Site icon Vistara News

Karnataka Election: ಕೊಟ್ಟ ಮಾತಿನಂತೆ ನಡೆಯುವ ಏಕೈಕ ಗಂಡು ಕುಮಾರಸ್ವಾಮಿ: ಎಚ್‌.ಡಿ. ದೇವೇಗೌಡ

H D Devegowda inaugrating JDS rally in Piriyapatna Mysore

ಮೈಸೂರು: ಪಂಚರತ್ನ ಯೋಜನೆ ಜನರಿಗೆ ಸಹಕಾರಿ ಆಗಲಿದೆ. ಕೊಟ್ಟ ಮಾತಿನಂತೆ ನಡೆಯುವ ಗಂಡು ಯಾರಾದರೂ ಇದ್ದರೆ ಅದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತ್ರ. ಜನರಿಗೆ ಅವರ ಬಗ್ಗೆ ವಿಶ್ವಾಸ ಇದೆ.‌ ಹೀಗಾಗಿ ಜೆಡಿಎಸ್‌ ಬಹುಮತ ಪಡೆದು ಸ್ವತಂತ್ರ ಸರ್ಕಾರ (Karnataka Election) ರಚನೆ ಮಾಡಲಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದರು.

ಪಿರಿಯಾಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾವು ಕೊಟ್ಟ ಮಾತಿನಂತೆ ಸಾಲ‌ ಮನ್ನಾ ಮಾಡಲು ಕಾಂಗ್ರೆಸ್ ವಿರೋಧಿಸಿತು. ಆದರೂ ಕುಮಾರಸ್ವಾಮಿ ಕಾರ್ಯಕ್ರಮ ಮುಂದುವರಿಸಿ ಸಾಲ‌ ಮನ್ನಾಗೆ ಹಣ ಹೊಂದಿಸಿದರು. ಈಗ ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇನೆ ಅಂತ ಹೇಳಿದ್ದಾರೆ. ಕುಮಾರಸ್ವಾಮಿ ಮೇಲೆ‌ ಜನರಿಗೆ ವಿಶ್ವಾಸ ನಂಬಿಕೆ‌ ಇದೆ ಎಂದು ಹೇಳಿದರು.

ಜೆಡಿಎಸ್‌ಗೆ 25 ಸ್ಥಾನ ಅಷ್ಟೇ ಎನ್ನುವ ನಾಯಕರು ಮೈಸೂರಿನಲ್ಲೇ ಇದ್ದಾರೆ. ಲಘುವಾಗಿ ಮಾತನಾಡುವುದರಿಂದ ವ್ಯಕ್ತಿಯ ಗೌರವ ಹೆಚ್ಚಾಗಲ್ಲ. ನಾನು ಯಾರ ಬಗ್ಗೆ ಲಘುವಾಗಿ ಮಾತನಾಡಲ್ಲ. ಒಂದು ಸಾರಿ ಆಡುವ ಮಾತು ಹೊರಗೆ ಹೋದರೆ ಮುಗಿಯಿತು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | Narendra Modi: ಏ.27ರಂದು 50 ಲಕ್ಷ ಬಿಜೆಪಿ ಕಾರ್ಯಕರ್ತರ ಜತೆ ಪ್ರಧಾನಿ ನರೇಂದ್ರ ಮೋದಿ ಸಂವಾದ

ಚುನಾವಣೆ ಮುಗಿಯುವವರೆಗೂ ಪ್ರತಿದಿನ 3 ಕಡೆ ಪ್ರಚಾರ ಮಾಡುತ್ತೇನೆ. ಒಟ್ಟು 42 ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ರಾಜ್ಯದ ಎಲ್ಲ ಭಾಗಗಳಿಗೂ ತೆರಳಿ ಪ್ರಚಾರ ಮಾಡುವೆ. ರಾಯಚೂರು, ವಿಜಯಪುರ ಭಾಗಗಳಿಗೆ ನೀರು ಕೊಟ್ಟಿದ್ದೇನೆ. ಕೇವಲ ಹಳೇ ಮೈಸೂರು ಎಂಬ ಪ್ರಶ್ನೆ ಇಲ್ಲ, ಎಲ್ಲ ಕಡೆ ಹೋಗುತ್ತೇನೆ ಎಂದು ಹೇಳಿದರು.

