Site icon Vistara News

Karnataka Election: ಜೆಡಿಎಸ್‌ನತ್ತ ಪಕ್ಷಾಂತರಿಗಳ ದಂಡು; ಪಂಚರತ್ನ ಯಾತ್ರೆ ನಿಲ್ಲಿಸಿ ಬೆಂಗಳೂರಿಗೆ ಹೊರಟ ಎಚ್‌ಡಿಕೆ

HD Kumaraswamy cancels Pancharatna Yatra in K.R. Nagar, leaves for Bengaluru

ಮೈಸೂರು: ಜೆಡಿಎಸ್‌ನತ್ತ ಪಕ್ಷಾಂತರಿಗಳ ದಂಡು ಆಗಮಿಸುವ ಹಿನ್ನೆಲೆಯಲ್ಲಿ (Karnataka Election) ಕೆ.ಆರ್.ನಗರ ತಾಲೂಕಿನಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಭಾನುವಾರ ಸಂಜೆ ಪಂಚರತ್ನ ಯಾತ್ರೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ಬೆಂಗಳೂರಿಗೆ ತೆರಳಿದ್ದಾರೆ. ಕೆ.ಆರ್.ನಗರ ತಾಲೂಕಿನ ಬಂಡಳ್ಳಿ ಗ್ರಾಮದಿಂದ ತರಾತುರಿಯಲ್ಲಿ ಕುಮಾರಸ್ವಾಮಿ ಬೆಂಗಳೂರಿನತ್ತ ಪಯಣ ಬೆಳೆಸಿದರು.

ವಿವಿಧ ಪಕ್ಷಗಳಲ್ಲಿ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಎದ್ದಿರುವ ಮುಖಂಡರು, ಜೆಡಿಎಸ್‌ಗೆ ಸೇರ್ಪಡೆಯಾಗಲು ಒಲವು ತೋರಿದ್ದಾರೆ. ಹೀಗಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಣೆ ಮಾಡಿರುವ ಎಚ್‌ಡಿಕೆ, ಬೆಂಗಳೂರಿನಲ್ಲಿ ಅರ್ಜೆಂಟ್ ಕೆಲಸ ಇದೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಗ್ರಾಮಸ್ಥರಿಗೆ ಮನವಿ ಮಾಡಿ ತೆರಳಿದ್ದಾರೆ.

ಬೆಳ್ಳಿ ಕುರ್ಚಿ, ಗದೆ ಸ್ವೀಕರಿಸದೆ ಎಚ್‌ಡಿಕೆ ವಾಪಸ್‌; ಗ್ರಾಮಸ್ಥರಿಗೆ ನಿರಾಸೆ

ಕುಮಾರಸ್ವಾಮಿ ಅವರು ಮತ್ತೆ ರಾಜ್ಯದ ಸಿಎಂ ಆಗಬೇಕು ಎಂಬ ಆಸೆಯಿಂದ ಪಂಚರತ್ನ ಯಾತ್ರೆಯಲ್ಲಿ ಅವರಿಗೆ ಬೆಳ್ಳಿ ಕುರ್ಚಿ ಹಾಗೂ ಎರಡು ಗದೆ ಉಡುಗೊರೆ ನೀಡಲು ಚಿಕ್ಕಹನಸೋಗೆ ಗ್ರಾಮಸ್ಥರು ಕಾಯುತ್ತಿದ್ದರು. ಆದರೆ, ಮಾಜಿ ಸಿಎಂ ಬೆಂಗಳೂರಿಗೆ ಹೊರಟ ಸುದ್ದಿ ಕೇಳಿ ಗ್ರಾಮಸ್ಥರಿಗೆ ನಿರಾಸೆಯಾಗಿದೆ. ಈ ವೇಳೆ ಗ್ರಾಮಸ್ಥರನ್ನು ಶಾಸಕ ಸಾ.ರಾ.ಮಹೇಶ್ ಸಮಾಧಾನಪಡಿಸಿದ್ದಾರೆ.

