ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಯುರೋಪ್ ಪ್ರವಾಸ ಮುಗಿಸಿ ಬಂದ ಮೇಲೆ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಶುಕ್ರವಾರ ಮುಂಜಾನೆ 2 ಗಂಟೆ ಹೊತ್ತಿಗೆ ವಿಮಾನದಿಂದ ಇಳಿದ ಕೂಡಲೇ ಶುರು ಮಾಡಿದ ಅವರ ಮಾತಿನ ಬಾಣಗಳು ನಿನ್ನೂ ನಿಂತಿಲ್ಲ. ಅವರು ರಾತ್ರಿ ಆಡಿದ ಮಾತುಗಳಿಗೆಲ್ಲ ಸಿಎಂ ಸಿದ್ದರಾಮಯ್ಯ (CM Siddaramaiah) ಆದಿಯಾಗಿ ಎಲ್ಲ ಕಾಂಗ್ರೆಸ್ ನಾಯಕರು (Congress leaders) ಕೌಂಟರ್ ಕೊಟ್ಟಿದ್ದರು. ಆ ಎಲ್ಲ ಕೌಂಟರ್‌ಗಳಿಗೆ ಪ್ರತಿ ದಾಳಿ ನಡೆಸುವುದಕ್ಕಾಗಿಯೇ ಕುಮಾರಸ್ವಾಮಿ ಅವರು ಶನಿವಾರ ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಒಬ್ಬೊಬ್ಬ ನಾಯಕರ ಒಂದೊಂದು ಮಾತನ್ನೂ ನೆನಪಿಟ್ಟುಕೊಂಡು ಅದಕ್ಕೆ ಪ್ರತಿ ದಾಳಿ ನಡೆಸಿದರು. ಜತೆಗೆ ನೈಸ್ ಹಗರಣದ ದಾಖಲೆಯನ್ನು ಬಿಜೆಪಿ (NICE records to BJP) ಕೈಗೆ ಕೊಡುವ ಸಂಕೇತವನ್ನು ಕೂಡಾ ನೀಡಿದರು.
ಹಿಟ್ ಎಂಡ್ ರನ್ ಮಾಡೋನಲ್ಲ: ಸಿದ್ದರಾಮಯ್ಯ ಅವರಿಗೆ ತಿರುಗೇಟು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 12 ದಿನಗಳ ಕಾಲ ಹೊರ ದೇಶಕ್ಕೆ ಕುಟುಂಬ ಸಮೇತವಾಗಿ ಹೋಗಿದ್ದೆ. ವಾಪsff ಬರುವಾಗ ಏರ್ಪೋರ್ಟ್ ನಲ್ಲಿ ಕೆಲ ವಿಷಯಗಳ ಪ್ರಸ್ತಾಪ ಮಾಡಿದ್ದೆ. ಅದನ್ನು ನಾನು ಹುಡುಗಾಟಿಗೋ, ಅಥವಾ ಸಿಎಂ ಏನೋ ಹೇಳಿದ್ದಾರಲ್ಲ ಹಿಟ್ ಅಂಡ್ ರನ್ ಗೋ ಹೇಳಿಲ್ಲ ಎಂದು ಹೇಳಿದರು.
