ಬೆಂಗಳೂರು: ಯಾವುದೇ ವಿಷಯದಲ್ಲಿ ಯಾರೇ ಮಿತಿಯನ್ನು ಮೀರಿದರೆ ನಮ್ಮ ದೇಶದ ಜನ ಮೌನವಾಗಿಯೇ ಅವರನ್ನು ಈ ಮಹಾನ್ ಮನೆಯಿಂದ ಹೊರಗಟ್ಟುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಪರೋಕ್ಷವಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ನೂತನ ಸಂಸತ್ ಭವನ ಉದ್ಘಾಟನೆಗೆ ಅನೇಕ ರಾಜಕೀಯ ಪಕ್ಷಗಳು ಬಹಿಷ್ಕಾರ ಹಾಕಿದ್ದರೂ ಎಚ್.ಡಿ. ದೇವೇಗೌಡ ಹಾಗೂ ಮೊಮ್ಮಗ ಪ್ರಜ್ವಲ್ ರೇವಣ್ಣ ಭಾಗವಹಿಸಿದ್ದರು. ಭಾಗವಹಿಸಿದ ನಂತರ ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಈ ಮಹಾನ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿರುವುದಕ್ಕೆ ಸಂತಸವಾಗುತ್ತಿದೆ. 32 ವರ್ಷದ ಹಿಂದೆ ಸಂಸತ್ ಪ್ರವೇಶಿಸಿದಾಗ, ಮುಂದೊಂದು ದಿನ ಪ್ರಧಾನಿಯಾಗುವೆ ಎಂದು ಊಹಿಸಿರಲಿಲ್ಲ. ಇಷ್ಟು ವರ್ಷ ಸಾರ್ವಜನಿಕ ಜೀವನದಲ್ಲಿರುವೆ ಎಂದೂ ನಿರೀಕ್ಷಿಸಿರಲಿಲ್ಲ. ಹೊಸ ಸಂಸತ್ ಭವನದಲ್ಲಿ ಕೂರುತ್ತೇನೆ ಎಂದಂತೂ ಯೋಚಿಸಿಯೂ ಇರಲಿಲ್ಲ.
These are my thoughts after participating in the inauguration of the new Parliament building, today. pic.twitter.com/hc5HIYTY3P
— H D Devegowda (@H_D_Devegowda) May 28, 2023
ಸಾಮಾನ್ಯ ನಾಗರಿಕನಾಗಿ, ಹೊಸ ಮನೆ ಪ್ರವೇಶಿಸುವುದು ಅತ್ಯಂತ ಪವಿತ್ರ ಸಂದರ್ಭ. ದೇಶದ ವಿಚಾರದಲ್ಲೂ ಇದು ವಿಶೇಷ ಕಾರ್ಯಕ್ರಮ. ಹಿಂದೆ ಸಂಸತ್ ಭವನ ಉದ್ಘಾಟನೆಯಾದಾಗ ನಾವಿನ್ನೂ ವಸಾಹತುಶಾಹಿ ಆಡಳಿತದಲ್ಲಿದ್ದೆವು, ತಾವು ಶಾಶ್ವತವಾಗಿ ಈ ದೇಶವನ್ನು ಆಳುತ್ತೇವೆ ಎಂದು ಭಾವಿಸಿದ್ದ ಬ್ರಿಟಿಷರು ದೇಶದ ವಿವಿಧೆಡೆ ಮಹಾನ್ ಕಟ್ಟಡಗಳನ್ನು ಕಟ್ಟಿದರು. ಆದರೆ ಮಹಾತ್ಮಾ ಗಾಂಧಿಯಿಂದ ಮೊದಲುಗೊಂಡು ಎಲ್ಲರ ಪರಿಶ್ರಮದಿಂದಾಗಿ ಸ್ವಾತಂತ್ರ್ಯದ ಮಾರ್ಗವನ್ನು ಹಿಡಿದೆವು. ಸ್ವಾತಂತ್ರ್ಯಾನಂತರವೂ ಅನೇಕರು ದೇಶದ ಅಸ್ಮಿತೆಯನ್ನು ಜಾಗೃತವಾಗಿರಿಸಿದರು. ನಾವು ರಕ್ತಪಾತದ ಕ್ರಾಂತಿಯನ್ನು ಕಂಡಿಲ್ಲ. ನಾವು ಅಹಿಂಸಾತ್ಮಕ ಮತ್ತು ಶಾಂತಿಯ ಮಾರ್ಗದಿಂದ ರಾಷ್ಟ್ರವಾದೆವು. ಇದೇ ನಮ್ಮ ಪರಂಪರೆ. ಇದನ್ನೇ ಸಂರಕ್ಷಿಸಿ ನಮ್ಮ ಮುಂದಿನ ಪೀಳಿಗೆಗೂ ಹಸ್ತಾಂತರಿಸಬೇಕಿದೆ.
