Site icon Vistara News

HD Kumaraswamy : ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ; ಐಸಿಯುನಿಂದ ವಾರ್ಡ್‌ಗೆ ಶಿಫ್ಟ್‌; ಡಿಸ್ಚಾರ್ಜ್‌ಗೆ ಕಂಡಿಷನ್‌!

HD Kumaraswamy

ಬೆಂಗಳೂರು: ಆಗಸ್ಟ್‌ 30ರಂದು ಬೆಳಗ್ಗೆ 3.00 ಗಂಟೆ ಹೊತ್ತಿಗೆ ಆರೋಗ್ಯ ಸಮಸ್ಯೆ ಎದುರಿಸಿ ಅಪೋಲೋ ಆಸ್ಪತ್ರೆಗೆ (Apollo Hospital) ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಸುಧಾರಿಸಿದ್ದು ಅವರನ್ನು ಗುರುವಾರ ಬೆಳಗ್ಗೆ ತೀವ್ರ ನಿಗಾ ವಿಭಾಗ (Intensive care unit)ದಿಂದ ವಾರ್ಡ್‌ಗೆ ಶಿಫ್ಟ್‌ (Shifted to Ward) ಮಾಡಲಾಗಿದೆ.

ಬುಧವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಾದ ವೇಳೆ ಕುಮಾರಸ್ವಾಮಿ ಅವರ ಬಲಕೈ ಶಕ್ತಿಯನ್ನು ಕಳೆದುಕೊಂಡಿತ್ತು. ಮಾತು ತೊದಲುತ್ತಿತ್ತು. ಇದಕ್ಕೆ ಮಿದುಳಿನ ಎಡಭಾಗದಲ್ಲಿ ಸಂಭವಿಸಿದ ಸಣ್ಣ ಸ್ಟ್ರೋಕ್‌ ಕಾರಣ ಎಂದು ವೈದ್ಯರು ಹೇಳಿದ್ದರು. ಕೂಡಲೇ ಆರೋಗ್ಯ ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡಿರುವ ಕಾರಣ ಅವರು ಮೊದಲಿನಂತೆಯೇ ಆರೋಗ್ಯವಾಗಿ ತಮ್ಮ ಎಲ್ಲ ಕೆಲಸ ಕಾರ್ಯಗಳನ್ನು ತಾವೇ ನಿರ್ವಹಿಸುತ್ತಿದ್ದಾರೆ ಎಂದು ಡಾ.ಸತೀಶ್ ಚಂದ್ರ ತಿಳಿಸಿದ್ದಾರೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಂದಿದ್ದರಿಂದ ಸಮಸ್ಯೆ ಉಲ್ಬಣಿಸಲಿಲ್ಲ ಎನ್ನಲಾಗಿದೆ. ಬುಧವಾರ ಎದ್ದು ಕುಳಿತು, ಮಾತನಾಡಿದ್ದರು. ಅವರು ರಾತ್ರಿ ಭೇಟಿಯಾಗಲು ಬಂದ ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ಜತೆಗೂ ಮಾತನಾಡಿದ್ದರು.

ಎಚ್‌ ಡಿ ಕುಮಾರಸ್ವಾಮಿ ಅವರನ್ನು ಕಾಣಲು ಆಸ್ಪತ್ರೆಗೆ ಬಂದ ನಿರ್ಮಲಾನಂದನಾಥ ಶ್ರೀಗಳು

ತಂದೆಯನ್ನು ನೋಡಲು ಆಸ್ಪತ್ರೆಗೆ ಆಗಮಿಸಿದ ಪುತ್ರ ನಿಖಿಲ್‌

ಈ ನಡುವೆ, ವಿದೇಶಕ್ಕೆ ತೆರಳಿದ್ದ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ 9 ಕ್ಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಬಂದರು. ತಂದೆಯ ಜತೆ ಮಾತನಾಡಿದರು. ಇತ್ತ ಅನಿತಾ ಕುಮಾರಸ್ವಾಮಿ ಸಹ ಆಸ್ಪತ್ರೆಗೆ ಆಗಮಿಸಿದ್ದಾರೆ.

