ಹಾಸನ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು (HD Devegowda) ಇನ್ನೂ ಏಳೆಂಟು ವರ್ಷ ಬದುಕಿರುತ್ತಾರೆ. ದೇವೇಗೌಡರನ್ನು ಕರೆದುಕೊಂಡು ಮತ್ತೆ ಪಾರ್ಲಿಮೆಂಟ್‌ಗೆ ಹೋಗಿಯೇ ಹೋಗುತ್ತೇವೆ. ಅವರನ್ನು ಲೋಕಸಭೆಗೆ (LokSabha Election) ಸ್ಪರ್ಧೆ ಮಾಡಿಸುತ್ತೇವೆ. ಯಾವ ಕ್ಷೇತ್ರ ಅಂತ ಮುಂದೆ ನೋಡೋಣ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ಹೇಳಿದರು.
ಮಂಗಳವಾರ (ಮೇ 16) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ. ರೇವಣ್ಣ, ದೇವೇಗೌಡರಿಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ. ಅವರು ಸ್ಪರ್ಧೆ ಮಾಡುವುದಿಲ್ಲ ಎಂದರೂ ನಾವು ಬಿಡುವುದಿಲ್ಲ. ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿಸಿ, ಗೆಲ್ಲಿಸಿ ಸಂಸತ್‌ಗೆ ಕಳುಹಿಸುತ್ತೇವೆ. ಆದರೆ, ಹಾಸನ ಜಿಲ್ಲೆಯಿಂದ ಲೋಕಸಭೆ ಚುನಾವಣೆಗೆ ಪ್ರಜ್ವಲ್ ರೇವಣ್ಣನೇ ಸ್ಪರ್ಧೆ ಮಾಡುತ್ತಾನೆ ಎಂದು ಹೇಳಿದರು.
ಇದನ್ನೂ ಓದಿ: Karnataka Election 2023: 50:50 ಫಾರ್ಮುಲಾ ಓಕೆ, ಆದರೆ ಮೊದಲು ನಾನು; ಇದು ಸಿದ್ದು-ಡಿಕೆಶಿ ಹೊಸ ವಾದ
ಹಾಸನ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನು ಮಾಡಬೇಕು ಅಂತ ನನ್ನ ಆಸೆ ಇದೆ. ನಾನು ಬದುಕಿರುವುದರೊಳಗೆ ಮಾಡಿ ತೋರಿಸುತ್ತೇನೆ. ಐದು ವರ್ಷಕ್ಕೆ ಮಾಡುತ್ತೇನೆಯೋ? ಹತ್ತು ವರ್ಷಕ್ಕೆ ಮಾಡುತ್ತೇನೆಯೋ ಗೊತ್ತಿಲ್ಲ. ಇಡಿ ರಾಜ್ಯದಲ್ಲಿ ಹಾಸನ ಜಿಲ್ಲೆಯನ್ನು ನಂಬರ್ ಒನ್ ಮಾಡಿ ತೋರಿಸುತ್ತೇನೆ. ಇಲ್ಲವಾದಲ್ಲಿ ಇನ್ನೊಂದು ಸಾರಿ ರಾಜಕೀಯಕ್ಕೆ ಬರಲ್ಲ. ಕಾಂಗ್ರೆಸ್‌ನವರು ಮಾಡಿ ಕೊಟ್ಟರೆ ಸಂತೋಷ. ಇಲ್ಲವಾದರೆ ನಮಗೂ ಟೈಂ ಬರುತ್ತದೆ. ನನ್ನ ಗ್ರಹಗತಿಗಳು ಇನ್ನೂ ಚೆನ್ನಾಗಿವೆ ಎಂದು ಎಚ್.ಡಿ. ರೇವಣ್ಣ ಹೇಳಿದರು.
ಪ್ರೀತಂ ಗೌಡಗೆ ಪರೋಕ್ಷ ಟೀಕೆ
ಹಾಸನದಲ್ಲಿ ಸ್ವರೂಪ್ ಗೆದ್ದಿದ್ದು, ಕೆಲಸ ಮಾಡುತ್ತಾರೆ. ಅವರ ಜತೆ ನಾನು ನಿಲ್ಲುತ್ತೇನೆ. ಸಂಸದರು ನಿಲ್ಲುತ್ತಾರೆ. ಅವರ ತಂದೆ ಹೇಗೆ ಕೆಲಸ ಮಾಡಿದ್ದರೋ ಅದೇ ರೀತಿ ಕೆಲಸ ಮಾಡುತ್ತಾರೆ. ಜನರಿಗೆ ತೊಂದರೆಯಾಗದಂತೆ ಒಳ್ಳೆಯ ಕೆಲಸವನ್ನು ಮಾಡುತ್ತಾರೆ. ಪ್ರಕಾಶ್ ನಾಲ್ಕು ಭಾರಿ ಶಾಸಕರಾಗಿದ್ದರು. ಅವರ ಮಗನನ್ನು ಜನ ಗೆಲ್ಲಿಸುವ ಮೂಲಕ ಪ್ರಕಾಶ್ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಐವತ್ತು ಸಾವಿರ ವೋಟ್‌ನಲ್ಲಿ ಗೆಲ್ಲುತ್ತೇನೆ ಎಂದು ಕೆಲವರು ಹೇಳೋರು. ಒಂದು ಲಕ್ಷ ಮತ ಪಡೆದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು ಎಂದು ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ಎಚ್.ಡಿ. ರೇವಣ್ಣ ಅವರು ಪರೋಕ್ಷ ವಾಗ್ದಾಳಿ ನಡೆಸಿದರು.
