ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ರಾಜಕಾರಣ (Adjustment Politics) ನಡೆಯುತ್ತಿದೆ. ಮುಂದಿನ 2024ರಲ್ಲಿ ಅವೆರಡೂ ಪಕ್ಷಗಳು ಜತೆಯಾಗಿ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧೆ ಮಾಡಲಿವೆ ಎಂಬ ಸುದ್ದಿಯೊಂದು ಹರಡುತ್ತಿರುವ ನಡುವೆಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಕುತೂಹಲಕಾರಿ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
ಅದೇನೆಂದರೆ, ʻʻನಾನು 2019ರಲ್ಲಿ ಕಾಂಗ್ರೆಸ್ ಜತೆಗಿನ ಸಮ್ಮಿಶ್ರ ಸರ್ಕಾರ (Coalition Government) ನಡೆಸುತ್ತಿರುವಾಗಲೇ ಪ್ರಧಾನ ನರೇಂದ್ರ ಮೋದಿ (Prime Minister Narendra Modi) ಕರೆದು ಮಾತುಕತೆ ನಡೆಸಿದ್ದು ನಿಜ. ಆದರೆ, ಸರ್ಕಾರ ಬೀಳಿಸುವುದು ನನಗೆ ಕಪ್ಪು ಚುಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ಅಂದು ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಒಂದೊಮ್ಮೆ ಮೋದಿ ಅವರ ಮಾತು ಕೇಳಿದ್ದರೆ ಅಂದು ನಾನು ಹೋಗಿದ್ದರೆ ಐದು ವರ್ಷಗಳ ಕಾಲ ನಾನೇ ಸಿಎಂ ಆಗುತ್ತಿದ್ದೆʼʼ ಎಂದು ವಿಧಾನಸಭೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಉತ್ತರ ನೀಡುವ ವೇಳೆ ಆಪರೇಷನ್ ಕಮಲದ ಪ್ರಸ್ತಾಪವಾಯಿತು. ಆಗ ಬಿಜೆಪಿ ನಾಯಕರು ಆಪರೇಷನ್ ಬಿಜೆಪಿ ಕಾಲದಲ್ಲಿ ಆರಂಭವಾಗಿದ್ದಲ್ಲ. ನೀವು ಜೆಡಿಎಸ್‌ನಿಂದ ಕಾಂಗ್ರೆಸ್ ಸೇರಿದ್ದು ಕೂಡಾ ಆಪರೇಷನ್ ಎಂದು ಕಾಲೆಳೆದರು. ಇದಕ್ಕೆ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಕೂಡಾ ಧ್ವನಿಗೂಡಿಸಿದರು. ಆಗ ಸಿದ್ದರಾಮಯ್ಯ ಅವರು ನೀವ್ಯಾಕೆ ಬಿಜೆಪಿಯವರ ಜತೆ ಸೇರಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ಸಿಟ್ಟಿಗೆದ್ದ ಎಚ್.ಡಿ. ಕುಮಾರಸ್ವಾಮಿ ಅವರು ನೀವು ಪದೇಪದೆ ನಮ್ಮನ್ನು ಬಿಜೆಪಿ ಬಿ ಟೀಮ್ ಎಂದು ಹೇಳುತ್ತಾ ಅವರ ಕಡೆಗೆ ತಳ್ಳುತ್ತಿದ್ದೀರಿ ಎಂದು ಆಕ್ಷೇಪಿಸಿದರು. ಬಳಿಕ 2019ರಲ್ಲಿ ನಡೆದ ಘಟನೆಯನ್ನು ವಿವರಿಸಿದರು.
ʻʻಒಂದು ವೇಳೆ ನಾನು ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಕೇಳಿ ತೀರ್ಮಾನ ಕೈಗೊಂಡಿದ್ದರೆ ನಾನು ಕಳೆದ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಿದ್ದೆ. ಆದರೆ ನಾನು ಹಾಗೆ ಮಾಡಲಿಲ್ಲ. ನೀವು ಪದೇ ಪದೇ ಬಿಜೆಪಿ ಬಿ ಟೀಂ ಎಂದು ಹೇಳುತ್ತಾ ನೀವೇ ಬಿಜೆಪಿ ಕಡೆ ತಳ್ಳುತ್ತೀರಿ. ನಾವೂ ರಾಜಕೀಯದಲ್ಲಿ ಉಳಿಯಬೇಕಲ್ವಾ?ʼʼ ಎಂದು ಪ್ರಶ್ನಿಸಿದರು.
ʻʻ2019ರಲ್ಲಿ ಕಾಂಗ್ರೆಸ್ ಜೊತೆಗೆ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ಮೋದಿ ಅವರು ನನ್ನನ್ನು ದಿಲ್ಲಿಗೆ ಕರೆಸಿಕೊಂಡಿದ್ದರು. ನಾವು ನಿಮ್ಮ ಸರ್ಕಾರಕ್ಕೆ ಬೆಂಬಲ ಕೊಡುತ್ತೇವೆ. ಮುಂದಿನ ನಾಲ್ಕು ವರ್ಷ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳಿದ್ದರು. ಆವತ್ತೇನಾದರೂ ನಾನು ಮೋದಿ ಅವರ ಮಾತು ಕೇಳಿದ್ದರೆ ಕಳೆದ ಐದು ವರ್ಷಗಳ ಪೂರ್ಣ ಅವಧಿಗೆ ನಾನೇ ಸಿಎಂ ಆಗಿರುತ್ತಿದ್ದೆ. ಆದರೆ, ನಾನು ಅವರ ಆಫರನ್ನು ತಿರಸ್ಕಾರ ಮಾಡಿದೆ. ನಮ್ಮ ಪಕ್ಷಕ್ಕೆ ಕಪ್ಪು ಚುಕ್ಕೆ ಬರಬಾರದು ಎಂಬ ಕಾರಣಕ್ಕಾಗಿ. ಆದರೆ, ನೀವು ನೋಡಿದರೆ ನನ್ನನ್ನೇ ಕಾಂಗ್ರೆಸ್ ಬಿಟೀಂ ಎನ್ನುತ್ತೀರಿʼʼ ಎಂದು ಸಿದ್ದರಾಮಯ್ಯ ಅವರ ಮೇಲೆ ಸಿಟ್ಟಾದರು.
ನಾನು ಹಿಂಬಾಗಿಲ ರಾಜಕಾರಣ ಮಾಡುವುದಿಲ್ಲ. ಏನಿದ್ದರೂ ನೇರವಾಗಿಯೇ ಮಾಡುತ್ತೇನೆ ಎಂದು ಹೇಳಿದರು ಕುಮಾರಸ್ವಾಮಿ.