Site icon Vistara News

Karnataka Election: ಕಾಂಗ್ರೆಸ್‌ ಸರ್ಕಾರ ಇದ್ದಾಗ ಯಾಕೆ ಪಿಎಫ್ಐ, ಬಜರಂಗದಳ ಬ್ಯಾನ್‌ ಮಾಡಲಿಲ್ಲ: ಎಚ್‌.ಡಿ. ಕುಮಾರಸ್ವಾಮಿ

HD Kumaraswamy questions Why didn't PFI, Bajrang Dal ban when Congress was in power

HD Kumaraswamy questions Why didn't PFI, Bajrang Dal ban when Congress was in power

ಬಾಗಲಕೋಟೆ: ಪಿಎಫ್ಐ, ಬಜರಂಗದಳ ಬ್ಯಾನ್ ಮಾಡುತ್ತೇವೆ ಎನ್ನುತ್ತಾರಲ್ಲಾ, ಇವೆಲ್ಲಾ ಪ್ರಣಾಳಿಕೆಯಲ್ಲಿ ಹಾಕುವ ಅಂಶಗಳಾ? ಐದು ವರ್ಷ ಸರ್ಕಾರ ಇತ್ತಲ್ಲ ಅವಾಗ ಏಕೆ ನಿಷೇಧ ಮಾಡಲಿಲ್ಲ? ಮಾನವೀಯ ಮೌಲ್ಯಗಳನ್ನು ಕಲಿಸಿದಾಗ ಬ್ಯಾನ್ ಮಾಡುವ ಅವಶ್ಯಕತೆ ಇರಲ್ಲ. ಸಂಘ ಸಂಸ್ಥೆಗಳಲ್ಲಿ‌‌ ಮಕ್ಕಳ ಮನಸ್ಥಿತಿ ಕೆಡಿಸುತ್ತಿರುವ ಮೂಲವನ್ನು ಬ್ಯಾನ್ ಮಾಡಬೇಕು. ಐದು ವರ್ಷದ ಅಧಿಕಾರ (Karnataka Election) ನಮಗೆ ನೀಡಿದರೆ ಪಂಚರತ್ನ ಯೋಜನೆ ಜಾರಿಗೆ ತಂದರೆ ಪ್ರತಿ ಕುಟುಂಬಗಳು ನೆಮ್ಮದಿ ಜೀವನ ನಡೆಸಬಹುದು. ನಮ್ಮದು ಸಮಾಜ ಒಡೆಯುವ ಕೆಲಸ ಅಲ್ಲ ಕಾಂಗ್ರೆಸ್‌ ವಿರುದ್ಧ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ನಗರದ ಸಕ್ರಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಇವರಿಗೆ ಅಭಿವೃದ್ಧಿ ಬೇಕಿಲ್ಲ. ಬ್ಯಾನ್ ಮಾಡಿದ ತಕ್ಷಣ ಏನು ಆಗುತ್ತದೆ. ಆ ಬಜರಂಗದಳದಲ್ಲಿ ಅಮಾಯಕ ಯುವಕರನ್ನು ಸದಸ್ಯರನ್ನಾಗಿ ಮಾಡಿ ದಾರಿ ತಪ್ಪಿಸುವಂತಹ ಮೂಲ ಇದೆಯಲ್ಲಾ, ಆ ಮೂಲ ಹಿಡಿಯಬೇಕು. ಪಾಪ ಅಮಾಯಕ ಹುಡುಗರನ್ನು ಉಪಯೋಗಿಸಿಕೊಂಡು ಸಂಘಟನೆ ಅಂತೇಳಿ ಇಟ್ಟುಕೊಂಡಿದ್ದಾರೆ ಎಚ್‌.ಡಿ. ಕುಮಾರಸ್ವಾಮಿ ಎಂದು ಆಕ್ರೋಶವನ್ನು ಹೊರಹಾಕಿದರು.

ತಾಜ್ ವೆಸ್ಟ್‌ ಎಂಡ್ ಹೋಟೆಲ್‌ನಲ್ಲಿ ಕಾಲ ಕಳೆದು ಅಧಿಕಾರ ಕಳೆದುಕೊಂಡ ಎಂಬ ಸಿದ್ದರಾಮಯ್ಯ ಟೀಕೆಗೆ ತಿರುಗೇಟು ನೀಡಿದ ಅವರು, ಈ ಬಗ್ಗೆ ಸಾವಿರ ಬಾರಿ ಹೇಳಿದ್ದೇನೆ. ನನಗೆ ಸರ್ಕಾರಿ ಕ್ವಾರ್ಟರ್ಸ್ ಮನೆ ಬಿಟ್ಟುಕೊಡಲಿಲ್ಲ. ಮೊದಲನೇ ಅಪರಾಧ (ಸಿದ್ದರಾಮಯ್ಯ) ಅವರದೇ. ಜಾರ್ಜ್ ಹೆಸರಲ್ಲಿ ಮನೆ ತಗೊಂಡು ಅದರಲ್ಲಿ ಮುಂದುವರಿದರು. ಮಧ್ಯಾಹ್ನ ರೆಸ್ಟ್ ತೆಗೆದುಕೊಳ್ಳಲು ನಾನು ಹೋಟೆಲ್‌ನಲ್ಲಿದ್ದೆ. ಹೋಟೆಲ್‌ನಲ್ಲಿ ನಾನು ಪರ್ಮನೆಂಟ್ ಆಗಿ ಇದ್ದವನಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Karnataka Election 2023: ಜಗತ್ತಿನಾದ್ಯಂತ ಕರ್ನಾಟಕದ ಜೈಕಾರ ಮೊಳಗಲು ಬಿಜೆಪಿ ಆಯ್ಕೆ ಮಾಡಿ ಎಂದ ಪ್ರಧಾನಿ ಮೋದಿ

