ಕಾರವಾರ: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಬಿಜೆಪಿಯವರು ಮಂಗಳವಾರ (ಏ. 11) ಟಿಕೆಟ್ ಘೋಷಣೆ ಮಾಡಿದ ಬೆನ್ನಲ್ಲೇ ಅಸಮಾಧಾನಗಳು ಭುಗಿಲೇಳುತ್ತಿವೆ. ಈಗ ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ. ಬಿಜೆಪಿ ಪಕ್ಷದವರು ಮನೆಗೆ ಕಳುಹಿಸಬೇಕು ಎಂದು ತೀರ್ಮಾನಿಸಿದಾಗ ಎಲ್.ಕೆ ಆಡ್ವಾಣಿ ಅಂಥವರನ್ನೇ ಕಳುಹಿಸಿದ್ದರು. ಹಾಗಿದ್ದಾಗ ಇಲ್ಲಿರುವವರು ಅವರಿಗೆ ಯಾವ ಲೆಕ್ಕ ಎಂದು ಪ್ರತಿಕ್ರಿಯಿಸಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ ಪರ ಪ್ರಚಾರಕ್ಕಾಗಿ ಬುಧವಾರ ಶಿರಸಿಗೆ ಬಂದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಇದನ್ನೂ ಓದಿ: ನಾನು ಸುರಕ್ಷಿತವಾಗಿ ಇರುವುದೇ ಮಾಧ್ಯಮದವರಿಂದ ಎಂದ ಅತೀಕ್ ಅಹ್ಮದ್; ಜೈಲಲ್ಲಿರುವ ಗ್ಯಾಂಗ್ಸ್ಟರ್ಗೆ ಕಾಡುತ್ತಿದೆ ಅದೊಂದು ಭಯ!
ಬೇರೆ ಬೇರೆ ಆರೋಪ ಇರುವವರಿಗೆ ಬಿಜೆಪಿ ಟಿಕೆಟ್ ನೀಡಿರುವ ವಿಚಾರವಾಗಿ ಮಾತನಾಡಿದ ಎಚ್‌ಡಿಕೆ, ಬಿಜೆಪಿಯವರು ವೇದಿಕೆಯಲ್ಲಿ ಹೇಳುವುದಕ್ಕೂ, ಕಾರ್ಯರೂಪಕ್ಕೆ ತರುವುದಕ್ಕೂ ವ್ಯತ್ಯಾಸ ಇರುವುದನ್ನು ಮೊದಲಿನಿಂದ ನೋಡುತ್ತಿದ್ದೇವೆ. ಅದಕ್ಕೆ ಆಶ್ಚರ್ಯ ಪಡುವಂಥದ್ದೇನಿಲ್ಲ. ಕಾಳಸಂತೆಕೋರರು, ಬೆಟ್ಟಿಂಗ್ ದಂಧೆ ನಡೆಸುವವರನ್ನೇ ಅವರ ಜತೆಯಲ್ಲಿಟ್ಟುಕೊಂಡಿದ್ದಾರೆ ಎಂದರು.
ಇನ್ನು ಬಿಜೆಪಿಯಲ್ಲಿ ಭಿನ್ನಮತ ಇರುವವರನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೆಲವರು ಜನತಾ ಪರಿವಾರದಲ್ಲೇ ಇದ್ದು ಬಿಜೆಪಿಗೆ ಹೋದವರಿದ್ದಾರೆ. ಅವರಿಗೆ ಈಗ ಅದರ ಅನುಭವವಾಗುತ್ತಿದ್ದು, ಅಂಥವರು ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್‌ನಿಂದ ಪಕ್ಷಾಂತರ ಮಾಡಿ ತೆರಳಿದವರ ಕುರಿತು ಪ್ರತಿಕ್ರಿಯೆ ನೀಡಿ, ನಮ್ಮಷ್ಟು ಚೆನ್ನಾಗಿ ಯಾರೂ ಅವರನ್ನು ನೋಡಿಕೊಳ್ಳಲ್ಲ. ಇನ್ನೆರಡು ವರ್ಷ ಹೋದರೆ ಅದು ಅವರಿಗೇ ಗೊತ್ತಾಗುತ್ತದೆ ಎಂದರು.
