ಬೆಂಗಳೂರು: ಹಾಸನ ಜೆಡಿಎಸ್ ಟಿಕೆಟ್ (Karnataka Election) ಗೊಂದಲ ಬಗೆಹರಿಸುವ ಸಲುವಾಗಿ ಪದ್ಮನಾಭನಗರದ ನಿವಾಸದಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಹತ್ವದ ನಡೆಸಿದರು. ಸಭೆಯಲ್ಲಿ ಟಿಕೆಟ್ ಬಗ್ಗೆ ಸ್ಪಷ್ಟನೆ ನೀಡದ ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ್ದಾರೆ.
ಸಭೆಯಲ್ಲಿದ್ದವರ ಮುಂದೆ ಅನೇಕ ವಿಚಾರ ಪ್ರಸ್ತಾಪಿಸಿರುವ ದೇವೇಗೌಡರು, ಟಿಕೆಟ್ ವಿಚಾರದಲ್ಲಿ ಇಷ್ಟೊಂದು ಪಟ್ಟು ಒಳ್ಳೆಯ ಬೆಳವಣಿಗೆಯಲ್ಲ. ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ಮೂಲಕ ರಾಜ್ಯಾದ್ಯಂತ ಉತ್ತಮ ಕಾರ್ಯಕ್ರಮ ಮಾಡಿದ್ದಾರೆ. ನಮ್ಮ ಪಕ್ಷ ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರ ಗೆಲ್ಲುವ ವಾತಾವರಣ ಕೂಡ ನಿರ್ಮಾಣವಾಗಿದೆ. ಇಂತಹ ಹೊತ್ತಿನಲ್ಲಿ ಟಿಕೆಟ್ ವಿಚಾರದಿಂದ ಪಕ್ಷ ಮತ್ತು ಕುಟುಂಬದ ಒಡಕು ಮೂಡಿದೆ. ಇದೇ ಅಂತಿಮವಲ್ಲ, ಇನ್ನೂ ರಾಜಕೀಯ ಭವಿಷ್ಯವಿದೆ. ಮುಂದೆ ಕಾದು ನೋಡಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ | H.D. Kumaraswamy: ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟರೆ ಸಹಿಸಲ್ಲ: ಪೊಲೀಸರಿಗೆ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ
ಟಿಕೆಟ್ ಪೈಪೋಟಿಯಿಂದ ಕಾರ್ಯಕರ್ತರು, ಪಕ್ಷದ ನಾಯಕರಿಗೆ ಕೆಟ್ಟ ಸಂದೇಶ ರವಾನೆಯಾಗಿದೆ. ಮುಂದೆ ಕಾದು ನೋಡಬಹುದು ಎಂಬ ದೇವೇಗೌಡರ ಹೇಳಿಕೆಗೆ ಭವಾನಿ ರೇವಣ್ಣ ಅಸಮಾಧಾನಗೊಂಡು ಸಭೆಯಿಂದ ಹೊರನಡೆದರು. ಈ ವೇಳೆ ಹಾಸನದಲ್ಲಿ ಸವಾಲಿನ ರಾಜಕೀಯಕ್ಕೆ ಉತ್ತರ ಕೊಡುವ ಅವಶ್ಯಕತೆಯಿದೆ. ಪ್ರೀತಂಗೌಡ ಮಣಿಸಲು ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂದು ಎಚ್.ಡಿ.ರೇವಣ್ಣ ಹೇಳಿ ಅವರು ಕೂಡ ಸಭೆಯಿಂದ ನಿರ್ಗಮಿಸಿದ್ದಾರೆ.
ನಂತರ ಎಚ್.ಡಿ.ಕುಮಾರಸ್ವಾಮಿ ಹಾಗೂ ದೇವೇಗೌಡರ ನಡುವೆ ಸಭೆ ಮುಂದುವರಿಯಿತು. ಅದಾದ ಬಳಿಕ ಮತ್ತೆ ಎಚ್.ಡಿ.ರೇವಣ್ಣಗೆ ಸಭೆಗೆ ಆಗಮಿಸುವಂತೆ ಬುಲಾವ್ ಬಂದಿದ್ದರಿಂದ ಮಾಜಿ ಸಚಿವರು ಪುನಃ ಸಭೆಗೆ ಆಗಮಿಸಿದರು. ಆದರೆ, ಟಿಕೆಟ್ ಬಗ್ಗೆ ಸಭೆಯಲ್ಲಿ ಯಾವುದೇ ನಿರ್ಧಾರ ಪ್ರಕಟವಾಗಿಲ್ಲ. ಸತತ ಒಂದು ಗಂಟೆಗಳ ಕಾಲ ನಡೆದ ಸಂಧಾನ ಸಭೆಯಲ್ಲಿ ಒಮ್ಮತದ ನಿರ್ಧಾರ ಪ್ರಕಟವಾಗದ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲು ದಳಪತಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ | Karnataka Election 2023: ಬ್ಯಾಡಗಿ ಕಾಂಗ್ರೆಸ್‌ನಲ್ಲಿ ಭಿನ್ನಮತ; ಟಿಕೆಟ್ ಬದಲಾವಣೆಗೆ ಏ.8ರ ಗಡುವು ನೀಡಿದ ಎಸ್.ಆರ್. ಪಾಟೀಲ್
ಹಾಸನದಲ್ಲಿ ಎಚ್.ಪಿ.ಸ್ವರೂಪ್ ಹಾಗೂ ಭವಾನಿ ರೇವಣ್ಣ ನಡುವೆ ಹಾಸನ ಜೆಡಿಎಸ್ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದೆ. ಸ್ವರೂಪ್ ಪರ ಮಾಜಿ ಸಿಎಂ ಕುಮಾರಸ್ವಾಮಿ ಒಲವು ಹೊಂದಿದ್ದು, ಕಾರ್ಯಕರ್ತರ ಅಭಿಪ್ರಾಯದಂತೆ ಟಿಕೆಟ್ ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ, ಭವಾನಿ ರೇವಣ್ಣಗೆ ಟಿಕೆಟ್ ಕೊಡುವಂತೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ. ಆದರೆ, ಯಾರಿಗೆ ಟಿಕೆಟ್ ಫೈನಲ್ ಆಗಲಿದೆ ಎಂಬ ಬಗ್ಗೆ ಕುತೂಹಲ ಹೆಚ್ಚಾಗಿದೆ.