Site icon Vistara News

HD Kumaraswamy: ಜೆಡಿಎಸ್‌ ಶಾಸಕಾಂಗ ಪಕ್ಷ ನಾಯಕರಾಗಿ ಎಚ್‌.ಡಿ. ಕುಮಾರಸ್ವಾಮಿ ಆಯ್ಕೆ

hd-kumaraswamy Elected as JDS legislative party leader

hd-kumaraswamy Elected as JDS legislative party leader

ಬೆಂಗಳೂರು: ಜಾತ್ಯತೀತ ಜನತಾದಳ (Janata dal secular) ಶಾಸಕಾಂಗ ಪಕ್ಷ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತ ಎಣಿಕೆ ನಡೆದು ಕಾಂಗ್ರೆಸ್‌ ಭರ್ಜರಿ ಬಹುಮತ ಪಡೆದು 11 ದಿನಗಳ ಬಳಿಕ ಎಚ್‌.ಡಿ. ಕುಮಾರಸ್ವಾಮಿ ಅವರು ಬುಧವಾರ (ಮೇ 24) ವಿಧಾನಸಭಾ ಅಧ್ಯಕ್ಷರ ಕಚೇರಿಯಲ್ಲಿ ಹಂಗಾಮಿ ಸ್ಪೀಕರ್‌ ಆರ್‌.ವಿ ದೇಶಪಾಂಡೆ (RV Deshapande) ಅವರಿಂದ ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅವರು ತಮ್ಮ ಅಧ್ಯಕ್ಷತೆಯಲ್ಲಿ ಶಾಸಕಾಂಗ ಪಕ್ಷ ಸಭೆ (JDS legislative party Meeting) ನಡೆಸಿದರು.

ಶಾಸಕಾಂಗ ಪಕ್ಷಸಭೆಯಲ್ಲಿ ಮಾಜಿ ಸಚಿವ ಎಚ್‌.ಡಿ. ರೇವಣ್ಣ, ವಿಧಾನ ಪರಿಷತ್‌ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಅವರೂ ಸೇರಿದಂತೆ ಪಕ್ಷದ ಎಲ್ಲ 19 ನೂತನ ಶಾಸಕರು, ವಿಧಾನ ಪರಿಷತ್‌ನ ಎಲ್ಲ ಸದಸ್ಯರು ಹಾಜರಿದ್ದರು.

ಕಳೆದ ವಿಧಾನಸಭೆಯ ಅವಧಿಯಲ್ಲೂ ಕುಮಾರಸ್ವಾಮಿ ಅವರೇ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ಆಗ ಮೊದಲ ಹಂತದಲ್ಲಿ ಅವರು ಮುಖ್ಯಮಂತ್ರಿಯೂ ಆಗಿದ್ದರು.

ಏನ್ರೀ ಮುಹೂರ್ತ ನೋಡಿಕೊಂಡು ಬಂದ್ರಾ?

ಜೆಡಿಎಸ್‌ ನಾಯಕರಾದ ಎಚ್.ಡಿ ಕುಮಾರಸ್ವಾಮಿ ಮತ್ತು ಎಚ್‌.ಡಿ. ರೇವಣ್ಣ ಅವರು ವಿಧಾನಸಭಾ ಅಧಿವೇಶನದ ಮೊದಲ ಎರಡು ದಿನಗಳ ಕಾಲ ನಡೆದ ಶಾಸಕರ ಪ್ರಮಾಣವಚನ ಸ್ವೀಕಾರದ ಸಂದರ್ಭ ಪ್ರತಿಜ್ಞೆ ಸ್ವೀಕರಿಸಿರಲಿಲ್ಲ. ಬುಧವಾರ ಅವರಿಬ್ಬರೂ ಜತೆಯಾಗಿ ಬಂದು ಹಂಗಾಮಿ ಸ್ಪೀಕರ್‌ ಆರ್‌.ವಿ. ದೇಶಪಾಂಡೆ ಅವರಿಂದ ಪ್ರಮಾಣವಚನ ಸ್ವೀಕರಿಸಿದರು. ಇವರ ಜತೆಗೆ ಬಾಕಿ ಇದ್ದ ಇತರ ಆರು ಜೆಡಿಎಸ್‌ ಶಾಸಕರೂ ಪ್ರತಿಜ್ಞೆ ಸ್ವೀಕರಿಸಿದರು. ಈ ವೇಳೆ ಸ್ಪೀಕರ್‌ ದೇಶಪಾಂಡೆ ಅವರು, ʻಏನ್ರೀ ಮುಹೂರ್ತ ನೋಡಿಕೊಂಡು ಬಂದ್ರಾʼ ಎಂದು ನಗೆಚಟಾಕಿ ಹಾರಿಸಿದರು.

