ಬೆಂಗಳೂರು: ಯುರೋಪ್ ಪ್ರವಾಸ ಮುಗಿಸಿ ಬೆಂಗಳೂರಿಗೆ ವಿಮಾನದ ಮೂಲಕ ಬಂದಿಳಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ರಾಜ್ಯ ಸರ್ಕಾರದ ಮೇಲೆ ಮಿಡ್‌ನೈಡ್ ದಾಳಿ ನಡೆಸಿದ್ದಾರೆ. ಇದೊಂದು ಭ್ರಷ್ಟಾಚಾರದ ಸರ್ಕಾರ ಎಂದು ಗುಡುಗಿದ್ದಾರೆ. ವಾಮ ಮಾರ್ಗದ ಮೂಲಕ ರಚನೆಯಾದ ಸರ್ಕಾರ ಎಂದು ಹೇಳಿದ್ದಾರೆ. ಗುತ್ತಿಗೆದಾರರಿಗೆ ಕಮಿಷನ್ (Commission to contractors) ನಿಗದಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈಸ್ಟ್ ಇಂಡಿಯಾ ಕಂಪನಿಯಂತೆ (East India Company) ಕಾಂಗ್ರೆಸ್ ವಸೂಲಿ ದಂಧೆ ಮಾಡುತ್ತಿದೆ ಎಂದು ಕೆಂಡಕಾರಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddharamaiah) ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿ “ವೈಎಸ್‌ವಿ ಟ್ಯಾಕ್ಸ್” (YSV Tax) ಬಗ್ಗೆ ಪ್ರಸ್ತಾಪಿಸಿದ್ದಾರೆ. ಇನ್ನು ಪೆನ್‌ಡ್ರೈವ್ ಅನ್ನು ಸದ್ಯಕ್ಕೆ ಬಿಡುಗಡೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯುರೋಪ್ ಪ್ರವಾಸ ಮುಗಿಸಿ ಬೆಂಗಳೂರಿಗೆ ಮರಳಿದ ಎಚ್.ಡಿ. ಕುಮಾರಸ್ವಾಮಿ ಅವರು ಏರ್‌ಪೋರ್ಟ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರ ಪತನಕ್ಕೆ ಸಿಂಗಾಪುರದಲ್ಲಿ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಪೊಲೀಸ್ ಇಲಾಖೆಯ ಇಂಟಲಿಜೆನ್ಸ್ ಎಷ್ಟರಮಟ್ಟಿಗೆ ಕೆಲಸ ಮಾಡುತ್ತಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ನಾವು ಕುಟುಂಬ ಸಮೇತ ಹೋಗಿದ್ದು ಯುರೋಪ್‌ಗೆ. ಆದರೆ, ಬೆಳಗ್ಗೆ ನಾವು ಸರ್ಕಾರ ಕೆಡುವುದಕ್ಕೆ ಹೋಗಿದ್ದೇವೆ ಎಂಬ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ. ಜೆಡಿಎಸ್ 19 ಸ್ಥಾನ ಗೆದ್ದರೂ ಅವರಿಗೆ ನಮ್ಮ ಭಯ ಎಷ್ಟಿದೆ ಎಂಬುದನ್ನು ನಾವಿಲ್ಲಿ ಕಾಣಬಹುದು. ನಾನು ವಿದೇಶದಲ್ಲಿದ್ದರೂ ಪ್ರತಿನಿತ್ಯದ ಬೆಳವಣಿಗೆಗಳನ್ನು ಗಮನಿಸಿದ್ದೇವೆ ಎಂದು ಹೇಳಿದರು.
ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ
ಗೃಹ ಇಲಾಖೆಯಲ್ಲಿ ಯಾವ ರೀತಿ ವರ್ಗಾವಣೆ ದಂಧೆ ನಡೆಯಿತು? ಪೊಲೀಸ್ ಅಧಿಕಾರಿಗಳನ್ನು ಆ ಮಟ್ಟಿಗೆ ಬಳಸಿಕೊಂಡರೆ ಹೇಗೆ? ಇದರಿಂದ ಪೊಲೀಸರು ಜನಸಾಮಾನ್ಯರಿಗೆ ಯಾವ ಮಟ್ಟದ ರಕ್ಷಣೆ ನೀಡಬಹುದು? ಗರುಡ ಮಾಲ್ ಬಳಿಯ ಪೊಲೀಸ್ ಮೆಸ್‌ನಲ್ಲಿ ಸಭೆ ನಡೆಯಬೇಕಿದ್ದರೆ ಯಾರು ಇದ್ದರು? ವೈಎಸ್‌ವಿ ಟ್ಯಾಕ್ಸ್‌ನವರು ಅಲ್ಲೇ ಇದ್ದರು ಅಲ್ಲವೇ? ಅಧಿಕಾರಿಗಳ ವರ್ಗಾವಣೆ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರು ಚರ್ಚೆ ಮಾಡುವಾಗ ವೈಎಸ್‌ವಿ ಟ್ಯಾಕ್ಸ್‌ನವರು ಯಾಕೆ ಇದ್ದರು? ಅವರನ್ನು ಇಟ್ಕೊಂಡು ಚರ್ಚೆ ಮಾಡಿದರೆ ಈ ಆಡಳಿತ ಎಲ್ಲಿಗೆ ಬಂತು? ವರ್ಗಾವಣೆ ಮಾಡಿ ಅದನ್ನು ಮತ್ತೆ ವಾಪಸ್ ಪಡೆದುಕೊಂಡರು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಈಗ 32 ಸಚಿವರನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ. ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲು ಅಲ್ಲಿಗೆ ಹೋಗಿದ್ದಾರೆ. ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಬೇಕಿರೋದು ಜನತೆ ಮುಂದೆ, ಹೈಕಮಾಂಡ್ ಮುಂದಲ್ಲ. ಈ ವರ್ಷ ಎಲ್ಲ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಾರಾ? ಕಾಂಗ್ರೆಸ್ ಶಾಸಕರೇ ಅಭಿವೃದ್ಧಿಗೆ ದುಡ್ಡಿಲ್ಲ ಎಂದು ಹೇಳುತ್ತಿದ್ದಾರೆ. 72 ಸಾವಿರ ಕೋಟಿ ಸಾಲ ಮಾಡಿಕೊಂಡಿದ್ದಾರೆ. ಹಿಂದೆ ನನ್ನಿಂದ ಸರ್ಕಾರ ಪತನಗೊಂಡಿದೆ ಎಂದು ಹೇಳಿದ್ದರು. ಈಗ್ಯಾಕೆ ಶಾಸಕರು ಪತ್ರ ಬರೆದಿದ್ದಾರೆ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಮಾಮ ಮಾರ್ಗದಲ್ಲಿ ಸರ್ಕಾರ ರಚನೆ
ವಿದೇಶದಲ್ಲಿ ಸರ್ಕಾರ ಪತನದ ಷಡ್ಯಂತ್ರ ನಡೆದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಯಾಕೆ ಅವರು ಹೀಗೆ ಮಾಡಿಕೊಂಡರೋ ಗೊತ್ತಿಲ್ಲ. ಬಹುಶಃ ಅವರಿಗೆ ಈ ಸರ್ಕಾರದ ಅವಧಿ ಬಹಳ ದಿನ ಇರಲ್ಲ ಎಂದು ಅಂದುಕೊಂಡಿರಬೇಕು. ನಮಗಿಂತ ಜಾಸ್ತಿ ಅವರೇ ಶಾಸ್ತ್ರ ಕೇಳುತ್ತಾರೆ. ಜೋತಿಷ್ಯದವರನ್ನು ಬಹಳ ನಂಬಿರೋರು ಅವರು. ಹಲವಾರು ರೀತಿ ಕುತಂತ್ರಗಳನ್ನು ಮಾಡುತ್ತಾರೆ. ಜೋತಿಷ್ಯದ ಕೃತಕ ಶಕ್ತಿಯನ್ನು ಪಡೆದುಕೊಂಡು ವಾಮ ಮಾರ್ಗದ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆ ಕೃತಕವಾದ ಶಕ್ತಿ ಬಹುಶಃ ಬಹಳ ದಿನ ಇರಲ್ಲ ಅಂತ ಅವರ ತಲೆಯಲ್ಲಿ ಇರಬಹುದು. ಅದಕ್ಕಾಗಿ ಇಂತಹ ಹೇಳಿಕೆ ನೀಡಿರಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ರಾಜ್ಯದ ಜನರ ಹಣ ಲೂಟಿ ಮಾಡುತ್ತಿರುವವರ ವಿರುದ್ಧ ವಿರೋಧ ಪಕ್ಷದವನಾಗಿ ನಾನು ಧ್ವನಿ ಎತ್ತಿದ್ದೀನೆ. ಬಿಜೆಪಿಯವರೇನು ಕರ್ನಾಟಕವನ್ನು ಉದ್ಧಾರ ಮಾಡಿಬಿಟ್ಟಿದ್ದಾರಾ? ನೀರಾವರಿ ಸೌಲಭ್ಯ ಏನು ಆಯಿತು? ಇವತ್ತು ಜಲಸಂಪನ್ಮೂಲ ಸಚಿವರು ವಕೀಲರ ಜತೆ ಹೋಗಿದ್ದಾರೆ. ಮಹದಾಯಿ ಬಗ್ಗೆ ಚರ್ಚೆ ಮಾಡಿ ಬಂದಿದ್ದಾರಂತೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ರಾಜ್ಯದಲ್ಲಿ ಗುತ್ತಿಗೆದಾರರಿಗೆ ಪರ್ಸೆಂಟೇಜ್ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುಮಾರಸ್ವಾಮಿ, ಗುತ್ತಿಗೆದಾರರಿಗೆ ಇಂತಿಷ್ಟು ಪರ್ಸೇಂಟೆಜ್ ನೀಡುವುದಕ್ಕೆ ಹೇಳಿದ್ದಾರಂತೆ. ನಾನು ಯುರೋಪ್‌ನಲ್ಲಿ ಇದ್ದಾಗಲೇ ಮಾಹಿತಿ ಬಂತು. ಬೆಂಗಳೂರಿನಲ್ಲೇ ಪರ್ಸೆಂಟೇಜ್ ನೀಡುವುದಕ್ಕೆ ಹೇಳುತ್ತಿದ್ದಾರಂತೆ. ಈ ಬಗ್ಗೆ ಗುತ್ತಿಗೆದಾರ ಸಂಘದ ಮೀಟಿಂಗ್ ಮಾಡಬೇಕಿತ್ತಂತೆ. ಮಂತ್ರಿ, ಮಂತ್ರಿ ಚೇಲಾಗಳು ಪರ್ಸೆಂಟೇಜ್ ಕೇಳುತ್ತಿದ್ದಾರಂತೆ. ಇವರು ಹೋಗಿ ರಾಹುಲ್ ಗಾಂಧಿ ಮುಂದೆ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾತನಾಡುತ್ತಾರಂತೆ. ಹೊರನೋಟಕ್ಕೆ ಭ್ರಷ್ಟಾಚಾರ ಮಾಡುವವರನ್ನು ತೆಗೆದುಹಾಕಿ ಎಂದು ಹೇಳಿದ್ದಾರೆ. ಆದರೆ, ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ವಸೂಲಿಗೆ ಇರುವುದು ಕಾಂಗ್ರೆಸ್ ಪಕ್ಷ ಆಗಿದೆ. ನಮ್ಮನ್ನು ಬಿಟ್ಟು ಹೋದ ಈಸ್ಟ್ ಇಂಡಿಯಾ ಕಂಪನಿಯವರು ಅಧಿಕಾರವನ್ನು ಕಾಂಗ್ರೆಸ್‌ಗೆ ಕೊಟ್ಟು ಹೋದರು. ಈಗ ಈಸ್ಟ್ ಇಂಡಿಯಾ ಕಂಪನಿಯ ವಸೂಲಿಯನ್ನ ಕಾಂಗ್ರೆಸ್ ಮುಂದುವರಿಸಿಕೊಂಡು ಬಂದಿದೆ. ಇವರು ಭ್ರಷ್ಟಾಚಾರ ನಿಲ್ಲಿಸುತ್ತಾರಾ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Weather report: ರಾಜ್ಯದಲ್ಲಿಂದು ಎಲ್ಲೆಲ್ಲಿ ಗುಡುಗು ಸಹಿತ ಮಳೆ?
ಸದ್ಯಕ್ಕೆ ಪೆನ್‌ಡ್ರೈವ್ ಬಿಡಲ್ಲ
250 ಕೋಟಿ ಸಂಗ್ರಹ ಮಾಡಬೇಕು ಎಂದು ಬಿಡಿಎ ಅಧಿಕಾರಿಗಳಿಗೆ ಹೇಳುತ್ತಾರೆ. ದೆಹಲಿಗೆ ಕಳುಹಿಸಬೇಕು ಎಂದು ಪಟ್ಟಿ ಕೊಡುತ್ತೇವೆ. ಹಾಗೇ ಹೋಗಿ ಕೊಡಬೇಕೆಂದು ಅಧಿಕಾರಿಗಳಿಗೆ ಹೇಳುತ್ತಾರಂತೆ. ಈ ಬಗ್ಗೆ ಬಿಡಿಎ ಅಧಿಕಾರಿಗಳು ನನಗೆ ಹೇಳಿದ್ದಾರೆ ಎಂದು ಹೇಳಿದ ಎಚ್.ಡಿ. ಕುಮಾರಸ್ವಾಮಿ, ಬಿಡಿಎ ಡಿಸಿಎಂ ಡಿಕೆಶಿ ವ್ಯಾಪ್ತಿಗೆ ಬರುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಅದನ್ನು ತೆಗೊಂಡಿರೋದು ಅದಕ್ಕೆ ಅಲ್ವಾ? ಎಂದು ಹೇಳಿದರು. ಸದ್ಯಕ್ಕೆ ಯಾವುದೇ ಪೆನ್‌ಡ್ರೈವ್ ಬಿಡಲ್ಲ, ಜನಕ್ಕೆ ಗೊತ್ತಾಗಲಿ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.