Site icon Vistara News

ಶೃಂಗೇರಿ ಮಠವನ್ನು ಒಡೆದ, ಮಹಾತ್ಮಾ ಗಾಂಧಿಯನ್ನು ಕೊಂದ ಬ್ರಾಹ್ಮಣರು ಇವರು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ

Who Told That We Support BJP, HD Kumaraswamy on Pralhad Joshi

Who Told That We Support BJP, HD Kumaraswamy on Pralhad Joshi

ಬೆಂಗಳೂರು: ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಕುರಿತು ಟೀಕೆ ಮಾಡಿದ್ದ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಪ್ರಲ್ಹಾದ ಜೋಶಿ ವಿರುದ್ಧ ಹರಿಹಾಯ್ದಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಇವರು ಶೃಂಗೇರಿ ಮಠವನ್ನು ಒಡೆದ ಹಾಗೂ ಮಹಾತ್ಮಾ ಗಾಂಧಿ ಹತ್ಯೆ ಮಾಡಿದ ಮಹಾರಾಷ್ಟ್ರದ ಬ್ರಾಹ್ಮಣರು ಎಂದು ಹರಿಹಾಯ್ದಿದ್ದಾರೆ.

ಶನಿವಾರ ನಡೆದ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿಯಲ್ಲಿ ಮಾತನಾಡಿದ್ದ ಪ್ರಲ್ಹಾದ ಜೋಶಿ, ಜೆಡಿಎಸ್‌ ಪಂಚರತ್ನ ರಥಯಾತ್ರೆ ಕುರಿತು ಟೀಕೆ ಮಾಡಿದ್ದರು. ಪಂಚರತ್ನ ಯಾತ್ರೆ ಬದಲಿಗೆ ಇವರು ನವಗ್ರಹ ಯಾತ್ರೆ ಮಾಡಬೇಕು. ಇವರ ಕುಟುಂಬದಲ್ಲೆ 9 ರಾಜಕಾರಣಿಗಳಿದ್ದಾರೆ ಎಂದು ಹೇಳಿದ್ದರು.

ಬೆಂಗಳೂರಿನ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಮಾಧ್ಯಮಗಳಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ಎಚ್‌.ಡಿ. ಕುಮಾರಸ್ವಾಮಿ, ಪಂಚರತ್ನ ಯೋಜನೆಯಿಂದ ಅವರಿಗೆ ಭಯ ಹುಟ್ಟಿದೆ ಅದಕ್ಕೇ ಟೀಕೆ ಮಾಡುತ್ತಿದ್ದಾರೆ. ಇನ್ನೊಂದು ವಿಚಾರ ಹೇಳ್ತೀನಿ ಕೇಳಿ. ಪ್ರಲ್ಹಾದ ಜೋಶಿ ಅವರನ್ನು ಮುಂದಿನ ಸಿಎಂ ಮಾಡಬೇಕು ಎಂದು ಆರ್‌ಎಸ್‌ಎಸ್‌ನಲ್ಲಿ ಹುನ್ನಾರ ಆರಂಭವಾಗಿದೆ. ಪ್ರಲ್ಹಾದ ಜೋಶಿ, ದಕ್ಷಿಣ ಕರ್ನಾಟಕದಲ್ಲಿರುವ ಬ್ರಾಹ್ಮಣರಲ್ಲ. ಬ್ರಾಹ್ಮಣರಲ್ಲಿ ಸಾಕಷ್ಟು ವಿಭಿನ್ನ ವರ್ಗಗಳಿವೆ. ಪ್ರಲ್ಹಾದ ಜೋಶಿಯವರು ಮಹಾರಾಷ್ಟ್ರದ ಕಡೆಯ ಪೇಶ್ವೆ, ದೇಶಸ್ಥ ಬ್ರಾಹ್ಮಣರು. ಇವರು ಶೃಂಗೇರಿ ಮಠವನ್ನು ಒಡೆದವರ ವರ್ಗ. ಮಹಾತ್ಮಾ ಗಾಂಧೀಯವರನ್ನು ಕೊಂದ ವರ್ಗಕ್ಕೆ ಸೇರಿದವರು ಇವರು. ನಮ್ಮ ಕಡೆ ಬ್ರಾಹ್ಮಣರು ಸರ್ವೇ ಜನಾಃ ಸುಖಿನೋ ಭವಂತು ಎನ್ನುವವರು. ಅವರ ಕಾಲಿಗೆ ನಾವು ಬೀಳುತ್ತೇವೆ. ಆದರೆ ಇವರು (ಪ್ರಲ್ಹಾದ ಜೋಶಿ) ನಮ್ಮ ಭಾಗದ ಬ್ರಾಹ್ಮಣರಲ್ಲ. ಮಹಾರಾಷ್ಟ್ರದ ಕಡೆಯ ಬ್ರಾಹ್ಮಣರು ಇವರು. ದೇಶ ಒಡೆಯುವುದು, ಕುತಂತ್ರ ಮಾಡುವುದು, ದೇಶಭಕ್ತಿ ಹೆಸರಿನಲ್ಲಿ ದೇಶಕ್ಕೆ ಕೊಡುಗೆ ಕೊಟ್ಟವರನ್ನು ಮಾರಣಹೋಮ ಮಾಡುವುದು ಇವರ ಕೆಲಸ. ಅವರನ್ನು ಮುಂದಿನ ಸಿಎಂ ಮಾಡಲು ಆರ್‌ಎಸ್‌ಎಸ್‌ನಲ್ಲಿ ತೀರ್ಮಾನ ಆಗಿದೆ. ಅದಕ್ಕಾಗಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದರು.

