Site icon Vistara News

Karnataka Elections : ಚನ್ನಪಟ್ಟಣದಲ್ಲಿ ಚಿತ್ರನಟಿ ರಮ್ಯಾ ಸ್ಪರ್ಧೆ ಮಾಡಿದರೂ ತಲೆ ಕೆಡಿಸಿಕೊಳ್ಳಲ್ಲ ಎಂದ ಎಚ್‌ಡಿ ಕುಮಾರಸ್ವಾಮಿ

Kumaraswamy Ramya

#image_title

ಬೆಂಗಳೂರು: ʻʻನನ್ನ ಸಹೋದರಿ ಚಿತ್ರ ನಟಿ ರಮ್ಯಾ ಅವರು ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆ (Karnataka Elections) ಮಾಡುತ್ತಾರೆ ಅಂತ ಹೇಳುತ್ತಿದ್ದಾರೆ. ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಚಿತ್ರ ನಟ, ನಟಿಯರಿಗೆ ಕ್ಷೇತ್ರದ ಹಂಗಿಲ್ಲ, ಅವರಿಗೆ ಸಹಜವಾಗಿ ಜನಪ್ರಿಯತೆ ಇರುತ್ತದೆʼʼ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

ಮೈಸೂರಿನಲ್ಲಿ ಆಯೋಜನೆಯಾಗಲಿರುವ ಪಂಚರತ್ನ ರಥ ಯಾತ್ರೆ ಸಮಾರೋಪದ ಬಗ್ಗೆ ಮಾಹಿತಿ ನೀಡುವ ವೇಳೆ ಈ ವಿಚಾರದ ಬಗ್ಗೆಯೂ ಪ್ರಸ್ತಾಪವಾಯಿತು. ʻʻಯಾರ‍್ಯಾರೋ ಏನೇನೋ ವದಂತಿ ಹಬ್ಬಿಸುತ್ತಿದ್ದಾರೆ. ಸಂಸದೆ ಸುಮಲತಾ ಅವರು ಮಂಡ್ಯದಿಂದ ಸ್ಪರ್ಧಿಸಿದರೆ ನಾನು ಅರ್ಜಿ ಹಾಕುತ್ತೇನೆ ಅಂತಲೂ ಹೇಳುತ್ತಿದ್ದಾರೆ. ಅದೆಲ್ಲ ಸುಳ್ಳು. ನಾನು ಚನ್ನಪಟ್ಟಣದಿಂದ ಸ್ಪರ್ಧೆ ಮಾಡುತ್ತೇನೆ. ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡುವ ಪ್ರಶ್ನೆಯೂ ಇಲ್ಲ. ಅದೆಲ್ಲ ಊಹಾಪೋಹ ಅಷ್ಟೆʼʼ ಎಂದು ಎಚ್‌.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

2028ರಲ್ಲಿ ಕನಕಪುರವನ್ನೂ ಗೆಲ್ತೀವಿ

ʻʻನಾನು ಚನ್ನಪಟ್ಟಣದಲ್ಲಿ ಈಗಾಗಲೇ ಚುನಾವಣೆ ಮುಗಿಸಿದ್ದೇನೆ. ನನಗೆ ಚನ್ನಪಟ್ಟಣ ಟಫ್ ಅನ್ನೋದು ಸುಳ್ಳುʼʼ ಎಂದು ಹೇಳಿದ ಅವರು, ʻʻಕನಕಪುರದಲ್ಲಿ ಈ ಬಾರಿ ಸಾಮಾನ್ಯ ಕಾರ್ಯಕರ್ತನನ್ನೇ ಕಣಕ್ಕೆ ಇಳಿಸುತ್ತೇವೆ‌. ಈ ಬಾರಿಯ ಪೈಪೋಟಿಯ ಬೆಳೆ 2028ಕ್ಕೆ ಬರಲಿದೆ. ಕನಕಪುರದಲ್ಲಿ 2028ರಲ್ಲಿ ಗೆದ್ದೇ ಗೆಲ್ಲುತ್ತೇವೆʼʼ ಎಂದು ಕುಮಾರಸ್ವಾಮಿ ಹೇಳಿದರು. ಕನಕಪುರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಮಾರ್ಚ್‌ 26ರಂದು ಪಂಚರತ್ನ ರಥಯಾತ್ರೆ ಸಮಾರೋಪ