ಕುಮಾರಸ್ವಾಮಿ ಆರೋಗ್ಯ ಸುಧಾರಣೆ ಆಗಿದೆ. ಅವರು ದಿನಕ್ಕೆ 4-5 ಕಾರ್ಯಕ್ರಮ ಮಾಡುತ್ತಿದ್ದಾರೆ. ನಮ್ಮಲ್ಲೂ ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು ಸೇರಿ ಹಲವರು ಸ್ಟಾರ್ ಪ್ರಚಾರಕರು ಇದ್ದಾರೆ. ಅವರವರ ಭಾಗದಲ್ಲಿ ಜೆಡಿಎಸ್‌ ಗೆಲುವಿಗೆ ಶ್ರಮಿಸಲಿದ್ದಾರೆ. ಪಕ್ಷದ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಮುಸ್ಲಿಂ ಮೀಸಲಾತಿ ರದ್ದು ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಸ್ಲಿಮರಿಗೆ ಮೀಸಲಾತಿ ಕೊಟ್ಟ ನಾನು ನಿಮ್ಮ ಮುಂದೆಯೇ ಇದ್ದೇನೆ. ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಬಗೆಹರಿಸಿದ್ದು ನಾನು. ಹೆಣ್ಣು ಮಕ್ಕಳಿಗೆ ಮೀಸಲಾತಿ ಕೊಟ್ಟಿದ್ದೇನೆ. ಜನರಿಗೆ ಈ ಬಗ್ಗೆ ನೆನಪು ಮಾಡಬೇಕಷ್ಟೆ. 75 ವರ್ಷಗಳಲ್ಲಿ ಆಗದ ಕಾರ್ಯಕ್ರಮಗಳನ್ನು ಕುಮಾರಸ್ವಾಮಿ ಇತ್ತೀಚೆಗೆ ಮಾಡಿದ್ದಾರೆ. ಗ್ರಾ.ಪಂ. ಮಟ್ಟದಲ್ಲಿ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ನಿರುದ್ಯೋಗ, ಆರೋಗ್ಯ, ಶಿಕ್ಷಣ, ವಸತಿ ಹೀಗೆ ಹಲವು ವಿಷಯಗಳಲ್ಲಿ ಉತ್ತಮ ಕಾರ್ಯಕ್ರಮ ರೂಪಿಸಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Inside Story: ಎದುರಾಳಿಯನ್ನೇ ಒಳಗೆಳೆಯುವ ಶೆಟ್ಟರ್ ಮೂಲಕ ಅಳಿಯನ ಭವಿಷ್ಯ ಭದ್ರ: ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಲಕ್ಷ್ಮೀ ಹೆಬ್ಬಾಳ್ಕರ್!

ಮೈತ್ರಿ ಸರ್ಕಾರದಲ್ಲಿ 2 ಬಾರಿ ಮುಖ್ಯಮಂತ್ರಿ ಆಗಿದ್ದಾಗ ಕುಮಾರಸ್ವಾಮಿಗೆ ಅಡಚಣೆ ಮಾಡಿದ್ದರು. ಆದರೂ ಅವೆಲ್ಲವನ್ನೂ ಮೆಟ್ಟಿನಿಂತು ಉತ್ತಮ ಕೆಲಸ‌ ಮಾಡಿದ್ದಾರೆ. ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೆ ತರಲು ಅವರಿಗೆ ಸಂಪೂರ್ಣ ಅಧಿಕಾರ ಕೊಡಿ ಎಂದು ಮನವಿ ಮಾಡಿದರು.

