Site icon Vistara News

Karnataka Election: 2019ರ ಲೋಕಸಭಾ ಚುನಾವಣೆ ಸೋಲನ್ನು ನೆನೆದು ಎಚ್‌.ಡಿ ದೇವೇಗೌಡ ಭಾವುಕ

HD Deve Gowda gets emotional as he remembers defeat in 2019 Lok Sabha elections at Madhugiri

ತುಮಕೂರು: ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮಾಜಿ ಪ್ರಧಾನಿ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಮಧುಗಿರಿಯಲ್ಲಿ ಸೋಮವಾರ ಪ್ರಚಾರದ ವೇಳೆ, 2019ರ ಲೋಕಸಭಾ ಚುನಾವಣೆ ಸೋಲನ್ನು ನೆನೆದು ಎಚ್‌.ಡಿ.ದೇವೇಗೌಡ (HD Deve Gowda) ಅವರು ಭಾವುಕರಾದರು. ಪಾರ್ಲಿಮೆಂಟ್‌ಗೆ ನಿಲ್ಲಲ್ಲ ಎಂದರೂ ಇಲ್ಲಿಗೆ ಕರೆ ತಂದು ಸೋಲಿಸಿ, ನಾನು ಕಣ್ಣೀರು ಹಾಕಿಕೊಂಡು ಹೋಗುವಂತೆ ಮಾಡಿದರು ಎಂದು ಹೇಳಿದ್ದಾರೆ.

ಮಧುಗಿರಿಯ ಕೈಮರದಲ್ಲಿ ಜೆಡಿಎಸ್‌ ಅಭ್ಯರ್ಥಿ ಎಂ.ವಿ.ವೀರಭದ್ರಯ್ಯ ಪರ ಪ್ರಚಾರ ನಡೆಸಿದ ಅವರು, ಲೋಕಸಭೆ ಚುನಾವಣೆ ವೇಳೆ ನಾನು ಎಂದೂ ತುಮಕೂರಿಗೆ ಬರಬೇಕು ಅಂತ ಬಯಸಿರಲಿಲ್ಲ. ತುಮಕೂರು ಜಿಲ್ಲೆಯ ಮುಖಂಡರು ನನ್ನ ಬಲಿಪಶು ಮಾಡಿದರು. ಅವರ ಹೆಸರು ನಾನು ಹೇಳಲ್ಲ. ನಾನು ಕಣ್ಣೀರು ಹಾಕಿಕೊಂಡು ಹೋಗುವಂತೆ ಮಾಡಿದವರ ಕಣ್ಣಲ್ಲಿ ಈ ಬಾರಿ ನೀರು ತರಿಸಬೇಕು. ಆಗಲೇ ನನಗೆ ಸಂತಸವಾಗುತ್ತದೆ ಎಂದು ಹೇಳಿದರು.

ಇದನ್ನು ಓದಿ | Amit Shah: ಬಿಜೆಪಿಯವರು ಅಮೆರಿಕ ಪ್ರೆಸಿಡೆಂಟನ್ನೇ ಕರ್ಕೊಂಡು ಬರಲಿ; ನಮಗೆ ದೇವೇಗೌಡ, ಕುಮಾರಸ್ವಾಮಿಯೇ ಚಾಣಕ್ಯ: ಎಚ್.ಡಿ. ರೇವಣ್ಣ

ಮಧುಗಿರಿಯನ್ನು ಕಂದಾಯ ಜಿಲ್ಲೆ ಮಾಡಬೇಕು, ಏಕಶಿಲಾ ಬೆಟ್ಟ ಪ್ರವಾಸಿ ತಾಣವಾಗಬೇಕು, ಇಂಡಸ್ಟ್ರಿಯಲ್ ಕ್ಲಸ್ಟರ್ ಮಾಡಬೇಕು ಎಂಬುವುದು ಜೆಡಿಎಸ್‌ ಅಭ್ಯರ್ಥಿ, ಶಾಸಕ ವೀರಭದ್ರಯ್ಯ ಆಸೆ. ಕಾಂಗ್ರೆಸ್ ಮುಖಂಡರು 25 ಸೀಟ್ ಬರುತ್ತದೆ ಎನ್ನುತ್ತಾರೆ. ಮಧುಗಿರಿ ಒಂದೆ ಸಾಕು ಅವರಿಗೆ ಉತ್ತರ ಕೊಡಲು ಎಂದು ಕಿಡಿಕಾರಿದರು.

