Site icon Vistara News

ಬ್ರಾಹ್ಮಣ ಸಿಎಂ ಹೇಳಿಕೆ ಪ್ರಶ್ನಿಸಿದ್ದ ಗೋಕರ್ಣ ಅರ್ಚಕರಿಗೇ ಕರೆ ಮಾಡಿ, ಕುಶಲೋಪರಿ ವಿಚಾರಿಸಿದ ಎಚ್‌.ಡಿ. ಕುಮಾರಸ್ವಾಮಿ

HD Kumaraswamy calls gokarna priest who had questioned Brahmin CM remarks enquires about his family

#image_title

ಕಾರವಾರ: ಬಿಜೆಪಿಯವರಿಗೆ ಮತ ನೀಡಿದರೆ ಬ್ರಾಹ್ಮಣರನ್ನು ಮುಖ್ಯಮಂತ್ರಿಯನ್ನಾಗಿ (Brahmin CM) ಮಾಡುತ್ತಾರೆ. ಗಾಂಧೀಜಿಯನ್ನು ಕೊಂದ ಗೋಡ್ಸೆ ಸಹ ಬ್ರಾಹ್ಮಣ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಹೇಳಿಕೆಯನ್ನು ಗೋಕರ್ಣ ದೇಗುಲದ ಅರ್ಚಕರು ಪ್ರಶ್ನೆ ಮಾಡಿದ್ದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ, ಸ್ವತಃ ಕುಮಾರಸ್ವಾಮಿ ಅವರೇ ಅರ್ಚಕರಿಗೆ ಕರೆ ಮಾಡಿ ಮಾತುಕತೆ ನಡೆಸಿ ಧೈರ್ಯದಿಂದ ಇರುವಂತೆ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರಕ್ಕೆ ಎಚ್.ಡಿ. ಕುಮಾರಸ್ವಾಮಿ ಆಗಮಿಸಿದ್ದರು. ಗೋಕರ್ಣ ಮಹಾಬಲೇಶ್ವರನ ದರ್ಶನಕ್ಕೆ ಎಚ್‌ಡಿಕೆ ಬಂದಿದ್ದ ವೇಳೆ, ಅವರನ್ನು ತಡೆದ ಅರ್ಚಕರು, ಬ್ರಾಹ್ಮಣ ವಿರೋಧಿ ಹೇಳಿಕೆಯಿಂದ ತಮ್ಮ ಮನಸ್ಸಿಗೆ ನೋವಾಗಿದೆ. ನಿಮ್ಮ ಕುಟುಂಬದ ಮೇಲೆ ನಮಗೆ ಬಹಳವೇ ಅಭಿಮಾನವಿದೆ. ನಿಮ್ಮ ಹೇಳಿಕೆ ಬಗ್ಗೆ ಗೋಕರ್ಣದಲ್ಲಿಯೇ ಸ್ಪಷ್ಟೀಕರ‌ಣ ನೀಡಿ ಎಂದು ಕೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಎಚ್‌ಡಿಕೆ, ನಾನು ಬ್ರಾಹ್ಮಣ ವಿರೋಧಿ ಅಲ್ಲ. ನಾನು ಬ್ರಾಹ್ಮಣರ ಜತೆಯಲ್ಲಿಯೇ ಬೆಳೆದಿದ್ದೇನೆ. ಬ್ರಾಹ್ಮಣರಿಗೆ ಗೌರವ ಕೊಡುವ ಸಂಸ್ಕೃತಿ ನಮ್ಮದು. ನಾನು ಹೇಳಿದ್ದು ಪೇಶ್ವೆ ಡಿಎನ್‌ಎ ಹೊಂದಿರುವವರ ಬಗ್ಗೆಯಷ್ಟೇ. ಬ್ರಾಹ್ಮಣ ಸಮುದಾಯದವರ ಮೇಲೆ ಅಪಾರ ಗೌರವವಿದೆ. ರಾಮಕೃಷ್ಣ ಹೆಗಡೆ ಅವರನ್ನು ಸಿಎಂ ಮಾಡಿದ್ದೇ ದೇವೇಗೌಡ ಎಂದು ಹೇಳಿದ್ದರು. ಈ ಎಲ್ಲ ವಿಷಯಗಳೂ ಮಾಧ್ಯಮಗಳಲ್ಲಿ ಪ್ರಸಾರವಾದವು.

ಇದನ್ನೂ ಓದಿ: Adani Group : ಮುಂಬಯಿ ಏರ್‌ಪೋರ್ಟ್‌ ಮಾರಾಟಕ್ಕೆ ಅದಾನಿ ಒತ್ತಡ ಇರಲಿಲ್ಲ: ರಾಹುಲ್‌ ಗಾಂಧಿಗೆ ಜಿವಿಕೆ ರೆಡ್ಡಿ ತಿರುಗೇಟು

ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿರುವ ವಿಷಯ ಎಚ್‌ಡಿಕೆಗೆ ಗೊತ್ತಾಗಿದೆ. ಆಗ ಅವರು ಜೆಡಿಎಸ್‌ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಆದರೂ ಅರ್ಚಕ ನರಸಿಂಹ ಉಪಾಧ್ಯಾಯರಿಗೆ ಕರೆ ಮಾಡಿದ ಕುಮಾರಸ್ವಾಮಿ, ನಿಮ್ಮ ಮಾತಿನಿಂದ ತಮಗೆ ಯಾವುದೇ ರೀತಿಯ ಬೇಸರವಾಗಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಕುಟುಂಬ ಸೌಖ್ಯದ ಬಗ್ಗೆಯೂ ವಿಚಾರಿಸಿದ್ದಾರೆ.