ಕಾಂಗ್ರೆಸ್, ಬಿಜೆಪಿಯ 15-20 ನಾಯಕರು ಜೆಡಿಎಸ್‌ಗೆ

ಕಾಂಗ್ರೆಸ್, ಬಿಜೆಪಿಯ 15-20 ನಾಯಕರು ಜೆಡಿಎಸ್‌ಗೆ ಬರುತ್ತಿದ್ದಾರೆ. ಅವರನ್ನು ಬರಮಾಡಿಕೊಂಡು ಬಿ ಫಾರಂ ಕೊಡಲು ಮಾಜಿ ಸಿಎಂ ಕುಮಾರಸ್ವಾಮಿ ಬೆಂಗಳೂರಿಗೆ ಹೊರಟಿದ್ದಾರೆ. ಬೆಂಗಳೂರಿಗೆ ಹೋಗಿ ಬೆಳ್ಳಿ ಕುರ್ಚಿ ಕೊಟ್ಟು ಬನ್ನಿ. ಚುನಾವಣೆ ಮುಗಿಯುವ ಹೊತ್ತಿಗೆ ಮತ್ತೆ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಬರುತ್ತೇನೆ ಎಂದು ಗ್ರಾಮಸ್ಥರನ್ನು ಶಾಸಕ ಸಾ.ರಾ.ಮಹೇಶ್ ಮನವೊಲಿಸಿದ್ದಾರೆ.

ಬಿಜೆಪಿಗೆ ಗುಡ್‌ಬೈ ಹೇಳಿದ ನೆಹರು ಓಲೇಕಾರ್ ಜೆಡಿಎಸ್ ಸೇರ್ಪಡೆ?

ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಬಿಜೆಪಿಗೆ ಗುಡ್‌ಬೈ ಹೇಳಿರುವ ಹಾವೇರಿ ಕ್ಷೇತ್ರದ ಶಾಸಕ ನೆಹರು ಓಲೇಕಾರ್ ಸೇರಿ ಹಲವು ಬಂಡಾಯ ನಾಯಕರು ಭಾನುವಾರ ರಾತ್ರಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಕುಮಾರಸ್ವಾಮಿ ಅವರು ಕೆ.ಆರ್‌‌.ನಗರ ಪಂಚರತ್ನ ರಥಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ತೆರಳಿದ್ದಾರೆ.

ಹಾವೇರಿ ಶಾಸಕ ನೆಹರು ಓಲೇಕಾರ್ ಪಕ್ಷಕ್ಕೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಈಗಾಗಲೇ ಘೋಷಣೆ ಮಾಡಿದ್ದ ಅಭ್ಯರ್ಥಿ ತುಕರಾಂ ಮಾಳಗಿಗೆ ಕರೆ ಮಾಡಿ ಟಿಕೆಟ್ ಕೈ ತಪ್ಪುವ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದ್ದಾರೆ ಎನ್ನಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಗೆಲುವೊಂದೇ ಮಾನದಂಡ. ಪಕ್ಷ ಅಧಿಕಾರಕ್ಕೇರಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅಗತ್ಯತೆ ಬಗ್ಗೆ ತುಕರಾಂ ಮಾಳಗಿಗೆ ಮನವರಿಕೆ ಎಚ್‌ಡಿಡಿ ಮನವರಿಕೆ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ | Jagadish Shettar: ಕಾಂಗ್ರೆಸಲ್ಲಿ ಧೂಳು ಹೊಡೆಯೋಕೂ ಜಗದೀಶ್ ಶೆಟ್ಟರ್‌ ಲಾಯಕ್ಕಲ್ಲ: ಸಚಿವ ಮುನಿರತ್ನ ವಾಗ್ದಾಳಿ

ಶೆಟ್ಟರ್ ಅವರನ್ನು ಸಂಪರ್ಕಿಸಿದ ಜೆಡಿಎಸ್ ನಾಯಕರು

ಬಿಜೆಪಿಗೆ ಗುಡ್ ಬೈ ಹೇಳಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಜೆಡಿಎಸ್‌ನತ್ತ ಸೆಳೆಯಲು ಹಿರಿಯ ನಾಯಕರು ಕಸರತ್ತು ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಜಗದೀಶ್ ಶೆಟ್ಟರ್‌ ಅವರನ್ನು ಸಂಪರ್ಕಿಸಿರುವ ಬಂಡೆಪ್ಪ ಖಾಶೆಂಪೂರ್, ಕಾಂಗ್ರೆಸ್‌ಗಿಂತ ಜೆಡಿಎಸ್‌ಗೆ ಬಂದರೆ ಉನ್ನತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ, ಈ ಬಗ್ಗೆ ಶೆಟ್ಟರ್ ಯಾವುದೇ ನಿರ್ಧಾರ ತಿಳಿಸಿಲ್ಲ ಎನ್ನಲಾಗಿದೆ.

Exit mobile version