ಈಗ ಕೇಂದ್ರ ನಾಯಕರೆಲ್ಲ ಬರುತ್ತಿದ್ದಾರಲ್ಲ, ಅವರು ಎಲ್ಲಿ ವಾಸ್ತವ್ಯ ಮಾಡುತ್ತಾರೆ. ನಾನು ಹೋಟೆಲ್‌ನಲ್ಲಿ ಇದ್ದುಕೊಂಡು ಬೆಳಗ್ಗೆ 9 ರಿಂದ ರಾತ್ರಿ 1 ಗಂಟೆವರೆಗೂ ಕೆಲಸ ಮಾಡುತ್ತಿದ್ದೆ. ಇವರು (ಸಿದ್ದರಾಮಯ್ಯ) ಯಾವ ರೀತಿ ಕೆಲಸ ಮಾಡುತ್ತಿದ್ದರು ಎಂಬುವುದು ಎಲ್ಲರಿಗೂ ಗೊತ್ತಿದೆ. ಮಧ್ಯಾಹ್ನ 1 ಗಂಟೆಗೆ ವಿಧಾನಸೌಧ ಖಾಲಿ ಮಾಡಿಕೊಂಡು ಹೋದರೆ, ಎಲ್ಲಿಗೆ ಹೋಗುತ್ತಿದ್ದರು. 6 ಗಂಟೆ ಮೇಲೆ ಯಾರಿಗೆ ಸಿಗುತ್ತಿದ್ದರು ಎಂದು ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಕಾಂಗ್ರೆಸ್‌ನ 78 ಶಾಸಕರಿಗೆ ನನ್ನ ಒಂದು ವರ್ಷ ಆಡಳಿತ ಅವಧಿಯಲ್ಲಿ 19 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದೇನೆ. ಇವತ್ತು ಬಿಜೆಪಿ ಸರ್ಕಾರದಲ್ಲಿ ಕೆಲಸ ನಡೆದಿರುವುದು ನಾನು ಸಿಎಂ ಆಗಿದ್ದಾಗ ಕೊಟ್ಟ ದುಡ್ಡಿನಿಂದ. ಬಾದಾಮಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಿದ್ದು ನಾನು ಕೊಟ್ಟ ದೊಡ್ಡಿನಲ್ಲಿ‌. ಸಿದ್ದರಾಮಯ್ಯಗೆ ಬಿಜೆಪಿಯವರಿಂದ ದುಡ್ಡು ತೆಗೆದುಕೊಳ್ಳಲು ಆಯ್ತಾ? ಜನರ ಬಳಿಗೆ ಹೋಗಿ ಕೆಲಸ ಹೇಗೆ ಮಾಡಬೇಕು ಎಂಬುದನ್ನು ಸಿದ್ದರಾಮಯ್ಯರಿಂದ ಕಲಿಯಬೇಕಿಲ್ಲ. ಬಾದಾಮಿಗೆ ಬಂದಿದ್ದ 4 ಸಾವಿರ ಕೋಟಿ ರೂ. ಎಲ್ಲಿ ಹೋಯಿತು? ಜಲಾವೃತವಾಗುವ ಯಾವುದಾರೂ ಒಂದು ಹಳ್ಳಿಗೆ ಪುನರ್ವಸತಿ ವಸತಿ ಕಲ್ಪಿಸಿದ್ದಾರಾ? 5 ವರ್ಷದಲ್ಲಿ ಬಾದಾಮಿಗೆ ಮೂಲಭೂತ ಸೌಲಭ್ಯವನ್ನಾದರೂ ಕಲ್ಪಿಸಿದ್ದಾರಾ ಎಂದು ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಅತ್ಯಂತ ಕ್ರಿಯಾಶೀಲ, ವೈದ್ಯಕೀಯ ವೃತ್ತಿಯಲ್ಲಿ ಹಲವಾರು ಜನರ ಸಮಸ್ಯೆಗೆ ಪರಿಹಾರ ನೀಡಿರುವ ಹಾಗೂ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಿರುವ ಬಾಗಲಕೋಟೆ ಜೆಡಿಎಸ್ ಅಭ್ಯರ್ಥಿ ಡಾ.ದೇವರಾಜ್ ಪಾಟೀಲ್‌ಗೆ ಈ ಕ್ಷೇತ್ರದ ಜನರು ಆಶೀರ್ವಾದ ಮಾಡಬೇಕು. 6-7 ತಿಂಗಳ ಹಿಂದೆ ದೇವರಾಜ್ ಪಾಟೀಲರು ಜೆಡಿಎಸ್ ಸೇರಿದ್ದರೆ ನಾನು ಅವರ ಜತೆಗೆ ಕ್ಷೇತ್ರದಲ್ಲಿ ಒಂದು ದಿನ ಓಡಾಡಿ ಗೆಲ್ಲಿಸುತ್ತಿದ್ದೆ. ಆದರೆ ಈಗ ಅವರೇ ಶ್ರಮ‌ ಹಾಕಬೇಕಿದೆ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಏಪ್ರಿಲ್ ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ 1.87 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಹಣ ಹೋಗಿದೆ. ಆ ಹಣ ಶ್ರೀಮಂತರಿಗೆ ಹೋಗುತ್ತಿದೆ. ಆದರೆ, ನಾವು ಅಧಿಕಾರಕ್ಕೆ ಬಂದರೆ ಆ ಹಣ ಬಡವರಿಗೆ ಸಿಗುತ್ತದೆ. ಯಾರ ಜತೆಗೂ ಕೈಜೋಡಿಸಲ್ಲ ಎಂದು ಬಿಜೆಪಿ ಹೇಳುತ್ತದೆ. ಆದರೆ, ನಾನು ಯಾರ ಜತೆಗಾದ್ರೂ ಕೈ ಜೋಡಿಸ್ತಿನಿ ಅಂತ ಹೇಳಿದ್ದೇನಾ? ನಾನು ಸ್ವತಂತ್ರವಾಗಿ 123 ಸ್ಥಾನ ಕೊಡಿ ಅಂತ ಕೇಳುತ್ತಿದ್ದೇನೆ. 123 ಸ್ಥಾನಗಳು ಬಂದೇ ಬರುತ್ತೆ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ | Karnataka Election: ನಿಮ್ಮ ಲೂಟಿ ಅತಿಯಾಗಿದೆ, ರಾಜ್ಯ ಬಿಟ್ಟು ಹೊರಡಿ: ಮತದಾರರ ಮೂಲಕ ಬಿಜೆಪಿಗೆ ಪ್ರಿಯಾಂಕಾ ಏಟು

