ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಮಾಡುವುದಿಲ್ಲ. ಈ ಕುರಿತು ಅವರಿಗೆ ಒಲವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಬಿಬಿಎಂಪಿ ಚುನಾವಣೆ ಹಾಗೂ ಜನತಾ ಮಿತ್ರ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಶುಕ್ರವಾರ(ಜೂನ್ 17) ಸಂಜೆ ನಡೆದ ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದರು.
ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಚರ್ಚೆ ಆಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಮ್ಮ ಕುಟುಂಬದ ಬಗ್ಗೆ ಗೌರವ ಇಟ್ಟು ಸಭೆಗೆ ಆಹ್ವಾನ ನೀಡಿದ್ದರು. 17 ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಆ ಸಭೆಯಲ್ಲಿ ಯಾವುದೇ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಜೂನ್ 20ರಂದು ಮತ್ತೊಂದು ಸುತ್ತಿನ ಸಭೆ ಇದೆ. ಅಂದು ಅಭ್ಯರ್ಥಿ ಆಯ್ಕೆ ಅಂತಿಮ ಮಾಡಲಾಗುತ್ತದೆ.
ರಾಷ್ಟ್ರಪತಿ ಚುನಾವಣೆಗೆ ದೇವೇಗೌಡರ ಹೆಸರು ಪ್ರಸ್ತಾಪವೇ ಆಗಿಲ್ಲ. ಜೀವನದಲ್ಲಿ ಒಮ್ಮೆ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಸ್ವತಂತ್ರ ಸರ್ಕಾರ ಬರಬೇಕು ಎಂಬ ಆಸೆ ದೇವೇಗೌಡರಿಗೆ ಇದೆ. ಸ್ವತಂತ್ರ ಸರ್ಕಾರದ ಬಗ್ಗೆ ಅವರ ಆಸೆ ಪೂರೈಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಆದರ ಹೊರತಾಗಿ, ರಾಷ್ಟ್ರಪತಿ ಹುದ್ದೆಯ ಬಗ್ಗೆ ದೇವೇಗೌಡರ ಒಲವು ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ | ರಾಷ್ಟ್ರಪತಿ ಚುನಾವಣೆ ನಿರ್ವಹಣಾ ತಂಡ ರಚಿಸಿದ ಬಿಜೆಪಿ; ಶೇಖಾವತ್, ಸಿ ಟಿ ರವಿ ಸೇರಿ 14 ನಾಯಕರಿಗೆ ಜವಾಬ್ದಾರಿ
ಜನತಾ ಮಿತ್ರ ಕಾರ್ಯಕ್ರಮ:
ಬೆಂಗಳೂರಿನ ಸಮಸ್ಯೆಗಳು, ದೇವೇಗೌಡರು, ಹಾಗೂ ತಮ್ಮ ಅವಧಿಯಲ್ಲಿ ನಗರಕ್ಕೆ ನೀಡಿದ ಕೊಡುಗೆ ಏನು? ಎಂಬುದರ ಬಗ್ಗೆ ತಿಳಿಸಿಕೊಡಲು ಜುಲೈ 1 ರಿಂದ 17 ದಿನಗಳ ಕಾಲ ಬೆಂಗಳೂರಿನಲ್ಲಿ ಜನತಾ ಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. 15 LED ವಾಹನಗಳು ಬೆಂಗಳೂರಿನಲ್ಲಿ ಸಂಚಾರ ಮಾಡುತ್ತವೆ ಎಂದು ಕುಮಾರಸ್ವಾಮಿ ತಿಳಿಸಿದರು.
ಕಾಂಗ್ರೆಸ್- ಬಿಜೆಪಿ ಸರ್ಕಾರದಲ್ಲಿ ಆಗಿರುವ ಅನ್ಯಾಯ, ಅಕ್ರಮಗಳು, ಸಮಸ್ಯೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಮಳೆ ಬಂದರೆ ಏನು ಸಮಸ್ಯೆ ಆಗುತ್ತದೆ ಎಂಬುದನ್ನು ಬೆಂಗಳೂರಿನಲ್ಲಿ ನೋಡಿದ್ದೇನೆ. ಈ ಎಲ್ಲಾ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರತಿ ರಸ್ತೆಗಳು, ಮನೆಗಳಿಗೆ ಭೇಟಿ ಕೊಡುತ್ತೇವೆ. ಮನೆ ಮನೆಗೆ ಕರಪತ್ರ ಹಂಚಿಕೆ ಮಾಡುತ್ತೇವೆ. ನಾಗರಿಕರು, ಮಹಿಳೆಯರು, ಯುವಕರು ಏನು ನಿರೀಕ್ಷೆ ಮಾಡಿದ್ದಾರೆ ಎನ್ನುವ ಮಾಹಿತಿ ಸಂಗ್ರಹ ಮಾಡುತ್ತೇವೆ. ಜನರು ಕೊಡುವ ಸಲಹೆ ಸ್ವೀಕಾರ ಮಾಡುತ್ತೇವೆ ಎಂದು ಹೇಳಿದರು.
ಬೃಹತ್ ಅಭಿಯಾನ
ನಮಗೆ ಒಂದು ಬಾರಿ ಅವಕಾಶ ಕೊಡಿ ಎಂದು ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲೂ ಸಂಚರಿಸಿ ಅಭಿಯಾನ ಮಾಡುತ್ತೇವೆ. ಕೊನೆ ದಿನ, ಅಂದರೆ ಜುಲೈ 17ರಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.
ಈಗಲ್ ಟನ್ ಚರ್ಚೆಗೆ ಸಿದ್ಧ
ಈಗಲ್ ಟನ್ ರೆಸಾರ್ಟ್ ಬಾಕಿ ಇರುವ ವಿಚಾರವಾಗಿ ಎಸಿಬಿಗೆ ದೂರು ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಕಷ್ಟಪಟ್ಟು ಬೆವರು ಸುರಿಸಿದ ಹಣದಲ್ಲಿ ಗಾಲ್ಫ್ ಕ್ಲಬ್ ಮಾಡಿದ್ದಾರೆ. ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಮೀರಿ ಸರ್ಕಾರ ಮತ್ತು ಸಿಎಂಗಳು ಕೆಲಸ ಮಾಡಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದೇನೆ. ಈಗಲ್ ಟನ್ ವಿಚಾರವಾಗಿ ಎಲ್ಲೇ ಚರ್ಚೆಗೂ ಕರೆದರೂ ಬರುತ್ತೇನೆ. ಇದರ ಬಗ್ಗೆ ನಾನು ಚರ್ಚೆ ಮಾಡುವುದಕ್ಕೆ ಸಿದ್ದ ಎಂದು ಅವರು ಹೇಳಿದರು.
ಇದನ್ನೂ ಓದಿ | JDSಗೆ ಕೈಕೊಟ್ಟ ʼಶ್ರೀನಿವಾಸʼರು: H.D. ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರು