ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡ ಅವರು (HD DeveGowda) ನಾಗಮಂಗಲದ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿರುವ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ಗುರುವಾರ ಕಾಲಭೈರವನಿಗೆ ಅಮಾವಾಸ್ಯೆ ಪೂಜೆ ಸಲ್ಲಿಸಿದರು. ಇಲ್ಲಿ ಅಮಾವಾಸ್ಯೆಯ ವಿಶೇಷ ಪೂಜೆ ಸಲ್ಲಿಸಲು ಅವರು ಹೆಲಿಕಾಪ್ಟರ್ ಮೂಲಕ ಆಗಮಿಸಿದರು.
ದೇವಾಲಯದ ಗರ್ಭಗುಡಿಯ ಸಮೀಪವೇ ತೆರಳಿ ಕಾಲಭೈರವನ ಸನ್ನಿದಾನದಲ್ಲಿ 15 ನಿಮಿಷಗಳಿಗೂ ಹೆಚ್ಚು ಕಾಲ ಕುಳಿತು ದೇವರ ಧ್ಯಾನ ಮಾಡಿದರು. ಪೂಜೆಗೂ ಮೊದಲು ಪ್ರತಿಕ್ರಿಯಿಸಿದ ದೇವೇಗೌಡರು, ʻʻಮೊದಲಿಂದಲೂ ನಾನು ಪೂಜೆ ಮಾಡುವ ಸಂಕಲ್ಪ ಮಾಡುತ್ತಿದ್ದೇನೆ. ಅಮಾವಾಸ್ಯೆ ಪೂಜೆಗಾಗಿಯೇ ಇಂದು ಕಾಲಭೈರವೇಶ್ವರ ದೇವಸ್ಥಾನಕ್ಕೆ ಬಂದಿದ್ದೇನೆʼʼ ತಿಳಿಸಿದರು. ಇಲ್ಲಿ ರಾಜಕೀಯ ವಿಚಾರವನ್ನು ಮಾತನಾಡುವುದಿಲ್ಲ. ಚುನಾವಣೆ ಬಳಿಕ ಮತ್ತೆ ಬಂದು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಹೋಗುತ್ತೇನೆ ಎಂದು ತಿಳಿಸಿದರು. ಇನ್ನು ಈ ಅಮಾವಾಸ್ಯೆ ಪೂಜೆಯಲ್ಲಿ ರೇವಣ್ಣ ಹಾಗೂ ಅನಿತಾ ಕುಮಾರಸ್ವಾಮಿ ಭಾಗಿಯಾಗಿದರು.
ಎಚ್‌ಡಿಕೆ ಸಿಎಂ ಮಾಡಲು ದೈವರ ಮೊರೆ
ಶ್ರೀ ಕಾಲಭೈರವೇಶ್ವರನಿಗೆ ಮೂರು ಅಮಾವಾಸ್ಯೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಕಳೆದ 2018ರ ಚುನಾವಣೆಯ ವೇಳೆ ದೇವೇಗೌಡರ ಕುಟುಂಬ ಒಂಬತ್ತು ಅಮವಾಸ್ಯೆ ಪೂಜೆಗಳನ್ನು ನಡೆಸಿತ್ತು. ಈ ಬಾರಿ ಮಗ ಕುಮಾರಸ್ವಾಮಿಯನ್ನು ಮತ್ತೊಮ್ಮೆ ಸಿಎಂ ಮಾಡಲು ದೇವೇಗೌಡರು ದೈವದ ಮೊರೆ ಹೋಗಿದ್ದಾರೆ ಎಂದು ಹೇಳಲಾಗಿದೆ.
ಸಮಾಜದ ಒಳಿತಿಗಾಗಿಷ್ಟೇ ಪ್ರಾರ್ಥನೆ- ಅನಿತಾ ಕುಮಾರಸ್ವಾಮಿ
ಕಾಲಭೈರವೇಶ್ವರನಿಗೆ ಅಮಾವಾಸ್ಯೆ ಪೂಜೆ ಸಲ್ಲಿಸಿ ಹೊರಬಂದ ಬಳಿಕ ಪ್ರತಿಕ್ರಿಯಿಸಿದ ಅನಿತಾ ಕುಮಾರಸ್ವಾಮಿ, ನಮ್ಮ ಕುಟುಂಬ ಸಾಮಾನ್ಯವಾಗಿ ಪೂಜೆ ಸಲ್ಲಿಸಲು ಇಲ್ಲಿಗೆ ಬರುತ್ತಿರುತ್ತೇವೆ. ಇಂದು ಅಮಾವಾಸ್ಯೆ ಇದ್ದ ಕಾರಣಕ್ಕೆ ಪೂಜೆಗಾಗಿ ಬಂದಿದ್ದೇನೆ. ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಅಥವಾ ಕುಮಾರಸ್ವಾಮಿ ಅವರು ಸಿಎಂ ಆಗಲಿ ಎಂದು ಪೂಜೆ ಸಲ್ಲಿಸುತ್ತಿಲ್ಲ. ಸಮಾಜದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ ಎಂದರು.
ಇದನ್ನೂ ಓದಿ: Karnataka Election 2023: ಮಂಡ್ಯದಲ್ಲೂ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ?; ಕೊನೇ ಕ್ಷಣದವರೆಗೂ ಇದೆ ಕೌತುಕ!
ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅನಿತಾ ಕುಮಾರಸ್ವಾಮಿ ಅವರು, ಮಂಡ್ಯದಲ್ಲಿ ನಿಲ್ಲುವಂತೆ ಒತ್ತಡ ಇತ್ತು, ಆದರೆ 2 ಕಡೆ ಸ್ಪರ್ಧೆ ಮಾಡುವುದಿಲ್ಲ. ಚನ್ನಪಟ್ಟಣ ಒಂದೇ ಕಡೆ ಅವರು ಸ್ಪರ್ಧೆ ಮಾಡುತ್ತಾರೆ ಎಂದು ಸ್ಪಷ್ಟನೆ ಕೊಟ್ಟರು.