ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ (Karnataka Politics) ಸರ್ಕಾರ ಮತ್ತು ಪ್ರತಿಪಕ್ಷಗಳ ವಾರ್ ಶುರುವಾಗಿದೆ. ಒಬ್ಬರಿಗೊಬ್ಬರು ಆರೋಪ – ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ವಿರುದ್ಧ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಕಾಲೆಳೆದಿದ್ದರು. ಈಗ ಅದಕ್ಕೆ ಪ್ರತಿಯಾಗಿ ಎಚ್‌ಡಿಕೆ ಟ್ವೀಟ್ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಅವರನ್ನು ರೋಮ್ ಚಕ್ರವರ್ತಿ ನೀರೋಗೆ (Roman Emperor Nero) ಹೋಲಿಕೆ ಮಾಡಿದ್ದಾರೆ.
ನಾವು ವೆಸ್ಟ್‌ಎಂಡ್ ಹೋಟೆಲ್‌ನಲ್ಲಿ ಕುಳಿತು ಸರ್ಕಾರ ನಡೆಸುತ್ತಿಲ್ಲ, ಜನರ ನಡುವೆ ಇದ್ದು ಅವರ ಕಷ್ಟಕ್ಕೆ ಹೆಗಲಾಗಿ ನಿಂತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟಿರುವ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ಕರ್ನಾಟಕದ ʼನೀರೋʼ ಎಂದು ಕುಟುಕಿದ್ದಾರೆ.
ಇದನ್ನೂ ಓದಿ: BJP Ticket Fraud : ಮತ್ತೊಂದು ಬಿಜೆಪಿ ಟಿಕೆಟ್ ಮೋಸ; 2.55 ಕೋಟಿ ರೂ. ವಂಚನೆ ಸಂಬಂಧ FIR ದಾಖಲು!
ಎಚ್.ಡಿ. ಕುಮಾರಸ್ವಾಮಿ ಹೇಳಿದ್ದೇನು?
ರೋಮ್ ನಗರ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ!! ಜನ ಸಂಕಷ್ಟದಲ್ಲಿದ್ದರೆ ಕರ್ನಾಟಕದ ನೀರೋ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದ. ವೆಸ್ಟ್‌ಎಂಡ್‌ನಲ್ಲಿ ಆಡಳಿತ ನಡೆಸಿಲ್ಲ ಎನ್ನುವ ಗಿಲೀಟು ಗಿರಾಕಿ, ಆವತ್ತು ಮುಖ್ಯಮಂತ್ರಿ ನಿವಾಸವನ್ನೇಕೆ ತೆರವು ಮಾಡಲಿಲ್ಲ? ಐದು ವರ್ಷ ಸರ್ಕಾರ ಕೊಟ್ಟ ಸಿದ್ದಪುರುಷ ಇನ್ನೊಬ್ಬರ ಹೆಸರಿನಲ್ಲಿ ಬಂಗಲೆ ಪಡೆದು ಸಾಸಿವೆ ಕಾಳಷ್ಟೂ ಸಂಕೋಚವಿಲ್ಲದೆ ಅದೇ ಜಾಗದಲ್ಲಿ ಹೆಗ್ಗಣವಾಗಿ ಮೈತ್ರಿ ಸರ್ಕಾರಕ್ಕೆ ಕನ್ನ ಕೊರೆದಿದ್ದನ್ನು ಕನ್ನಡಿಗರು ಮರೆತಿಲ್ಲ. ಹೇಳಿದ್ದೇ ಹೇಳುವ ಕಿಸುಬಾಯಿ ದಾಸನಿಗೆ ಗೊತ್ತಿರುವುದು ಎರಡೇ; ಒಂದು: ವೆಸ್ಟ್‌ಎಂಡ್, ಎರಡು: ಬಿಜೆಪಿ ಬಿ ಟೀಂ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ವೆಸ್ಟ್‌ಎಂಡ್ ಸೋಂಕು ಮತ್ತೆ ತಗುಲಿದೆ
