ತುಮಕೂರು: ಕೋರ್ಟ್ ಆದೇಶದ ಮೇಲೆ ಹಲವು ಊಹಾಪೋಹಗಳು ಚರ್ಚೆ ಆಗುತ್ತಿದೆ. ಇಂದು ಕೋರ್ಟ್ ಆದೇಶದ ಪ್ರತಿ ಸಹಿತ ಬಂದಿದ್ದೇನೆ. ದೂರುದಾರರ ಅರ್ಜಿಯನ್ನು ಭಾಗಶಃ ಹೈಕೋರ್ಟ್ ಪುರಸ್ಕರಿಸಿದೆ. ನಾನು ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಗೆ (Karnataka Election 2023) ಸ್ಪರ್ಧೆ ಮಾಡಬಾರದು ಎಂದು ಹೈಕೋರ್ಟ್ ಆದೇಶದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ಅನರ್ಹ ಶಾಸಕ ಗೌರಿಶಂಕರ್ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ನೀಡಿದ ಆದೇಶದಲ್ಲಿ ಅಸಿಂಧುಗೊಳಿಸಿದೆ ಎಂದು ಮಾತ್ರ ಹೇಳಿದೆ. ಅನರ್ಹ ಎಂದು ಎಲ್ಲೂ ಹೇಳಿಲ್ಲ. 6 ವರ್ಷ ಸ್ಪರ್ಧೆ ಮಾಡುವ ಹಾಗಿಲ್ಲ ಎಂದು ಎಲ್ಲೂ ಆದೇಶ ಇಲ್ಲ. ಮಾಧ್ಯಮಗಳು ತೇಜೋವಧೆ ಮಾಡಲು ಪ್ರಯತ್ನಿಸಿದಂತಿದೆ. ಇನ್ನು ಶಾಸಕ ಗೌರಿಶಂಕರ ಬಾಂಡ್ ಕೊಟ್ಟಿರುವುದು ಅಥವಾ ಬಾಂಡ್ ಪ್ರಿಂಟ್ ಹಾಕಿದ್ದರ ಬಗ್ಗೆ ಸಾಕ್ಷ್ಯ ಇಲ್ಲ ಎಂದು ಕೋರ್ಟ್ ಹೇಳಿದೆ ಎಂದು ಹೇಳಿದರು.
ಇದನ್ನೂ ಓದಿ: IT Raid : ಹಾಸನ ಡಿಸಿಸಿ ಬ್ಯಾಂಕ್ ಮೇಲೆ ಐಟಿ ದಾಳಿ, ಜೆಡಿಎಸ್ ಹಿಡಿತದಲ್ಲಿರುವ ಹಣಕಾಸು ಸಂಸ್ಥೆ ಮೇಲೆ ಕಣ್ಣು
ಕಾರ್ಯಕರ್ತರಿಗೆ ಆತಂಕ ಬೇಡ
ಕಾರ್ಯಕರ್ತರು ಆತಂಕಪಡುವ ಅಗತ್ಯ ಇಲ್ಲ. ಹೈಕೋರ್ಟ್ ಆದೇಶ ಪ್ರಶ್ನಿಸಲು ಸ್ಟೇ ತೆಗೆದುಕೊಂಡಿದ್ದೇವೆ. 30 ದಿನಗಳ ಕಾಲ ತಡೆ ಇದೆ. ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಜತೆ ಮಾತನಾಡಿದ್ದೇನೆ. ಅವರು ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಇದರಲ್ಲಿ ಯಾವೂದೂ ಸ್ಟ್ರಾಂಗ್ ಇಲ್ಲ ಅಂದಿದ್ದಾರೆ. ನನ್ನ ಹೋರಾಟಕ್ಕೆ ಕುಮಾರಸ್ವಾಮಿ ಅವರ ಸಹಕಾರ ಇದೆ. ಕೇಸ್ ನಾವು ನೋಡಿಕೊಳ್ಳುತ್ತೇವೆ, ನೀನು ಕ್ಷೇತ್ರದಲ್ಲಿ ಕೆಲಸ ಮಾಡು ಅಂದಿದ್ದಾರೆ. ಈ ಕ್ಷೇತ್ರದಲ್ಲಿ ನಾನು ರಾಜಕಾರಣಿಯಾಗಿ ಗುರುತಿಸಿಕೊಂಡಿಲ್ಲ. ಮನೆ ಮಗನಾಗಿ ಗುರುತಿಸಿಕೊಂಡಿದ್ದೇನೆ ಎಂದು ಹೇಳಿದರು.
ಮಾಜಿ ಶಾಸಕರು ಧರ್ಮ ಗೆದ್ದಿದೆ ಎಂದಿದ್ದಾರೆ. ಯಾವುದು ಧರ್ಮ? ನಕಲಿ ಅಂಕಪಟ್ಟಿ ಮಾಡಿ ಸಿಕ್ಕಿ ಬಿದ್ದಿದ್ದು ಧರ್ಮನಾ? ನಾನು ಸತ್ಯ ಹರಿಶ್ಚಂದ್ರ ಎಂದು ಮಾಜಿ ಶಾಸಕರು ತೋರಿಸಿಕೊಳ್ಳುವುದು ಬೇಡ. ನಿಮ್ಮ ಅರ್ಜಿಯನ್ನು ಪೂರ್ಣವಾಗಿ ಒಪ್ಪಿಕೊಂಡಿಲ್ಲ. ಇದು ಎಲ್ಲೋ ಒಂದು ಕಡೆ ನಮಗೆ ಜಯ ಸಿಕ್ಕಿದ ಹಾಗೆ. ಯಾವತ್ತೂ ನಾನು ನಂಬಿದ ಜನ ನನ್ನ ಮನೆಗೆ ಬರಲ್ಲವೋ ಅಂದೇ ನನ್ನ ಸಾವು ಎಂದು ಗೌರಿಶಂಕರ್ ಭಾವುಕರಾದರು.
