Site icon Vistara News

HD Kumaraswamy : ಬಿಜೆಪಿ ಕಡೆ JDS ನಡೆ; ಇನ್ನೊಂದು ಹೆಜ್ಜೆ ಇಟ್ಟ HDK, ಬೊಮ್ಮಾಯಿ ಜತೆ ಜಂಟಿ ಸುದ್ದಿಗೋಷ್ಠಿ

JDS Kumaraswamy BJP

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯ (Karnataka Assembly Elections) ನಂತರ ಹೆಜ್ಜೆ ಹೆಜ್ಜೆಗೂ ಬಿಜೆಪಿಯ ಜತೆ ಹೆಜ್ಜೆ ಹಾಕುತ್ತಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರು ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಅವರು ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿದ್ದಾರೆ. ಶುಕ್ರವಾರ ಮಧ್ಯಾಹ್ನ 12.30ಕ್ಕೆ ಇಬ್ಬರೂ ನಾಯಕರು ಜತೆಯಾಗಿ ಕುಳಿತು ಪತ್ರಿಕಾಗೋಷ್ಠಿ (Joint press meet) ನಡೆಸಿದರು.

ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಕೂಟದ ನಾಯಕರ ಸಭೆಗೆ ರಾಜಕಾರಣಿಗಳನ್ನು ಕರೆ ತರಲು ಐಎಎಸ್‌ ಅಧಿಕಾರಿಗಳನ್ನು ಬಳಸಿಕೊಳ್ಳುವ ಮೂಲಕ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಎಚ್‌.ಡಿ ಕುಮಾರಸ್ವಾಮಿ ಅವರು ಮಾಡಿದ ಆರೋಪವನ್ನು ಬಿಜೆಪಿ ತನ್ನದೇ ಎಂಬಂತೆ ಆವಾಹಿಸಿಕೊಂಡು ವಿಧಾನಸಭೆಯಲ್ಲಿ ಗದ್ದಲ ನಡೆಸಿತ್ತು. ಈ ವೇಳೆ ಸ್ಪೀಕರ್‌ ಸ್ಥಾನದಲ್ಲಿದ್ದ ರುದ್ರಪ್ಪ ಲಮಾಣಿ ಅವರ ಮೇಲೆ ಕಾಗದದ ಚೂರುಗಳನ್ನು ಎಸೆದು ಅಪಮಾನ ಮಾಡಲಾಗಿದೆ ಎಂಬ ಆರೋಪದೊಂದಿಗೆ ಬಿಜೆಪಿಯ 10 ಮಂದಿಯನ್ನು ಕಪಾಲದಿಂದ ಅಮಾನತು ಮಾಡಲಾಗಿತ್ತು. ಈ ಘಟನೆಯನ್ನು ಖಂಡಿಸುವಲ್ಲಿ ಎಚ್‌.ಡಿ. ಕುಮಾಸ್ವಾಮಿ ಬಿಜೆಪಿ ಜತೆಗೆ ನಿಂತಿದ್ದರು.

ಗುರುವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿಯ ಜತೆ ನಿಯೋಗದಲ್ಲಿ ಹೋಗಿ ರಾಜ್ಯಪಾಲರಿಗೆ ದೂರು (Complaint to Governor) ನೀಡಿದ್ದ ಕುಮಾರಸ್ವಾಮಿ ಅವರು ಬಿಜೆಪಿಯ ಲೆಟರ್‌ಹೆಡ್‌ನಲ್ಲಿ ನೀಡಿದ ದೂರಿಗೆ ಮೊದಲನೆಯವರಾಗಿ ಸಹಿ ಹಾಕಿ ಅಚ್ಚರಿ ಮೂಡಿಸಿದ್ದರು. ಇದು ಒಂದೋ ಕುಮಾರಸ್ವಾಮಿ ಅವರು ಬಿಜೆಪಿ ಹೋಗುತ್ತಾರೆ, ಜೆಡಿಎಸ್‌ನ್ನು ವಿಲೀನಗೊಳಿಸುತ್ತಾರೆ, ಇಲ್ಲವೇ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬೆಲ್ಲ ಚರ್ಚೆಗಳಿಗೆ ಸ್ಪಷ್ಟ ದಿಕ್ಕೊಂದನ್ನು ತೋರಿಸಿತ್ತು.