ನಾನು ಹಿಂದಿನದು ಮಾತನಾಡಲು ಹೋಗಲ್ಲ. ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ವೀರಭದ್ರಯ್ಯರನ್ನು ಈ ಹಿಂದೆ 18 ಸಾವಿರ ಲೀಡ್‌ನಲ್ಲಿ ಗೆಲ್ಲಿಸಿದ್ದೀರಿ, ಈ ಬಾರಿ ಕೂಡ ಗೆಲ್ಲಿಸಬೇಕು. ನಾನು ಮುಖ್ಯಮಂತ್ರಿ ಆಗಲು ತುಮಕೂರಿನಿಂದ 9 ಸೀಟ್ ಗೆಲ್ಲಿಸಿ ಕೊಟ್ಟಿದ್ದೀರಿ. ಈಗ ಕುಮಾರಸ್ವಾಮಿ ಕೂಡ ತುಮಕೂರು ಜಿಲ್ಲೆಯ ನಂಬಿಕೆ ಇಟ್ಟುಕೊಂಡಿದ್ದಾರೆ. ಈ ಬಾರಿ ಹೆಚ್ಚು ಸೀಟ್ ತುಮಕೂರಿನಿಂದ ಗೆಲ್ಲಿಸಿ ಕೊಡಬೇಕು. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಿಸಬೇಕು ಎಂದು ಕರೆ ನೀಡಿದರು.

ರಾಜ್ಯದಾದ್ಯಂತ ಪ್ರಚಾರ ಮಾಡುವೆ

ಎಚ್.ಡಿ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಅವರು ಈಗ ಪಂಚರತ್ನ ಯೋಜನೆ ಅನುಷ್ಠಾನ ಮಾಡುವ ಸಲುವಾಗಿ ಹೋರಾಟ ಮಾಡುತ್ತಿದ್ದಾರೆ. ಈಗ ಅವರು ಆಸ್ಪತ್ರೆಯಲ್ಲಿದ್ದಾರೆ, ಅದೆಲ್ಲ ದೇವರ ಇಚ್ಛೆ. ಆದರೆ ಅವರು ಮತ್ತೆ ಪ್ರಚಾರ ಮಾಡುತ್ತಾರೆ. ಆದರೆ, ಚುನಾವಣೆ ನಡೆಯುವ ಒಳಗೆ ಕುಮಾರಸ್ವಾಮಿ ಮತ್ತು ತಿಪ್ಪೇಸ್ವಾಮಿ ರಾಜ್ಯದಲ್ಲಿ ಎಲ್ಲೆಲ್ಲಿ ಪ್ರಚಾರ ಮಾಡಬೇಕು ಎಂದು ಹೇಳುತ್ತಾರೋ ಅಲ್ಲೆಲ್ಲಾ ಪ್ರಚಾರ ಮಾಡುತ್ತೇನೆ. ಜೆಡಿಎಸ್ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದರು.

