ಮಂಡ್ಯ: ಕೊರೊನಾ ನಿಯಂತ್ರಣಕ್ಕೆ ಮೊದಲ ಹಂತದಲ್ಲಿ ರಾಜ್ಯ ಸರ್ಕಾರದಿಂದ ಕೆಲವು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ನಾನು ಲಘುವಾಗಿ ಮಾತನಾಡಲ್ಲ. ಆದರೆ ರಾಜಕೀಯ ಉದ್ದೇಶಕ್ಕಾಗಿ ವಿರೋಧ ಪಕ್ಷಗಳನ್ನು ಹತ್ತಿಕ್ಕಲು (JDS Pancharatna) ಕೊರೊನಾ ಕಠಿಣ ನಿಯಮ ಜಾರಿಗೆ ತಂದರೆ ಅದಕ್ಕೆ ನಮ್ಮ ಸಹಮತವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದ ಬೇವಿನಹಳ್ಳಿಯಲ್ಲಿ ಶುಕ್ರವಾರ ನಡೆದ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿ, ಚೀನಾದಲ್ಲಿ ಮತ್ತೆ ದೊಡ್ಡ ಮಟ್ಟದಲ್ಲಿ ಕೋವಿಡ್ ಅನಾಹುತ ಹೆಚ್ಚಾಗಿದೆ. ಹೀಗಾಗಿ ಕೊರೊನಾ ತಡೆಗೆ ಸರ್ಕಾರ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇದಕ್ಕೆ ನಾವು ಸಹಕಾರ ಕೊಡುತ್ತೇವೆ. ರಾಜ್ಯ, ರಾಷ್ಟ್ರದಲ್ಲಿ ಯಾವ ಸಮಸ್ಯೆಗಳಾಗುತ್ತದೋ ನೋಡೋಣ, ಅದರೆ ರಾಜಕೀಯ ಉದ್ದೇಶಕ್ಕೆ ಕಠಿಣ ನಿಯಮ ಜಾರಿಗೆ ತರುವುದಕ್ಕೆ ನಮ್ಮ ವಿರೋಧವಿದೆ ಎಂದು ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಚರಣ್ ಸಿಂಗ್ ಅವರು ರೈತರ ಪರ ಕಾಳಜಿ ಹೊಂದಿದ್ದರಿಂದ ಅವರ ಜನ್ಮದಿನವನ್ನು ರೈತರ ದಿನವಾಗಿ ಆಚರಿಸಲಾಗುತ್ತಿದೆ. ನಾನು ಕೂಡ ಎರಡೂ ಬಾರಿ ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೆ. ರೈತ ಸಾಲ ಮಾಡದೆ ಕೃಷಿ ಮಾಡಲು ಅನುಕೂಲವಾಗುವಂತಹ ಕಾರ್ಯಕ್ರಮವನ್ನು ಪಂಚರತ್ನದಲ್ಲಿ ಅಳವಡಿಸಿದ್ದೇನೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಐದು ವರ್ಷದಲ್ಲಿ ರೈತರ ಬದುಕು ಸಂಪೂರ್ಣವಾಗಿ ಸರಿಪಡಿಸುತ್ತೇವೆ ಎಂದು ರೈತರ ದಿನದಂದು ಮಾಜಿ ಸಿಎಂ ಶಪಥ ಮಾಡಿದರು.
ಇದನ್ನೂ ಓದಿ | Pancharatha Yatra | ರೈತರ ಮನೆಗೆ ಹೆಣ್ಣು ಕೊಡುವ ಹಾಗೆ ಮಾಡದಿದ್ದರೆ ಜೆಡಿಎಸ್ ಪಕ್ಷ ವಿಸರ್ಜನೆ; ಎಚ್‌ಡಿ ಕುಮಾರಸ್ವಾಮಿ
ಮಂಡ್ಯ ಕರಾವಳಿ ಭಾಗದಂತಲ್ಲ
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಧಾರ್ಮಿಕ ವಿಚಾರವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲು ಮಂಡ್ಯ ಜಿಲ್ಲೆ ಕರಾವಳಿ ಪ್ರದೇಶವಲ್ಲ. ಬಿಜೆಪಿಯವರಿಗೆ ಅಭಿವೃದ್ಧಿ ಬೇಕಿಲ್ಲ, ಧರ್ಮದ ವಿಚಾರದಲ್ಲಿ ಭಾವನಾತ್ಮಕವಾಗಿ ಕೆಣಕಿ ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವುದೇ ಅವರ ಅಜೆಂಡಾ ಎಂದು ಕಿಡಿ ಕಾರಿದರು.