ಇದೀಗ ಕುಮಾರಸ್ವಾಮಿ ಅವರು ಬಸವರಾಜ ಬೊಮ್ಮಾಯಿ ಅವರ ಜತೆ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿರುವುದು ಬಿಜೆಪಿ-ಜೆಡಿಎಸ್‌ ಸಂಗದ ಮತ್ತೊಂದು ಉದಾಹರಣೆಯಂತೆ ಕಾಣುತ್ತಿದೆ.

ಆರಂಭದಿಂದಲೂ ಜೆಡಿಎಸ್‌-ಬಿಜೆಪಿ ಜೋಡೆತ್ತು!

ವಿಧಾನಮಂಡಲದ ಅಧಿವೇಶನ ಆರಂಭವಾದ ದಿನದಿಂದಲೂ ಬಿಜೆಪಿ ಮತ್ತು ಜೆಡಿಎಸ್‌ ಜೋಡೆತ್ತುಗಳಂತೆ ವರ್ತಿಸುತ್ತಿರುವುದು ಸ್ಪಷ್ಟವಾಗಿದೆ. ಚುನಾವಣೆಯ ಬಳಿಕ ಕುಮಾರಸ್ವಾಮಿ ಅವರು ಮಾಡುವ ಆರೋಪಗಳಿಗೆ ಬಿಜೆಪಿ ಬೆಂಬಲ ನೀಡಿದ್ದರೂ ಅದೆಲ್ಲವೂ ಢಾಳಾಗಿ ಕಂಡಿದ್ದು ವಿಧಾನ ಮಂಡಲ ಅಧಿವೇಶನ ಆರಂಭದ ಜತೆಜತೆಗೇ ಕುಮಾರಸ್ವಾಮಿ ಅವರು ಸರ್ಕಾರದ ಮೇಲೆ ವರ್ಗಾವಣೆ ದಂಧೆ ಆರೋಪ ಮಾಡಿದಾಗ.

ಕುಮಾರಸ್ವಾಮಿ ಅವರು ಹಗರಣಕ್ಕೆ ಸಂಬಂಧಿಸಿದ ದಾಖಲೆಗಳಿವೆ ಎಂದು ಪೆನ್‌ ಡ್ರೈವ್‌ ಹಿಡಿದುಕೊಂಡು ಬಂದಾಗ ಬಿಜೆಪಿ ನಾಯಕರೇ ಬೆಂಬಲಿಸಿದ್ದರು. ಸ್ವತಃ ಮಾಜಿ ಮುಖ್ಯಮಂತ್ರಿ ಬಿಎಸ್‌. ಯಡಿಯೂರಪ್ಪನವರೂ ಕುಮಾರಸ್ವಾಮಿ ಅವರ ಹೋರಾಟವನ್ನು ಬಿಜೆಪಿ ಬೆಂಬಲಿಸುತ್ತದೆ ಎಂದು ಹೇಳಿದ್ದರು. ಸದನದಲ್ಲಂತೂ ಎರಡೂ ಪಕ್ಷಗಳ ಸಾಂಗತ್ಯ ಕಣ್ಣಿಗೆ ರಾಚುವಂತಿತ್ತು.

ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನ ಆಯ್ಕೆಯನ್ನೇ ನಡೆಸದೆ ಇರುವ ಈ ಹೊತ್ತಿನಲ್ಲೂ ಬಿಜೆಪಿ-ಜೆಡಿಎಸ್‌ ವಿಲೀನಗೊಂಡು ಎಚ್‌.ಡಿ. ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕರಾಗುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.

ಸ್ವಲ್ಪ ಹಿನ್ನಡೆಯಾಯಿತಾ? ದೇವೇಗೌಡರ ಸ್ವತಂತ್ರ ಸ್ಪರ್ಧೆ ಕಥೆ ಏನು?

