Site icon Vistara News

HD Kumaraswamy : ಜಾರ್ಜ್‌ ಮನೆಯಲ್ಲಿ ನಡೆಸಿದ ಸಿದ್ದಲೀಲೆ ಬಹಿರಂಗವಾಗಲಿ; HDK ಸವಾಲು

HD Kumaraswamy and Siddaramaiah

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಮತ್ತು ಸಿಎಂ ಸಿದ್ದರಾಮಯ್ಯ (CM Siddaramaiah) ನಡುವಿನ ಜಂಗೀ ಕುಸ್ತಿ ಹಬ್ಬದ ದಿನವಾದ ಮಂಗಳವಾರವೂ ಮುಂದುವರಿದಿದೆ. ನನ್ನ ಸರ್ಕಾರ ಉರುಳಿಸಿದ್ದು ಸಿದ್ದರಾಮಯ್ಯ ಎಂದು ಭಾನುವಾರ ಕುಮಾರಸ್ವಾಮಿ ಆಪಾದಿಸಿದ್ದರು. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ʻಇದುವರೆಗೆ ಸರ್ಕಾರ ಉರುಳಿಸಿದ್ದು ಡಿ.ಕೆ. ಶಿವಕುಮಾರ್‌ (DK Shivakumar) ಅನ್ನುತ್ತಿದ್ದರು, ಈಗ ನಾನು ಅಂತಾರೆ. ಕುಣಿಯಲು ಬಾರದವ ನೆಲ ಡೊಂಕು ಎಂದಂತೆ ಸರ್ಕಾರ ಉರುಳಿಸಿಕೊಳ್ಳಲಾಗದೆ ಇದ್ದದ್ದು ಅವರಿಗೆʼʼ ಎಂದು ತಿರುಗೇಟು ನೀಡಿದ್ದರು. ಈಗ ಆ ಮಾತಿಗೆ ಕುಮಾರಸ್ವಾಮಿ ಪ್ರತಿಯೇಟು ನೀಡಿದ್ದಾರೆ. ಜತೆಗೆ, ಸಚಿವರಾಗಿದ್ದ ಜಾರ್ಜ್‌ ಮನೆಯಲ್ಲಿ ಇದ್ದುಕೊಂಡು ನಡೆಸಿದ ಸಿದ್ದಲೀಲೆಗಳನ್ನು ಬಹಿರಂಗ ಮಾಡಲಿ ಎಂದು ಸವಾಲು ಹಾಕಿದರು.

ಅವರು ಟ್ವೀಟ್‌ ಮಾಡಿದ ಖಡಕ್‌ ಮಾತುಗಳು ಇಲ್ಲಿವೆ

ಸರ್ಕಾರ ಉರುಳಿಸಿದ್ದು ನಾನೇ ಎನ್ನಲು ಗುಂಡಿಗೆ ಸಾಲದೇ ಸಿದ್ದರಾಮಯ್ಯ?

ಕುಣಿಯಲಾರದವನಿಗೆ ನೆಲ ಡೊಂಕು ಎನ್ನುವ ಮಾತೇನೋ ಸರಿ. ಆದರೆ, ಕುಣಿಯಲು ಬಿಟ್ಟು ನೆಲ ಅಗೆಯುವ ನಿಮ್ಮ ‘ಮೈತ್ರಿದ್ರೋಹ’ಕ್ಕೆ ಏನು ಹೇಳುವುದು @siddaramaiah ನವರೇ? ದೋಖಾ ಮಾಡುವುದೇ ದುರುದ್ದೇಶವಾಗಿದ್ದಾಗ ನೆಲವನ್ನು ಡೊಂಕು ಮಾಡುವುದು ಕಷ್ಟವೇ? ‘ಮೀರುಸಾದಿಕ’ನ ಆಧುನಿಕ ಅವತಾರಿ ಆಗಿರುವ ನಿಮಗೆ ಇಂಥ ಕ್ಷುದ್ರವಿದ್ಯೆಗಳೆಲ್ಲ ಕರತಲಾಮಲಕ. ಅದನ್ನೇ ನೀವು ಸುತ್ತಿಬಳಸಿ ಹೇಳುತ್ತಿದ್ದೀರಿ. ಧೈರ್ಯವಾಗಿ, ನೇರವಾಗಿ ಸತ್ಯ ಹೇಳಲು ಭಯವೇ? ಹೇಳಿ, ಕುಮಾರಸ್ವಾಮಿ ಸರಕಾರವನ್ನು ತೆಗೆದಿದ್ದು ನಾನೇ ಎಂದು ಹೇಳಲು ನಿಮಗೆ ಗುಂಡಿಗೆ ಸಾಲದೇ?