ಎಸ್.ಆರ್.ವಿಶ್ವನಾಥ್ ಗೂಂಡಾ ಸಂಸ್ಕೃತಿಯ ರಾಜಕಾರಣಿ

ಯಲಹಂಕ ಜೆಡಿಎಸ್‌ ಅಭ್ಯರ್ಥಿ ಮುನೇಗೌಡ ತಮ್ಮನ್ನು ತಾವೇ ಕಿಡ್ನ್ಯಾಪ್ ಮಾಡಿಕೊಳ್ಳುತ್ತಾರೆ ಎಂಬ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿ, ಅವರಂತಹ ಒಬ್ಬ ರೌಡಿ ಶಾಸಕ ಮತ್ತೊಬ್ಬ ಇದ್ದಾನಾ? ಎಷ್ಟು ವಿಡಿಯೊ ಸಾಕ್ಷ್ಯವನ್ನು ಪೊಲೀಸ್ ಠಾಣೆಗೆ ಕೊಟ್ಟಿದ್ದೇವೆ. ಕ್ಯಾಂಪೇನ್ ಮಾಡಲು ಹೋಗುವ ಹೆಣ್ಣು ಮಕ್ಕಳ ಮೇಲೆ ರೌಡಿಗಳನ್ನು ಬಿಟ್ಟು ಹೆದರಿಸುವಂತಹ ಗೂಂಡಾ ಸಂಸ್ಕೃತಿಯ ರಾಜಕಾರಣಿ. ಚುನಾವಣೆ ಮುಂಚೆ ಅವರನ್ನು ಮುಗಿಸೇ ಬಿಡುತ್ತೇನೆ ಅಂತೇಳಿ ಅವರು ಮಾತಾಡಿರುವಂತಹದ್ದು ಈಗಾಗಲೇ ಪ್ರಚಾರ ಆಗಿದೆ. ಅವರು ಯಾವ ರೀತಿ ಬಂದಿದ್ದಾರೆ ಎಂಬುದು ಗೊತ್ತಿದೆ. ಆ ಗೂಂಡಾ ಸಂಸ್ಕೃತಿಗೆ ಅಂತಿಮ ತೆರೆ ಎಳೆಯಬೇಕು ಅಂತಲೇ ಈ ಬಾರಿ ಮುನೇಗೌಡ ಅವರಂತಹ ಉತ್ತಮ ಅಭ್ಯರ್ಥಿ ಹಾಕಿದ್ದೇವೆ ಎಂದು ಹೇಳಿದರು.

Exit mobile version