Site icon Vistara News

HD Kumaraswamy: ನನ್ನ ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು ಎಂದ ಎಚ್‌ಡಿಕೆ

HD Kumaraswamy

ಬೆಂಗಳೂರು: ನನಗೆ ಭಯ ಶುರುವಾಗಿದೆಯಾ? ನನ್ನ ನೋಡಿದರೆ ಹಾಗೆ ಅನಿಸುತ್ತಾ? ಸಿಎಂ ಕಳೆದ ವಾರದಿಂದ ಹೇಗೆ ನಡೆದುಕೊಡಿದ್ದಾರೆ ನೋಡಿದ್ದೀರಲ್ಲಾ? ಮೈಸೂರಿನ ದಾಖಲೆ ಇದೆಯಲ್ಲ. ಮುಡಾ ಆಸ್ತಿಯನ್ನು ನನ್ನ ಆಸ್ತಿ ಅಂತ ಹೇಳುತ್ತಿದ್ದಾರೆ. ಇಂತಹ ಬಂಡತನ ಯಾವ ಸಿಎಂ ಕೂಡ ತೋರಿಲ್ಲ. ನನ್ನ ಬಂಧನ ಮಾಡೋಕೆ ನೂರು ಸಿದ್ದರಾಮಯ್ಯ ಬರಬೇಕು ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದರು.

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಕಂಪನಿಗೆ ನಿಯಮ ಉಲ್ಲಂಘಿಸಿ ಗಣಿಗಾರಿಕೆ ಗುತ್ತಿಗೆ ಮುಂಜೂರು ಮಾಡಿದ್ದ ಆರೋಪ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಗೆ ಲೋಕಾಯುಕ್ತ ಸಿದ್ಧತೆ ನಡೆಸುತ್ತಿರುವ ಬಗ್ಗೆ ಕೇಂದ್ರ ಸಚಿವರು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಅಗತ್ಯ ಬಿದ್ರೆ ಕುಮಾರಸ್ವಾಮಿ ಬಂಧನ ಮಾಡುತ್ತೇವೆ ಎಂಬ ಸಿಎಂ ಹೇಳಿಕೆಗೆ ಕಿಡಿಕಾರಿರುವ ಅವರು, ನನಗೆ ಯಾವುದೇ ಭಯ ಇಲ್ಲ, ನನ್ನ ಬಂಧನ ಮಾಡೋಕೆ ನೂರು ಸಿದ್ದರಾಮಯ್ಯ ಬರಬೇಕು ಎಂದು ಹೇಳಿದರು.

ನನ್ನ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ಅನುಮೋದನೆಗೆ ಕೋರಿದ್ದಾರೆ. ಅನುಮತಿ ಕೋರಿರೋದು 2023 ನವೆಂಬರ್‌ನಲ್ಲಿ. ಸುಮಾರು ಹತ್ತು ತಿಂಗಳಾಗಿದೆ. ಆದರೆ ನೆನ್ನೆ ಬೆಳಗ್ಗೆಯಿಂದ ಸಂಜೆವರೆಗೂ ಕುಮಾರಸ್ವಾಮಿಗೆ ಮತ್ತೆ ಗಣಿ ಸಂಕಷ್ಟ ಶುರುವಾಗಿದೆ ಅಂತ ವರದಿಗಳು ಬರುತ್ತಿವೆ. 2023ರ ಜುಲೈನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಬಂದಾಗಲೇ ವರ್ಗಾವಣೆ ದಂಧೆಗೆ ಮುಂದಾದರು. ಅದರ ಬಗ್ಗೆ ನಾನು‌ ವಾಗ್ದಾಳಿ ನಡೆಸಿದೆ, ಇದರಿಂದ ಸರ್ಕಾರಕ್ಕೆ‌ ಮುಜುಗರ ಆಯಿತು, ಆಗ ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ಅಂತೆಲ್ಲಾ ಹೇಳಿದರು ಎಂದು ಟೀಕಿಸಿದರು.