ಐಸಿಯುನಿಂದ ಶಿಫ್ಟ್‌ ಮಾಡಿದ್ದರೂ ಮುಂದುವರಿದ ನಿಗಾ

ಕುಮಾರಸ್ವಾಮಿ ಅವರನ್ನು ಐಸಿಯುನಿಂದ ಶಿಫ್ಟ್‌ ಮಾಡಿದ್ದರೂ ಅವರನ್ನು ವೈದ್ಯರ ತಂಡ ಹತ್ತಿರದಿಂದ ಗಮನಿಸುತ್ತಿದೆ. ಅವರನ್ನು ನಾಳೆಯೇ ಡಿಸ್ಚಾರ್ಜ್‌ ನಡೆಸಬಹುದು ಎಂದು ವೈದ್ಯರು ಹೇಳಿದ್ದರು. ಆದರೆ, ಪತ್ನಿ ಅನಿತಾ ಕುಮಾರಸ್ವಾಮಿ ಅವರು ಅಷ್ಟೇನೂ ಅರ್ಜೆಂಟಿಲ್ಲ. ಮನೆಗೆ ಹೋದರೆ ಅವರು ವಿಶ್ರಾಂತಿ ಮಾಡುವುದಿಲ್ಲ. ಹೀಗಾಗಿ ಒಂದೆರಡು ದಿನ ರೆಸ್ಟ್‌ ತೆಗೆದುಕೊಂಡೇ ಮನೆಗೆ ಹೋಗುವುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ, ಡಿಸ್ಚಾರ್ಜ್‌ ಮಾಡಿ ಮನೆಗೆ ಕರೆದುಕೊಂಡು ಹೋಗಬೇಕಾದರೆ ಅನಿತಾ ಕುಮಾಸ್ವಾಮಿ ಅವರು ಷರತ್ತುಗಳನ್ನು ಹಾಕಿದ್ದಾರೆ ಎನ್ನಲಾಗಿದೆ. ಯಾವ ಕಾರಣಕ್ಕೂ ಕೆಲವು ದಿನ ಆರೋಗ್ಯ ಬಿಟ್ಟು ಬೇರೆ ವಿಚಾರಗಳ ಬಗ್ಗೆ ಅತಿಯಾದ ಯೋಚನೆ ಮಾಡಬಾರದು. ಯಾವುದನ್ನೂ ತಲೆಗೆ ಹಚ್ಚಿಕೊಳ್ಳಬಾರದು ಎಂಬ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ವೈದ್ಯರು ಕೂಡಾ ಈ ಸಲಹೆಯನ್ನು ಅನುಮೋದಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : HD Kumaraswamy: ಆಸ್ಪತ್ರೆಯಲ್ಲಿ ಕುಮಾರಸ್ವಾಮಿ ಭೇಟಿ ಮಾಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಆರೋಗ್ಯ ಸುಧಾರಣೆ ಕೋರಿ ಚನ್ನಪಟ್ಟಣದಲ್ಲಿ ಪೂಜೆ

ರಾಮನಗರದಲ್ಲಿ ಜೆಡಿಎಸ್‌ ಕಾರ್ಯಕರ್ತರಿಂದ ಪೂಜೆ

ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಶೀಘ್ರ ಗುಣಮುಖವಾಗಲಿ ಎಂದು ಚನ್ನಪಟ್ಟಣ ತಾಲ್ಲೂಕಿನ ಜೆಡಿಎಸ್ ಮುಖಂಡರು ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ದೇವಾಲಯದಲ್ಲಿ 101 ಇಡುಗಾಯಿ ಹೊಡೆಯುವ ಮೂಲಕ ಶೀಘ್ರ ಗುಣಮುಖರಾಗಲಿ ಎಂದು ಪೂಜೆ ಮಾಡಲಾಗಿದೆ.

Exit mobile version