ರಾಮನಗರ: ಲೋಕಸಭಾ ಚುನಾವಣೆ ಎದುರಿಸಲು ಬಿಜೆಪಿ ಜತೆ ಮೈತ್ರಿ (BJP-JDS Alliance) ಮಾಡಿಕೊಂಡಿರುವುದರಿಂದ ಜೆಡಿಎಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹೀಗಾಗಿ ಭಿನ್ನಮತ ಶಮನಗೊಳಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಅಖಾಡಕ್ಕೆ ಇಳಿದಿದ್ದಾರೆ. ಇದಕ್ಕಾಗಿ ಬಿಡದಿಯ ತೋಟದ ಮನೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಭಾನುವಾರ ಜೆಡಿಎಸ್ ಹಾಲಿ ಶಾಸಕರು, ಎಂಎಲ್‌ಸಿಗಳು ಹಾಗೂ ಮುಖಂಡರ ಸಭೆ ಏರ್ಪಡಿಸಲಾಗಿತ್ತು.
ಮೈತ್ರಿಯ ಉದ್ದೇಶ ಹಾಗೂ ಪಕ್ಷದ ಮುಂದಿನ ನಿಲುವುಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಮೈತ್ರಿಯಿಂದ ಜೆಡಿಎಸ್‌ಗೆ ಆಗುವ ಲಾಭದ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಸಭೆಯಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ಎಚ್.ಡಿ ರೇವಣ್ಣ, ಕರೆಮ್ಮ, ಹರೀಶ್ ಗೌಡ, ಸುರೇಶ್ ಬಾಬು, ಸಮೃದ್ಧಿ ಮಂಜುನಾಥ್, ವೆಂಕಟಶಿವಾರೆಡ್ಡಿ, ಶಾರದ ಪಿ. ನಾಯ್ಕ್, ಎಚ್. ಟಿ. ಮಂಜುನಾಥ್, ಸ್ವರೂಪ್, ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಗೌರಿಶಂಕರ್ ಭಾಗಿಯಾಗಿದ್ದಾರೆ. ಆದರೆ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಶರಣ್ ಗೌಡ ಕಂದಕೂರ್ ಗೈರಾಗಿದ್ದರು.
ಇದನ್ನೂ ಓದಿ | Lingayat CM : ಶಾಮನೂರು ಹೇಳಿಕೆಗೆ ಪೂರ್ಣ ಬೆಂಬಲವೆಂದ ಬಿಎಸ್‌ವೈ; ನಮ್ಮದು ಜಾತ್ಯತೀತ ಸರ್ಕಾರ ಎಂದ ಸಿಎಂ
ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಜೆಡಿಎಸ್‌ನ ಹಲವು ಅಲ್ಪಸಂಖ್ಯಾತ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಅದೇ ರೀತಿ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕೂಡ ಬಹಿರಂಗವಾಗಿ ಬೇಸರ ಹೊರಹಾಕಿದ್ದರು. ಬೆಂಬಲಿಗರ ಜತೆ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದರು. ಹೀಗಾಗಿ ಅವರು ದೇವೇಗೌಡರು ಕರೆದಿರುವ ಸಭೆಗೂ ಹಾಜರಾಗಿರಲಿಲ್ಲ.
ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ: ಶಾಸಕ ಜಿ.ಟಿ.ದೇವೇಗೌಡ
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಕೊಟ್ಟ ಕಾರ್ಯಕ್ರಮಗಳು, ಗ್ರಾಮ ವಾಸ್ತವ್ಯ ಜನಮಾನಸದಲ್ಲಿ ಉಳಿದಿದೆ. ಚುನಾವಣೆಗೆ ನಿಂತು ಸೋತ ಅಭ್ಯರ್ಥಿಗಳು ಕಂಗೆಟ್ಟಿಲ್ಲ. ಕಲಬುರಗಿ, ಕೊಪ್ಪಳ ಭಾಗದಲ್ಲಿ ನಮ್ಮ ಸಭೆಗೆ ಸಹಸ್ರಾರು ಮಂದಿ ಸೇರಿದ್ದರು. ಕುಮಾರಸ್ವಾಮಿ ಅವರನ್ನು ಸುತ್ತುವರಿದು ಬಂದು ಹಾರ ಹಾಕಿ ಹೋಗೊದಲ್ಲ. ಪಕ್ಷ ಸಂಘಟನೆಗೆ ಮುಖಂಡರು ಶ್ರಮಿಸಬೇಕು ಎಂದು ಕರೆ ನೀಡಿದರು.