ಐತಿಹಾಸಿಕವಾಗಿ ನಡೆದ ಪಂಚ ರತ್ನ ಯಾತ್ರೆಯ ಸಮಾರೋಪ ಸಮಾರಂಭ ಮಾರ್ಚ್‌ 26ರಂದು ನಡೆಯಲಿದೆ. 100 ಎಕರೆ ಜಾಗದಲ್ಲಿ ಸಿದ್ಧತೆ ಪ್ರಾರಂಭವಾಗಿದೆ. ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಮಹದೇವ್ ನೇತೃತ್ವದಲ್ಲಿ ಕೆಲಸ ನಡೆಯುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದರು. ಮೂರು ತಿಂಗಳ ಯಾತ್ರೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು. ಸಮಾರೋಪದ ಸಮಾವೇಶದಲ್ಲಿ 10 ಲಕ್ಷ ಅಭಿಮಾನಿಗಳು, ಕಾರ್ಯಕರ್ತರ ಸೇರಲಿದ್ದಾರೆ ಎಂದರು.

ಕಾಂಗ್ರೆಸ್‌ನದು ಡುಪ್ಲಿಕೇಟ್‌ ಕಾರ್ಡ್‌

ಕಾಂಗ್ರೆಸ್‌ ಈಗ ಕೊಡುತ್ತಿರುವುದು ಗ್ಯಾರಂಟಿ ಕಾರ್ಡ್‌ ಅಲ್ಲ, ಅದು ಡುಪ್ಲಿಕೇಟ್‌ ಕಾರ್ಡ್‌. ಗೃಹ ಲಕ್ಷ್ಮಿ ಯೋಜನೆಗೆ 25 ಸಾವಿರ ಕೋಟಿ ರೂ. ಬೇಕು. ಇದನ್ನೆಲ್ಲ ಪೂರೈಸುವುದು ಸಾಧ್ಯವೆ ಎಂದು ಅವರು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರ ಬಗ್ಗೆ ಅನುಕಂಪ

ʻʻಪೂರ್ಣಾವಧಿ ಮುಖ್ಯಮಂತ್ರಿಯಾಗಿದ್ದವರು, ಉಪ ಮುಖ್ಯಮಂತ್ರಿಯಾಗಿದ್ದವರು, 13 ಬಜೆಟ್ ಮಂಡಿಸಿದವರು ಸಿದ್ದರಾಮಯ್ಯ. ಅಂತಹವರಿಗೆ ಒಂದು ಸುರಕ್ಷಿತ ಕ್ಷೇತ್ರ ಹುಡುಕಿಕೊಳ್ಳಲು ಆಗುತ್ತಿಲ್ಲ. ಇದನ್ನು ನೋಡಿ ವ್ಯಂಗ್ಯ ಮಾಡುತ್ತಿಲ್ಲ, ಅನುಕಂಪ ಬರುತ್ತಿದೆʼʼ ಎಂದು ಹೇಳಿದರು ಎಚ್‌.ಡಿ. ಕುಮಾರಸ್ವಾಮಿ.

ʻʻಕೋಲಾರ ಕ್ಷೇತ್ರವೂ ಸೇರಿ ಜಿಲ್ಲೆಯಲ್ಲಿ 6 ಸ್ಥಾನದಲ್ಲಿ 5 ಸ್ಥಾನದಲ್ಲಿ ನಾವು ಮುಂದೆ ಇದ್ದೇವೆ. ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ. ಈಗ ಸಿದ್ದರಾಮಯ್ಯ ಅವರು ಹೈಕಮಾಂಡ್ ಹೆಸರು ಹೇಳಿ ಸ್ಪರ್ಧೆಯಿಂದ ಹಿಂದೆ ಸರಿದಿರಬಹುದು. ಆದರೆ, ಅವರ ಪರಿಸ್ಥಿತಿ ನೋಡಿ ನನಗೆ ಬೇಸರವಾಗುತ್ತಿದೆ. ಅನುಭವಿ ರಾಜಕಾರಣಿಯಾಗಿರುವ ಅವರು ಆತಂಕವನ್ನು ತಾವೇ ಸೃಷ್ಟಿ ಮಾಡಿಕೊಂಡಿದ್ದಾರೆʼʼ ಎಂದು ಹೇಳಿದರು.

ಇದನ್ನೂ ಓದಿ JDS Pancharatna: ರಾಷ್ಟ್ರೀಯ ಪಕ್ಷಗಳು ಕ್ರೆಡಿಟ್‌ ಪಡೆಯೋದಲ್ಲ, ಕೆಲಸ ಮಾಡಿ ತೋರಿಸಬೇಕು‌: ಎಚ್‌ಡಿಕೆ

Exit mobile version