ʻʻಹಿಟ್ ಅಂಡ್ ರನ್ ಜಾಯಮಾನದ ವ್ಯಕ್ತಿ ನಾನಲ್ಲ. ಹಿಟ್ ಅಂಡ್ ರನ್ ಮಾಡುವ ಸಂಸ್ಕೃತಿ ಕಾಂಗ್ರೆಸ್‌ನದ್ದು. ಚುನಾವಣೆ ಸಂದರ್ಭದಲ್ಲಿ ಕಮಿಷನ್ ಅಂತಾ ಜಾಹೀರಾತು ಕೊಟ್ರಲ್ಲ ಇವ್ರು ಹಿಂದಿನ ಸರ್ಕಾರದ ಕಮಿಷನ್ ಬಗ್ಗೆ ಇವ್ರು ದಾಖಲೆ ಕೊಡೋಕೆ ಆಗಿಲ್ಲ ಇವರ ಕೈಯಲ್ಲಿʼʼ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ʻʻಕಾಂಗ್ರೆಸ್ ನವರು ನುಡಿದಂತೆ ನಡೆದಿದ್ದೇವೆ ಎಂದು ಜಾಹಿರಾತು ಕೊಟ್ಟಿದ್ದಾರೆ. ನೀವು ಯಾವ ರೀತಿ ನುಡಿದಂತೆ ನಡೆದಿದ್ದೀರಿ..?ʼʼ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ನಿಮ್ಮಂಥ ತಮ್ಮ ಮುಂದಿನ ಜನ್ಮದಲ್ಲೂ ಬೇಡ: ಡಿಕೆಶಿಗೆ ಠಕ್ಕರ್
ಯುರೋಪ್ ಪ್ರವಾಸ ಮುಗಿಸಿ ಗುರುವಾರ ರಾತ್ರಿ ಬೆಂಗಳೂರಿಗೆ ಮರಳಿದ ವೇಳೆ ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ಅವರು ಯಾವುದೋ ಕೃತಕ ಶಕ್ತಿಯನ್ನು ಬಳಸಿಕೊಂಡು ಗೆದ್ದಿದ್ದಾರೆ, ಈ ಕೃತಕ ಶಕ್ತಿಗಳು ತುಂಬ ದಿನ ಉಳಿಯಲ್ಲ ಎಂದೆಲ್ಲ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಡಿ.ಕೆ. ಶಿವಕುಮಾರ್ ಅವರು, ʻʻನಮ್ಮಣ್ಣ ಹೇಳ್ತಾರೆ, ನಾವು ಕೇಳಬೇಕುʼʼ ಎಂದು ಲಘುವಾಗಿ ಪ್ರತಿಕ್ರಿಯಿಸಿದ್ದರು.
ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಅವರ ಮಾತಿಗೆ ತಿರುಗೇಟು ನೀಡಿದರು. ʻʻಅಣ್ಣ ಹೇಳ್ತಾರೆ, ತಮ್ಮ ಕೇಳ್ಬೇಕು ಅಂತಾ ಅದೇನೋ ಡಿಕೆ ಶಿವಕುಮಾರ್ ಹೇಳಿದ್ದಾರಲ್ಲ.. ನನಗೆ ಈ ಜನ್ಮದಲ್ಲಿ ಅವರು ತಮ್ಮನಾಗೋದು ಸಾಧ್ಯವಿಲ್ಲ. ಮುಂದಿನ ಜನ್ಮದಲ್ಲೂ ಅವರು ನನಗೆ ತಮ್ಮನಾಗೋದು ಬೇಡʼʼ ಎಂದು ಹೇಳಿದರು. ʻʻನಾನು ಅವರಿಗೆ ಅಣ್ಣಾ ಆಗೊದು ಬೇಡ. ಅವರು ನನಗೆ ತಮ್ಮ ಆಗೊದು ಬೇಡ. ಅಂತ ತಮ್ಮ ನನಗೆ ಬೇಕಿಲ್ಲʼʼ ಎಂದು ಹೇಳಿದರು ಎಚ್.ಡಿ ಕುಮಾರಸ್ವಾಮಿ.
ಪೆನ್ ಡ್ರೈವ್‌ಗೆ ಎಸ್‌ಪಿ ರೋಡಿಗೆ ಹೋಗಬೇಕಿಲ್ಲ, ಕಾಂಗ್ರೆಸ್‌ನವರೇ ಕೊಡ್ತಾರೆ!