ಇದನ್ನೂ ಓದಿ | PM Modi US Visit : ಸೆಪ್ಟೆಂಬರ್‌ನಲ್ಲಿ ಅಮೆರಿಕ ಪ್ರವಾಸ ಮಾಡಲಿದ್ದಾರೆ ಮೋದಿ; ಅಮೆರಿಕ ಚುನಾವಣೆ ನಡುವೆ ಕುತೂಹಲ ಮೂಡಿಸಿದೆ ಅವರ ಭೇಟಿ

ನಾನು 2006ರಲ್ಲಿ ಸಿಎಂ‌ ಆದ ಆರು ತಿಂಗಳಲ್ಲಿ ನನ್ನ ಮೇಲೆ ಆರೋಪ ಬಂದಿತ್ತು. ಗಣಿ ಇಲಾಖೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ್ದರು. ನನಗೆ ಬೆಂಬಲ ನೀಡಿದ ಶಾಸಕನ ಮೇಲೆ ಆರೋಪಗಳು ಬರಲು ಶುರುವಾಯಿತು. ವಿಪಕ್ಷ ಆಗಿದ್ದ ಕಾಂಗ್ರೆಸ್ ನನ್ನನ್ನು ಸಿಲುಕಿಸಲು ಹೊರಟಿತು. ನಾನು ಶಾಸಕರ ಸಂಖ್ಯೆ ಬೆಂಬಲ ಪಡೆಯಲ್ಲ. ಹೋರಾಟ ಶುರು ಮಾಡಿ, ಸದನದಲ್ಲಿ ಚರ್ಚೆ ಮಾಡಿ ಅಂತ ಹೇಳಿದ್ದೆ. ಅದಾದ ಮೇಲೆ ಯಾರೂ ಕೋರ್ಟ್‌ಗೆ ಅರ್ಜಿ ಹಾಕಲಿಲ್ಲ. ಅಂದಿನ ಲೋಕಾಯುಕ್ತಾಗೆ ಗಣಿಗೆ ಸಂಬಂಧಿಸಿದ ದಾಖಲೆ ನೀಡಿದ್ದೆ ಎಂದು ಹೇಳಿದರು.

ಗಣಿ ಅಕ್ರಮ ಪ್ರಕರಣದ ಬಗ್ಗೆ ಲೋಕಾಯುಕ್ತ 2011ರಲ್ಲಿ ವರದಿ ನೀಡಿತ್ತು. ಎರಡು ಮೂರು ಟ್ರಂಕ್‌ಗಳಲ್ಲಿ ವರದಿ ತಂದುಕೊಟ್ಟರು. ಅದರಲ್ಲಿ ಮೂರು ನಾಲ್ಕು ಸಿಎಂ ವರದಿ ಸೇರಿತ್ತು. ಎಸ್.ಎಂ ಕೃಷ್ಣ, ಧರ್ಮಸಿಂಗ್, ನನ್ನ ಮೇಲೆ ವರದಿ ನೀಡಿದರು. ಆ ವರದಿಯಲ್ಲಿ ಅಂದಿನ ಸಿಎಂ ಪ್ರಕರಣದಲ್ಲಿ ಮಿಸ್ ಕಂಡಕ್ಟ್ ರಿಪೋರ್ಟ್‌ ಇತ್ತು. ಅವರ ಮೇಲೆ ಯಾವ ರೀತಿಯ ಆಕ್ಷನ್ ಆಗಬೇಕು ಅಂತ ಒತ್ತಾಯ ಮಾಡಲ್ಲ ಅಂತ ಲೋಕಾಯುಕ್ತ ವರದಿ ನೀಡಿದ್ದರು.

ನಮ್ಮಲ್ಲಿ 28 ಶಾಸಕರು ಮಾತ್ರ ಇದ್ದರು. ಆಗಲೂ ಜನತೆ ಮುಂದೆ ದಾಖಲೆ ಇಟ್ಟಿದ್ದೆ. ಆ ಸಂಘರ್ಷದಲ್ಲಿ ನನ್ನ ಮೇಲೆ ವೈಯಕ್ತಿಕ ಟೀಕೆ ಮಾಡಿದರು. ಸಾಯಿವೆಂಕಟೇಶ್ವರ ಮತ್ತು ಜಂತಕಲ್ ಪ್ರಕರಣ ತಂದರು. ಕಾಂಗ್ರೆಸ್‌ನವರು ಅಬ್ರಹಾಂ ಅವರ ಬ್ಯಾಕ್ ಗ್ರೌಂಡ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡುವೆ, ತನಿಖೆ ಮಾಡುವುದಾಗಿ ಅರ್ಜಿ ಹಾಕಿದ್ದೀರಿ. ಆಗ ನಿಮಗೆ ಅಬ್ರಹಾಂ ಹೀರೋ ಆಗಿದ್ದರು. 2011ರಲ್ಲಿ ಕೋರ್ಟಿಗೆ ಹೋಗಿದ್ದರು ಎಂದು ತಿಳಿಸಿದರು.

