ಬೆಂಗಳೂರು: ಜೆಡಿಎಸ್ ಪಕ್ಷಕ್ಕೆ ಯಾವುದೇ ಸಿದ್ಧಾಂತವಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಮಾತಿಗೆ ಕೆಂಡಾಮಂಡಲವಾಗಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಈಗ ಮಹಾಘಟಬಂಧನದಲ್ಲಿ ಸೇರುತ್ತಿರುವವರಿಗೆ (Opposition Meet) ಯಾವ ಸಿದ್ಧಾಂತವಿದೆ ಎಂದು ಪ್ರಶ್ನಿಸಿದ್ದಾರೆ.
ಅವರಿಗೆ ಯಾವ ಸಿದ್ದಾಂತವಿದೆ? ನಿತೀಶ್ ಕುಮಾರ್, ಉಮರ್ ಅಬ್ದುಲ್ಲಾಗೆ ಯಾವ ಸಿದ್ದಾಂತವಿದೆ? ಯಾವಾಗ ಕಾಂಗ್ರೆಸ್ ಜತೆ ಇದ್ದರು, ಬಿಜೆಪಿ ಜತೆಗೆ ಯಾವಾಗ ಸರ್ಕಾರ ಮಾಡಿದರು ಎಲ್ಲದಕ್ಕೂ ಉದಾಹರಣೆಗಳಿದೆ. ಎಷ್ಟು ಪ್ರಕರಣಗಳಿವೆ? ಜೆಡಿಎಸ್‌ಗೆ ಮಾತ್ರ ಸಿದ್ದಾಂತವಿಲ್ಲವೇ? ಇವರಿಗೆ ಮಾತ್ರ ಸಿದ್ದಾಂತವಿದೆಯೇ?
2008-2009ರಲ್ಲಿ ಕಾಂಗ್ರೆಸ್ ಬಿಜೆಪಿ ಜತೆಗೆ ಮೈತ್ರಿಗೆ ಹೋಗಿದ್ದರು. ಮಲ್ಲಿಕಾರ್ಜುನ ಖರ್ಗೆ ವಿಪಕ್ಷನಾಯಕರಾಗಿದ್ದಾಗ ಮೈತ್ರಿಗೆ ಹೋಗಿರಲಿಲ್ಲವೇ? ಅವರನ್ನೆ ಕೇಳಿ. ಈ ಬೂಟಾಟಿಕೆಗಳು ಬೇಡ ಎಂದರು.
ಎಲ್ಲ ಕಾಲದಲ್ಲೂ ಅಧಿಕಾರಿಗಳ ನಿಯೋಜನೆ ಮಾಡಲಾಗಿತ್ತು ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್‌ಮಾತಿಗೆ ಪ್ರತಿಕ್ರಿಯಿಸಿದ ಎಚ್.ಡಿ. ಕುಮಾರಸ್ವಾಮಿ, ಯಾವ ಸರ್ಕಾರದಲ್ಲಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿತ್ತು? ರಾಮಕೃಷ್ಣ ಹೆಗಡೆ ಇದ್ದಾಗಲೂ ಸಭೆ ನಡೆಸಲಾಗಿತ್ತಲ್ಲ? ಗಾಜಿನ ಭವನದಲ್ಲಿ ಅಂದು ಕಾಂಗ್ರೆಸ್ ಸಭೆ ನಡೆಸಲಾಗಿತ್ತು. ಯಾವತ್ತೂ ಈ ರೀತಿ ಆಗಿಲ್ಲ. ಅಧಿಕಾರಿಗಳನ್ನು ಗನ್ ಮ್ಯಾನ್ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಎಚ್.ಡಿ. ಕುಮಾರಸ್ವಾಮಿ, ನನ್ನ ಯಾಕೆ ಸಂಪರ್ಕ ಮಾಡಬೇಕು? ಎರಡೂ ಪಕ್ಷಗಳ ವಿರುದ್ದ ಸಮಾನವಾಗಿ ಹೋರಾಟ ಮಾಡಿದ್ದೇವೆ. ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಆಗೋಗಿದ್ಯಾ!? ನಾನೇನು ಅರ್ಜಿ ಹಾಕಿಕೊಂಡು ಹೋಗಿದ್ದೀನಾ!? ಆದರೆ ಮುಂದಿನ ದಿನಗಳಲ್ಲಿ ಇಂತಹ ಭ್ರಷ್ಟ ಸರ್ಕಾರ ತೆಗೆಯಲು ಚಿಂತನೆ ನಡೆಸಿದ್ದೇವೆ ಎಂದರು.
