ಬೆಂಗಳೂರು: ನಮ್ಮ ಪ್ರಚಾರಕ್ಕೆ ಹೊರಗಿನ ಯಾವ ನಾಯಕರು ಬರುವುದಿಲ್ಲ. ಗಡಿ ಪ್ರದೇಶದಲ್ಲಿ ಬಿಆರ್‌ಎಸ್ ಶಾಸಕರು, ಸಚಿವರು ಪ್ರಚಾರ ಮಾಡುತ್ತಾರೆ. ದೊಡ್ಡ ನಾಯಕರನ್ನು ಕರೆಸಿ ನೂರಾರು ಕೋಟಿ ಖರ್ಚು ಮಾಡುವುದರ ಬದಲು, ಅದೇ ದುಡ್ಡನ್ನು ಅಭ್ಯರ್ಥಿಗೆ ಕೊಟ್ಟರೆ ಚುನಾವಣೆಯಲ್ಲಿ (Karnataka Election) ಗೆಲ್ಲಲು ಅನುಕೂಲ ಆಗುತ್ತದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಪರ ಪ್ರಚಾರಕ್ಕೆ ಕೆಸಿಆರ್, ಮಮತಾ ಬ್ಯಾನರ್ಜಿ ಬರುತ್ತಾರಾ ಎಂಬ ಪ್ರಶ್ನೆಗೆ ಪದ್ಮನಾಭನಗರ ನಿವಾಸದಲ್ಲಿ ಅವರು ಪ್ರತಿಕ್ರಿಯಿಸಿ, ದೊಡ್ಡ ನಾಯಕರನ್ನು ಕರೆಸಿ ನೂರಾರು ಕೋಟಿ ಖರ್ಚು ಮಾಡಿಸಲು ಆಗುವುದಿಲ್ಲ. ಇನ್ನು ನಾವು ಯಾರಿಗೂ ಹಣ ಕೊಟ್ಟು ಸರ್ವೆ ಮಾಡಿಸಿಲ್ಲ. ಅದರ ಅವಶ್ಯಕತೆ ನಮಗೆ ಇಲ್ಲ. ಜನರ ಬೆಂಬಲದ ಆಧಾರದಲ್ಲಿ ನಮಗೆ ಬಹುಮತ ಬರುತ್ತದೆ ಎಂದು ಹೇಳುತ್ತಿದ್ದೇವೆ. ಕೆಲವು ಖಾಸಗಿ ವಾಹಿನಿಗಳು 23- 24 ಎಂದು ತೋರಿಸುತ್ತಿದ್ದಾರೆ. ಪಾಪ 1 ಅಂಕಿ ಮುಂದೆ ಹಾಕುವುದನ್ನು ಮರೆತು ಹೋಗಿದ್ದಾರೆ. ಜೆಡಿಎಸ್‌ಗೆ 123 ಸ್ಥಾನ ಈ ಬಾರಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ | Karnataka election 2023: ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಕಾಂಗ್ರೆಸ್‌ಗೆ ಗುಡ್ ಬೈ; ಜೆಡಿಎಸ್ ಸೇರ್ಪಡೆ
ಜೆಡಿಎಸ್ ಈ ಬಾರಿ ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಮುಂದೆ ಹೋಗುತ್ತದೆ. ಆದರೆ, 123 ಸೀಟ್ ಗುರಿಗೆ ನಮಗೆ ಸ್ವಲ್ಪ ಆರ್ಥಿಕ ಸಮಸ್ಯೆ ಇದೆ. ಬಿಜೆಪಿ, ಕಾಂಗ್ರೆಸ್‌ನಂತೆ ಇದ್ದಿದ್ದರೆ ಇವತ್ತೇ 123 ಸ್ಥಾನ ಬರಲಿದೆ ಎಂದು ಘೋಷಣೆ ಮಾಡುತ್ತಿದ್ದೆ. ಆರ್ಥಿಕ ಕೊರತೆಯಿಂದ ನಮಗೆ ಸ್ವಲ್ಪ ಹಿನ್ನಡೆ ಆಗಬಹುದು. ಆದರೆ, ನಮಗೆ ಜನತೆ ಬೆಂಬಲದಲ್ಲಿ ನಂಬಿಕೆ ಇದೆ. 