Site icon Vistara News

H.D. Kumaraswamy: ಜೆಡಿಎಸ್‌ ವಿಸರ್ಜನೆ ಹೇಳಿಕೆಗೆ ಬದ್ಧ ಎಂದ ಎಚ್‌.ಡಿ. ಕುಮಾರಸ್ವಾಮಿ!

HD Kumaraswamy in JDS Meeting

HD Kumaraswamy says congress should verify his statement regarding dissolving JDS after election

ಬೆಂಗಳೂರು: ಜೆಡಿಎಸ್‌ ಪಕ್ಷವನ್ನು ಎಂದು ವಿಸರ್ಜನೆ ಮಾಡುತ್ತೀರ ಎಂದು ಕಾಂಗ್ರೆಸ್‌ ನಾಯಕರು ಹಾಗೂ ಕಾಂಗ್ರೆಸ್‌ ಪಕ್ಷ ಟ್ವೀಟ್‌ ಮೂಲಕ ಪ್ರಶ್ನಿಸುತ್ತಿರುವುದರ ಕುರಿತು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ತಾವು ಪಕ್ಷ ವಿಸರ್ಜನೆ ಕುರಿತು ಆಡಿದ ಮಾತಿಗೆ ಬದ್ಧನಾಗಿದ್ದೇನೆ. ಆದರೆ ಕಾಂಗ್ರೆಸ್‌ನವರು ನನ್ನ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಬೇಕು ಎಂದಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಪ್ರಶ್ನೆಗೆ ಉತ್ತರಿಸಿದ ಎಚ್‌.ಡಿ. ಕುಮಾರಸ್ವಾಮಿ, ನನಗೆ 123 ಸೀಟು ಬಂದು ಪಂಚರತ್ನ ಯೋಜನೆಗಳನ್ನು ಜಾರಿ ಮಾಡದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದ್ದೆ. ಆ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ಬೇರೆ ರೀತಿ ಕೇಳಿಸಿದೆ. ಒಮ್ಮೆ ಅವರು ನನ್ನ ಹೇಳಿಕೆಯನ್ನು ಮತ್ತೆ ಕೇಳಿಸಿಕೊಳ್ಳಲಿ. ನಾನು ಹೇಳಿದ್ದು ಏನು ಎಂಬುದು ಅರ್ಥ ಆಗುತ್ತದೆ. ಅವರಂಥ ಕುತಂತ್ರದ ರಾಜಕಾರಣ ಮಾಡಿ, ನಾವು ಪಕ್ಷ ಕಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಹಿಂದೆ ಒಂದು ಚುನಾವಣೆಯಲ್ಲಿ 179 ಸ್ಥಾನದಿಂದ 39 ಸ್ಥಾನಕ್ಕೆ ಇಳಿದಾಗ ಕಾಂಗ್ರೆಸ್ ನಾಯಕರು ಪಕ್ಷ ವಿಸರ್ಜನೆ ಮಾಡಿದ್ದರಾ? ಕಾಲಚಕ್ರ ತಿರುಗುತ್ತೆ, ಮೇಲೆ ಇದ್ದವನು ಕೆಳಗೆ ಇಳಿಬೇಕು, ಕೆಳಗಿದ್ದವನು ಮೇಲೆ ಬರಬೇಕು. ಈ ದುರಹಂಕಾರದ ಮಾತು ಬೇಡ. ಪಕ್ಷ ವಿಸರ್ಜನೆ ಮಾಡುವುದು, ಅಂತ್ಯಸಂಸ್ಕಾರ ಮಾಡುವುದು ಇದೆಲ್ಲಾ ನಾನು ನಿಮ್ಮಿಂದ ಕಲೀಬೇಕಿಲ್ಲ ಎಂದರು.

ಚುನಾವಣೆಯಲ್ಲಿ ಕಾಂಗ್ರೆಸ್‌ ಅಕ್ರಮ

ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾಂಗ್ರೆಸ್ ಪಕ್ಷವು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಹಂಚಿದ ಕ್ಯುಆರ್‌ ಕೋಡ್‌ ಉಳ್ಳ ಈ ಕೂಪನ್ ಗಳೇ ಕಾರಣ. ಇದು ಗಂಭೀರ ಸ್ವರೂಪದ ಚುನಾವಣೆ ಅಕ್ರಮ ಎಂದು ದೂರಿದರು. ಮೂರು ಸಾವಿರ ಹಾಗೂ ಐದು ಸಾವಿರ ಮೊತ್ತದ ಕ್ಯೂ ಆರ್ ಕೋಡ್ ಗಳನ್ಜು ಹೊಂದಿರುವ ಕೂಪನ್ ಗಳನ್ನು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಮತದಾರರಿಗೆ ಹಂಚಲಾಯಿತು.

ರಾಮನಗರ, ಮಾಗಡಿ, ರಾಜರಾಜೇಶ್ವರಿ ನಗರ ಸೇರಿದಂತೆ ರಾಜ್ಯದ 45ರಿಂದ 50 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈ ರೀತಿಯ ಅಕ್ರಮ ಮಾಡಿದೆ. ಬಿಜೆಪಿ ಸರ್ಕಾರದ ಅಕ್ರಮಗಳನ್ನು ತನಿಖೆ ಮಾಡಿಸುವೆ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಈ ಕೂಪನ್ ಅಕ್ರಮದ ಬಗ್ಗೆ ತನಿಖೆ ಮಾಡಿಸಬೇಕು.

ಸುಮಾರು ನಲವತ್ತೆರಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು ಗಿಫ್ಟ್ ಕೂಪನ್ ಹಂಚಿದ್ದಾರೆ. ಆ ಕೂಪನ್ ಕೊಟ್ಟರೆ, ಮೂರು, ಐದು ಸಾವಿರ ಬೆಲೆಯ ವಸ್ತುಗಳು ಸಿಗುತ್ತೆ ಅಂತ ಆಸೆ ಹುಟ್ಟಿಸಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಸುಮಾರು ಅರವತ್ತು ಸಾವಿರ ಕೂಪನ್ ಹಂಚಿದ್ದಾರೆ ಎಂದ ಎಚ್‌.ಡಿ. ಕುಮಾರಸ್ವಾಮಿ, ಗಿಫ್ಟ್ ಕೂಪನ್‌ಗಳನ್ನು ಪ್ರದರ್ಶನ ಮಾಡಿದರು.

ಇದನ್ನೂ ಓದಿ: Karnataka Election 2023: ಮತಕ್ಕಾಗಿ ಆಣೆ- ಪ್ರಮಾಣ, ಗಿಫ್ಟ್‌ ಆಮಿಷಕ್ಕೆ ಮುಂದಾದ ದಾವಣಗೆರೆ ಬಿಜೆಪಿ ಅಭ್ಯರ್ಥಿ, ದೂರು

Exit mobile version