ಜಿಲ್ಲೆಯ ಶಿರಾ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇವತ್ತು ಬೆಳಗ್ಗೆ ನಂಜಾವಧೂತ ಸ್ವಾಮೀಜಿಗಳ ನೇತೃತ್ವದಲ್ಲಿ ಓಂಕಾರೇಶ್ವರ ಸ್ವಾಮಿಗೆ ಪೂಜೆ ಮಾಡಿ ಇಲ್ಲಿ ಬಂದಿದ್ದೇನೆ. ಈಗಾಗಲೇ ಹೆಲಿಕಾಪ್ಟರ್​ ಬೆಂಗಳೂರಿಗೆ ಹೋಗಿದೆ. ನಾನು ಇಲ್ಲಿಂದ ಮಧುಗಿರಿಗೆ ಹೋಗಿ, ಅಲ್ಲಿಂದ ಕೊರಟಗೆರೆಗೆ ಹೋಗಿ, ಅಲ್ಲಿಂದ ರಸ್ತೆಯ ಮೂಲಕವೇ ಬೆಂಗಳೂರಿಗೆ ತೆರಳಬೇಕಿದೆ ಎಂದರು.

ನಾವೆಲ್ಲರೂ ಇಲ್ಲಿ ಮುಂದೆ ಕೂತಿದ್ದೇವೆ. ಆದರೆ ಅಲ್ಲಿ ಹೆಣ್ಣುಮಕ್ಕಳು ಬಿಸಿಲಲ್ಲಿ ನಿಂತಿದ್ದಾರೆ. ಹೀಗಾಗಿ ನನ್ನ ಮನಸ್ಸಿಗೆ ತುಂಬಾ ಬೇಸರವಾಗಿದೆ. ನಮಗೆ ಹೆಣ್ಣುಮಕ್ಕಳ ಮೇಲೆ ಗೌರವವಿದ್ದು, ಅವರಿಗೆ ಮೀಸಲಾತಿ ಕೊಡಿಸುವ ಹೋರಾಟ ಮಾಡುತ್ತೇನೆ. ಇಲ್ಲಿ ಕೆಲ ಅಭಿಮಾನಿಗಳು ನನ್ನ ಹೆಗಲ ಮೇಲೆ ಕುರಿ ಹೊರಿಸಿದರು. ನನಗೆ 92 ವರ್ಷ ವಯಸ್ಸಾದರೂ ಅದನ್ನು ಹೊತ್ತು ನಿಮ್ಮ ಮುಂದೆ ಪ್ರದರ್ಶಿಸಿದ್ದೇನೆ. ನಾನು ಇಲ್ಲಿಂದಲೇ ಪ್ರಚಾರ ಆರಂಭಿಸಬೇಕು ಅಂದುಕೊಂಡಿದ್ದು ದೇವರ ಸಲುವಾಗಿ ಎಂದು ಹೇಳಿದರು.

ಇದನ್ನೂ ಓದಿ | Basava Jayanti: ಶಿವಮೊಗ್ಗದಲ್ಲಿ ರಕ್ತಾಮೃತ ದಾಸೋಹ; ರಕ್ತದಾನ ಮಾಡಲು ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಕರೆ

ಮುಸ್ಲಿಂ ಸಮುದಾಯದ ತುಂಬಾ ಜನ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನೀವೆಲ್ಲ ನನ್ನವರು. ನಾನು ನಿಮ್ಮ ಸಮಾಜವನ್ನು ಬಿಟ್ಟುಕೊಟ್ಟಿಲ್ಲ, ಬಿಟ್ಟುಕೊಡುವುದೂ ಇಲ್ಲ. ಬಿಸಿಲಲ್ಲಿ ನಿಲ್ಲಿಸಿದ್ದಕ್ಕೆ ತಾಯಂದಿರಲ್ಲಿ ಇನ್ನೊಮ್ಮೆ ಕ್ಷಮೆ ಕೇಳುತ್ತೇನೆ. ನಿಮ್ಮನ್ನು ಕೈ ಮುಗಿದು ಕೇಳುತ್ತೇನೆ, ಪ್ರಾದೇಶಿಕ ಪಕ್ಷವನ್ನು ಉಳಿಸಿ ಬೆಳೆಸಬೇಕು ಎಂದು ಮನವಿ ಮಾಡಿದರು.

Exit mobile version