ರಾಮನಗರ: ನನಗೆ ಎರಡು ಖಾತೆಗಳನ್ನು ಕೊಟ್ಟಿದ್ದಾರೆ. ನಿರುದ್ಯೋಗ ನಿವಾರಣೆಗೆ ಇಡೀ ದೇಶದಲ್ಲಿ ಕೆಲಸ ಮಾಡಬೇಕಿದೆ. ಹೊರರಾಜ್ಯಗಳಲ್ಲಿ ಕೆಲಸ ಮಾಡೋದಕ್ಕೂ ಯುವಕರು ಮಾನಸಿಕವಾಗಿ ಸಿದ್ಧರಾಗಬೇಕು. ಚನ್ನಪಟ್ಟಣ ಜನರನ್ನು ಭಯಪಡಿಸಲು ಆಗಲ್ಲ. ಮಂಡ್ಯ ಸೀಮೆಯ ಗಾಳಿ ಈ ಭಾಗದಲ್ಲಿ ಇದೆ ಎಂದು ಪರೋಕ್ಷವಾಗಿ ಡಿಕೆ ಬ್ರದರ್ಸ್ ವಿರುದ್ಧ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಚನ್ನಪಟ್ಟಣಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಈ ಹಿಂದೆ ಯೋಗೇಶ್ವರ್ ಸಚಿವರಾಗಿ ದೇವೇಗೌಡರು ಕಟ್ಟಿದ ಇಗ್ಗಲೂರಿನಿಂದ ನೀರು ತಂದರು. ನಾವು ಜಾಹೀರಾತಿನಿಂದ ಪ್ರಚಾರ ತೆಗೆದುಕೊಳ್ಳಲಿಲ್ಲ. ಜನರ ಕಷ್ಟ ಅರ್ಥ ಮಾಡಿಕೊಂಡು ಬಂದಿದ್ದೇನೆ. ಈ ರಾಜ್ಯದಲ್ಲಿ ಮತ್ತೆ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ನಾನು ಕೃಷಿ ಸಚಿವ ಆಗದೇ ಇರಬಹುದು. ದೇವೇಗೌಡರಿಗೆ ಪ್ರಧಾನಿ ಕೂಡ ಗೌರವ ಕೊಡುತ್ತಾರೆ. ಅದರಂತೆ ನನಗೂ ಸ್ವಲ್ಪ ಗೌರವ ಇದೆ. ಸ್ಮಾರ್ಟ್ ಸಿಟಿ ಯೋಜನೆ ತರುವ ನಿಟ್ಟಿನಲ್ಲಿ ಕೆಲಸ ಮಾಡುವೆ ಎಂದು ಹೇಳಿದರು.
ಚನ್ನಪಟ್ಟಣ ನಗರಸಭೆ ಜನ ಹೆಚ್ಚು ಮತ ಕೊಟ್ಟರೂ ಅಭಿವೃದ್ಧಿ ಕುಂಠಿತವಾಯಿತು. ನಮ್ಮ ಎದುರಾಳಿಗಳು ನಮ್ಮನ್ನು ಸೋಲಿಸುವುದಕ್ಕೆ ಆಗಲ್ಲ ಎಂದಿದ್ದರು. ಬಹಳ ಅಭಿವೃದ್ಧಿ ಕೆಲಸ ಮಾಡಿದ್ದೇನೆ, ಕೂಲಿ ಕೊಡುತ್ತಾರೆ ಎಂತಿದ್ದರು. ಅದೇನೋ ಮಾತು ಎತ್ತಿದರೆ ಸಾಕ್ಷಿ ಗುಡ್ಡೆ ಎನ್ನುತ್ತಾರೆ. ಸಾಕ್ಷಿ ಗುಡ್ಡೆ ನೋಡಬೇಕು ಎಂದರೆ ಕನಕಪುರ ಮಾತ್ರ ಸಾಧ್ಯ. ಉಳಿದಂತೆ ಜಿಲ್ಲೆಯ ಯಾವ ಕ್ಷೇತ್ರವು ಅಭಿವೃದ್ಧಿ ಆಗಿಲ್ಲ. ಇದೀಗ ಚನ್ನಪಟ್ಟಣ ಕ್ಷೇತ್ರದ ಮೇಲೆ ವಕ್ರ ದೃಷ್ಟಿ ಬಿದ್ದಿದೆ ಎಂದು ಡಿಕೆ ಸಹೋದರರನ್ನು ಟೀಕಿಸಿದರು.