ಸ್ವಾತಂತ್ರ್ಯಾನಂತರದಲ್ಲಿ ಈ ಸಂಸತ್ತು ಅಹಂಕಾರ ಹಾಗೂ ವಿಧೇಯತೆ, ಸೋಲು ಹಾಗೂ ಗೆಲುವುಗಳಂತೆ ಅನೇಕ ಏರಿಳಿತಗಳನ್ನು ಕಂಡಿದೆ. ಇದೆಲ್ಲದರ ನಡುವೆಯೇ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಸಮತೋಲನವನ್ನು ಕಾಯ್ದುಕೊಂಡಿದೆ. ಸಂಸತ್ ಭವನವು ಎಲ್ಲ ವಿಚಾರ, ವೈವಿದ್ಯಗಳನ್ನೂ ಗೌರವಿಸಿದೆ. ವೈವಿದ್ಯತೆಯನ್ನು ಕಾಪಾಡಿಕೊಳ್ಳುವುದಕ್ಕಿಂತಲೂ ದೊಡ್ಡ ಗುರಿ ನಮ್ಮ ಮುಂದೆ ಇನ್ನೊಂದಿಲ್ಲ.
ಭಾರತದ ಜನರು ಎಂದೂ ಜಾಗರೂಕರಾಗಿದ್ದಾರೆ ಹಾಗೂ ಬುದ್ಧಿವಂತರಿದ್ದಾರೆ. ಯಾವಾಗಲೇ ಆಗಲಿ, ಯಾರೇ ಆದರೂ ಅತಿಯಾದುದ್ದನ್ನು ಮಾಡುವುದನ್ನು ಕಂಡರೆ ಹಾಗೂ ನಮ್ಮ ದೇಶದ ಸಮತೋಲನವನ್ನು ಅಲುಗಾಡಿಸಲು ಯತ್ನಿಸಿದರೆ, ಈ ಮಹಾನ್ ಮನೆಯಿಂದ ಅಂಥವರನ್ನು ಮೌನವಾಗಿ ಹೊರಗೆ ಕಳಿಸಿದ್ದಾರೆ. ನಾವೆಲ್ಲ ಸಾಮಾಜಿಕ ಸೇವಕರಿಗೆ ಅತ್ಯಂತ ಕಠಿಣ ಪಾಠಗಳನ್ನು ಜನರು ಕಲಿಸಿದ್ದಾರೆ. ಹೊಸ ಸಂಸತ್ ಭವನ ಉದ್ಘಾಟನೆ ಸಂದರ್ಭದಲ್ಲಿ ಎಲ್ಲ ದೇಶವಾಸಿಗಳಿಗೆ ನಮಿಸುತ್ತೇನೆ.
ನಮ್ಮ ವೈಭವಯುತ ಪ್ರಜಾತಾಂತ್ರಿಕ ಸಂಪ್ರದಾಯ ಮುಂದುವರಿಯಲಿ ಹಾಗೂ ಸಮಯ ಕಳೆದಂತೆ ಇನ್ನಷ್ಟು ಉತ್ಕೃಷ್ಟವಾಗಲಿ, ದೇಶವು ಎಲ್ಲ ಕೋನಗಳಿಂದಲೂ ಪ್ರಜ್ವಲಿಸುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ಇದನ್ನೂ ಓದಿ: New Parliament: ನೂತನ ಸಂಸತ್ ಭವನ ಉದ್ಘಾಟನೆ ಬಹಿಷ್ಕಾರಕ್ಕೆ ಸೆಡ್ಡು ಹೊಡೆದ ಎಚ್.ಡಿ. ದೇವೇಗೌಡರು: ತೆರಳಲು ನಿರ್ಧಾರ