2011ರ ಮಾ.3ರಂದು ಅಡಿಷನಲ್ ಸೆಷನ್ ಸಿಟಿ ಸಿವಿಲ್‌ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಎಸ್.ಎಂ.ಕೃಷ್ಣ, ಧರ್ಮಸಿಂಗ್ ಹಾಗೂ ನನ್ನ ಮೇಲೆ ದೂರು ದಾಖಲು ಮಾಡಿದ್ದರು. 2013ರ ನ.8ರಂದು ಮೂವರು ಸಿಎಂ ಹಾಗೂ ಇತರ 11 ಮಂದಿ ಮೇಲೆ ತನಿಖೆ ಆರಂಭವಾಯಿತು. ಹೈಕೋರ್ಟ್‌ನಲ್ಲಿ 2011ರ 20ರಂದು ನನ್ನ ಮೇಲಿದ್ದ ಪ್ರಕರಣ ರದ್ದು ಮಾಡಿ, ಸಾಯಿ ವೆಂಕಟೇಶ್ವರ ಕೇಸ್ ತನಿಖೆ ಮಾಡುವಂತೆ ಆದೇಶ ಮಾಡಲಾಗಿತ್ತು. ಧರ್ಮಸಿಂಗ್ ಪ್ರಕರಣ ರದ್ದು ಮಾಡಲು ಅವರ ಅಡ್ವೋಕೇಟ್ ಬಳಸಿ‌ ವಾದ ಮಾಡಿಸಿದ್ದರು. ಅದರಲ್ಲಿ ನನ್ನ ಕೇಸ್ ಕೂಡ ಸೇರಿದೆ. ಎಸ್.ಎಂ. ಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ. ಹೈಕೋರ್ಟ್‌ನಲ್ಲಿ ಸಾಯಿ ವೆಂಕಟೇಶ್ವರ ಕೇಸ್ ಬಾಕಿ ಇದೆ. ಸುಪ್ರೀಂ ಕೋರ್ಟ್‌ಗೆ ಪ್ರಕರಣ ರದ್ದಿಗೆ ಹೋದೆ. ಆಗ ಸಿದ್ದರಾಮಯ್ಯ ಅವರೇ ಸಿಎಂ‌ ಆಗಿದ್ದರು. ಎಸ್‌ಐಟಿ ತನಿಖೆಗೆ ಕೊಡಿ ಅಂತ ಸಿದ್ದರಾಮಯ್ಯ ಸರ್ಕಾರ ಹೋಯಿತು ಎಂದರು.

ಏನಾದರೂ ಮಾಡಿ ಕುಮಾರಸ್ವಾಮಿನ ಒಳಗೆ ಹಾಕಿಸಬೇಕು ಅಂತ ಅವರಿಗೆ ನಿರಾಸೆ ಆಗಿದೆ. 2017ರಲ್ಲಿ ಮೂರು ತಿಂಗಳೊಳಗೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ನಂತರ ನಾನು ಬೇಲ್ ಪಡೆದುಕೊಂಡು ಹೋದೆ. ಸುಪ್ರೀಂ ಯಾವುದೇ ಕೋರ್ಟಿಗೆ ಹೋಗುವ ಅವಶ್ಯಕತೆ ಇಲ್ಲ ಅಂತ ತೀರ್ಪು ನೀಡಿತ್ತು. ಆದರೆ ಎಸ್‌ಐಟಿ 2017ರ ಜೂ. 20ರಂದು ಮತ್ತೊಂದು ಕೇಸ್ ಹಾಕಿತ್ತು. 2018ರ ಜನವರಿ ತಿಂಗಳಲ್ಲಿ ಮತ್ತೊಂದು ಫೈಲ್ ರಿಪೋರ್ಟ್‌ ಹಾಕಿಕೊಂಡರು. ವಿಪರ್ಯಾಸ ಅವರು ನನ್ನ ಜೊತೆಗೇ ಸರ್ಕಾರ ಮಾಡಬೇಕಾಯಿತು ಎಂದರು.

