Site icon Vistara News

BJP JDS Alliance: ಬಿಜೆಪಿ-ಜೆಡಿಎಸ್ ಮೈತ್ರಿ ಘೋಷಣೆ; ಕಾಂಗ್ರೆಸ್ ಮಣಿಸಲು ಅಮಿತ್ ಶಾ-ಕುಮಾರಸ್ವಾಮಿ ಪಣ

HD Kumaraswamy Meets Amit Shah

HD Kumaraswamy Meets Amit Shah; BJP And JDS Alliance Final In Karnataka

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ದೃಷ್ಟಿಯಿಂದ ಕೊನೆಗೂ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಗೆ (BJP JDS Alliance) ಅಧಿಕೃತ ಮುದ್ರೆ ಬಿದ್ದಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ಭೇಟಿಯಾದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಎರಡೂ ಪಕ್ಷಗಳ ಮೈತ್ರಿಗೆ ಅಧಿಕೃತ ಮುದ್ರೆ ಒತ್ತಿದರು. ಇದರಿಂದ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಕುರಿತು ಕೆಲ ದಿನಗಳಿಂದ ಶುರುವಾಗಿದ್ದ ತೀವ್ರ ಚರ್ಚೆ, ವಿವಾದ, ವಾಗ್ವಾದ ಕೊನೆಯಾದಂತಾಗಿದೆ.

ಅಮಿತ್‌ ಶಾ ನಿವಾಸದಲ್ಲಿ ಮೈತ್ರಿ ಮಾತುಕತೆ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮೂಲಕ ಮೈತ್ರಿಯನ್ನು ಘೋಷಿಸಿದರು. “ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಮ್ಮುಖದಲ್ಲಿ ಕರ್ನಾಟಕ ಮಾಜಿ ಸಿಎಂ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಾಯಿತು. ಎನ್‌ಡಿಎ ಒಕ್ಕೂಟಕ್ಕೆ ಜೆಡಿಎಸ್‌ ಕೂಡ ಸೇರ್ಪಡೆಯಾಗಿರುವುದು ಸಂತಸ ತಂದಿದೆ. ನರೇಂದ್ರ ಮೋದಿ ಅವರ ಆಶಯಗಳನ್ನು ಸಾಕಾರಗೊಳಿಸಲು ಈ ಮೈತ್ರಿ ನೆರವಾಗಲಿದೆ” ಎಂದು ತಿಳಿಸಿದ್ದಾರೆ.

ಬಿಜೆಪಿ ಜತೆ ಮೈತ್ರಿ ಕುರಿತು ಬಳಿಕ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, “ಈಗ ಮೈತ್ರಿ ಕುರಿತು ಅಷ್ಟೇ ಮಾತನಾಡಲಾಗಿದೆ. ಮುಂದಿನ ದಿನಗಳಲ್ಲಿ ಸೀಟು ಹಂಚಿಕೆ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ” ಎಂದಷ್ಟೇ ಹೇಳಿದರು. ಎಚ್‌.ಡಿ. ಕುಮಾರಸ್ವಾಮಿ ಅವರು ಅಮಿತ್‌ ಶಾ ಅವರನ್ನು ಭೇಟಿ ಮಾಡುವ ವೇಳೆ ನಿಖಿಲ್‌ ಕುಮಾರಸ್ವಾಮಿ ಕೂಡ ಉಪಸ್ಥಿತರಿದ್ದರು.

ಜೆಡಿಎಸ್‌ನ ಪ್ರಮುಖ ಬೇಡಿಕೆಗಳೇನು?

ಅಮಿತ್‌ ಶಾ ಹಾಗೂ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ ವೇಳೆ ಎಚ್.ಡಿ. ಕುಮಾರಸ್ವಾಮಿ ಅವರು ಹಲವು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. “ಸೀಟು ಹಂಚಿಕೆ ವೇಳೆ ಐದು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಡಬೇಕು. ಹಳೇ ಮೈಸೂರು, ಕಲ್ಯಾಣ ಕರ್ನಾಟಕದಲ್ಲಿ ಒಂದು ಕ್ಷೇತ್ರ ಬೇಕು. ರಾಯಚೂರು ಲೋಕಸಭೆ ಕ್ಷೇತ್ರವನ್ನೂ ಜೆಡಿಎಸ್‌ಗೆ ಬಿಡಬೇಕು. ಹಾಗೆಯೇ, ರಾಜ್ಯ ಬಿಜೆಪಿಯ ನಾಯಕತ್ವ ಸಮಸ್ಯೆಯನ್ನು ಬಗೆಹರಿಸಬೇಕು. ರಾಜ್ಯ ಬಿಜೆಪಿಯಲ್ಲಿ ಮೂರು ಬಣಗಳಿವೆ. ಇವರ ನಡುವಿನ ಅಸಮಾಧಾನ ಶಮನಗೊಳಿಸಬೇಕು. ಹಾಗೆಯೇ, ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಒಂದಾಗುವ ದಿಸೆಯಲ್ಲಿ ಕಾರ್ಯಕ್ರಮ ರೂಪಿಸಬೇಕು. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಗೆಲುವಿಗೆ ಸಹಕಾರಿಯಾಗಲಿದೆ” ಎಂಬುದಾಗಿ ಅಮಿತ್‌ ಶಾ ಎದುರು ಕುಮಾರಸ್ವಾಮಿ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: BJP-JDS Alliance : ಬಿಜೆಪಿ ಮೈತ್ರಿ ಟೀಕಿಸಿದ ಕಾಂಗ್ರೆಸ್‌ಗೆ ಜೆಡಿಸ್‌ ತಿರುಗೇಟು; ನೀವು ಯಾರ‍್ಯಾರ ಬಾಗಿಲು ಕಾದಿದ್ದೀರಿ?

ಪಕ್ಷದ ನಿಷ್ಠೆಗೆ ಬದ್ಧ ಎಂದ ರೇವಣ್ಣ

ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವಿನ ಮೈತ್ರಿ ಬಗ್ಗೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. “ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧನಾಗಿದ್ದೇನೆ. ಎಚ್‌.ಡಿ.ದೇವೇಗೌಡ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಏನು ತೀರ್ಮಾನ ತೆಗೆದುಕೊಂಡರೂ ಸ್ವಾಗತವಿದೆ. ಅದರಂತೆ ನಾವು ಕಾರ್ಯನಿರ್ವಹಿಸುತ್ತೇವೆ” ಎಂದಿದ್ದಾರೆ.

Exit mobile version