ಉತ್ತರ ಕರ್ನಾಟಕ ಭಾಗದ ಜನರಿಗೆ ದೇವೆಗೌಡರು ಆ ಭಾಗದ ಜನರಿಗೆ ದೇವರಂತೆ ಕಾಣುತ್ತಾರೆ. ಬಿಳಿ ಬಟ್ಟೆ ಹಾಕಿಕೊಂಡು ಬರುವುದಲ್ಲ. 25 ಜನರನ್ನು ಕರೆದುಕೊಂಡು ಬರುವುದಕ್ಕಾಗಲ್ಲವೇ? ಬಿಜೆಪಿಯಲ್ಲಿ ಒಂದು ಕರೆ ಕೊಟ್ಟರೆ ನೂರಾರು ಜನ ಬರುತ್ತಾರೆ. ಆದರೆ ನಮ್ಮಲ್ಲಿ ಕರೆ ಕೊಟ್ಟರೆ ಪಾಲಿಸುತ್ತೀರಾ ಎಂದು ಅಸಮಾಧಾನ ಹೊರಹಾಕಿದರು.
ಅಲ್ಪಸಂಖ್ಯಾತರು ಜೆಡಿಎಸ್ ಬಿಟ್ಟೆ ಹೋದರು ಎನ್ನುತ್ತೀರಲ್ಲಾ, ನೋಡಿ ಇಲ್ಲಿ ಇಷ್ಟೊಂದು ನಾಯಕರು ಬಂದಿಲ್ಲವೇ? ಎಂದ ಅವರು, ಕಾವೇರಿ ಹೋರಾಟ ಮಾಡಿದರೆ 144 ಸೆಕ್ಷನ್ ಹಾಕುತ್ತಾರೆ. ಹಿಂದೆ ನವಲಗುಂದ ಹೋರಾಟದಲ್ಲಿ ಜನ ರೊಚ್ಚಿಗೆದ್ದ ಪರಿಣಾಮ ಗುಂಡೂರಾವ್ ಸರ್ಕಾರವೇ ಉರುಳಿತು. ಅಧ್ಯಕ್ಷ ಪಟ್ಟ, ವಿಸಿಟಿಂಗ್ ಕಾರ್ಡ್ ಇಟ್ಕೊಂಡು ಬಂದರೆ ಸಾಲದು. ಕುಮಾರಣ್ಣ ಶ್ರೀಕೃಷ್ಣ ಇದ್ದ ಹಾಗೆ, ಎಲ್ಲರಿಗೂ ಆಶೀರ್ವಾದ ಮಾಡುತ್ತಾರೆ. ಬ್ಯುಸಿನೆಸ್‌ಗಾಗಿ ಬೇಡ, ದೇವೇಗೌಡರ ಹೆಸರು ಉಳಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತೆಗೆಯಬೇಕು. ಬಿಬಿಎಂಪಿ ಹಣ ಯಾವುದಕ್ಕೆ ಬಿಡುಗಡೆ ಮಾಡಿದ್ದಾರೆ. ಒಂದು ಪ್ರತಿಭಟನೆ ಮಾಡಿದ್ದೀರಾ? ಬೀದಿಗಿಳಿಯವೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ನೆನ್ನೆಯವರೆಗೂ ಆದ ಘಟನೆಗಳನ್ನು ಮರೆತುಬಿಡಿ. ನಮ್ಮವರನ್ನು ನಾವೇ ಸೋಲಿಸಿದರೂ ಮರೆತು ಬಿಡಿ. ಪಕ್ಷ ತಾಯಿಗೆ ಸಮಾನ, ದಯಮಾಡಿ ದ್ರೋಹ ಮಾಡಬೇಡಿ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಪ್ರತಿಜ್ಞೆ ಸ್ವೀಕರಿಸಬೇಕು ಎಂದು ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು.