ಕುಮಾರಸ್ವಾಮಿ ಅವರು ಪೆನ್‌ಡ್ರೈವ್ ತೋರಿಸಿದ್ರಲ್ಲ.. ಅದನ್ನು ಬಹಿರಂಗ ಮಾಡಿದ್ರಾ? ಅದೆಲ್ಲ ಸುಳ್ಳು. ಅಂಥ ಪೆನ್‌ಡ್ರೈವ್‌ಗಳು ಎಸ್‌ಪಿ ರೋಡ್‌ನಲ್ಲಿ ಎಷ್ಟು ಬೇಕಾದರೂ ಸಿಗುತ್ತದೆ ಎಂದು ಹೇಳಿದ್ದರು ಸಚಿವ ಪ್ರಿಯಾಂಕ್ ಗಾಂಧಿ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಅವರು, ʻʻಪೆನ್ ಡ್ರೈವ್ ತರೋಕೆ, ನಾನು ಏನು ಯಾಕೆ ಎಸ್ಪಿ ರೋಡ್ ಗೆ ಹೋಗಲಿ..? ಕಾಂಗ್ರೆಸ್‌ನವರೇ ನನಗೆ ಪೆನ್ ಡ್ರೈವ್ ತಯಾರಿ ಮಾಡಿಕೊಡ್ತಿದಾರೆʼʼ ಎಂದರು.
ʻʻಒಂದು ಪೆನ್ ಡ್ರೈವ್ ತೋರಿಸಿದ್ದಕ್ಕೆ ಎಷ್ಟು ಮಂತ್ರಿ ಗಳು ನಿದ್ದೆ ಗೆಟ್ಟರು? ಅಣ್ಣಾ ಅದರಲ್ಲಿ ಇರೋದು ಯಾರದು ಅಂತ ಎಷ್ಟು ಮಂದಿ ಮಂತ್ರಿಗಳು ಫೋನ್ ಮಾಡಿ ಕೇಳಿದ್ದು ಗೊತ್ತಾʼʼ ಎಂದು ಕೇಳಿದ ಕುಮಾರಸ್ವಾಮಿ, ʻʻಆಯ್ತು ಪೆನ್ ಡ್ರೈವ್ ರಿಲೀಸ್ ಮಾಡ್ತೀನಿ, ಸರ್ಕಾರಕ್ಕೆ ಧಮ್ ಇದ್ಯಾ ತಾಕತ್ ಅದನ್ನು ತನಿಖೆ ಮಾಡೋಕೆ.? ಕ್ರಮ ತಗೊಳ್ಳೋಕೆʼʼ ಎಂದರು. ಈಗ ಪೆನ್‌ಡ್ರೈವ್ ಬಿಡುಗಡೆ ಮಾಡಿದರೂ ನೀವು ಮಾತ್ರ ಅದೇನೋ ಮಿಮಿಕ್ರಿ ಅಂತ ಹೇಳುತ್ತೀರಿ ಎಂದರು.
ಜೆಡಿಎಸ್ ಜತೆಗೆ ಹೋಗುವ ದಾರಿದ್ರ್ಯ ನನಗೂ ಬಂದಿಲ್ಲ: ಸುನಿಲ್‌ಗೆ ತರಾಟೆ
ಬಿಜೆಪಿಗೆ ಜೆಡಿಎಸ್ ಜತೆಗೆ ಹೋಗುವ ದಾರಿದ್ರ್ಯ ಬಂದಿಲ್ಲ ಎಂದಿದ್ದರು ಬಿಜೆಪಿ ನಾಯಕ ಸುನಿಲ್ ಕುಮಾರ್. ಅವರ ಹೆಸರನ್ನು ಹೇಳದೆಯೇ ತಿರುಗೇಟು ನೀಡಿದ ಕುಮಾರಸ್ವಾಮಿ, ʻʻನನಗೂ ಬಿಜೆಪಿ ಜೊತೆ ಹೋಗುವ ದಾರಿದ್ರ್ಯ ಬಂದಿಲ್ಲ. ನಾನು ಕಾರ್ಯಕರ್ತರಿಗೆ ಹೇಳುತ್ತೇನೆ, ಸದನದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೇನೆ. ಅದು ಅಲ್ಲಿಗೇ ಸೀಮಿತ. ನಾವು ಯಾವುದೇ ಪಕ್ಷಗಳ ಜೊತೆ ಭಿಕ್ಷೆ ಬೇಡುವ ಪರಿಸ್ಥಿತಿ ಇಲ್ಲ. ನಾನು ಯಾರ ಮನೆಯ ಬಾಗಿಲಿಗೂ ಹೋಗಲ್ಲ. ನಮ್ಮ ರಾಜ್ಯಕ್ಕೆ ಕಾಂಗ್ರೆಸ್ ಎಷ್ಟು ದ್ರೋಹ ಮಾಡಿದೆಯೋ ಅಷ್ಟೇ ದ್ರೋಹವನ್ನು ಬಿಜೆಪಿ ಕೂಡ ಮಾಡಿದೆʼʼ ಎಂದರು. ಎರಡೂ ಪಕ್ಷಗಳು ನನ್ನನ್ನು ತಮಗೆ ಬೇಕಾದಂತೆ ಉಪಯೋಗಿಸಿಕೊಂಡಿವೆ. ಕಾಂಗ್ರೆಸ್ ನಷ್ಟೇ ಅಷ್ಟೇ ಬಿಜೆಪಿ ಯಿಂದಲೂ ನಮಗೆ ದ್ರೋಹ ಆಗಿದೆ ಎಂದರು.