ಟಿಕೆಟ್ ವಂಚಿತರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪಕ್ಷಕ್ಕೆ ಆಗಮಿಸುವ ನಿರೀಕ್ಷೆ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರು ಪಕ್ಕಾ ಬಿಜೆಪಿ, ಆರ್‌ಎಸ್‌ಎಸ್‌ಗೆ ಸಂಬಂಧಪಟ್ಟವರು. ಅವರು ಪಕ್ಷ ಬಿಡುತ್ತಾರೆ ಎನ್ನುವುದನ್ನೇ ಯಾರೂ ನಂಬಲ್ಲ. ಅವರು ಬರುವ ಕುರಿತು ಯಾವುದೇ ಮಾತುಕತೆ ನಡೆದಿಲ್ಲ, ಮುಂದೆ ನೋಡೋಣ ಎಂದರು.
ಬಿಜೆಪಿ – ಕಾಂಗ್ರೆಸ್‌ನಿಂದ ಜೆಡಿಎಸ್ ಸೇರುವವರಿದ್ದಾರೆ
ಜನತಾ ಪರಿವಾರದಿಂದ ಬೆಳೆದು 2004ರಲ್ಲಿ ಬಹಳ ಜನ ಬಿಜೆಪಿ, ಕಾಂಗ್ರೆಸ್‌ಗೆ ಹೋಗಿದ್ದರು. ಅವರಿಗೆ ಟಿಕೆಟ್‌ಗೆ ಮೋಸ ಆಗಿದೆ. ಅವರು ಈಗ ಮತ್ತೆ ಜನತಾ ಪರಿವಾರದ ಗೂಡಿಗೆ ಬರಲು ಮುಂದಾಗಿದ್ದಾರೆ. ಈಗಾಗಲೇ ಚರ್ಚೆ ಮಾಡುತ್ತಿದ್ದಾರೆ. ಬಹುಶಃ ಇನ್ನೆರಡು ದಿನದಲ್ಲಿ ಬರುವವರ ಪಟ್ಟಿ ಗೊತ್ತಾಗಲಿದೆ. ಇನ್ನು ಸಮ್ಮಿಶ್ರ ಸರ್ಕಾರ ರಚನೆ ಕುರಿತು ಪ್ರತಿಕ್ರಿಯಿಸಿ, ಸ್ವತಂತ್ರ ಸರ್ಕಾರ ತರಬೇಕೆಂದು ಓಡಾಡುತ್ತಿದ್ದೇನೆ. 120 ಅಭ್ಯರ್ಥಿಗಳನ್ನೂ ಗೆಲ್ಲಿಸಬೇಕು ಎನ್ನುವುದು ನಮ್ಮ ಪ್ರಯತ್ನ. ಬೇರೆ ಪಕ್ಷದೊಂದಿಗೆ ಸೇರಿ ಸರ್ಕಾರ ಮಾಡುವ ಕುರಿತು ಚಿಂತನೆ ನಡೆಸಿಲ್ಲ ಎಂದರು.
ಇದನ್ನೂ ಓದಿ: Karnataka Election 2023 : ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೇ ರಾಜೀನಾಮೆ ನೀಡಲು ಲಕ್ಷ್ಮಣ ಸವದಿ ನಿರ್ಧಾರ
ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದ್ದರೂ ಜೆಡಿಎಸ್ ಪಟ್ಟಿ ಬಿಡುಗಡೆಯಾಗದ ವಿಚಾರವಾಗಿ ಮಾತನಾಡಿದ ಅವರು, ಪಟ್ಟಿ ಬಿಡುಗಡೆ ಮಾಡೋಣ, ಇನ್ನೂ ಟೈಂ ಇದೆಯಲ್ಲ ಎಂದು ಪ್ರತಿಕ್ರಿಯೆ ನೀಡಿದರು.