ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಹೀನಾಯವಾಗಿ ಸೋಲು ಕಂಡಿರುವ ಜಾತ್ಯತೀತ ಜನತಾದಳ (Janatadal Secular) ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Parilament Election) ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ನಾಯಕ ಎಚ್.ಡಿ. ದೇವೇಗೌಡ (HD Devegowda) ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರ ಮಾತಿನಿಂದ ಸ್ಪಷ್ಟವಾಗುತ್ತಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar meeting) ಅವರ ನೇತೃತ್ವದಲ್ಲಿ ಜೂನ್ 23ರಂದು ದಿಲ್ಲಿಯಲ್ಲಿ ಆಯೋಜನೆಯಾಗಿರುವ ಬಿಜೆಪಿಯೇತರ ಪಕ್ಷಗಳ ಸಭೆಯಿಂದ ಜೆಡಿಎಸ್ ದೂರ ಉಳಿಯಲು ನಿರ್ಧರಿಸಿದೆ. ಇದನ್ನು ಎಚ್.ಡಿ. ದೇವೇಗೌಡರೇ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ. ಇದಷ್ಟೇ ಅಲ್ಲ, ಕಾಂಗ್ರೆಸ್ ಜತೆಗೆ ಇನ್ನು ಮೈತ್ರಿ ಮಾಡಿಕೊಳ್ಳೋದು ಏನಿದೆ ಎಂದು ಪ್ರಶ್ನಿಸಿದ್ದಾರೆ ಎಚ್.ಡಿ. ಕುಮಾರಸ್ವಾಮಿ.
ಈ ಇಬ್ಬರು ನಾಯಕರ ಮಾತುಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿ ನಡೆಯಲಿದೆ ಎಂಬ ಮುನ್ಸೂಚನೆ ಸಿಕ್ಕಂತಾಗಿದೆ. ಮೈತ್ರಿ ನಡೆದರೂ ನಡೆಯಬಹುದು ಎಂದು ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಕೂಡಾ ಒಪ್ಪಿಕೊಂಡಿದ್ದಾರೆ.
ನಾವು ಸಭೆಗೆ ಹೋಗಲ್ಲ ಎಂದ ದೇವೇಗೌಡರು
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜೆಡಿಎಸ್ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ʻʻʻವಿರೋಧ ಪಕ್ಷಗಳ ಮೈತ್ರಿ ಕೂಟದಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಜೆಡಿಎಸ್ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಮ್ಮ ಈಗಿನ ಪ್ರಮುಖ ದೃಷ್ಟಿ ಪಕ್ಷವನ್ನು ಪುನಶ್ಚೇತನಗೊಳಿಸುವುದಾಗಿದೆ. ನಮ್ಮ ಪಕ್ಷದ ನಾಯಕರಾಗಿರುವ ಎಚ್.ಡಿ ಕುಮಾರಸ್ವಾಮಿ ಮತ್ತಿತರ ನಾಯಕರು ಪಕ್ಷದ ಬಲವರ್ಧನೆ, ಕಾರ್ಯಕರ್ತರನ್ನು ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆಗೆ ಕಾಂಗ್ರೆಸ್ ಹೊರತಾದ ಯಾವುದೇ ಪಕ್ಷವೂ ಸದ್ಯದ ಪರಿಸ್ಥಿತಿಯಲ್ಲಿ ದೇಶಾದ್ಯಂತ ವಿರೋಧ ಪಕ್ಷಗಳ ನಾಯಕತ್ವವನ್ನು ವಹಿಸುವುದು ಸಾಧ್ಯವಿಲ್ಲ ಎಂದೂ ಹೇಳಿದರು.