ಈ ನಡುವೆ, ಜೆಡಿಎಸ್‌ ಬಿಜೆಪಿ ಕೂಟದ ಕಡೆಗೆ ವಾಲಿದೆ ಎಂಬ ಸ್ಪಷ್ಟ ಸಂದೇಶ ಪಡೆದ ಬಳಿಕ ವಿಪಕ್ಷಗಳ ಮಿತ್ರಕೂಟಗಳ ಸಭೆಯಿಂದಲೇ ಅದನ್ನು ಹೊರಗೆ ಇಡಲಾಗಿತ್ತು. ಅದೇ ದಿನ ಎನ್‌ಡಿಎ ಕೂಟದ ಸಭೆ ನಡೆದರೂ ಅಲ್ಲೂ ಆಹ್ವಾನ ಬಂದಿರಲಿಲ್ಲ. ಹೀಗಾಗಿ ಜೆಡಿಎಸ್‌ ಕತೆ ಎಡಬಿಡಂಗಿ ಆಯ್ತಾ ಎನ್ನುವ ಚರ್ಚೆ ನಡೆದಿತ್ತು. ಇದರ ನಡುವೆಯೇ ಜೆಡಿಎಸ್‌ ವರಿಷ್ಠ ಎಚ್.ಡಿ ದೇವೇಗೌಡ ಅವರು ಉನ್ನತ ಸಭೆ ನಾಯಕರ ಸಭೆಯೊಂದನ್ನು ನಡೆಸಿದ್ದಾರೆ. ಅದರಲ್ಲಿ ಜೆಡಿಎಸ್‌ ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ ಎಂಬ ಸಂದೇಶ ನೀಡಿದ್ದಾರೆ. ಹಾಗಿದ್ದರೆ ಬಿಜೆಪಿ ಕಡೆಗೆ ಹೋಗುತ್ತಿರುವುದು ಕುಮಾರಸ್ವಾಮಿ ಮಾತ್ರವೇ ಎಂಬ ಚರ್ಚೆಯೊಂದು ಹುಟ್ಟಿಕೊಂಡಿದೆ.

ಹೊಸ ರಾಜಕೀಯ ಮಿಶ್ರಣಕ್ಕೆ ಕಾಂಗ್ರೆಸ್‌ ವ್ಯಂಗ್ಯ; ನಾಗವಲ್ಲಿಯಂತೆ!

ಈ ನಡುವೆ ಕುಮಾರಸ್ವಾಮಿ ಮತ್ತು ಬಿಜೆಪಿ ನಡುವಿನ ಸಾಂಗತ್ಯವನ್ನು ಕಾಂಗ್ರೆಸ್‌ ನಾಗವಲ್ಲಿಗೆ ಹೋಲಿಸಿ ವ್ಯಂಗ್ಯ ಮಾಡಿದೆ.

ಹೊಸ ರಾಜಕೀಯ ಸಮ್ಮಿಶ್ರಣವೊಂದು ತಯಾರಾಗುತ್ತಿದೆ. ಈಗ ನಮಗಿರುವ ಪ್ರಶ್ನೆ, ಜೆಡಿಎಸ್ ಕೋಮುವಾದವನ್ನು ಅಳವಡಿಸಿಕೊಳ್ಳುತ್ತದೆಯೇ ಅಥವಾ ಬಿಜೆಪಿ ಜಾತ್ಯತೀತತೆಯನ್ನು ಅಳವಡಿಸಿಕೊಳ್ಳುತ್ತದೆಯೇ? ಬೆಳವಣಿಗೆಗಳನ್ನು ನೋಡುತ್ತಿದ್ದರೆ ಜೆಡಿಎಸ್ ಕೋಮುವಾದ ಸಿದ್ಧಾಂತಕ್ಕೆ ಬದಲಾಗುತ್ತಿರುವುದು ಕಾಣುತ್ತಿದೆ, ಥೇಟ್. ನಾಗವಲ್ಲಿಯ ತರ!! ಎಂದು ಟ್ವೀಟ್‌ ಮಾಡಿದೆ.

ಇದನ್ನೂ ಓದಿ: HD Kumaraswamy : ಬಿಜೆಪಿ ಲೆಟರ್‌ಹೆಡ್‌ನಲ್ಲಿ ರಾಜ್ಯಪಾಲರಿಗೆ ದೂರು; ಮೊದಲ ಸಹಿಯೇ ಕುಮಾರಸ್ವಾಮಿ, ಸೇರೇಬಿಟ್ರಾ ಹಾಗಿದ್ರೆ?

Exit mobile version