ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ಇದೀಗ ಮತ್ತೊಮ್ಮೆ ಹಿಟ್ ಆ್ಯಂಡ್ ರನ್ ಆರೋಪಕ್ಕೆ ಗುರಿಯಾಗುವ ಸ್ಥಿತಿಯಲ್ಲಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪವಿರುವ ಆಡಿಯೋ ಫೈಲ್ ಇದೆ ಎಂದು ಪೆನ್‌ಡ್ರೈವ್(Pen Drive) ತೋರಿಸಿದ್ದ ಕುಮಾರಸ್ವಾಮಿ ಇಲ್ಲಿವರೆಗೆ ಅದನ್ನು ಬಹಿರಂಗಪಡಿಸಿಲ್ಲ.
ವಿಧಾನಸಭೆ ಅಧಿವೇಶನ ಆರಂಭದ ಸಮಯದಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದ ಎಚ್.ಡಿ. ಕುಮಾರಸ್ವಾಮಿ, ಪೆನ್‌ಡ್ರೈವ್ ಹಿಡಿದು ಬಂದಿದ್ದರು. ಇದರಲ್ಲಿ ಸರ್ಕಾರದ ಭ್ರಷ್ಟಾಚಾರದ ಕುರಿತು ಮಹತ್ವದ ಆಡಿಯೋ ಇದೆ. ಅದನ್ನು ಸದನದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದರು.
ಅದರ ನಂತರ ಬಿಜೆಪಿಯೂ ಇದೇ ವಿಷಯವನ್ನು ಮುಂದಾಗಿಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಿತ್ತು. ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ತೊಂದರೆ ಸೇರಿ ಅನೇಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಒಂದು ದಿನದ ಪ್ರತಿಭಟನೆಯನ್ನೂ ನಡೆಸಿತ್ತು.
ನಂತರ ಸದನದ ಒಳಗೆ ಹಾಗೂ ಹೊರಗೆ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಮಾತಿನ ಚಕಾಮಕಿ ನಡೆದೇ ಇದೆ. ಈ ಸಮಯದಲ್ಲಿ ಪೆನ್‌ಡ್ರೈವ್ ಸಾಕ್ಷಿ ಒದಗಿಸುವಂತೆ ಸರ್ಕಾರದ ಸಚಿವರು ಅನೇಕ ಬಾರಿ ಸವಾಲು ಹಾಕಿದ್ದಾರೆ. ಆದರೆ ಎಚ್.ಡಿ. ಕುಮಾರಸ್ವಾಮಿ ಇಲ್ಲಿವರೆಗೆ ಪೆನ್‌ಡ್ರೈವ್‌ನಲ್ಲಿರುವ ಮಾಹಿತಿ ಬಹಿರಂಗಪಡಿಸಿಲ್ಲ.
ಇದಕ್ಕಾಗಿಯೇ ಸರ್ಕಾರದ ಸಚಿವರು ಕುಮಾರಸ್ವಾಮಿ ವಿರುದ್ಧ ಮತ್ತೆ ಹಿಟ್ ಆ್ಯಂಡ್ ರನ್ ಆರೋಪ ಮುಂದುವರಿಸಿದ್ದಾರೆ. ಕುಮಾರಸ್ವಾಮಿ ಸೀರಿಯಸ್ ಪೊಲಿಟೀಷಿಯನ್ ಅಲ್ಲ ಎಂದು ಒಂದು ಕಾಲದ ಜೆಡಿಎಸ್ ಶಾಸಕ ಹಾಗೂ ಇದೀಗ ಕಾಂಗ್ರೆಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಹೇಳಿದ್ದಾರೆ. ಕುಮಾರಸ್ವಾಮಿ ಒಬ್ಬ ಸೀರಿಯಸ್ ಪೊಲಿಟೀಷಿಯನ್ ಅಲ್ಲ. ಸುಮ್ನೆ ಅದನ್ನು ಬಿಡ್ತೀನಿ, ಇದನ್ನ ಬಿಡ್ತೀನಿ ಅಂತಾರೆ. ಯಾವ ವಿಚಾರವನ್ನು ಅವರು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರೆ ಹೇಳಿ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Pen Drive Issue: ಕಸ ಗುಡಿಸೋಣ ನಡೀರಿ: HDK ಪೆನ್‌ಡ್ರೈವ್ ಪ್ರಶ್ನೆಗೆ ಶಿವಕುಮಾರ್ ಉತ್ತರ
ವಿಧಾನಸೌಧಕ್ಕೆ ಆಗಮಿಸುವ ಸಮಯದಲ್ಲಿ ಮಾಧ್ಯಮಗಳೂ ನಿರಂತರ ಇದೇ ಪ್ರಶ್ನೆಯನ್ನು ಎಚ್.ಡಿ. ಕುಮಾರಸ್ವಾಮಿಯವರಿಗೆ ಕೇಳುತ್ತಿವೆ. ಪೆನ್‌ಡ್ರೈವ್ ಯಾವಾಗ ಬಿಡುಗಡೆ ಮಾಡುತ್ತೀರ ಎಂಬ ಪ್ರಶ್ನೆಗೆ, ಇನ್ನೂ ಏಕೆ ಅವಸರ? ಕಾಲ ಬಂದಾಗ ಬಿಡುತ್ತೇನೆ ಎನ್ನುತ್ತಲೇ ಇದ್ದಾರೆ. ಕುಮಾರಸ್ವಾಮಿಯವರ ವಿರುದ್ಧ ಪ್ರತಿಪಕ್ಷಗಳು ಈ ಹಿಂದೆಯೂ ಅನೇಕ ಬಾರಿ ಹಿಟ್ ಆ್ಯಂಡ್ ರನ್ ಆರೋಪ ಮಾಡಿವೆ. ಆದರೆ ತಾವು ಅಂತಹ ಕೆಲಸ ಮಾಡುವುದಿಲ್ಲ, ವಿಚಾರಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದೀಗ ದಾಖಲೆ ಬಿಡುಗಡೆ ಮಾಡಿ ನೈತಿಕತೆ ಸಾಬೀತುಪಡಿಸುವ ಸ್ಥಿತಿಯಲ್ಲಿ ಕುಮಾರಸ್ವಾಮಿ ಇದ್ದಾರೆ.