Site icon Vistara News

HD Deve Gowda: ಎಚ್‌.ಡಿ. ದೇವೇಗೌಡರಿಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್‌ ಪ್ರದಾನ

HD Devegowda

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗಿದೆ. ರಾಜಕೀಯ ಕ್ಷೇತ್ರಕ್ಕೆ ನೀಡಿರುವ ಗಣನೀಯ ಕೊಡುಗೆಯನ್ನು ಪರಿಗಣಿಸಿ ಮಾಜಿ ಪ್ರಧಾನಿಗೆ ಗೌರವ ಡಾಕ್ಟರೇಟ್‌ ನೀಡಲಾಗಿದೆ. ನಗರದ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವದಲ್ಲಿ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು.

ಈ ಬಾರಿಯ ಬೆಂಗಳೂರು ವಿವಿ ಗೌರವ ಡಾಕ್ಟರೇಟ್‌ಗೆ ಎಚ್‌.ಡಿ.ದೇವೇಗೌಡರಷ್ಟೇ ಅಲ್ಲದೇ ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್ ಅವರೂ ಆಯ್ಕೆಯಾಗಿದ್ದರು. ಆದರೆ ಅವರು ಪೂರ್ವ ನಿಯೋಜಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಘಟಿಕೋತ್ಸವಕ್ಕೆ ಗೈರಾಗಿದ್ದರು. ಈ ಬಗ್ಗೆ ಸೋಮನಾಥ್ ಅವರು ವಿಡಿಯೋ ಸಂದೇಶ ರವಾನಿಸಿ, ಗೌರವ ಡಾಕ್ಟರೇಟ್ ಪದವಿಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದ. ಬೆಂಗಳೂರು ವಿವಿ ನೀಡಿರುವ ಗೌರವ ಡಾಕ್ಟರೇಟ್ ಪದವಿಯನ್ನು ನಾನು ಅತ್ಯಂತ ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ತಿಳಿಸಿದ್ದಾರೆ.

ಸಂತಸ ವ್ಯಕ್ತಪಡಿಸಿದ ಎಚ್‌.ಡಿ. ದೇವೇಗೌಡ

ಬೆಂಗಳೂರು ವಿವಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿರುವುದಕ್ಕೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ನನಗೆ ನೀಡುತ್ತಿರುವ ಗೌರವ ಡಾಕ್ಟರೇಟ್ ಅನ್ನು ತುಂಬಾ ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ | Media School: ಸಕ್ಷಮ ಪತ್ರಿಕೋದ್ಯಮ ಕಟ್ಟಿದ ಕೀರ್ತಿ ವಿಜಯ ಸಂಕೇಶ್ವರರಿಗೆ ಸಲ್ಲುತ್ತದೆ: ಪ್ರಲ್ಹಾದ್‌ ಜೋಶಿ

ಬೆಂಗಳೂರು ವಿಶ್ವವಿದ್ಯಾಲಯ ಲಕ್ಷಾಂತರ ವಿದ್ಯಾರ್ಥಿಗಳ ಜ್ಞಾನಭಂಡಾರ. ವಿದ್ಯಾರ್ಥಿಗಳಿಗೆ ನೈತಿಕ ಹಾಗೂ ಗುಣಮಟ್ಟದ ಶಿಕ್ಷಣವನ್ನು ಧಾರೆ ಎರೆಯುತ್ತಿರುವ ಜ್ಞಾನ ದೇಗುಲ. ಉನ್ನತ ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುತ್ತಿರುವ ವಿಶ್ವವಿದ್ಯಾಲಯದ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಹೇಳಿದರು.

