ಕೋಲಾರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಪಂಚರತ್ನ ಯಾತ್ರೆಯನ್ನು ಕೈಗೊಂಡಿದ್ದಾರೆ. ಈಗ ಕೋಲಾರದಲ್ಲಿ ರೈತ ಯುವಕನೊಬ್ಬ ವಿಶಿಷ್ಟ ಬೇಡಿಕೆಯೊಂದನ್ನು ಇಟ್ಟಿದ್ದು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಕೂಡಲೇ “ಆಯಾ ಜಿಲ್ಲೆಯ ವಧುವು ಅದೇ ಜಿಲ್ಲೆಯ ವರನನ್ನೇ ವರಿಸಬೇಕು” ಎಂಬ ನಿಯಮವನ್ನು ಜಾರಿಗೆ ತರಬೇಕು ಎಂದು ಪತ್ರ ಬರೆದು ಕೋರಿದ್ದಾನೆ.
ಎಚ್.ಡಿ. ಕುಮಾರಸ್ವಾಮಿ ಅವರು ಪ್ರಸ್ತುತ ಕೋಲಾರದಲ್ಲಿ ಪಂಚರತ್ನ ರಥಯಾತ್ರೆಯನ್ನು ಕೈಗೊಂಡಿದ್ದು, ಈ ವೇಳೆ ರೈತ ಯುವಕ ಎಂ.ಕೆ. ಧನಂಜಯಕುಮಾರ್ ಎಂಬಾತ ಜಿಲ್ಲೆಯ ಯುವಕರಿಗೆ ವಧುಗಳ ಕೊರತೆಯನ್ನು ನೀಗಿಸಲು ಕ್ರಮ ವಹಿಸುವಂತೆ ಮನವಿ ಮಾಡಿದ್ದಾನೆ.
ಪತ್ರದಲ್ಲೇನಿದೆ?
ಕೋಲಾರ ಜಿಲ್ಲೆಯಲ್ಲಿ ಒಕ್ಕಲುತನ ಮಾಡುವ ರೈತರ ಮಕ್ಕಳಿಗೆ ವಧುಗಳು ಸಿಗದೆ ಸಮಸ್ಯೆಯಾಗುತ್ತಿದೆ. ಜಿಲ್ಲೆಯಲ್ಲಿ ಎಷ್ಟೋ ಜನ ಗಂಡು ಮಕ್ಕಳಿಗೆ ವಯಸ್ಸು ಮೀರುತ್ತಿದೆ. ಹಲವರಿಗೆ ೩೫, ೪೦, ೪೫ ವರ್ಷಗಳಾದರೂ ಹೆಣ್ಣುಗಳೇ ಸಿಗುತ್ತಿಲ್ಲ. ಇದೊಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಕಾರಣ ನಮ್ಮ ಜಿಲ್ಲೆಯಲ್ಲಿನ ಹೆಣ್ಣು ಮಕ್ಕಳನ್ನು ಹೊರ ಜಿಲ್ಲೆಗಳ ವರರಿಗೆ ಮದುವೆ ಮಾಡಿ ಕೊಡಲಾಗುತ್ತಿದೆ. ಈ ಬಾರಿ ತಾವು ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸುತ್ತೀರಿ, ಈ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೀರಿ ಎಂದು ನಂಬಿದ್ದೇನೆ.
ಈ ಸಂದರ್ಭದಲ್ಲಿ ತಾವುಗಳು ದಯಮಾಡಿ ಈ ರೀತಿಯ ನಿಯಮವನ್ನು ಜಾರಿಗೆ ತರಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. ನಿಯಮವೇನೆಂದರೆ ಎಲ್ಲ ಜಿಲ್ಲೆಗಳಲ್ಲಿ ತಮ್ಮ ಜಿಲ್ಲೆಯ ಹೆಣ್ಣು ಮಕ್ಕಳನ್ನು ಬೇರೆ ಜಿಲ್ಲೆಗಳಿಗೆ ಮದುವೆ ಮಾಡಿ ಕೊಡಬಾರದು. ಅವರು ಆಯಾ ಜಿಲ್ಲೆಗಳ ಗಂಡುಗಳನ್ನೇ ಮದುವೆ ಮಾಡಿಕೊಳ್ಳಬೇಕೆಂಬ ನಿಯಮವನ್ನು ಜಾರಿಗೆ ತರಬೇಕು ಎಂದು ಪತ್ರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ | JDS Pancharatna | ಕುತಂತ್ರ ರಾಜಕಾರಣದಿಂದ ಎಲೆಕ್ಷನ್ ಗೆಲ್ಲಲು ಬಿಜೆಪಿ ಯತ್ನ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