ಪಕ್ಷದಲ್ಲಿ ಕೆಲಸ ಮಾಡದೇ ಇದ್ದವರು ಪಕ್ಷ ಬಿಟ್ಟಿದ್ದಾರೆ
ಮುಸ್ಲಿಂ ಮುಖಂಡ ರಝಾಕ್ ಮಾತನಾಡಿ, ಅಲ್ಪಸಂಖ್ಯಾತರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಅವೆಲ್ಲಾ ಸುಳ್ಳು. ಪಕ್ಷದಲ್ಲಿ ಕೆಲಸ ಮಾಡದೇ ಇದ್ದವರು ಪಕ್ಷ ಬಿಟ್ಟಿದ್ದಾರೆ. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸ ಬಾರದು ಎಂದು ಹೇಳಿದರು.
ಕುಮಾರಸ್ವಾಮಿ ಬಗ್ಗೆ ಅಪಪ್ರಚಾರ
ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಮುಖಂಡ ರಫೀಕ್ ಮಾತನಾಡಿ, ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಆಯ್ತು ಅಂತ ಕೆಲವರು ಮುಸ್ಲಿಂ ನಾಯಕರು ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮ ಪಕ್ಷ ಬಿಟ್ಟು ಯಾರು ಅಲ್ಪಸಂಖ್ಯಾತರು ಬಿಟ್ಟು ಹೋಗಿಲ್ಲ. ಕುಮಾರಸ್ವಾಮಿ ಅವರ ಮೇಲೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ | Lingayat CM : ಶಾಮನೂರು ಶಿವಶಂಕರಪ್ಪರಿಗೆ ಸಿಎಂ ಸ್ಪಷ್ಟ ಉತ್ತರ ಕೊಡಬೇಕು: ಬಸವರಾಜ ಬೊಮ್ಮಾಯಿ
ಅಲ್ಪಸಂಖ್ಯಾತರ ಹಿತರಕ್ಷಣೆಗೆ ಜೆಡಿಎಸ್ ಬದ್ಧ
ಎಂಎಲ್ಸಿ ಬಿ.ಎಂ.ಫಾರೂಕ್ ಮಾತನಾಡಿ, ಬಿಜೆಪಿ ಜತೆ ಯಾವ ಪಕ್ಷ ಮೈತ್ರಿ ಮಾಡಿಕೊಂಡಿಲ್ಲ ಹೇಳಿ. ಶಿವಸೇನೆ, ಶರತ್ ಪವಾರ್, ನಿತೀಶ್ ಕುಮಾರ್ ಕೂಡಾ ಮೈತ್ರಿ ಮಾಡಿಕೊಂಡಿದ್ದರು. ಈ ಹಿಂದೆ ನಮ್ಮ ಜಮೀರ್ ಗೆ ಮಂತ್ರಿ ಸ್ಥಾನ ಕೊಡಲಿಲ್ವಾ.? ಈಗಲೂ ಮೈತ್ರಿಯಿಂದ ಯಾವುದೇ ಗೊಂದಲ ಇಲ್ಲ. ಮೈತ್ರಿಯ ಪ್ರತಿ ಹಂತದಲ್ಲೂ ಇಬ್ರಾಹಿಂ ಜತೆ ಚರ್ಚೆ ಮಾಡಿದ್ದಾರೆ. ಮೈತ್ರಿ ಮಾತುಕತೆ ಎಲ್ಲಾ ಹಂತದಲ್ಲೂ ಇಬ್ರಾಹಿಂ ಅವರನ್ನು ವಿಶ್ವಾಸಕ್ಕೆ ಪಡೆದಿದ್ದಾರೆ. ಜೆಡಿಎಸ್ ನಿಂದ ಅಲ್ಪಸಂಖ್ಯಾತರು ದೂರ ಆಗುತ್ತಿಲ್ಲ. ಅಲ್ಪಸಂಖ್ಯಾತರ ಹಿತರಕ್ಷಣೆಗೆ ಪಕ್ಷ ಬದ್ಧವಾಗಿದೆ ಎಂದು ಹೇಳಿದರು.