ಇದನ್ನೂ ಓದಿ : Karnataka Election: ಬಾಗೇಪಲ್ಲಿಯಲ್ಲಿ ಅನಿತಾ ಕುಮಾರಸ್ವಾಮಿಯನ್ನು ಸ್ಪರ್ಧೆಗಿಳಿಸಲು ನನಗೇನು ಹುಚ್ಚೇ ಎಂದ ಎಚ್‌ಡಿಕೆ

ವೀರಶೈವ, ಒಕ್ಕಲಿಗ, ಹಿಂದುಳಿದ, ದಲಿತ ವರ್ಗಕ್ಕೆ ಹೇಳುತ್ತೇನೆ. ಬಿಜೆಪಿ ಆರ್‌ಎಸ್‌ಎಸ್‌ ಕುತಂತ್ರಕ್ಕೆ ಬಲಿಯಾಗಬೇಡಿ. ಇವರನ್ನು ಸಿಎಂ ಮಾಡಿ 8 ಡಿಸಿಎಂ ಮಾಡುವ ಕುತಂತ್ರ ಮಾಡಿದ್ದಾರೆ, ನವದೆಹಲಿಯಲ್ಲಿ. ಈ ರೀತಿಯ ವಿಚಾರವನ್ನು ಮುಂದಿಟ್ಟು ಸಭೆ ಮಾಡಿದ್ದಾರೆ ಎಂಬ ಮಾಹಿತಿ ನನಗೆ ಲಭಿಸಿದೆ. ಇವರು ಕರ್ನಾಟಕವನ್ನು ಕುಲಗೆಡಿಸಲು ಹೊರಡಿಸಲು ಹೊರಟಿದ್ದಾರೆ, ಅಂಥವರನ್ನು ಎದುರಿಸಲು ನಾನು ಹೊರಟಿದ್ದೇನೆ ಎಂದರು.

ಎಂಟು ಜನರು ಯಾರು? ಎಂಬ ಕುರಿತು ಪ್ರತಿಕ್ರಿಯಿಸಿ, ಆ ಲಿಸ್ಟ್‌ ಸಹ ನೀಡಲು ತಯಾರಿದ್ದೇನೆ. ಇವರು ನಮ್ಮ ಸಂಸ್ಕೃತಿಯ ಬ್ರಾಹ್ಮಣರಲ್ಲ. ಇವರು ನಮ್ಮ ಸಂಸ್ಕೃತಿಯವರಲ್ಲ. ಶಂಕರಾಚಾರ್ಯರ ವಂಶಸ್ಥರನ್ನು ಓಡಿಸಿದವರು ಇವರು, ಎಚ್ಚರಿಕೆಯಿಂದ ಇರಿ ಎಂದರು.

Exit mobile version