ಡೋಂಗೀ ಸಮಾಜವಾದಿ, ಪುಲ್ ಟೈಂ ಮೀರುಸಾದಿಕವಾದಿಗೆ ವೆಸ್ಟ್‌ಎಂಡ್ ಸೋಂಕು ಮತ್ತೆ ತಗುಲಿದೆ. I.N.D.I.A. ಕೂಟದ ಸಭೆಯನ್ನು ಇದೇ ವೆಸ್ಟ್‌ಎಂಡ್ ಬದಲಿಗೆ, ತಮ್ಮ ಸುತ್ತ ಕೆನೆಪದರ, ಒಳಪದರ, ತೆಳುಪದರದಂತೆ ತಲೆ ಎತ್ತಿರುವ ʼಪರ್ಸಂಟೇಜ್ ಪಟಾಲಂʼ ಏಳುಸುತ್ತಿನ ಕೋಟೆಯ ವಠಾರದಲ್ಲಿಯೇ ನಡೆಸಬೇಕಿತ್ತು. ಏಕೆ ನಡೆಸಲಿಲ್ಲ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಚ್.ಡಿ. ಕುಮಾರಸ್ವಾಮಿ ನೇರವಾಗಿ ಪ್ರಶ್ನಿಸಿದ್ದಾರೆ.
ಕರ್ನಾಟಕದ ನೀರೋ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದ!
ಆಧುನಿಕ ಭಾರತದ ಈಸ್ಟ್ ಇಂಡಿಯಾ ಕಂಪನಿ ಕಾಂಗ್ರೆಸ್‌ಗೆ ಕರ್ನಾಟಕ ಪೊಗದಸ್ತು ಹುಲ್ಲುಗಾವಲು. ಸಿದ್ದಪುರುಷ ಅಲಿಯಾಸ್ ಶೋಕಿಪುರುಷನೇ ಈ ಹುಲ್ಲುಗಾವಲಿನ ಮೇಟಿ. ವಿದ್ಯುತ್ ಕ್ಷಾಮ ಮತ್ತು ಬರದಲ್ಲಿ ಜನರು ಬೇಯುತ್ತಿದ್ದರೆ ದಿನಪೂರ್ತಿ ಕೂತು ಕ್ರಿಕೆಟ್ ನೋಡುವಷ್ಟು ಶೋಕಿದಾರ! ರೋಮ್ ನಗರ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ!! ಜನ ಸಂಕಷ್ಟದಲ್ಲಿದ್ದರೆ ಕರ್ನಾಟಕದ ನೀರೋ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದ ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಡ್ ಶೆಡ್ಡಿಂಗ್ ಏಕೆ ಬಂತು?
ಐದು ತಿಂಗಳಿಂದ ವಿದ್ಯುತ್ ಉತ್ಪಾದನೆ ಅಲಕ್ಷಿಸಿದ್ದೇಕೆ? ಹಾಹಾಕಾರ ಎದ್ದ ಮೇಲೆ ಅದು ಮಾಡಿದ್ದೇವೆ, ಇದು ಮಾಡಿದ್ದೇವೆ ಎಂದರೆ ಲೋಡ್ ಶೆಡ್ಡಿಂಗ್ ಏಕೆ ಬಂತು? 2013-2018ರಲ್ಲಿ 12,000 ಮೆ.ವ್ಯಾ. ಉತ್ಪಾದಿಸಿದ್ದೇವೆ ಎಂದು ನೀವೇ ಹೇಳಿದ್ದೀರಿ, ಸರಿ. ಈಗ ಮಳೆ ಕಡಿಮೆಯಾಗಿ ಜಲವಿದ್ಯುತ್ ಉತ್ಪಾದನೆ ಕುಸಿದಿದೆ, ನನಗೂ ಗೊತ್ತಿದೆ. ಅದರಲ್ಲಿ 3,000 ಮೆ.ವ್ಯಾ. ಇಲ್ಲ ಎಂದರೂ ಸಾರ್ವಜನಿಕ & ಖಾಸಗಿ ವಲಯ ಸೇರಿ ಒಟ್ಟು 29,000 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಆಗಲೇಬೇಕಿತ್ತು. ಆಗಿಲ್ಲವೇಕೆ? ಏಕಾಎಕಿ ಉತ್ಪಾದನೆ ನಿಲ್ಲಿಸಿದ್ದೇಕೆ? ಜಲವಿದ್ಯುತ್ ಕೈಕೊಡುತ್ತದೆ ಎಂದು ಗೊತ್ತಿದ್ದರೂ ಕಲ್ಲಿದ್ದಲ ಸಂಗ್ರಹ ಇಟ್ಟುಕೊಳ್ಳಲಿಲ್ಲವಲ್ಲ, ಏಕೆ? ಎಂದು ಕುಮಾರಸ್ವಾಮಿ ಕೇಳಿದ್ದಾರೆ.
ಜಲ ವಿದ್ಯುತ್ ಹೊರತುಪಡಿಸಿ ಇತರೆ ಮೂಲಗಳ ವಿದ್ಯುತ್ ಉತ್ಪಾದನೆಗೂ ಖೋತಾ ಬೀಳಲಿಕ್ಕೆ ಪ್ರಕೃತಿ ಕಾರಣವೋ? ಅಥವಾ ನಿಮ್ಮ ʼಕೈ ಚಳಕʼವೇ ಕಾರಣವೋ? ಸತ್ಯ ಹೇಳಿದರೆ ನನ್ನ ಕಡೆಗೇ ಬೊಟ್ಟು ಮಾಡುತ್ತೀರಿ, ನಿಮ್ಮ ಸಚಿವರನ್ನು ನನ್ನ ಮೇಲೆ ಛೂ ಬಿಡುತ್ತೀರಿ. ಎಷ್ಟು ದಿನ ನೆಪಗಳ ನಾಜೂಕತನ? ಮತ್ತೆ ಮತ್ತೆ ನಾನು ಹೇಳುತ್ತೇನೆ, ವಿದ್ಯುತ್ ಕೃತಕ ಅಭಾವ ಸೃಷ್ಟಿ ನಿಮ್ಮದೇ ಷಡ್ಯಂತ್ರ. ಅದು ಉಲ್ಬಣಿಸಿದಷ್ಟೂ ನಿಮಗೆ ಕಲೆಕ್ಷನ್ ಹೆಚ್ಚು. ಖಾಸಗಿ ಕಂಪನಿಗಳಿಂದ ಖರೀದಿಸಿ ಕೈ ತುಂಬಾ ಕಮಿಷನ್ ಎತ್ತಲು ಹೊರಟಿದ್ದೀರಿ. ಇಲ್ಲ ಎಂದಾದರೆ ವಿದ್ಯುತ್ ಕ್ಷಾಮದ ವಾಸ್ತವತೆ ಬಗ್ಗೆ ‘ಶ್ವೇತ ಪತ್ರ’ ಹೊರಡಿಸಿ ಎಂದು ಅವರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: Video Viral : ಚೆಂದ ಚೆಂದದ ನರ್ಸ್‌ಗಳು ಅಜ್ಜ ಅಂದ್ರೆ ತ್ರಾಸ್ ಆಕೇತಿ ಅಂದ್ರು ರಾಜು ಕಾಗೆ!
ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ ನಂತರ ಇಂ’ಧನ’ ಇಲಾಖೆಯಲ್ಲೂ ನೀವು ನಗದೀಕರಣಕ್ಕೆ ನಾಂದಿ ಹಾಡಿದ್ದೀರಿ. ಖರೀದಿ ಖುಷಿಯಲ್ಲಿ ಪರ್ಸಂಟೇಜ್ ಪಟಾಲಂ ಸಂಭ್ರಮಿಸುತ್ತಿದೆ ಎಂದು ಆರೋಪಿಸಿದ್ದಾರೆ.