123 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ನಾವು ತಲುಪುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿ ರಕ್ತದಲ್ಲಿ ಬರೆದು ಕೊಡುವುದು ಬೇಡ, ರಕ್ತದ ಕೊರತೆ ಆಗುತ್ತೆ
150 ಸ್ಥಾನ ಕಾಂಗ್ರೆಸ್‌ಗೆ ಬರುತ್ತೆ ಎಂದು ರಕ್ತದಲ್ಲಿ ಬರೆದುಕೊಡುತ್ತೇನೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ರಕ್ತದಲ್ಲಿ ಬರೆದು ಕೊಡುವುದು ಬೇಡ. ಪಾಪ ಅವರಿಗೆ ರಕ್ತದ ಕೊರತೆ ಆಗುತ್ತೆ. ಯಡಿಯೂರಪ್ಪ ನೋಡಿದರೆ ಶೆಟ್ಟರ್ ಸೋಲುತ್ತಾರೆ ಎಂದು ರಕ್ತದಲ್ಲಿ ಬರೆದು ಕೊಡುತ್ತೇನೆ ಎನ್ನುತ್ತಾರೆ. ಯಾವ ನಾಯಕರೂ ರಕ್ತದಲ್ಲಿ ಬರೆದು ಕೊಡುವುದೂ ಬೇಡ. ರಕ್ತದ ಕೊರತೆ ಮಾಡಿಕೊಳ್ಳುವುದೂ ಬೇಡ. ನೀವು ಹೇಳುವುದು, ರಕ್ತದಲ್ಲಿ ಬರೆದು ಕೊಡುವುದು ಮುಖ್ಯ ಅಲ್ಲ. ಜನರು ಮತ ಕೊಡುವುದು ಮುಖ್ಯ. ಕಾಂಗ್ರೆಸ್, ಬಿಜೆಪಿ ನಾಯಕರು ಯಾವ ಆಧಾರದಲ್ಲಿ 150 ಸ್ಥಾನ ಎನ್ನುತ್ತಾರೆ ಹೇಳಲಿ ಎಂದು ಪ್ರಶ್ನಿಸಿದರು.
ನೀವು ನನ್ನನ್ನು ಜೆಡಿಎಸ್‌ಗೆ 123 ಹೇಗೆ ಬರುತ್ತೆ ಅಂತ ಕೇಳಬಹುದು. ನಾನು 106 ಕ್ಷೇತ್ರದಲ್ಲಿ ಜನರ ಭೇಟಿ ಮಾಡಿದ್ದೇನೆ. ನಿತ್ಯ ಒಂದೊಂದು ಕ್ಷೇತ್ರದಲ್ಲಿ 50-60 ಹಳ್ಳಿ ಸುತ್ತಿದ್ದೇನೆ. ಜನರ ಸಂಪರ್ಕದಲ್ಲಿ ಇದ್ದೇನೆ. ಪಂಚರತ್ನ, ಜನತಾ ಜಲಧಾರೆ ಯಶಸ್ವಿಯಾಗಿದೆ. ನನ್ನ ರೋಡ್ ಶೋಗೆ ಜನ ಸ್ಪಂದನೆ ಸಿಕ್ಕಿದೆ. ದೇವನಹಳ್ಳಿಯಲ್ಲಿ ಜನ ಇಲ್ಲ ಅಂತ ಅಮಿತ್ ಶಾ ರೋಡ್ ಶೋ ಕ್ಯಾನ್ಸಲ್ ಆಯ್ತು. ಆದರೆ ನಮಗೆ ಜನರೇ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.
ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಅವರು ಸ್ವಂತ ಮನೆ ಜೆಡಿಎಸ್‌ಗೆ ವಾಪಸ್ ಬಂದಿದ್ದಾರೆ. ಅವರು ಪಕ್ಷಾಂತರ ಏನೂ ಆಗಿಲ್ಲ. 6-7 ವರ್ಷಗಳ ಹಿಂದೆ ಸ್ಥಳೀಯ ನಾಯಕರ ನಡವಳಿಕೆಯಿಂದ ಕಾಂಗ್ರೆಸ್ ಸೇರಿದ್ದರು. ನಂತರ ಕಾಂಗ್ರೆಸ್ ಅವರನ್ನು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ. ಅವರನ್ನು ಮೂಲೆಗುಂಪು ಮಾಡಿದ್ದರು. ಹೀಗಾಗಿ ನನ್ನ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ಸ್ಥಾನಮಾನ ಕೊಡುತ್ತೇವೆ. ಇನ್ನು ಗುರುವಾರ (ಏಪ್ರಿಲ್ 26) ಕಾಂಗ್ರೆಸ್ ನಾಯಕ ಶಫಿ ಅಹಮದ್ ತುಮಕೂರಿನಲ್ಲಿ ಜೆಡಿಎಸ್ ಸೇರುತ್ತಾರೆ. ಇದರಿಂದ ತುಮಕೂರು ಜಿಲ್ಲೆಯಲ್ಲಿ 11 ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲಲಿದೆ ಎಂದು ತಿಳಿಸಿದರು.
ಇದನ್ನೂ ಓದಿ | ಬಳ್ಳಾರಿ ಜಿಲ್ಲೆ ಕ್ಷೇತ್ರ ಸಮೀಕ್ಷೆ : ಕಾಂಗ್ರೆಸ್, ಬಿಜೆಪಿ ಗೆಲುವಿನ ಮೇಲೆ ಪಕ್ಷಾಂತರಿಗಳ, ರೆಡ್ಡಿ ಪಕ್ಷದ ಎಫೆಕ್ಟ್
ಮಂಡ್ಯದಲ್ಲಿ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿ, ಅದು ನನ್ನಿಂದ ಆದ ಬಂಡಾಯ ಅಲ್ಲ. ಅವರೇ ಮಾಡಿಕೊಂಡ ಸ್ವಯಂಕೃತ ಬಂಡಾಯ. ಶಾಸಕ ಶ್ರೀನಿವಾಸ್ ಅವರಿಗೆ ಟಿಕೆಟ್ ಬೇಕು ಎಂದಿದ್ದರು, ನಂತರ ಅಳಿಯನಿಗೆ ಬೇಕು ಎಂದಿದ್ದರು. ಕ್ಷೇತ್ರದಲ್ಲಿ ಬಂಡಾಯ ಏನೂ ಪರಿಣಾಮ ಬೀರಲ್ಲ ಎಂದು ತಿಳಿಸಿದರು.
ಗೂಟದ ಕಾರು ಅಂದರೆ ಏನು?
ಚಾಮರಾಜನಗರ ಜೆಡಿಎಸ್ ಅಭ್ಯರ್ಥಿಗೆ ಸಚಿವ ವಿ. ಸೋಮಣ್ಣ ಆಮಿಷ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಗೂಟದ ಕಾರು ಅಂದರೆ ಏನು? ಪ್ರೈವೇಟ್ ಕಾರು ತಗೊಂಡು ಗೂಟ ಇಟ್ಟುಕೊಡುತ್ತಾರಾ? ಕಾಂಗ್ರೆಸ್ ನಾಯಕರು ನೋಡಿದರೆ ಬಿಜೆಪಿ ಶವಯಾತ್ರೆ ಎನ್ನುತ್ತಾರೆ. ಇವರು ನೋಡಿದರೆ ಗೂಟದ ಕಾರು ಎನ್ನುತ್ತಾರೆ. ಇವರು ಯಾವ ಗೂಟದ ಕಾರು ಕೊಡುತ್ತಾರೋ ಗೊತ್ತಿಲ್ಲ. ಇವೆಲ್ಲ ಈಗ ವರ್ಕ್ ಆಗಲ್ಲ. ಸೋಮಣ್ಣ ಬಳಸಿದ ಭಾಷೆ ನಮಗೆ ಗೊತ್ತಿಲ್ಲ. ಇವತ್ತಿನ ಸ್ಥಿತಿ ನೋಡಿದರೆ ರಾಷ್ಟ್ರೀಯ ಪಕ್ಷಗಳಿಗೆ ಆತಂಕ ಶುರುವಾಗಿದೆ ಎಂದು ನಮಗೆ ಅರ್ಥ ಆಗುತ್ತದೆ ಎಂದು ತಿಳಿಸಿದರು.