40 ವರ್ಷದ ಇತಿಹಾಸದಲ್ಲಿ ಈ ರೀತಿ ಎಂದೂ ನಡೆದಿಲ್ಲ. ದೇಶದಲ್ಲಿ ರಾಜಕೀಯ ಸಭೆ ಎಲ್ಲ ಕಡೆ ನಡೆದಿದೆ. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರು ಹಲವರು ನಾಯಕರ ಸಭೆ ನಡೆಸಿದ್ದರು. ಕೊಲ್ಕತಾದಲ್ಲಿ ಸಭೆಗೆ ನಮಗೆ ಆಹ್ವಾನ ಕೊಟ್ಟಿದ್ದರು. ನಾವು ಸಭೆಗೆ ಹೋಗಿದ್ದಾಗ ಶಾಸಕರು, ಸಂಸದರನ್ನು ಕಳಿಸಿ ಆಹ್ವಾನ ಮಾಡಿಸಿದ್ದರು.
ಆದರೆ ಇಲ್ಲಿ ಸ್ವೇಚ್ಚಾಚಾರ ಮಾಡಿ ಐಎಎಸ್ ಅಧಿಕಾರಿಗಳ ನಿಯಮವನ್ನು ಗಾಳಿಗೆ ತೂರಿದ್ದಾರೆ. ಸಿಎಂ ಆದೇಶ ಮಾಡಿರೋದು ಎಂದು ಅಧಿಕಾರಿಗಳೇ ಹೇಳಿದ್ದಾರೆ. ಸಿಎಂ ಎಂದರೆ ದೊಡ್ಡ ಮಟ್ಟದ ನಾಯಕರು ಓಕೆ. ದ್ವಾರಪಾಲಕರ ರೀತಿ ಕೆಲಸ ಮಾಡಿಸಿ ಅಧಿಕಾರಿಗಳನ್ನ ಯಾವ ಮಟ್ಟಕ್ಕೆ ಇಳಿಸಿದ್ದಾರೆ? ಇನ್ನೂ 50 ಜನ ನಾಯಕರನ್ನ ಕರೆಸಿಕೊಳ್ಳಿ. ಶಾಸಕರು, ಮಂತ್ರಿ, ಸಿಎಂ ಹೋದರೆ ಪರವಾಗಿಲ್ಲ. ಅಧಿಕಾರ ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ. ಪಕ್ಷದ ಖಾಸಗಿ ಕಾರ್ಯಕ್ರಮಕ್ಕೆ ನಿಯೋಜನೆ ಮಾಡಿರುವುದು ನಾಚಿಕೆಗೇಡಿನ ಕೆಲಸ ಎಂದರು.
ಎರಡು ಬಣಗಳಿಂದಲೂ ಆಹ್ವಾನವಿಲ್ಲ
ಾಚ್ಚರಿಯ ನಡೆಯಲ್ಲಿ ಇತ್ತ ಎನ್‌ಡಿಎ ಕಡೆಯಿಂದಲೂ ಜೆಡಿಎಸ್‌ಗೆ ಆಹ್ವಾನ ಬಂದಿಲ್ಲ. ಯುಪಿಎ ವಿರುದ್ಧ ಹರಿಹಾಯುತ್ತಿರುವ ಎಚ್.ಡಿ. ಕುಮಾರಸ್ವಾಮಿ, ಎನ್‌ಡಿಎ ಜತೆಗೆ ಹೋಗಬಹುದು ಎನ್ನಲಾಗಿತ್ತು. ಆದರೆ ಅಲ್ಲಿಂದಲೂ ಆಹ್ವಾನ ಬಂದಿಲ್ಲ.