ಜಾರ್ಜ್‌ಗೆ ಹಂಚಿಕೆಯಾಗಿದ್ದ ನಿವಾಸದಲ್ಲಿ ನೀವೇಕೆ ವಾಸವಾಗಿದ್ದಿರಿ?

ಸಿದ್ಧವನದಲ್ಲಿ ಹೆಣೆದ ಸಿದ್ದಸೂತ್ರ ನನಗೆ ಗೊತ್ತಿಲ್ಲದ ಚಿದಂಬರ ರಹಸ್ಯವೇ? ಬೆಕ್ಕು ಕಣ್ಮುಚ್ಚಿ, ಕದ್ದು ಹಾಲು ಕುಡಿದರೆ ಅನ್ಯರಿಗೆ ಕಾಣದು ಎನ್ನುವಷ್ಟು ಕಿಲಾಡಿತನವೇ? ಇದು ಕಿಲಾಡಿತನವೋ ಅಥವಾ ಕಿಡಿಗೇಡಿತನವೋ? ತಮ್ಮ ಇಂಥ ಸಿದ್ದಲೀಲೆಗಳು ನಮಗೇನೂ ಹೊಸತಲ್ಲ. ಯಡಿಯೂರಪ್ಪ ಅವರು ಕಾವೇರಿಯನ್ನು ಖಾಲಿ ಮಾಡಲಿಲ್ಲ ಸರಿ, ಜಾರ್ಜ್ ಅವರಿಗೆ ಹಂಚಿಕೆ ಆಗಿದ್ದ ನಿವಾಸದಲ್ಲಿ ನೀವು ಯಾಕೆ ಇದ್ದಿರಿ? ಪಾಪ.. ಅನ್ಯರ ಹಂಗೇಕೆ ಬೇಕಿತ್ತು ನಿಮಗೆ? ಮಾಜಿ ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಬಗಲೆಯನ್ನೇ ಹಂಚಿಕೆ ಮಾಡುತ್ತಿದ್ದೆವು. ನೀವು ಕೇಳಬಹುದಿತ್ತು. ಕುತಂತ್ರ, ಕುಯುಕ್ತಿಯೇ ಸಿದ್ದಸೂತ್ರ ಆಗಿರುವಾಗ ಭಂಗಲೆ ಬಿಟ್ಟುಕೊಡುವಷ್ಟು ಉದಾರತೆ ನಿಮಗೆ ಎಲ್ಲಿಂದ ಬರಬೇಕು?

ಇದನ್ನೂ ಓದಿ: CM Siddaramaiah : ಹಿಂದಿನ ಸರ್ಕಾರದವರು ಏನೂ ಅಭಿವೃದ್ಧಿ ಮಾಡಿಲ್ಲ; ಅವರ ಮನೆ ಹಾಳಾಗ ಎಂದ ಸಿದ್ದರಾಮಯ್ಯ

ಬೇರೆಯವರ ಬಂಗಲೆ ವಾಸ ಈ ಸಮಾಜವಾದಿಗೆ ಶೋಭೆಯೇ? ಛೀಛೀ!

ಇಷ್ಟಕ್ಕೂ ಇನ್ನೊಬ್ಬರು ಇದ್ದ, ಅದರಲ್ಲೂ ನನ್ನ ಸಂಪುಟದಲ್ಲಿ ಸಚಿವರಾಗಿದ್ದವರಿಗೆ ಹಂಚಿಕೆ ಆಗಿದ್ದ ಬಂಗಲೆಯಲ್ಲಿ ಸೇರಿಕೊಳ್ಳುವುದು ಸಮಾಜವಾದಿಗೆ ಅದೆಂಥ ಸಭ್ಯತೆ? ಅದೆಂಥ ಶೋಭೆ? ಛೀ! ಛೀ!!

ಜಾರ್ಜ್‌ ಮನೆಯಲ್ಲಿ ನಡೆಸಿದ ಸಿದ್ಧಲೀಲೆಯ ಬಗ್ಗೆ ಹೇಳುವಿರಾ?

ವೆಸ್ಟ್ ಎಂಡ್ ನಲ್ಲಿ ಇದ್ದ ಕಾರಣವನ್ನು ನಾನು ಈಗಾಗಲೇ ತಿಳಿಸಿದ್ದೇನೆ, ನೂರಾರು ಸಲ. ಆದರೆ, ಜಾರ್ಜ್ ಮನೆಯಲ್ಲಿ ತಾವು ನಡೆಸಿದ ಸಿದ್ದಲೀಲೆಯನ್ನು ಬಹಿರಂಗ ಮಾಡುವಿರಾ? ನಿಮ್ಮ ಅಂತರಂಗವನ್ನು ಒಮ್ಮೆಯಾದರೂ ಬಹಿರಂಗ ಮಾಡಿ ಸಿದ್ದರಾಮಯ್ಯನವರೇ..

Exit mobile version