಅನೇಕ ಮಹಿಳೆಯರು ಅವಕಾಶ ಪಡೆದರು. ಒಟ್ಟಾರೆ ನೋಡಿದಾಗ ಪ್ರಾತಿನಿಧಿತ್ವ ಕಡಿಮೆ ಇದೆ. ಆದರೂ, ಅಭಿವೃದ್ಧಿ ಕಡೆಗೆ ಸಾಗುತ್ತಿದ್ದೇವೆ ಎಂದು ಹೇಳಬಹುದು.
ಮಹಿಳಾ ಪರ ಕಾನೂನುಗಳಿಂದ ಉಪಯೋಗ ಆಗಿದೆ. ಇಂದಿನ ವರ್ತಮಾನದಲ್ಲಿ ಮಹಿಳೆಯೇ ಸಮಸ್ಯೆ ಆಗುತ್ತಿರುವುದು ಸತ್ಯ. ಆದರೆ ಅದು ಒಟ್ಟಾರೆ ಸಮಾಜದಿಂದ ಸಮಸ್ಯೆ ಆಗುತ್ತಿದೆಯೇ ಅಥವಾ ಗಂಡಸರಿಂದ ಆಗುತ್ತಿದೆಯೇ ಎಂದು ಪ್ರಶ್ನೆ ಕೇಳಬೇಕು. ನಾವು ಮಹಿಳೆಯರು ಗುಂಪು ಮಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳುವುದು ಭ್ರಮೆ. ಇಲ್ಲಿ ಪರಸ್ಪರ ಅವಲಂಬನೆ ಅನಿವಾರ್ಯ. ನಮ್ಮ ಹಕ್ಕುಗಳನ್ನು ಕೇಳುವುದಕ್ಕಿಂತಲೂ, ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಮುಖ್ಯ. ಕೇವಲ ಮಹಿಳೆಯರಿರುವ ಸಮಾಜದಲ್ಲಿ ಮಹಿಳೆಗೆ ಯಾವುದೇ ಸಮಸ್ಯೆ ಇರುವುದಿಲ್ಲವೇ? ಇಂದಿನ ಸ್ತ್ರೀವಾದದಲ್ಲಿ ಇದಕ್ಕೆ ಉತ್ತರ ಇಲ್ಲ. ಇಂದಿನ ಸ್ತ್ರೀವಾದವು ಸಮಾಜವನ್ನು ಎರಡು ಗುಂಪುಗಳನ್ನಾಗಿ ನೋಡುತ್ತಿದೆ. ಈ ಮಾದರಿಯು ಸುಸ್ಥಿರವಾದದ್ದಲ್ಲ ಎಂದರು.
ಒಂದು ಗುಂಪಿಗೆ ಮಾತ್ರ ಸ್ವಾವಲಂಬನೆ ಬರುವುದು ಸರಿಯಲ್ಲ. ಪರಸ್ಪರ ಅವಲಂಬನೆ, ಪೂರಕವಾಗಿದ್ದಾಗ ಮಾತ್ರ ಸಮಾಜವನ್ನು ಮುನ್ನಡೆಸಬಹುದು ಎನ್ನುವುದು ಎಲ್ಲರೂ ಒಪ್ಪಬಹುದಾದ ವಿಚಾರ. ಸಮಾಜ ಒಂದು ಪಕ್ಷಿ, ಗಂಡು-ಹೆಣ್ಣು ಅದರ ಎರಡು ರೆಕ್ಕೆಗಳು ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಸಮಸ್ಯೆಯನ್ನು ಮಾತ್ರ ಗಮನದಲ್ಲಿ ಇರಿಸಿಕೊಂಡು ಹೋದರೆ, ಆ ಸಮಸ್ಯೆಯ ಸ್ವರೂಪ ಬದಲಾದಾಗ, ರೂಪಿಸಿದ ಎಲ್ಲ ಯೋಜನೆಗಳೂ ನಿಷ್ಪ್ರಯೋಜಕವಾಗುತ್ತವೆ. ಸಮಸ್ಯೆಯನ್ನು ಮಾತ್ರ ಬಗೆಹರಿಸಲು ವರದಕ್ಷಿಣೆ ನಿಷೇಧ ಕಾನೂನು ರೂಪಿಸಿದರೂ ಸಮಾಜದಲ್ಲಿ ಮಾನಸಿಕವಾಗಿ ಯಾವುದೇ ಬದಲಾವಣೆ ಮಾಡಲು ಆಗಲಿಲ್ಲ ಎಂದರು.