ಈ ವೇಳೆ ಅರ್ಚಕ ನರಸಿಂಹ ಉಪಾಧ್ಯಾಯ ಅವರು ಎಚ್‌ಡಿಕೆ ಜತೆ ದೂರವಾಣಿ ಮೂಲಕ ಮಾತನಾಡುವಾಗ, ನಾನು ದೇವೇಗೌಡರ ಹಾಗೂ ಜನತಾದಳದ ಅಭಿಮಾನಿಗಳಾಗಿದ್ದೇನೆ. ಆ ಕಾರಣಕ್ಕಾಗಿ ನಿಮ್ಮ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೇನೆ. ನೀವು ಬೇಸರ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಅದಕ್ಕೆ ಕುಮಾರಸ್ವಾಮಿ ಅವರು, ತಮಗೆ ಯಾವುದೇ ರೀತಿಯ ಬೇಸರ ಇಲ್ಲ. ನೀವು ಬೆಂಗಳೂರಿಗೆ ಬಂದಾಗ ಒಮ್ಮೆ ಭೇಟಿಯಾಗಿ ಎಂದು ಹೇಳಿದ್ದಾರೆ. ಅದಕ್ಕೆ ಉಪಾಧ್ಯಾಯರು, “ಭೇಟಿಯಾಗುತ್ತೇನೆ” ಎಂದು ತಿಳಿಸಿದ್ದಾರೆ.

ರಾಮಕೃಷ್ಣ ಹೆಗಡೆಯನ್ನು ಸಿಎಂ ಮಾಡಿದ್ದೇ ದೇವೆಗೌಡ ಎಂದ ಎಚ್‌ಡಿಕೆ

ನಾವು ಬ್ರಾಹ್ಮಣ ವಿರೋಧಿಯಲ್ಲ. ರಾಮಕೃಷ್ಣ ಹೆಗಡೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇ ದೇವೆಗೌಡರು. ನಳಿನ್ ಕಟೀಲ್‌ಗೆ ರಾಜಕೀಯ ಎಲ್ಲಿ ಗೊತ್ತಿದೆ? ಕಟೀಲ್ ಅನ್ನುವ ಹೆಸರು ಬದಲು ಪಿಟೀಲು ಅಂತ ಇಟ್ಟುಕೊಳ್ಳಲಿ. ನಾವು ಎಷ್ಟು ಸ್ಥಾನ ಗೆಲ್ಲುತ್ತೇವೆ ಎನ್ನುವುದನ್ನು ಜನರು ನಿರ್ಧರಿಸುತ್ತಾರೆ. ಬಿಜೆಪಿ ನಾಯಕರು ನಿರ್ಧರಿಸುವುದಲ್ಲ. ನಾವು ಹಿಂದು ಧರ್ಮ ರಕ್ಷಣೆ ಮಾಡುತ್ತೇವೆ. ಹಿಂದು ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಏನು ಮಾಡಿದ್ದಾರೆ ಎನ್ನುವುದು ತಿಳಿದಿದೆ ಎಂದು ಕುಮಾರಸ್ವಾಮಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಬ್ರಾಹ್ಮಣ ಸಮುದಾಯಕ್ಕೆ ನಾನು ಸಿಎಂ ಆದಾಗ ಬೆಂಗಳೂರಿನಲ್ಲಿ ಸಮುದಾಯ ಭವನಕ್ಕೆ ಜಾಗ ಕೊಟ್ಟಿದ್ದೇನೆ. ಬ್ರಾಹ್ಮಣ ಪ್ರಾಧಿಕಾರ ರಚನೆ ಮಾಡಿದ್ದೆ. ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ಏನು ಮಾಡಿದೆ ಹೇಳಿಕೊಳ್ಳಲಿ. ನಮಗೆ ಸಾವರ್ಕರ್‌ ಸಂಸ್ಕೃತಿ‌‌ ಬೇಡ. “ಸರ್ವೇ ಜನಃ ಸುಖಿನೋಭವ” ಅನ್ನುವ ಬ್ರಾಹ್ಮಣರು ನಮಗೆ ಬೇಕು ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: Parliament Budget Session: 50 ಸಾವಿರ ರೂ. ಮೌಲ್ಯದ ದುಬಾರಿ ಸ್ಕಾರ್ಫ್ ಧರಿಸಿದ ಖರ್ಗೆ, ಬಿಜೆಪಿ ತೀವ್ರ ವಾಗ್ದಾಳಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ರಥಯಾತ್ರೆ ಮಾಡಲಾಗುವುದು. ಜನಗಳ‌ ಉತ್ತೇಜನ ಹಾಗೂ ಪ್ರೋತ್ಸಾಹಗಳು ಈ ಯಾತ್ರೆಗೆ ಇದೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ. ಕೆಲವರು ಪಕ್ಷ ಬಿಟ್ಟು ಹೋಗುತ್ತಾರೆ. ಅದು ಚುನಾವಣಾ ಸಂದರ್ಭದಲ್ಲಿ ಕಾಮನ್ ಆಗಿರಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡರಿಂದ ಮೂರು ಸ್ಥಾನವನ್ನು ಜೆಡಿಎಸ್‌ ಗೆಲ್ಲಲಿದೆ ಎಂದು ಮಾಜಿ ಸಿಎಂ ಎಚ್‌ಡಿಕೆ ಸ್ಪಷ್ಟೀಕರಣ ನೀಡಿದ್ದರು.

Exit mobile version