ಸಿದ್ದರಾಮಯ್ಯ ವಿರುದ್ಧ 61 ಕೇಸ್ ತನಿಖೆಯೇ ಆಗಿಲ್ಲ ಅಂತ ವರದಿ ಆಗಿದೆ. ಹಲವು ಕೇಸ್ ಅವರ ಮೇಲೆ ದಾಖಲಾಗಿ, ತನಿಖೆಯೇ ಆಗಿಲ್ಲ. ಲೋಕಾಯುಕ್ತಾದಲ್ಲಿ 61 ಕೇಸ್ ತನಿಖೆ ಆಗದೆ ಉಳಿದಿದೆ. ಇದನ್ನ ನಾನು ಹೇಳುತ್ತಿಲ್ಲ, ಪತ್ರಿಕೆಗಳಲ್ಲೇ ಬಂದಿದೆ. ನಾನು ಕಪ್ಪು ಚುಕ್ಕೆ‌ ಇಲ್ಲದ ನಾಯಕ, ಹಿಂದುಳಿದ ನಾಯಕ ಅಂತ ಹೇಳಿಕೊಳ್ಳುತ್ತಾರೆ. ಲೋಕಾಯುಕ್ತವನ್ನು ಇವರು ಏನು ಮಾಡಿದರು ಎಂದು ಪ್ರಶ್ನಿಸಿದರು.

ಚಾರ್ಜ್‌ಶೀಟ್‌ನಲ್ಲಿ ಹೆಸರು ಇರುವವರು ಕೇಂದ್ರ ಸಚಿವರಾಗಬಹುದಾ ಎಂಬ ಶಾಸಕ ಹಾಗೂ ಸಿಎಂ‌ ಕಾನೂನು ಸಲಹೆಗಾರ ಪೊನ್ನಣ್ಣ ಪ್ರಶ್ನೆಗೆ ಪ್ರತಿಕ್ರಿಯಿಸಿ, 2011-12ರಲ್ಲೇ ನಾನು ಪ್ರಕರಣವನ್ನು ಮುಚ್ಚಿ ಹಾಕಿಸಬಹುದಿತ್ತು. ಆದರೆ, ಹಾಗೆ ಮಾಡಿಲ್ಲ. ಆದರೆ ಈಗ ಯಾವುದೋ ಹೊಸ ಕೇಸ್ ತೆಗೆಯುತ್ತಿದ್ದಾರೆ. ಸುಪ್ರೀಂ ಕೋರ್ಟ್ ತನಿಖೆಗೆ ಹೋಗುವ ಮುನ್ನ ರಾಜ್ಯಪಾಲರ ಅನುಮತಿ ಪಡೆಯಿರಿ ಅಂತ ಕೋರ್ಟ್‌ ಹೇಳಿದೆಯಾ? ನಾನು ಸಚಿವನಾಗಿರುವುದೇ ಎರಡು ತಿಂಗಳ ಹಿಂದೆ. 2017ರಲ್ಲಿ ಮೂರು ತಿಂಗಳೊಳಗೆ ವರದಿ ಕೊಡಿ ಅಂತ ಕೋರ್ಟ್‌ ಹೇಳಿತ್ತು. ಈಗ 2024, ಇನ್ನೂ ವರದಿ ಕೊಡದೆ ಯಾಕೆ ಕುಳಿತಿದ್ದೀರಿ ಎಂದು ಪ್ರಶ್ನಿಸಿದರು.

ಸಾಯಿ ವೆಂಕಟೇಶ್ವರ ಪ್ರಕರಣದ ಎಲ್ಲಾ ದಾಖಲೆ ಇಲ್ಲಿ ಇದೆ ಎಂದು ದಾಖಲೆ‌ ಪ್ರದರ್ಶಿಸಿದ ಅವರು, ನಾನು ಸಹಿ ಹಾಕಿದ್ದೀನಿ ಅಂತ ಯಾರೋ ಈಗ ಹೇಳುತ್ತಿದ್ದಾರೆ. ನಾನು ಸಹಿ ಹಾಕಿದ್ದು ಯಾವುದಕ್ಕೆ ಅಂತ ತನಿಖೆ ಮಾಡಿದ್ದೀರಾ? ಏನೆಲ್ಲಾ ಫ್ರಾಡ್ ಆಗಿದೆ ಅಂತ ನೋಡಿದ್ದೀರಾ? 20 ಲಕ್ಷ ಹಣ ಯಾರೋ ಅಧಿಕಾರಿ ಮಗನ ಅಕೌಂಟಿಗೆ ತೆಗೆದುಕೊಂಡಿದ್ದ. ನಾನು ಅದನ್ನ ಪತ್ತೆ ಹಚ್ಚಿದ್ದು, ಪೊಲೀಸರಲ್ಲ. ಪೊನ್ನಣ್ಣ ನಿನ್ನ ಕಾನೂನು, ನಿನಗಿಂತ ನಮಗೆ ಗೊತ್ತು ಎಂದರು.

ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣದ 2009ರಲ್ಲಿ ನಡೆದಿರುವುದು, ನಾನು ಆಗ ಸಿಎಂ‌ ಆಗಿರಲಿಲ್ಲ. ನನ್ನ ಬಳಿ ಫೈಲ್ ಬಂದಿದೆಯೋ ಇಲ್ಲವೋ ಅದು ಪ್ರೂವ್ ಆಗಿಲ್ಲ. 2015ರಲ್ಲಿ ಬೇಲೆಕೇರಿ ಗಣಿಗೆ ಅನುಮತಿ ನೀಡಲಾಗಿದೆ. ಅಲ್ಲಿ ಈಗಲೂ ಮೈನಿಂಗ್ ನಡೆಯುತ್ತಿದೆ. ಅದಕ್ಕೂ ಅನುಮತಿ ನೀಡಿದ್ದಾರೆ. ಈ ದಾಖಲೆಗಳನ್ನು ಈಗಲೇ ಕೊಟ್ಟರೆ ರೆಕಾರ್ಡ್ ತಿದ್ದೋರು ಅನೇಕರಿದ್ದಾರೆ. ನಾನೂ ಸೇಫ್ ಗೇಮ್ ಆಡಬೇಕಲ್ವಾ ಎಂದರು.

ಇದನ್ನೂ ಓದಿ | ICC Chairman Election: ಅಮಿತ್​ ಶಾ ಮಗ ಜಯ್​ ಶಾ ಐಸಿಸಿಯ ಮುಂದಿನ ಅಧ್ಯಕ್ಷ?

ಬಿಜೆಪಿ ಮೇಲೆ 21 ಕೇಸ್ ಇದೆ ಅಂತ ಬೊಂಬಡಿ ಹೊಡೆಯುತ್ತಾರೆ. ಸತ್ತಿರೋ ಕೇಸ್ ಈಗ ತೆರೆದಿದ್ದಾರೆ, ಜೀವ ಇರುವ ಕೇಸ್‌ ಅದರೂ ತನ್ನಿ ಸಿದ್ದರಾಮಯ್ಯ ಅವರೇ? ಎಂದ ಅವರು, ಕುಮಾರಸ್ವಾಮಿ ಮೇಲೆ ತನಿಖೆ ವಿಳಂಬ ಹೀಗೆಲ್ಲಾ ಹೇಳಿಕೊಂಡು ಓಡಾಡ್ತಿದ್ದಾರೆ. ಮುಡಾದಲ್ಲಿ ಸಿಎಂ 14 ಸೈಟ್ ಹೇಗೆ ಪಡೆದುಕೊಂಡರು? ಭೂಮಿ ನಿಮ್ಮದೇ ಅಂತ ಅಂದುಕೊಳ್ಳೋಣ. ಆದರೆ ಕಾನೂನಿನಲ್ಲಿ ಏನಿದೆ? ದಾಖಲೆ ತಿದ್ದುಪಡಿ ಮಾಡಿ ಏನೆಲ್ಲಾ ಮಾಡಿದ್ದೀರಿ ಎಂಬುವುದು ಗೊತ್ತಿದೆ. ಸಾಯಿ ಮಿನರಲ್ಸ್ ವಿಚಾರದಲ್ಲಿ ನಾನು ಹೋರಾಟ ಮಾಡುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ಕಾನೂನು ಮೊರೆ ಹೋಗಲೇಬೇಕು, ಕೋರ್ಟ್‌ ತೀರ್ಪಿಗೆ ನಾವು ತಲೆಬಾಗಲೇಬೇಕ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Exit mobile version