ಜೆಡಿಎಸ್ ಮಾತ್ರವಲ್ಲ, ಇನ್ನೂ ಹಲವರು ಭಾಗವಹಿಸುತ್ತಿಲ್ಲ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಯೋಜಿಸಿರುವ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಜೆಡಿಎಸ್ ಭಾಗವಹಿಸುತ್ತದಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಕೇರಳದಲ್ಲಿ ಎಡಪಕ್ಷಗಳ ಜತೆಗೆ ಹೊಂದಾಣಿಕೆಯಲ್ಲಿದ್ದೇವೆ. ನಾವು ಎಡ ಪ್ರಜಾಸತ್ತಾತ್ಮಕ ರಂಗದ ಭಾಗವಾಗಿದ್ದೇವೆ, ಅವರಿಂದ ಸಂಬಂಧ ಕಡಿದುಕೊಂಡಿಲ್ಲ. ಅದೇ ಹೊತ್ತಿಗೆ, ನಿತೀಶ್ ಕುಮಾರ್ ಅವರು ಕರೆದಿರುವ ಸಭೆಯ ಒಟ್ಟಾರೆ ಫಲಿತಾಂಶವನ್ನು ಗ್ರಹಿಸುವುದು ಕಷ್ಟ. ಯಾಕೆಂದರೆ, ನಿತೀಶ್ ಕುಮಾರ್ ಅವರು ಇಂಥ ಪ್ರಯತ್ನಗಳನ್ನು ನಡೆಸುತ್ತಿರುವುದು ಇದು ಮೊದಲ ಸಲವೇನೂ ಅಲ್ಲ. ಹಿಂದಿನಂತೆಯೇ ಈ ಬಾರಿಯೂ ಅವರಿಗೆ ಹಲವು ಸವಾಲುಗಳಿವೆ. ಹಲವು ವಿರೋಧ ಪಕ್ಷಗಳು ಈ ಸಭೆಯಿಂದ ಅಂತರ ಕಾಯ್ದುಕೊಂಡಿವೆ. ಉದಾಹರಣೆಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಭೆಗೆ ಬರುವುದಿಲ್ಲ ಎಂದಿದ್ದಾರೆ. ಜೆಡಿಎಸ್ ಕೂಡಾ ಅದೇ ರೀತಿಯ ನಿರ್ಧಾರ ಮಾಡಿದೆ ಎಂದು ದೇವೇಗೌಡರು ಹೇಳಿದರು.
ಆದರೆ, ಕಳೆದ ವರ್ಷ ಎಚ್.ಡಿ. ಕುಮಾರಸ್ವಾಮಿ ಅವರು ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ಮೈತ್ರಿಯ ಬಗ್ಗೆ ಚರ್ಚೆ ಮಾಡಿದಂತಿದೆಯಲ್ಲ. ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಿತೀಶ್ ಕುಮಾರ್ ಅವರು ಬಿಜೆಪಿ ಜತೆಗಿನ ಸಂಬಂಧವನ್ನು ಮುರಿದುಕೊಂಡು ಆರ್‌ಜೆಡಿ ಜತೆಗಿನ ಮಹಾಘಟಬಂಧನ್‌ಗೆ ಮರು ಪ್ರವೇಶ ಮಾಡಿದ ಸಂದರ್ಭದಲ್ಲಿ ಭೇಟಿ ಮಾಡಿದ್ದು ನಿಜ. ಆಗ ನಿತೀಶ್ ಕುಮಾರ್ ಅವರು ಜೆಡಿಎಸ್‌ನ್ನು ಜೆಡಿಯು ಜತೆಗೆ ವಿಲೀನಗೊಳಿಸಿ ಮೂಲಕ ಜನತಾ ಪರಿವಾರದ ಮರುಸ್ಥಾಪನೆ ಮಾಡೋಣ ಎಂಬ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಆದರೆ, ನಾವು ಅದರನ್ನು ತಿರಸ್ಕರಿಸಿದೆವು. ನಮ್ಮ ಪಕ್ಷದ ಅನನ್ಯತೆಯನ್ನು ಉಳಿಸಿಕೊಳ್ಳುವುದು ನಮಗೆ ಮುಖ್ಯವಾಗಿತ್ತು. ನಾವು ನಿತೀಶ್ ಕುಮಾರ್ ಅವರ ಹೊಸ ಪ್ರಯತ್ನವನ್ನು ಬೆಂಬಲಿಸದಿರಲು ಇದೂ ಒಂದು ಕಾರಣ. ಅದಕ್ಕೀಗ ಕಾಲ ಪಕ್ವವಾಗಿಲ್ಲ ಎಂದರು ದೇವೆಗೌಡರು.