ಮಂಡ್ಯ ಕರಾವಳಿ ಪ್ರದೇಶವಲ್ಲ, ಇಲ್ಲಿನ ಜನರು ಶ್ರಮ ಜೀವಿಗಳು. ಅಲ್ಲೂ ಶ್ರಮ ಜೀವಿಗಳಿದ್ದಾರೆ. ಆದರೆ, ಅಲ್ಲಿನ ಜನರ ನಡವಳಿಕೆ, ಜೀವನ ಶೈಲಿ ಬೇರೆ ಇದೆ. ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಕುತಂತ್ರ ಮಾಡಲು ಬಂದಾಗ ಇಲ್ಲಿನ ಜನ ಯೋಚನೆ ಮಾಡುತ್ತಾರೆ. ಕರ್ನಾಟಕದಲ್ಲಿ ಎಲ್ಲೂ ಬಿಜೆಪಿಯವರ ತಂತ್ರ ವರ್ಕೌಟ್ ಆಗಲ್ಲ, ಇದೇ ವಿಚಾರ ಅವರಿಗೆ ಮುಳುವಾಗಲಿದೆ ಎಂದರು.
ಒಕ್ಕಲಿಗರ ಮೀಸಲಾತಿ ಸಂಬಂಧ ಬಿಜೆಪಿ ಸಚಿವರು ಸಭೆ ನಡೆಸಿರುವ ಬಗ್ಗೆ ಮಾತನಾಡಿದ ಅವರು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ನಂತರ ಪಂಚಮಸಾಲಿ 2ಎ ಮೀಸಲಾತಿ ವಿಚಾರಕ್ಕೆ ಸ್ಪಂದಿಸಿ, ಯಾವ ಯಾವ ಸಮಾಜದ ಸ್ಥಿತಿ ಹೇಗಿದೆ? ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಮೀಸಲಾತಿ ನೀಡುವ ಬಗ್ಗೆ ನಿರ್ಧಾರ ಮಾಡಲಿ. ಕಾಟಾಚಾರಕ್ಕೆ ಏನೋ ಮಾಡಲು ಹೋದರೆ ಚುನಾವಣೆಯಲ್ಲಿ ಇವರಿಗೇ ಮುಳುವಾಗಲಿದೆ ಎಂದರು. ಇದೇ ವೇಳೆ ಕೆ.ಆರ್. ಪೇಟೆ ಅಭ್ಯರ್ಥಿಯನ್ನು ಬದಲಾಯಿಸಲ್ಲ. ಯಾರಿಗಾದರೂ ಅಸಮಾಧಾನವಿದ್ದರೆ ಕೂತು ಸರಿಪಡಿಸುತ್ತೇವೆ ಎಂದು ತಿಳಿಸಿದರು.
ಜೆಡಿಎಸ್ ಪಂಚರತ್ನ ಯಾತ್ರೆ ನಡೆಸಲು ಆರಂಭಿಸಿದಾಗ ಕೆಲವರು ಲಘುವಾಗಿ ಪರಿಗಣಿಸಿದರು. ಆದರೆ, ಎಲ್ಲಾ ಕಡೆ ಯಶಸ್ವಿಯಾಗುತ್ತಿರುವುದರಿಂದ ಅವರು ಆತಂಕಗೊಂಡಿರುವುದು ನಿಜ. ಕೇಶವ ಕೃಪಾದಲ್ಲಿರುವವರು ಬೇರೆ ಪಕ್ಷದವರ ಮೇಲೆ ಕುತಂತ್ರ ರಾಜಕಾರಣ ಮಾಡಲು ಚರ್ಚೆ ನಡೆಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಯಾತ್ರೆ ನಿಲ್ಲಿಸಲು ಬಿಜೆಪಿ ಷಡ್ಯಂತ್ರ ಮಾಡುತ್ತಿದೆ ಎಂಬುದಕ್ಕಿಂತ ಅದರಲ್ಲಿ ಒಂದು ವರ್ಗ ಚರ್ಚೆ ಮಾಡುತ್ತಿದೆ. ಆದರೆ, ಉತ್ತರ ಕರ್ನಾಟದಲ್ಲೂ ಪಂಚರತ್ನ ಯಾತ್ರೆ ಯಶಸ್ವಿಯಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ | coronavirus | ಅಂತೆ ಕಂತೆ ಬಿಡಿ, 3ನೇ ಡೋಸ್ ಲಸಿಕೆ ಪಡೆಯಿರಿ ಎಂದ ಸುಧಾಕರ್: ಒಳಾಂಗಣದಲ್ಲಿ ಮಾಸ್ಕ್ ಕಡ್ಡಾಯ