ಹಾಸನ: ಹೇಮಾವತಿ ನದಿಯಿಂದ ನೇರವಾಗಿ ಅರಸೀಕೆರೆಗೆ (Karnataka Election) ನೀರು ತರುವ ಯೋಜನೆ ಮಾಡಿದ್ದು ನಾನು. ಕೇವಲ ನನ್ನ ಜಾತಿಗೋಸ್ಕರ ನಾನು ಮಾಡಲಿಲ್ಲ. ರೇವಣ್ಣ ಆ ವ್ಯಕ್ತಿಯನ್ನು ಬೆನ್ನಿಗೆ ಕಟ್ಟಿಕೊಂಡು ಓಡಾಡಿದರು. ಈಗ ಅವರೇ ರೇವಣ್ಣನನ್ನು ತುಳಿಯುತ್ತೇನೆ ಎನ್ನುತ್ತಾರೆ. ಆ ವ್ಯಕ್ತಿ ಮುಂದುವರಿಯಕೂಡದು ಅಂತ್ಯ ಆಗಲೇಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕಿಡಿ ಕಾರಿದರು.
ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿಯಲ್ಲಿ ಗುರುವಾರ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ತಾಯಿ ಭುವನೇಶ್ವರಿ ಮಕ್ಕಳು, ಒಂದಾಗಿ ಬಾಳಬೇಕು. ಇಂತಹ ವಂಚನೆ, ಮೋಸದ ಮತ್ತೊಬ್ಬ ರಾಜಕಾರಣಿ ಮತ್ತೆ ಹುಟ್ಟಬಾರದು. ಇಂತಹ ಕೆಟ್ಟ ವ್ಯಕ್ತಿ ಅಂತ್ಯಗೊಳಿಸಲು ನೀವು ಒಂದು ತಾಯಿ ಮಕ್ಕಳಾಗಿ ಹೋರಾಡಿ. ಏನೂ ಸ್ಥಿತಿ ಇಲ್ಲದ ವ್ಯಕ್ತಿಯನ್ನು ರೇವಣ್ಣ ಬೆನ್ನಿಗೆ ಕಟ್ಟಿಕೊಂಡು ಓಡಾಡಿದರು. ಈಗ ಒಂದೊಂದು ವೋಟ್‌ಗೆ ಸಾವಿರಗಟ್ಟಲೆ ಕೊಡುತ್ತಾರೆ. ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಈ ಸಭೆ, ದೇವರ ಸಭೆಯಾಗಿದೆ. 90ನೇ ವಯಸ್ಸಿನಲ್ಲಿ ನಾನು ಅಸತ್ಯ ಮಾತಾಡಲ್ಲ. ಅರಸೀಕೆರೆಗೆ ನೀರು ಕೊಡುವಂತೆ ರೇವಣ್ಣ ಹಠ ಮಾಡಿದರು, ನಾನು ಮಂಜೂರಾತಿ ಕೊಟ್ಟೆ. ಆದರೆ, ವೀರೇಂದ್ರ ಪಾಟೀಲ್ ಸಿಎಂ ಇದ್ದರು, ನಾವು ಮಾಡಿದ ಯೋಜನೆ ತುಮಕೂರಿಗೆ ಹೋಯಿತು. ಆಗ ಇಲ್ಲಿಗೆ ನೀರಿನ ಕೊರತೆ ಆಯಿತು. ಇನ್ನು 40 ಕೆರೆಗೆ ನೀರು ತುಂಬಿಸಲು ಅಂದೇ ಯೋಜನೆ ಮಾಡಿದ್ದೆವು. ಇದನ್ನು ಮಾಡಿದವರು ಯಾರು ಎಂಬ ಸತ್ಯ ತಿಳಿಯಬೇಕು ಎಂದು ಹೇಳಿದರು.