ಎಲ್ಲಾ ಪಕ್ಷಗಳಲ್ಲೂ ಬದಲಾವಣೆ ಗಾಳಿ ಬೀಸುತ್ತಿದೆ
ನೀವು ಈ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪರ್ಯಾಯವೊಂದರ ರಚನೆ ಪ್ರಯತ್ನದ ಮುಂಚೂಣಿಯಲ್ಲಿದ್ದವರು. ಈಗ ಹಿಂದೆ ಸರಿಯುತ್ತಿರುವಂತೆ ಕಾಣುತ್ತಿದೆಯಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಅತ್ಯಂತ ಹತ್ತಿರದಿಂದ ಗಮನಿಸುತ್ತಿದ್ದೇನೆ. ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರದ ಜನರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ನನಗೆ ಬೇಸರವಿದೆ. ಫಾರೂಕ್ ಅಬ್ದುಲ್ಲಾ ಅವರು ಇತ್ತೀಚೆಗೆ ಮಾತಿಗೆ ಸಿಕ್ಕಿದಾಗ ಅವರ ಬಳಿ ಚರ್ಚೆ ಮಾಡಿ ವಿಷಾದ ಸೂಚಿಸಿದೆ. ಶರದ್ ಪವಾರ್ ನೇತೃತ್ವದ ಎನ್‌ಸಿಪಿಯಲ್ಲೂ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲಿನ ಸರಿ ತಪ್ಪುಗಳ ಬಗ್ಗೆ ನಾನು ವಿಶ್ಲೇಷಣೆ ಮಾಡುವುದಿಲ್ಲ. ಇತ್ತೀಚೆಗೆ ಡಿ.ಎಂಕೆ ನಾಯಕ ವಿ. ಸೆಂಥಿಲ್ ಬಾಲಾಜಿ ಅವರನ್ನು ಇ.ಡಿ. ಬಂಧಿಸಿದೆ. ರಾಹುಲ್ ಗಾಂಧಿ ಅವರು ದೇಶದ ಒಳಗೆ ಮತ್ತು ಹೊರಗೆ ನೀಡುತ್ತಿರುವ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಮೇಲೆ ಪರಿಣಾಮ ಬೀರುತ್ತಿದೆ. ಆದರೆ, ಇದ್ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿ ನಾನಿಲ್ಲ. ನನಗೆ ಈಗ 91 ವರ್ಷ. ಸರಿಯಾಗಿ ನಡೆಯಲೂ ಆಗುತ್ತಿಲ್ಲ ಎಂದರು ದೇವೇಗೌಡರು.
ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳದ ಒಂದು ಪಕ್ಷ ತೋರಿಸಿ
ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳದ ಒಂದು ಪಕ್ಷ ತೋರಿಸಿ ಎಂದು ಇತ್ತೀಚೆಗೆ ನೀವು ಹೇಳಿದ್ದಿರಿ. ಇದು ಭಾರಿ ಚರ್ಚೆಗೆ ಕಾರಣವಾಗಿದೆ ಎಂಬ ಅಭಿಪ್ರಾಯಕ್ಕೆ ದೇವೇಗೌಡರು ಪ್ರತಿಕ್ರಿಯಿಸಿದರು.
ʻʻನಾನು ಸತ್ಯವನ್ನೇ ಮಾತನಾಡಿದ್ದೇನೆ. ಡಿಎಂಕೆ ಸುಮಾರು ಆರು ವರ್ಷಗಳ ಕಾಲ ಬಿಜೆಪಿಯನ್ನು ಬೆಂಬಲಿಸಿದೆ. ಅದು ನೇರವಾಗಿಯೇ ಇರಬಹುದು, ಪರೋಕ್ಷವಾಗಿಯೇ ಇರಬಹುದು. ಅಂತೆಯೇ ಬೇರೆ ಬೇರೆ ಪಕ್ಷಗಳು ಬೇರೆ ಬೇರೆ ಕಾಲದಲ್ಲಿ ಬಿಜೆಪಿ ಜತೆಗೆ ಕಾಣಿಸಿಕೊಂಡಿವೆ. ಕೆಲವು ಕಾಂಗ್ರೆಸ್ ನಾಯಕರೇ ಬಿಜೆಪಿ ಜತೆ ಶಾಮೀಲಾಗಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇದು ಸ್ಪಷ್ಟವಾಗಿದೆ. ಅಡಗಿಸಿ ಇಡುವಂತದ್ದು ಏನೂ ಇಲ್ಲ. ಈಗೀಗ ರಾಜಕೀಯದಲ್ಲಿ ನೈತಿಕತೆ ಎನ್ನುವ ಮಾತೇ ಆಡುವಂತಿಲ್ಲ! ಎರಡೂ ರಾಜಕೀಯ ಪಕ್ಷಗಳು ಅವಕಾಶವಾದಿ ರಾಜಕೀಯವನ್ನು ಆಚರಿಸುತ್ತಿವೆ. ಅವರು ಅಧಿಕಾರಕ್ಕೇರಲು ಪ್ರಾದೇಶಿಕ ಪಕ್ಷಗಳನ್ನು ಏಣಿಯಾಗಿ ಬಳಸುತ್ತವೆ, ಬಳಿಕ ಏಣಿಯನ್ನು ಒದೆಯುತ್ತವೆ ಎಂದರು ದೇವೇಗೌಡರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ನಡೆಯಲಿದೆ ಎಂಬ ಊಹಾಪೋಹ ಹುಟ್ಟಿಕೊಳ್ಳಲು ಏನು ಕಾರಣ ಎಂಬ ಪ್ರಶ್ನೆಗೂ ದೇವೇಗೌಡರು ಉತ್ತರಿಸಿದ್ದಾರೆ.