ಪೆರಿಫೆರಲ್ ರಿಂಗ್ ರೋಡ್ ಮಾಡಲು ನೈಸ್ ಜತೆ ಸೇರಿಕೊಂಡ ಡಿಕೆಶಿ
ಬ್ರಾಂಡ್ ಬೆಂಗಳೂರು ಬಗ್ಗೆ ಮಾತನಾಡುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈಗ ಪೆರಿಫೆರಲ್ ರಿಂಗ್ ರೋಡ್ ಮಾಡಲು ನೈಸ್ ಜತೆ ಸೇರಿಕೊಂಡಿದ್ದಾರೆ ಎಂದರು. ಈ ಮೂಲಕ ಅವರು ಬಡವರನ್ನು ಒಕ್ಕಲೆಬ್ಬಿಸಲು ಹೊರಟಿದ್ದಾರೆ ಎಂದು ಆಕ್ಷೇಪಿಸಿದರು.
ನೈಸ್ ಹಗರಣದ ಬಗ್ಗೆ ಮತ್ತೆ ಪ್ರಸ್ತಾಪಿಸಿದ ಅವರು 13000 ಕೋಟಿ ಮೌಲ್ಯದ ಜಾಗವನ್ನು ಮರಳಿ ಪಡೆಯಬೇಕು ಎಂಬ ಒತ್ತಾಯ ಮಾಡಿದರು. ಈ ಹಗರಣದ ಬಗ್ಗೆ ಕೇಂದ್ರ ಸರ್ಕಾರದ ಕದ ತಟ್ಟುವ ಸಂದೇಶವನ್ನು ಅವರು ನೀಡಿದರು. ನೈಸ್ ಹಗರಣದ ದಾಖಲೆ ಗಳನ್ನು ಪ್ರಧಾನಿಗಳಿಗೆ, ಗೃಹ ಸಚಿವರಿಗೆ ಕೊಡಲು ತೀರ್ಮಾನ ಮಾಡಿದ್ದೇನೆ. ಭೇಟಿಗೆ ಸಮಯ ಕೇಳಿದ್ದೇನೆ ಎಂದರು.
ಕುಮಾರಸ್ವಾಮಿ ಅವರ ಇನ್ನಷ್ಟು ಆಕ್ರಮಣಕಾರಿ ಮಾತುಗಳು
- ಬ್ರಾಂಡ್ ಬೆಂಗಳೂರು ಹೆಸರಲ್ಲಿ ಕಮೀಷನ್ ಶುರುವಾಗಿದೆ. ಬೆಂಗಳೂರನ್ನ ಸಿಂಗಾಪುರ ಮಾಡಲು ಹೊರಟಿದ್ದಾರೆ. ಅದಕ್ಕಾಗಿ 15-20 ವರ್ಷ ಕೆಲಸ ಮಾಡಿದ ಒಬ್ಬ ಚೀಫ್ ಇಂಜಿನಿಯರ್ ಇಟ್ಟುಕೊಂಡಿದ್ದಾರೆ. ಅಲ್ಲಿ ಫೈಲ್ ಟ್ರಾನ್ಸ್‌ಫರ್ ಮಾಡೋದಕ್ಕೆ 15% ಕೊಡಬೇಕಿದೆ. (ಹೆಸರು ಹೇಳದೆ ನಿವೃತ್ತ ಬಿಬಿಎಂಪಿ ಚೀಫ್ ಇಂಜಿನಿಯರ್ ಕೆ.ಟಿ ನಾಗರಾಜ್ ಉಲ್ಲೇಖ)
- ನಾನು ಪ್ರಾಮಾಣಿಕ ಅಂತ ನಾನು ಹೇಳಲ್ಲ. ಆದ್ರೆ ನನ್ನ ಸಹಿ ಮಾರಾಟಕ್ಕೆ ಇಟ್ಟಿರಲಿಲ್ಲ.