ನನಗೆ ನೆಮ್ಮದಿ ಕೊಟ್ಟಿಲ್ಲ
ನನಗೆ ನೆಮ್ಮದಿ ಕೊಟ್ಟಿಲ್ಲ. ನನ್ನ ಮೇಲೆ ಮಾಜಿ ಶಾಸಕರು ನಿರಂತರ ದೌರ್ಜನ್ಯ ನಡೆಸಿದ್ದಾರೆ. ನೀವು ಒಬ್ಬರೇ ಈ ಕ್ಷೇತ್ರಕ್ಕೆ ಎಂಎಲ್ಎ ಆಗಿರ್ಬೇಕಾ? ನಮ್ಮ ಸರ್ಕಾರ ಬಿದ್ದ ನಂತರ ಶುರುವಾದ ದೌರ್ಜನ್ಯ ಇವತ್ತಿಗೂ ನಿಂತಿಲ್ಲ. ಸಾರ್ವಜನಿಕರು ಓಡಾಡುವ ರಸ್ತೆಗಳಿಗೆ ತಡೆ ಯಾಕೆ ತಂದಿರಿ? ಸಚಿವರು, ಮುಖ್ಯಮಂತ್ರಿಗಳ ಬಳಿ ಹೋಗಿ ತೊಂದರೆ ಕೊಟ್ಟಿರಿ. ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡೋದು. ನಾವು ಗೆದ್ದು ಬಂದ್ಮೇಲೆ ಹಾಗೇ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದು ಹೆದರಿಸುತ್ತಿದ್ದೀರಿ. ಇದೆಲ್ಲ ಬೇಡ. ಮಾಜಿ ಶಾಸಕರು ಏನೇನು ಮಾಡಿದ್ದಾರೆ ಎಂಬೆಲ್ಲ ಮಾಹಿತಿಯನ್ನು ಬಿಚ್ಚಿಡುತ್ತೇನೆ ಎಂದು ಹೇಳಿದರು.
ಏನಿದು ನಕಲಿ ಬಾಂಡ್ ಕೇಸ್?
ಗೌರಿಶಂಕರ್ ಅವರು ಕಳೆದ ಚುನಾವಣೆಯ ಅವಧಿಯಲ್ಲಿ ಗ್ರಾಮಾಂತರ ಕ್ಷೇತ್ರದ ಮತದಾರರಿಗೆ ವಿಮಾ ಬಾಂಡ್‌ಗಳನ್ನು ನೀಡುವ ಆಮಿಷ ಒಡ್ಡಿದ್ದರು. ಜತೆಗೆ ನಂತರ ನೀಡಿದ ವಿಮಾ ಬಾಂಡ್‌ಗಳು ನಕಲಿಯಾಗಿದ್ದವು(A fake bond) ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಹಲವು ಸುತ್ತಿನ ವಿಚಾರಣೆ ಬಳಿಕ ಬುಧವಾರ ಅಂತಿಮ ಆದೇಶ ಹೊರಬಿದ್ದಿದ್ದು, ಗೌರಿಶಂಕರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ಹೈಕೋರ್ಟ್ ಕಲಬುರಗಿ ಪೀಠದಿಂದ ಹೊರ ಬಿದ್ದಿರುವ ಈ ತೀರ್ಪಿನಿಂದ ಗೌರಿಶಂಕರ್ ಮತ್ತು ಜೆಡಿಎಸ್‌ಗೆ ಹಿನ್ನಡೆಯಾಗಿದೆ. 32 ಸಾವಿರ ವಯಸ್ಕರು ಹಾಗೂ 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಪಾಲಿಸಿ ಬಾಂಡ್ ಅನ್ನು ಗೌರಿಶಂಕರ್ ವಿತರಿಸಿದ್ದರು ಎಂಬ ಆರೋಪವನ್ನು ಎದುರಿಸುತ್ತಿದ್ದರು. ಈಗ ಆ ಪ್ರಕರಣ ಕೋರ್ಟ್‌ನಲ್ಲಿ ಸಾಬೀತಾಗಿದೆ.
ಇದನ್ನೂ ಓದಿ: Shivakumara Swami: ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣೆ: ಕರುಣೆಯೇ ಕಣ್ಣು ತೆರೆದಂತೆ…
ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಅವಕಾಶ
ಇದೇ ವೇಳೆ ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಗೌರಿ ಶಂಕರ್ ಅರ್ಜಿ ಸಲ್ಲಿಸಲು ಹೈಕೋರ್ಟ್ ಅವಕಾಶ ನೀಡಿದೆ. ಆಯ್ಕೆ ಅಸಿಂಧು ಮಾಡಿದ ಆದೇಶ ಜಾರಿಗೆ ಒಂದು ತಿಂಗಳ ಕಾಲ ತಡೆಯಾಜ್ಞೆಯನ್ನೂ ನೀಡಿದೆ. ಇದೇ ವೇಳೆ ಗೌರಿ ಶಂಕರ್ ಸಹ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಪ್ರಶ್ನಿಸಲು ಸಿದ್ಧತೆ ನಡೆಸುತ್ತಿದ್ದಾರೆ.