ಆರಂಭವಾಗಲಿದೆಯಾ ಬದಲಾವಣೆ ಪರ್ವ?

ಈ ನಡುವೆ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿರುವ ಜೆಡಿಎಸ್‌ ಪಕ್ಷದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯಲಿದೆ ಎಂದು ಹೇಳಲಾಗುತ್ತಿದೆ. ವಿಧಾನಸಭಾ ಚುನಾವಣೆಯ ಕಳಪೆ ಪ್ರದರ್ಶನ ದಿಂದ ಶಾಕ್ ಗೆ ಒಳಗಾಗಿದ್ದ ವರಿಷ್ಠರು ಈಗ ಸೋಲಿನ ಕಾರಣ ಹುಡುಕಿ, ಮತ್ತೆ ತಳಮಟ್ಟದಿಂದ ಸಂಘಟನೆ ಮಾಡಲು ಸಿದ್ಧತೆ ಆರಂಭಿಸಿದ್ದಾರೆ.

ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷ ಸ್ಥಾನವೂ ಸೇರಿದಂತೆ, ಎಲ್ಲ ಘಟಕಗಳಲ್ಲಿ ಬದಲಾವಣೆ ತರಲು ಚಿಂತನೆ ನಡೆದಿದೆ. ಇದರ ಪ್ರಕಾರ, ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ, ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕೂಡಾ ಬದಲಾಗುವ ಸಾಧ್ಯತೆ ಇದೆ.

ನಿಖಿಲ್‌ ಕುಮಾರಸ್ವಾಮಿ ಅವರು ಪಕ್ಷ ಮಾತ್ರವಲ್ಲ, ತಮ್ಮ ವೈಯಕ್ತಿಕ ಸೋಲಿನಿಂದ ಕಂಗಾಲಾಗಿದ್ದಾರೆ. ಮುಂದಿನ ಚುನಾವಣೆಗೆ ಸಾಕಷ್ಟು ಸಮಯವಿದೆ. ಈ ಸಮಯದಲ್ಲಿ ಸಿನಿಮಾಗಳತ್ತ ಗಮನ ಹರಿಸಲು ನಿಖಿಲ್ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಅವರು ಸದ್ಯಕ್ಕೆ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಈ ನಡುವೆ ಮಾಧ್ಯಮಗಳ ಜತೆ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ ಅವರು, ಮುಂದಿನ ದಿನಗಳಲ್ಲಿ ಪಕ್ಷದಲ್ಲಿರುವ ಮಾಜಿ ಶಾಸಕರು, ಮಾಜಿ ಸಚಿವರಿಗೆ ಜವಾಬ್ದಾರಿ ನೀಡಿ ಜಿಲ್ಲಾಮಟ್ಟದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಕೊಡುತ್ತೇವೆ ಎಂದರು. ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಗುರುವಾರದ ಸಭೆಯಲ್ಲಿ ಕಾರ್ಯಕರ್ತರು ನಿರ್ಧಾರ ಮಾಡುತ್ತಾರೆ. ಯಾವುದೇ ಮುಚ್ಚುಮರೆಯಿಲ್ಲ. ಪಕ್ಷದ ಸಂಘಟನಾ ದೃಷ್ಟಿಯಿಂದ ಎಲ್ಲಾ ರೀತಿಯ ಚರ್ಚೆ ಮಾಡುತ್ತೇವೆ ಎಂದರು.

ಇದನ್ನೂ ಓದಿ: H.D. Kumaraswamy: ಕರೆಂಟ್‌ ಬಿಲ್‌ ಕಟ್ಟಬೇಡಿ ಎಂದು ಜನರಿಗೆ ಕರೆ ನೀಡುತ್ತೇನೆ: ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಕೆ

Exit mobile version