ವಿದ್ಯೆ ಮತ್ತು ಸಂಸ್ಕಾರ ಬದುಕಿನ ಬೇರುಗಳಿದ್ದಂತೆ. ಎರಡೂ ಒಟ್ಟಿಗೆ ಬೆಳೆದಾಗ ಮಾತ್ರ ಬದುಕಿಗೊಂದು ಸಾರ್ಥಕತೆ ಸಿಗುತ್ತದೆ. ಶಿಕ್ಷಣ ಕೇವಲ ಕಾಗದದ ಸರ್ಟಿಫಿಕೇಟ್ ಆಗಿರಬಾರದು, ಅದು, ಸಂಸ್ಕಾರವನ್ನು ಸಹ ಒಳಗೊಂಡಿರಬೇಕು. ವಿದ್ಯೆ ಹಣ ಗಳಿಕೆಯ ಸಾಧನವಾಗದೆ ವ್ಯಕ್ತಿತ್ವವನ್ನು ರೂಪಿಸುವ ಸಾಧನವಾದಾಗ ಮಾತ್ರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಲು ಸಾಧ್ಯ. ಶಿಕ್ಷಣ ಅಂದರೆ ಮಸ್ತಕ ಸ್ಥಾನ, ಅಕ್ಷರ ಜ್ಞಾನ ಮಾತ್ರವಲ್ಲ, ಮನಸ್ಸಿಗೆ ಸಂಸ್ಕಾರವನ್ನು ಕೊಡುವುದು ಸಹ ಶಿಕ್ಷಣದ ಭಾಗ. ಬುದ್ಧಿಯ ವಿಕಾಸದೊಂದಿಗೆ ಹೃದಯವಂತಿಕೆಯನ್ನೂ ಬೆಳೆಸಬೇಕು. ವಿದ್ಯೆ ವಿನಯವನ್ನು ನೀಡುತ್ತೆ, ವಿನಯದಿಂದ ಮನಷ್ಯನ ವ್ಯಕ್ತಿತ್ವ ರೂಪುಗೊಳ್ಳುತ್ತೆ, ಆ ವ್ಯಕ್ತಿಯಿಂದ ಹಣ ಸಂಪಾದನೆ ಆಗುತ್ತೆ, ಸಂಪಾದಿಸಿದ ಹಣದಿಂದ ಧರ್ಮ ಕಾರ್ಯಗಳನ್ನು ನಡೆಸಿದಾಗ ಮಾತ್ರ ಮನಸ್ಸಿಗೆ ತೃಪ್ತಿ ಸಿಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರಿಗೆ ನಾನು ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಯಶಸ್ವಿ ಚಂದ್ರಯಾನ-3 ರೂವಾರಿ ಆಗಿರುವ ಸೋಮನಾಥ್‌ ಅವರಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವುದು ನನಗೆ ಬಹಳ ಸಂತೋಷ ತಂದಿದೆ. ಯಾಕೆಂದರೆ ಇಸ್ರೋ ಸಂಸ್ಥೆ ಇವತ್ತು, ನಮ್ಮ ಭಾರತ ದೇಶವನ್ನು ಬಾಹ್ಯಾಕಾಶದ ಭೂಪಟದಲ್ಲಿ ವಿಶ್ವಕ್ಕೆ ಪರಿಚಯ ಮಾಡಿ, ನಮಗೆಲ್ಲಾ ಹೆಮ್ಮೆ ತಂದಿದೆ. ಹೀಗಾಗಿ ಅವರಿಗೆ ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ವಿದ್ಯಾರ್ಥಿ ಜೀವನ ಒಂದು ತಪಸ್ಸು ಇದ್ದಂತೆ, ಪ್ರತಿ ವಿದ್ಯಾರ್ಥಿಯ ಜೀವನ ಕ್ರಮ ಶಿಸ್ತಿಗೆ ಒಳಪಡಬೇಕು. ವಿದ್ಯೆ ಕೇವಲ ಒಬ್ಬನ ಜೀವನವನ್ನು ಕಟ್ಟಿಕೊಡುವುದಷ್ಟೇ ಅಲ್ಲ ಒಂದು ದೇಶದ ಬೆಳವಣಿಗೆಯನ್ನೂ, ಆ ದೇಶದ ಸಂಸ್ಕೃತಿಯನ್ನು ಉನ್ನತಮಟ್ಟ ಕೊಂಡೊಯ್ಯುತ್ತದೆ. ಒಟ್ಟಾರೆ ಹೇಳಬೇಕು ಅಂದರೆ ವಿದ್ಯೆ ಸಂಪತ್ತು ಹೌದು, ಸಂಸ್ಕಾರವ ಹೌದು ಎಂದು ಹೇಳಿದರು.

ಪ್ರಸ್ತುತ ಎಲ್ಲಾ ವಿದ್ಯಾರ್ಥಿಗಳಿಗೂ ಗುಣಮಟ್ಟದ ಹಾಗೂ ನೈತಿಕ ಶಿಕ್ಷಣದ ಅಗತ್ಯ ಹೆಚ್ಚಿದೆ. ಅಂತಹ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾಲಯ ನೀಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರದಲ್ಲೂ ಛಾಪು ಮೂಡಿಸಬೇಕು, ಎಲ್ಲಾ ವಿದ್ಯಾರ್ಥಿಗಳಿಗೂ ಉತ್ತಮ ಭವಿಷ್ಯ ಸಿಗಲಿ, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ | Panchamasali Reservation : ಪಂಚಮಸಾಲಿಗಳಿಗೆ ಸದ್ಯಕ್ಕಿಲ್ಲ 2ಎ ಮೀಸಲಾತಿ ಗಿಫ್ಟ್; ಹಾಗಿದ್ದರೆ ಯಾವಾಗ?

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌, ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್, ಸ್ಟಾಕ್‌ ಬ್ರೋಕಿಂಗ್‌ ಕಂಪನಿ ಝೆರೋದಾ ಸಹ ಸಂಸ್ಥಾಪಕ ನಿಖಿಲ್‌ ಕಾಮತ್‌, ಬೆಂಗಳೂರು ಕುಲಪತಿ ಪ್ರೊ. ಜಯಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Exit mobile version