ಮಂಡ್ಯದಲ್ಲಿ ಟಿಕೆಟ್ ವಂಚಿತರು ಬಂಡಾಯ ಸ್ಪರ್ಧೆ ಮಾಡಿದ್ದಾರೆ. ಬಂಡಾಯ ಶಮನಕ್ಕೆ ನಮ್ಮ ಮುಖಂಡರು ಪ್ರಯತ್ನ ಮಾಡಿದ್ದಾರೆ. ಮಂಡ್ಯಕ್ಕೆ ನಮ್ಮ ಅಧಿಕೃತ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಹೋಗುತ್ತೇನೆ. ಶಕ್ತಿ ಮೀರಿ ಜನತೆಯ ಆಶೀರ್ವಾದ ಕೇಳಿ ಪಕ್ಷವನ್ನು ಗೆಲ್ಲಿಸಲು ಪ್ರಯತ್ನ ಮಾಡುತ್ತೇನೆ. ಮಂಡ್ಯಕ್ಕೆ ನಾನು ಕೊಟ್ಟ ಕೊಡುಗೆ ಜನರಿಗೆ ಗೊತ್ತಿದೆ. ಅಭ್ಯರ್ಥಿ ರಾಮಚಂದ್ರು ಗೆಲ್ಲಿಸಲು ಸರ್ವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಸ್ವಾಭಿಮಾನ ಇದ್ದವರು ಜೆಡಿಎಸ್‌‌ನಲ್ಲಿರಲು ಸಾಧ್ಯವಿಲ್ಲ ಎಂಬ ಸುಮಲತಾ ಹೇಳಿಕೆ ವಿಚಾರಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಅಪ್ಪಣೆ ಕೊಡಿಸಿದವರು. ಮಾತು ಆಡಲು ಲೈಸೆನ್ಸ್ ಬೇಕಾಗಿಲ್ಲ. ಪ್ರತಿಯೊಬ್ಬರಿಗೂ ಮಾತನಾಡುವ ಸ್ವಾತಂತ್ರ್ಯ ಇದೆ. ಅವರು ಮಾತನಾಡಿಕೊಳ್ಳಲಿ. ಮನುಷ್ಯನ ಬಗ್ಗೆ ಲಘುವಾಗಿ ಮಾತನಾಡುವುದು ಸುಲಭ, ಜೀರ್ಣಿಸಿಕೊಳ್ಳುವುದು ಕಷ್ಟ ಎಂದು ಕಿಡಿಕಾರಿದರು.

ಇದನ್ನೂ ಓದಿ | Priyanka Gandhi: ಬಿಜೆಪಿ ಲೂಟಿ ಮಾಡಿದ್ದು ₹1.5 ಲಕ್ಷ ಕೋಟಿ: 100 ಏಮ್ಸ್‌ ಕಟ್ಟಬಹುದಿತ್ತು ಎಂದ ಪ್ರಿಯಾಂಕಾ ಗಾಂಧಿ

ಕೆ.ಮಹದೇವು ನೋಡಿದರೆ ನನಗೆ ಮನಕಲಕುತ್ತೆ. ಒಳಗೊಂದು ಹೊರಗೊಂದು ಇಲ್ಲದೆ ಮಾತನಾಡುತ್ತಾರೆ. ಪಿರಿಯಾಪಟ್ಟಣ ಒಂದು ಕಾಲದಲ್ಲಿ ಹೇಗಿತ್ತು? ಇವತ್ತು ಹೇಗಿದೆ ತುಲನೆ ಮಾಡಿ. ಕುಮಾರಸ್ವಾಮಿ ಈಗಾಗಲೇ ಎರಡು ಬಾರಿ ಸಿಎಂ ಆಗಿದ್ದಾರೆ. ಮೊದಲು ಬಿಜೆಪಿ ಜತೆ ಸೇರಿ ಸಿಎಂ ಆಗಿದ್ದರು. ಆಗ ಗ್ರಾಮ ವಾಸ್ತವ್ಯ ಮಾಡಿ ಸ್ಥಳದಲ್ಲೇ ಜನರ ಸಮಸ್ಯೆ ಆಲಿಸುವ ಕೆಲಸ ಮಾಡಿದ್ದರು. 2018ರಲ್ಲಿ ಕಾಂಗ್ರೆಸ್‌ನವರೇ ಮನೆ ಬಾಗಿಲಿಗೆ ಬಂದು ನೀವೇ ಸಿಎಂ ಆಗಿ ಎಂದರು. ನಾನು ಯಾವುದೇ ಕಾರಣಕ್ಕೂ ನಿಮ್ಮ ಸಹವಾಸ ಬೇಡ ಎಂದು ಹೇಳಿದೆ. ಆದರೂ ಬೆಂಬಲ‌‌ ಕೊಟಿದ್ದರಿಂದ ಕುಮಾರಸ್ವಾಮಿ ಸಿಎಂ ಆದರು ಎಂದು ತಿಳಿಸಿದರು.

Exit mobile version