ಬೆಂಗಳೂರು: ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ (Woman Assault Case) ಸಂಬಂಧ ಹೈಕೋರ್ಟ್‌ನಲ್ಲಿ ಗುರುವಾರ ಪಿಐಎಲ್ ವಿಚಾರಣೆ ನಡೆದಿದೆ. ಘಟನೆಗೆ ಹೈಕೋರ್ಟ್ ವಿಭಾಗೀಯ ಪೀಠ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಸಂತ್ರಸ್ತೆಯನ್ನು ಪ್ರಾಣಿಗಿಂತ ಕೀಳಾಗಿ ನಡೆಸಿಕೊಂಡಿದ್ದಾರೆ. ಇವರು ಮನುಷ್ಯರೆಂದು ಕರೆಸಿಕೊಳ್ಳಲು ಯೋಗ್ಯರಲ್ಲ. ಬಡವರ ಮೇಲೆಯೇ ಇಂತಹ ದೌರ್ಜನ್ಯಗಳೇಕೆ ನಡೆಯುತ್ತವೆ ಎಂದು ಅಸಮಾಧಾನ ಹೊರಹಾಕಿದೆ.
ಬೆಳಗಾವಿ ಪ್ರಕರಣದ ಬಗ್ಗೆ ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿತ್ತು. ಇದೀಗ ಸಿಜೆ ಪ್ರಸನ್ನ ಬಿ ವರಾಳೆ, ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ವಿಚಾರಣೆ ನಡೆದಿದೆ. ಸಂತ್ರಸ್ತೆಯನ್ನು ಪ್ರಾಣಿಗಿಂತ ಕೀಳಾಗಿ ನಡೆಸಿಕೊಂಡಿದ್ದಾರೆ. ಇವರು ಮನುಷ್ಯರೆಂದು ಕರೆಸಿಕೊಳ್ಳಲು ಯೋಗ್ಯರಲ್ಲ. ಎರಡು ಗಂಟೆಗಳ ಕಾಲ ಮಹಿಳೆಯನ್ನು ಹಿಂಸಿಸಲಾಗಿದೆ. ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹೊಡೆಯಲಾಗಿದೆ. ಸಂತ್ರಸ್ತೆ ಎದುರಿಸಿರಬಹುದಾದ ನೋವು ಊಹಿಸಲಾಗುವುದಿಲ್ಲ. ಬಡವರ ಮೇಲೆಯೇ ಇಂತಹ ದೌರ್ಜನ್ಯಗಳೇಕೆ ನಡೆಯುತ್ತವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂತ್ರಸ್ತೆಗೆ ಅತ್ಯುತ್ತಮ ಚಿಕಿತ್ಸೆ, ಕೌನ್ಸೆಲಿಂಗ್ ಒದಗಿಸುವ ಅಗತ್ಯವಿದೆ. ಯಾವ ಆಸ್ಪತ್ರೆಯಲ್ಲಿ ಯಾವ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಪೊಲೀಸರ ವಿರುದ್ಧ ಕೈಗೊಂಡ ಕ್ರಮವೇನು? ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗವೇನು ಮಾಡುತ್ತಿವೆ. ಯತ್ರ ನಾರ್ಯಂತು ಪೂಜ್ಯಂತೆ, ರಮಂತೇ ತತ್ರ ದೇವತ ಎಂಬ ಮಂತ್ರವಿದ್ದೂ ಪ್ರಯೋಜನವೇನು?ದ್ರೌಪದಿಯನ್ನು ವಿವಸ್ತ್ರಗೊಳಿಸಿದಾಗ ರಕ್ಷಿಸಲು ಕೃಷ್ಣನಿದ್ದ. ಆದರೆ, ಇದು ದುಶ್ಯಾಸನರ ಕಾಲ ಸಹಾಯಕ್ಕೆ ಬರಲು ಯಾರೂ ಇಲ್ಲ. ನಮ್ಮಲ್ಲಿ ಕಾನೂನಿನ ಭಯವಿಲ್ಲವೆಂಬ ಸಂದೇಶ ಹೋಗುತ್ತಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಇದನ್ನೂ ಓದಿ | Murder Case : ಶಾಲೆಗೆ ಬಿಯರ್ ಬಾಟಲ್ ಎಸೆದ ಪುಂಡರು; ಪ್ರಶ್ನಿಸಿದ್ದಕ್ಕೆ ಯುವಕನನ್ನೇ ಕೊಂದರು
ಸ್ವಾತಂತ್ರ ಬಂದ 75 ವರ್ಷದ ನಂತರವೂ ಇಂತಹ ಘಟನೆ ನಡೆದಿದೆ. ಇಂತಹ ಸಮಾಜದಲ್ಲಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂಬ ಸ್ಥಿತಿ ಬರಬಾರದು. ಇದು ನಾವೆಲ್ಲಾ ನಾಚಿಕೆಪಡಬೇಕಾದ ವಿಷಯ. ಹೀಗಾಗಿ ಡಿ.18 ರೊಳಗೆ ಪ್ರಕರಣದಲ್ಲಿ ಕೈಗೊಂಡ ಕ್ರಮದ ವರದಿ ಸಲ್ಲಿಸಲು ಅಟ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಏನಿದು ಪ್ರಕರಣ?