ಗ್ರಾಮೀಣ ಮಹಿಳೆಯರ ಸಾಧನೆ ಕುರಿತು ಡಾ. ಈ. ವೀಣಾ ಮಾತನಾಡಿ, ಮಹಿಳೆ ಎಂದರೆ ದ್ವಿತೀಯ ದರ್ಜೆಯ ಪ್ರಭೆ ಎಂದು ಗುರುತಿಸುವ ರೀತಿ ಇದೆ. ಅವರು ಸಾಕಷ್ಟು ಅವಕಾಶಗಳಿಂದ ವಂಚಿತರಾಗಿದ್ದಾರೆ, ಪುರುಷರಿಗೆ ಹೋಲಿಸಿದರೆ ಪ್ರಾತಿನಿಧ್ಯ ಕಡಿಮೆ ಇದೆ ಎನ್ನುವುದು ಆ ಮಾತು. ವೃಕ್ಷಮಾತೆ ತುಳಸಿ ಗೌಡ, ಸಾಲುಮರದ ತಿಮ್ಮಕ್ಕ, ಮಹಾತಾಯಿ ಸೂಲಗಿತ್ತಿ ನರಸಮ್ಮ ಸೇರಿ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡಿದ್ದಾರೆ. ಮಹಿಳೆಯರನ್ನು ಗುರುತಿಸಬೇಕಿದೆ. ಮಹಿಳೆ ಅವಕಾಶ ವಂಚಿತೆ, ಆಕೆಯನ್ನು ಗುರುತಿಸಬೇಕು ಎಂಬ ಪ್ರವೃತ್ತಿಯು ಕಂಡುಬಂದಿದೆ. ಅನೇಕ ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಬೇಕೊ ಬೇಡವೋ ಎಂಬ ಚಿಂತನೆ ನಡೆಯುತ್ತಿದ್ದರೂ, ಭಾರತದಲ್ಲಿ ಅಂತಹ ಚರ್ಚೆಗೆ ಆಸ್ಪದ ಇಲ್ಲದೆ ಅವಕಾಶ ನೀಡಲಾಯಿತು. ಹಾಗಾಗಿ ಪಾಶ್ಚಿಮಾತ್ಯ ದೃಷ್ಟಿಕೋನದಲ್ಲಿ ನಮ್ಮ ದೇಶದ ಸಮಸ್ಯೆಯನ್ನು ನೋಡಬಾರದು ಎಂದರು.
ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಗಳು ಕುರಿತು ಮಾತನಾಡಿದ ಡಾ. ಕವಿತಾ ಕುಸಗಲ್ಲು, ನೆಸ್ಟ್ ಆಫ್ ಸಿಂಗಿಂಗ್ ಬರ್ಡ್ಸ್ ಎಂದು ಹೆಸರಾಗಿದ್ದ ಶೇಕ್ಸ್‌ಪಿಯರ್ ಕಾಲದಲ್ಲಿ, ಪಂಪ-ರನ್ನ-ಜನ್ನರ ಕಾಲದಲ್ಲಿ, ವಚನ ಆಂದೋಲನಕ್ಕೂ ಮುಂಚೆ ಬಂದ ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲಿ ಮಹಿಳೆ ಸಾಹಿತಿ ಸಿಗುವುದಿಲ್ಲ. ಮಹಿಳೆಯರು ಬರೆಯಲೇ ಇಲ್ಲ ಎಂದುಕೊಳ್ಳಲು ಆಗುವುದಿಲ್ಲ. ಈ ಕುರಿತು ವಿಚಾರ ಮಾಡಬೇಕು. ಕನ್ನಡದ ಸಾಹಿತ್ಯದಲ್ಲಿ ಬಹುದೊಡ್ಡ ಹೆಸರು ಮಾಡಿದವರು, ಸಾಧನೆ ಮಾಡಿದ ಅನೇಕರು ಸಾಂಪ್ರದಾಯಿಕ ಹಿನ್ನೆಲೆಯಿಂದಲೇ ಬಂದವರು. ಬರವಣಿಗೆ ಆರಂಭವಾಗುವ ಮುನ್ನ ಜನಪದ ಸಾಹಿತ್ಯವನ್ನು ನೋಡಿದರೆ 90%ಕ್ಕಿಂತ ಹೆಚ್ಚು ಮಹಿಳಾ ಸಾಹಿತ್ಯವೇ ಇದೆ. ಆದರೆ ಬರವಣಿಗೆ ಸಾಹಿತ್ಯದಲ್ಲಿ ಹಿಂದೆ ಹಿಂದೆ ಹೋದಾಗ ಮಹಿಳೆ ಏಕೆ ಬರುವುದಿಲ್ಲ ಎನ್ನುವುದು ಪ್ರಶ್ನೆ ಎಂದರು.
ಗೋಷ್ಠಿಯ ಅಧ್ಯಕ್ಷ ಸ್ಥಾನ ವಹಿಸಿದ್ದ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಡಾ. ಬಿ.ಕೆ. ತುಳಸಿಮಾಲಾ ಮಾತನಾಡಿ, ಮಹಿಳೆಯರ ಭಾಗವಹಿಸುವಿಕೆ ಈಗ ಹೆಚ್ಚಾಗುತ್ತಿದೆ. ಅದಷ್ಟೇ ಸಾಲದು. ಮಹಿಳೆಗೆ ಅಗತ್ಯ ಅವಕಾಶ, ಕೌಶಲ್ಯಗಳನ್ನೂ ನೀಡಬೇಕು. ನಮ್ಮ ಎಲ್ಲ ಅಭಿವೃದ್ಧಿ ಮಾದರಿಯಲ್ಲಿ ಮಹಿಳೆಯರನ್ನು ಒಳಗೊಳ್ಳಬೇಕು. 50% ಇರುವ ಮಹಿಳೆಯರನ್ನು ಹೊರತುಪಡಿಸಿ ಸುಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ. ಇದರಿಂದ ಒಟ್ಟಾರೆ ಸಮಾಜ ಹಾಗೂ ಗ್ರಾಮೀಣ ಅಭಿವೃದ್ಧಿಗೂ ಸಹಕಾರವಾಗುತ್ತದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಹಾಗೂ ನಾಯಕತ್ವ ಸ್ಥಾನಗಳಲ್ಲಿಯೂ ಮಹಿಳೆಯರನ್ನು ಒಳಗೊಳ್ಳುವ ಕೆಲಸಗಳು ಆಗಬೇಕು ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಏಲಕ್ಕಿ ನಾಡಿನಿಂದ ಸಕ್ಕರೆ ನಾಡಿಗೆ ಸವಿನುಡಿ ತೇರು: ಮಂಡ್ಯದಲ್ಲಿ 87ನೇ ಸಾಹಿತ್ಯ ಸಮ್ಮೇಳನ