3 ಕೋಟಿ ಮನೆಗಳನ್ನು ಕಟ್ಟುವ ನಿರ್ಧಾರವನ್ನು ಪ್ರಧಾನಮಂತ್ರಿ ಮಾಡಿದ್ದಾರೆ. ನಾನು ಹುಟ್ಟಿದ್ದು ಹಾಸನ ಜಿಲ್ಲೆಯಾದರೂ ರಾಜಕೀಯ ಶಕ್ತಿ ಕೊಟ್ಟಿದ್ದು ಈ ಜಿಲ್ಲೆಯ ಜನ. ಮಂಡ್ಯ ಜಿಲ್ಲೆಯ ಜನ ಅತ್ಯಂತ ಮುಗ್ಧರು. 50 ವರ್ಷಗಳ ಹಿಂದೆ ಹೇಗಿತ್ತೋ, ಅದೇ ರೀತಿಯಲ್ಲಿ ಆ ಜಿಲ್ಲೆ ಇನ್ನೂ ಉಳಿದಿದೆ. ಕುಮಾರಣ್ಣ ಬಂದ್ರೆ ಏನೋ ಒಳ್ಳೆ ಕೆಲಸ ಮಾಡುತ್ತಾರೆ ಅಂದುಕೊಂಡಿದ್ದಾರೆ, ಹೀಗಾಗಿ ನನ್ನನ್ನು ಸಂಸದನಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ನಿಮ್ಮೆಲರ ಒಪ್ಪಿಗೆ ಪಡೆದು ಅನಿವಾರ್ಯವಾಗಿ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾದೆ. ಈ ಬಗ್ಗೆ ಹಲವಾರು ನಾಯಕರಿಗೆ ಅಸಮಾಧಾನವಾಗಿದೆ. ನಾನು ರಾಮನಗರದಲ್ಲಿ ಶಾಸಕನಾಗಿದ್ದಾಗ ಚನ್ನಪಟ್ಟಣಕ್ಕೆ ಬರಬೇಕು ಎಂದಿದ್ದರು. ಅಭಿಮಾನಿಗಳು, ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚನ್ನಪಟ್ಟಣದ ಶಾಸಕನಾದೆ. ಈ ಬಾರಿ ಲೋಕಸಭೆ ಚುನಾವಣೆಗೆ ನಿಲ್ಲಬೇಕು ಅಂದುಕೊಂಡಿರಲಿಲ್ಲ. ಈ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಇರಬೇಕೋ ಬೇಡವೋ ಅನ್ನೋ ಪರಿಸ್ಥಿತಿಯಾಗಿತ್ತು. ಮಂಡ್ಯದಲ್ಲಿಯೂ ನಾನು ಹೋಗದೇ ಇದ್ದರೂ ಗೆಲ್ಲಿಸಿದ್ದಾರೆ ಎಂದು ತಿಳಿಸಿದರು.
ಕಳೆದ ವಿಧಾಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಮತ್ತೆ ಸಿಎಂ ಆಗುತ್ತಾರೆ ಅಂದುಕೊಂಡಿದ್ದಿರಿ. ಈಗ ನಾನು ಲೋಕಸಭೆಯಲ್ಲಿ ನಿಲ್ಲಬೇಕಾಯ್ತು. ಕೇಂದ್ರದಲ್ಲಿ ಕೃಷಿ ಸಚಿವನಾದರೆ ರೈತರಿಗೆ ಅನುಕೂಲವಾಗುತ್ತೆ ಅಂದುಕೊಂಡಿದ್ದಿರಿ. ಎಲ್ಲೇ ಹೋದರೂ ಕೃಷಿ ಸಚಿವ ಅಂತ ಘೋಷಣೆ ಮಾಡುತ್ತಿದ್ದರು. ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ದೇವೇಗೌಡರ ಮಾರ್ಗದರ್ಶನದಲ್ಲಿ ಹಳ್ಳಿಗಳ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಹಿಂದೆ ಎರಡು ಬಾರಿ ಸಿಎಂ ಆದಾಗ ಈ ರಾಜ್ಯದ ಜನ ಗುರುತಿಸಿದ್ದಾರೆ. ಇಲ್ಲಿ ಸಭೆ ಮಾಡಿದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಂದುಕೊಂಡೆ. ಹಲವು ನಾಯಕರು ಇಷ್ಟೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದೀರಿ, ಉದ್ಘಾಟನೆ ನಾನೇ ಮಾಡುವಂತೆ ಒತ್ತಡ ಹಾಕಿದ್ದರು. ಹೀಗಾಗಿ ಈ ಕಾರ್ಯಕ್ರಮ ಬಳಿಕ ಸಂಜೆ ರಾಜೀನಾಮೆ ಅಂಗೀಕಾರ ಮಾಡುವಂತೆ ಸ್ಪೀಕರ್‌ಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.