ಪ್ರೀತಿಸಿದ ಜೋಡಿ ಮನೆ ಬಿಟ್ಟು ಹೋಗಿದ್ದರಿಂದ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ (Assault Case) ನಡೆಸಿದ ಅಮಾನವೀಯ ಘಟನೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು.
ಕಮಲವ್ವ ಹಲ್ಲೆಗೊಳಗಾದವರು. ದುಂಡಪ್ಪ ಅಶೋಕ ನಾಯಕ್ ಎಂಬಾತ ಪ್ರಿಯಾಂಕಾ ಬಸಪ್ಪ ನಾಯಕ್ ಎಂಬಾಕೆಯನ್ನು ಪ್ರೀತಿಸಿದ್ದ. ಆದರೆ ಇದಕ್ಕೆ ಪ್ರಿಯಾಂಕಾ ಕುಟುಂಬಸ್ಥರ ವಿರೋಧ ಇತ್ತು. ಪ್ರಿಯಾಂಕಾ ಕುಟುಂಬಸ್ಥರು ಸೋಮವಾರ ಯಾದಿ ಮೇ ಶಾದಿ ಮಾಡಲು ನಿರ್ಧರಿಸಿದ್ದರು. ಈ ವಿಚಾರ ತಿಳಿದು ಮಧ್ಯರಾತ್ರಿಯೇ ದುಂಡಪ್ಪ ಪ್ರಿಯಾಂಕಾಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದ.
ಈ ವಿಷಯ ತಿಳಿಯುತ್ತಿದ್ದಂತೆ ಪ್ರಿಯಾಂಕಾರ ಕುಟುಂಬಸ್ಥರೊಳಗೆ ಇದ್ದ ರಾಕ್ಷಸತ್ವ ಹೊರಬಂದಿತ್ತು. ದುಂಡಪ್ಪ ತಮ್ಮ ಮಗಳನ್ನು ರಾತ್ರೋರಾತ್ರಿ ಕರೆದುಕೊಂಡು ಹೋಗಿದ್ದಾನೆ ಎಂದು ಆಕ್ರೋಶಗೊಂಡಿದ್ದರು. ಹೀಗಾಗಿ ಯುವತಿ ಮನೆಯವರು ಮಧ್ಯರಾತ್ರಿ ದುಂಡಪ್ಪನ ಮನೆಗೆ ನುಗ್ಗಿ, ಕಲ್ಲು ತೂರಾಟ ಮಾಡಿದ್ದಾರೆ. ಇಡೀ ಮನೆಯನ್ನೇ ಧ್ವಂಸ ಮಾಡಿ ಕ್ರೂರವಾಗಿ ವರ್ತಿಸಿದ್ದರು.
ಇದನ್ನೂ ಓದಿ | Roof collapse : ಮಲಗಿದ್ದವರ ಮೇಲೆ ಕುಸಿದ ಚಾವಣಿ; ಬಾಲಕಿ ಗಂಭೀರ, 7 ಮಂದಿಗೆ ಗಾಯ
ಇತ್ತ ಮನೆಯೊಳಗೆ ಮಲಗಿದ್ದ ದುಂಡಪ್ಪನ ತಾಯಿ ಕಮಲವ್ವಳನ್ನು ಹೊರಗೆ ಎಳೆದುಕೊಂಡು ಬಂದು ಹೊಡೆದಿದ್ದರು. ಅಷ್ಟೆಕ್ಕೆ ಸುಮ್ಮನಾಗದೇ ಆಕೆಯ ಬಟ್ಟೆ ಬಿಚ್ಚಿಸಿ, ಮೆರವಣಿಗೆ ನಡೆಸಿದ್ದಾರೆ. ಬಳಿಕ ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ಮಾಡಿದ್ದರು. ಮಹಿಳೆಯರು ಸೇರಿ ಒಂಬತ್ತು ಮಂದಿ ಕಮಲ್ವಳ ಮೇಲೆ ಹಲ್ಲೆ ನಡೆಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