ಬಿಜೆಪಿಯ ಮುಖಂಡರೇ ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಮುಖಂಡರು ಹಳೇ ಮೈಸೂರಿಗೆ ಬಂದು ಪ್ರಾದೇಶಿಕ ಪಕ್ಷವನ್ನು ಮುಗಿಸಲು ಕಾಂಗ್ರೆಸ್‌ಗೆ ಸಹಾಯ ಮಾಡಿದರು. ಅವರಿಗೆ ಕಾಂಗ್ರೆಸ್ ಮುಖಂಡರು ಧನ್ಯವಾದ ಹೇಳಲಿ. ನಾನು ವೋಟು ಕೇಳಲು ಹೋಗಿಲ್ಲ, ಜನ ನನ್ನನ್ನು ಉಳಿಸಿಕೊಂಡಿದ್ದಾರೆ. ಇನ್ನೂ ಐದು ವರ್ಷ ಇದೆ, ಎಲ್ಲವನ್ನೂ ಸರಿ ಮಾಡಿಕೊಳ್ಳುತೇನೆ. ಆರು ಭಾರಿ ನನ್ನನ್ನು ಜನ ಗೆಲ್ಲಿಸಿದ್ದಾರೆ. ಎರಡು ರಾಷ್ಟ್ರೀಯ ಪಕ್ಷದ ಮುಖಂಡರು ನನ್ನನ್ನು ಮುಗಿಸಲು ಯತ್ನಿಸಿದ್ದರು. ನನಗೆ ಎಷ್ಟು ವೋಟು ಬರಬೇಕೋ ಅದು ಬಂದಿದೆ. ಕಡಿಮೆ ಏಕೆ ಆಯ್ತು ಅಂತ ನನಗೆ ಗೊತ್ತಿದೆ. ಅದನ್ನು ಹೇಗೆ ಸರಿ ಮಾಡಿಕೊಳ್ಳಬೇಕು ಅನ್ನೋದು ಗೊತ್ತಿದೆ. ಇನ್ನೂ ಐದು ವರ್ಷ ಟೈಂ ಇದೆ ಎಂದು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗೇ ಆಗ್ತಾನೆ; ಇಲ್ಲದಿದ್ದರೆ ಮೀಸೆ ಬೋಳಿಸ್ತೀನಿ ಅಂದ ಮೀಸೆಯೇ ಇಲ್ಲದ 3 ವರ್ಷದ ಬಾಲಕ!
ಕಾಂಗ್ರೆಸ್‌ನಲ್ಲಿ ಯಾರೇ ಸಿಎಂ ಆದರೂ ಸ್ವಾಗತಿಸುತ್ತೇನೆ
ಸಿಎಂ ಯಾರೇ ಆದರೂ ಸ್ವಾಗತ ಮಾಡುತ್ತೇನೆ. ಯಾರೇ ಆದರೂ ರಾಜ್ಯದ ಅಭಿವೃದ್ಧಿ ಮಾಡಲಿ. ಬಿಜೆಪಿ ಅಧಿಕಾರದಿಂದ ಇಳಿಯಬೇಕಾದರೆ ಶಾಕ್ ಕೊಟ್ಟಿದ್ದಾರೆ. ವಿದ್ಯುತ್ ದರ ಹೆಚ್ಚಿಸಿದ್ದಾರೆ, ಅದನ್ನು ಇಳಿಕೆ ಮಾಡಲಿ. ಕಾಂಗ್ರೆಸ್‌ನವರು ಕೊಟ್ಟಿರುವ ಗ್ಯಾರಂಟಿ ಕಾರ್ಡ್ ಅನ್ನು ಈಡೇರಿಸಲಿ. ನನಗೆ ಸಿದ್ದರಾಮಯ್ಯ ಅವರ ಮೇಲೆ ವೈಯಕ್ತಿಕವಾಗಿ ಗೌರವವಿದೆ. ವೈಯುಕ್ತಿಕ ಬೇರೆ, ರಾಜಕೀಯ ಬೇರೆ. ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು ತಮ್ಮ ಜಿಲ್ಲೆಯಲ್ಲಿ ಒಂದೇ ಒಂದು ಸ್ಥಾನವನ್ನು ಗೆದ್ದಿದ್ದಾರೆ. ರೇವಣ್ಣ ಕ್ಷೇತ್ರದಲ್ಲಿ ನಾಲ್ಕು ಸ್ಥಾನವನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ವಾಲ್ಮೀಕಿ ಸಮುದಾಯದ ಪ್ರಮುಖ ಲೀಡರ್ ಶ್ರೀರಾಮುಲು ಇಪ್ಪತ್ತು ಸಾವಿರ ಮತದಿಂದ ಸೋತಿದ್ದಾರೆ ಎಂದು ರೇವಣ್ಣ ವ್ಯಂಗ್ಯವಾಡಿದರು.