ಇದನ್ನೂ ಓದಿ | Karnataka Election 2023: ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸ ಇಲ್ಲವೇ: ಡಿ ಕೆ ಶಿವಕುಮಾರ್ ಪ್ರಶ್ನೆ
ಇಂದು ಹಾಗೂ ನಾಳೆ ಹಾಸನ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಿದ್ಧನಾಗಿ ಬಂದಿದ್ದೇನೆ. ಯಾವುದೇ ಕ್ಷೇತ್ರ ಕಡೆಗಣಿಸುವ ಪ್ರಶ್ನೆಯೇ ಇಲ್ಲ, ಕಡೂರು ಸೇರಿ ಎಲ್ಲ ಕ್ಷೇತ್ರದಲ್ಲಿಯೂ ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ಭವಾನಿ ಅವರು ಹಾಸನದಲ್ಲಿ ಸ್ವರೂಪ್ ಅವರನ್ನು ತನ್ನ ಮೂರನೇ ಮಗ ಎಂದು ಘೋಷಣೆ ಮಾಡಿದ್ದಾರೆ. ಹೀಗಾಗಿ ಅವರಿಗೆ ಬೆಂಬಲ ನೀಡಬೇಕು ಎಂದು ತಿಳಿಸಿದರು.
ಮೋದಿಯವರನ್ನು ರಾಹುಲ್ ಗಾಂಧಿ ಮಟ್ಟಕ್ಕೆ ಇಳಿಸಬಾರದಿತ್ತು
ಬೇಲೂರು ಭೇಟಿ ವೇಳೆ ಜೆಡಿಎಸ್, ಕಾಂಗ್ರೆಸ್‌ನ ಬಿ ಟೀಂ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಎಚ್.ಡಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಹಾಸನದಲ್ಲಿ ರಾಹುಲ್ ಗಾಂಧಿ ಏನು ಹೇಳಿದ್ದರು ನೆನಪಿದೆ ಅಲ್ಲವೇ? ಕಳೆದ ಬಾರಿ ಅವರು ಮಾಡಿದ ಕೆಲಸ ಈ ಬಾರಿ ಮೋದಿ ಮಾಡಿದ್ದಾರೆ. ಇದರಲ್ಲಿ ವ್ಯತ್ಯಾಸ ಏನಿಲ್ಲ. ಮೋದಿಯವರನ್ನು ರಾಹುಲ್ ಮಟ್ಟಕ್ಕೆ ಇಳಿಸಬಾರದಿತ್ತು. ರಾಹುಲ್ ಓರ್ವ ಯುವಕ, ಮೋದಿ ಮೆಚ್ಯೂರ್ಡ್ ಮ್ಯಾನ್. ಅವರಿಂದ ಇಂತಹ ಮಾತನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Karnataka Election 2023: ವರುಣದಲ್ಲಿ ಸಿದ್ದರಾಮಯ್ಯ ರೋಡ್ ಶೋ ಅಬ್ಬರ; ಮತ್ತೆ ಸಿಎಂ ಮಾತು
ಅರಸೀಕೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್.ಆರ್.ಸಂತೋಷ್ ಪರ ಗುರುವಾರ ಪ್ರಚಾರಕ್ಕೆ ಆಗಮಿಸಿದಾಗ ಲಾಳನಕೆರೆ ಹೆಲಿಪ್ಯಾಡ್‌ನಲ್ಲಿ ಮಾತನಾಡಿರುವ ಅವರು, ರಾಹುಲ್ ಓರ್ವ ಯಂಗ್ ಸ್ಟಾರ್ ಏನೋ ಮಾತನಾಡಿದರು, ಆದರೆ, ಮೋದಿಯವರು 10 ವರ್ಷ ಪ್ರಧಾನಿಯಾಗಿ ಈ ದೇಶ ಆಳಿದವರು. ಜೆಡಿಎಸ್ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಯ ಬೇಲೂರಿಗೆ ಬಂದಿದ್ದರು. ನಾನು ಕೂಡ ಅಲ್ಲಿಗೇ ಹೋಗುತ್ತಿದ್ದೇನೆ, ನಾಳೆವರೆಗೂ ಕೂಡ ಹಾಸನದಲ್ಲಿ ಪ್ರಚಾರ ನಡೆಸುತ್ತೇನೆ ಎಂದು ತಿಳಿಸಿದರು.