- ಕಾಂಗ್ರೆಸ್ ಸಂಸದ ಒಬ್ರು ಬಿಬಿಎಂಪಿ ಅಧಿಕಾರಿಗಳಿಗೆ ವಾರ್ನಿಂಗ್ ಮಾಡಿದ್ರು. ನಮ್ಮ ಸರ್ಕಾರ ಬರ್ತಿದೆ. 10 ಕೋಟಿ ಹಣ ಬಿಡುಗಡೆ ಮಾಡದಂತೆ ಎಚ್ಚರಿಕೆ ನೀಡಿದ್ರು. ಅಧಿಕಾರಿಗಳು ಹೆದರಿ ಸುಮ್ಮನಾದ್ರು. (ಸಂಸದ ಡಿ.ಕೆ ಸುರೇಶ್ ಹೆಸರೇಳದೆ ವಾಗ್ದಾಳಿ)
- ಅರ್ಕಾವತಿ ರೀಡೂ ಮಾಡಿದ್ರಲ್ಲ, ಅದೇನು ಪಾರದರ್ಶಕವಾಗಿ ಮಾಡಿದ್ರಾ ಸಿದ್ದರಾಮಯ್ಯ ನವರೇ..? ನಿವೃತ್ತ ಜಡ್ಜ್ ನೇಮಕ ಮಾಡಿ ಅದನ್ನು ಹಳ್ಳ ಹಿಡಿಸಿದ್ರಲ್ಲ.
- ನೀವು ಎಷ್ಟೆಲ್ಲ ಆಪಾದನೆ ಮಾಡಿದ್ರಿ. ಒಂದು ದಾಖಲೆಯಾದರೂ ಬಿಡುಗಡೆ ಮಾಡಿದ್ರಾ? ನಾನು ಕೆಜಿಗಟ್ಟಲೆ ದಾಖಲೆ ಬಿಡುಗಡೆ ಮಾಡಿದ್ದೇನೆ. ಆದರೆ ಇಂದಿನ ವ್ಯವಸ್ಥೆಯಲ್ಲಿ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ.
- ಟ್ರಾನ್ಸ್‌ಫರ್ ದಂಧೆಯಲ್ಲಿ ಎಷ್ಟು ಹಗರಣ ಆಗಿದೆ ಅಂತ ಲೆಕ್ಕ ಹಾಕೊಕ್ಕೆ ಆಗಲ್ಲ. ಸಾವಿರ ಕೋಟಿ ದಾಟಬಹುದು
- ಹಿಂದೆ ಯಡಿಯೂರಪ್ಪನವರು ನನ್ನನ್ನು ಕೆಣಕಿದ್ರು. ಇವಾಗ ಇವರು ಕೆಣಕಲಿ ಎಂದು ಕಾಯ್ತಿದ್ದೇನೆ. ಕೆಣಕಲಿ, ಸೂಟ್ ಕೇಸ್ ಗಟ್ಟಲೇ ದಾಖಲೆ ಗಳು ನನ್ನ ಬಳಿ ಇವೆ.
ಇದನ್ನೂ ಓದಿ: HD Kumaraswamy : ಎಲ್ಲರನ್ನೂ Brother ಅನ್ನುವ ಕುಮಾರಸ್ವಾಮಿಗೆ ಡಿಕೆಶಿಯಂಥ ತಮ್ಮ ಯಾವ ಜನ್ಮದಲ್ಲೂ ಬೇಡವಂತೆ!