ಸುಮಾರು 20 ಪ್ರತಿಪಕ್ಷಗಳು ಸಂಸತ್ ಭವನದ ಉದ್ಘಾಟನೆಗೆ ಬಹಿಷ್ಕಾರ ಹಾಕಿದಾಗಲೂ ನಾನು ಭಾಗವಹಿಸಿದ್ದೆನಲ್ಲ, ಅದು ಮುಖ್ಯ ಕಾರಣ ಅಂತ ನನಗೆ ಅನಿಸುತ್ತದೆ. ಹಲವು ರಾಜಕೀಯ ನಾಯಕರು ನನಗೆ ಪತ್ರ ಬರೆದು ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ ಎಂದು ಮನವಿ ಮಾಡಿದರು. ಆದರೆ, ನಾನು ಅವರ ಮಾತಿಗೆ ಮನ್ನಣೆ ನೀಡಲಿಲ್ಲ. ನಾನು ನನ್ನ 60 ವರ್ಷಗಳ ರಾಜಕೀಯದಲ್ಲಿ ನನ್ನ ವಿವೇಚನಾ ಅಧಿಕಾರವನ್ನು ಕಾಯ್ದಿಟ್ಟುಕೊಂಡಿದ್ದೇನೆ. ನಾನೇನೂ ಆರೆಸ್ಸೆಸ್ ಕಚೇರಿ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದಲ್ಲವಲ್ಲ. ಸಂಸದರಿಗೆ ಹೆಚ್ಚು ಜಾಗ ನೀಡುವ ಪ್ರಜಾಸತ್ತಾತ್ಮಕವಾಗಿಯೇ ಆಯೋಜಿಸಲಾದ ಕಾರ್ಯಕ್ರಮ ಅದಾಗಿತ್ತು ಎಂದು ದೇವೇಗೌಡರು ಹೇಳಿದ್ದಾರೆ.
ನೀವು ನಿಮ್ಮ ಇಡೀ ಜೀವನದಲ್ಲಿ ಜಾತ್ಯತೀತ ಮೌಲ್ಯಗಳ ಪರವಾಗಿ ನಿಂತವರು. ನಿಮ್ಮ ಪಕ್ಷದ ಹೆಸರೇ ಜಾತ್ಯತೀತ ಜನತಾದಳ. ನಿಮ್ಮ ಈ ನಿಲುವು ಇನ್ನೂ ಹಾಗೆಯೇ ಮುಂದುವರಿಯುತ್ತದಾ? ಎಂದು ಕೇಳಿದಾಗ, ಜಾತ್ಯತೀತ ಪ್ರಜಾಸತ್ತೆಯ ಮೇಲಿನ ನನ್ನ ನಂಬಿಕೆಯನ್ನು, ಬದ್ಧತೆಯನ್ನು ಯಾರೂ ಪ್ರಶ್ನೆ ಮಾಡುವ ಹಾಗೇ ಇಲ್ಲ. ಆದರೆ ನನ್ನದೂ ಒಂದು ಪ್ರಶ್ನೆ ಇದೆ. ಈ ದೇಶದಲ್ಲಿ ಬಿಜೆಪಿ ಬೆಳೆಯಲು ಕಾರಣರಾದವರು ಯಾರು? ಅದರಲ್ಲೂ ಮುಖ್ಯವಾಗಿ ಬಿಜೆಪಿಯನ್ನು ಬೆಳೆಸಿದ್ದು ಯಾರು? 2018ರಲ್ಲಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರವನ್ನು ಉರುಳಿಸಿದ್ದು ಯಾರು ಎಂದು ಕೇಳಬೇಕಲ್ಲವೇ? ಎಂದಿದ್ದಾರೆ ದೇವೇಗೌಡರು.
ಜೆಡಿಎಸ್ ಪಕ್ಷ ಯಾವತ್ತೂ ಆ ಪಕ್ಷವೋ ಈ ಪಕ್ಷವೋ ಎಂದು ಕಾದುಕೊಂಡು ರಾಜಕೀಯ ಮಾಡಿಲ್ಲ. ನಾವೀಗ ಸ್ಥಳೀಯ ಮತ್ತು ಲೋಕಸಭಾ ಚುನಾವಣೆಗ ಸಿದ್ಧರಾಗುತ್ತಿದ್ದೇವೆ ಎಂದು ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Nalin Kumar Kateel : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮನೆಯಲ್ಲಿ ಹೋಮ; ಏನಿದರ ರಹಸ್ಯ?
hd-devegowda-hints-at-understanding-with-bjp-in-parliament-election